ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್ ನಡುವಿನ ವಾಗ್ಯುದ್ಧ ಹೊಸದೇನಲ್ಲ. ಮಧ್ಯದಲ್ಲಿ ಸಮ್ಮಿಶ್ರ ಸರ್ಕಾರ ಇದ್ದಾಗ ಒಬ್ಬರನ್ನೊಬ್ಬರು ಕುಚಿಕು ಎಂಬಂತೆ ನೋಡಿದ್ದರು ಎನ್ನುವುದು ಬಿಟ್ಟರೆ, ಉಳಿದಿದ್ದೆಲ್ಲ ಹೋರಾಟವೇ. ಅವರನ್ನು ಇವರು ಬೈಯೋದು, ಇವರನ್ನು ಅವರು ತೆಗಳೋದು ಕಾಮನ್. ಈಗ ಅದು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ.
ಕುಮಾರಸ್ವಾಮಿ ಡಿಕೆ ಶಿವಕುಮಾರ್ ಅವರನ್ನು ಹುಚ್ಚ ಎಂದಿದ್ದಾರೆ. ಡಿಕೆ ಶಿವಕುಮಾರ್ ಅವರ ಪ್ರಕಾರ ಕುಮಾರಸ್ವಾಮಿ ಹುಚ್ಚ. ಅದು ಶುರುವಾಗಿದ್ದು ಸಿದ್ದರಾಮಯ್ಯ ಮೇಲಿನ ಮುಡಾ ಹಗರಣದ ಆರೋಪದಿಂದ.
ಕುಮಾರಸ್ವಾಮಿ ಮೊದಲಿಗೆ : ಇಷ್ಟು ದಿನ ಹೊರಗೆ ಬಾರದ ಹಗರಣ ಈಗ ಬಂದಿದ್ದು ಯಾಕೆ ? ಇದರ ಹಿಂದೆ ಸಿಎಂ ಖುರ್ಚಿ ಮೇಲೆ ಟವಲ್ ಹಾಕಿರುವವರ ಪಾತ್ರ ಇದೆ. ಹಗರಣ ಆಚೆ ಬರಲು ಕಾಂಗ್ರೆಸ್‌ನವರೇ ಒಳಗೆ ಕುಮ್ಮಕ್ಕು ಕೊಡುತ್ತಿದ್ದಾರೆ ಎಂದು ಹೇಳಿದ್ದಾರೆ. ಬಿಜೆಪಿಯವರು ಹೋರಾಟ ಮಾಡುತ್ತಿದ್ದಾರೆ. ಆದ್ರೆ ಹಗರಣ ಆಚೆ ಬರಲು ಕಾಂಗ್ರೆಸ್‌ನವರೇ ಒಳಗೆ ಕುಮ್ಮಕ್ಕು ಕೊಡುತ್ತಿದ್ದಾರೆ. ಸಿಡಿ ಫ್ಯಾಕ್ಟರಿ ಕ್ಲೋಸ್ ಆಗಿದೆ, ಮುಡಾ ವಿಚಾರ ಶುರುವಾಗಿದೆ ಎಂದು ಟೀಕೆ ಮಾಡಿದ್ರು.
ನಂತರ ಸರದಿ ಡಿಕೆ ಶಿವಕುಮಾರ್ ಅವರದ್ದು.
ಕೇಂದ್ರ ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಒಬ್ಬ ಹುಚ್ಚ. ಅವರು ಆಸ್ಪತ್ರೆಗೆ ಸೇರಿ ಚಿಕಿತ್ಸೆ ಪಡೆಯುವುದು ಉತ್ತಮ.ಮುಡಾ ಹಗರಣ ವಿಚಾರದಲ್ಲಿ ಕುಮಾರಸ್ವಾಮಿ ಮಾಡುತ್ತಿರುವುದು ಆಧಾರರಹಿತ ಆರೋಪ. ಹುಚ್ಚು ಹಿಡಿದಿರುವ ಕಾರಣ ಅವರು ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ.ಕೆಲವೊಬ್ಬರಿಗೆ ಪ್ರತಿದಿನ ನನ್ನನ್ನು ನೆನಪಿಸಿಕೊಳ್ಳದಿದ್ದರೆ ನಿದ್ದೆಯೂ ಬರುವುದಿಲ್ಲ, ತಲೆಯೂ ಓಡುವುದಿಲ್ಲ. ಅವರು ಬಾಯಿಗೆ ಬಂದಂತೆ ಮಾತಾಡುತ್ತಿರುವುದು ಬಹಳ ಸಂತೋಷದ ವಿಚಾರ ಎಂದು ತಿರುಗೇಟು ಕೊಟ್ಟರು.
ಇದಾಗಿ ತಮ್ಮನ್ನು ಹುಚ್ಚು ಎನ್ನುತ್ತಿದ್ದಂತೆಯೇ ಕೆರಳಿದವರು ಕುಮಾರಸ್ವಾಮಿ.
ಹುಚ್ಚು ಹಿಡಿದಿರೋದು ನನಗಲ್ಲ ಡಿಕೆ ಶಿವಕುಮಾರ್‌ಗೆ ಸಿಎಂ ಕುರ್ಚಿ ಹುಚ್ಚು ಹಿಡಿದಿದೆ. ಚನ್ನಪಟ್ಟಣಕ್ಕೆ ಹೋಗಿ ಹುಚ್ಚ ಯಾರೆಂದು ಪ್ರದರ್ಶನ ಮಾಡಿಕೊಳ್ಳುತ್ತಿದ್ದಾರೆ. ದೇವೇಗೌಡರ ಕುಟುಂಬದ ಮೇಲಿನ ಆರೋಪಗಳು ತಣ್ಣಗಾಗುತ್ತಿದ್ದಂತೆಯೇ ಈಗ ಮುಡಾ ಶುರುವಾಗಿದೆ. ಈ ಮುಡಾ ಹಗರಣದ ಮೂಲ ಪುರುಷ ಯಾರು ಎಂದು ಗೊತ್ತಿಲ್ಲವೇ.. ಎಂದು ತಿರುಗೇಟು ಕೊಟ್ಟಿದ್ದಾರೆ.



