ಚನ್ನಪಟ್ಟಣ ಟಿಕೆಟ್ ಯಾರಿಗೆ ಎಂಬ ಪ್ರಶ್ನೆ ನಿಗೂಢವಾಗಿಯೇ ಇದೆ. ಉತ್ತರ ಸಿಗುತ್ತಿಲ್ಲ. ಮೊದ ಮೊದಲು ಕ್ಷೇತ್ರವನ್ನು ಜೆಡಿಎಸ್ʻಗೆ ಎನ್ನಲಾಗುತ್ತಿತ್ತು. ಅದಕ್ಕೆ ಲಾಜಿಕ್ ಕೂಡಾ ಇತ್ತು. ಈಗ ಬೈಎಲೆಕ್ಷನ್ ನಡೆಯುವ ಕ್ಷೇತ್ರಗಳಲ್ಲಿ ಹಾಲಿ ಯಾವ ಪಕ್ಷದವರು ಶಾಸಕರಾಗಿದ್ದಾರೋ.. ಅವರಿಗೇ ಟಿಕೆಟ್ ಕೊಡೋಣ ಎಂದು ನಿರ್ಧಾರವಾಗಿತ್ತು. ಆದರೆ.. ಕೆಲವೇ ದಿನಗಳಲ್ಲಿ ಪರಿಸ್ಥಿತಿ ಬದಲಾಯ್ತು. ಮುಂದೆ.. ಸಿ.ಪಿ.ಯೋಗೇಶ್ವರ್ ನಡೆಯಿಂದ ಜೆಡಿಎಸ್ ಮತ್ತು ಬಿಜೆಪಿ ಮಧ್ಯೆ ಟಿಕೆಟ್ ಗೊಂದಲ ಸೃಷ್ಟಿಯಾಗಿದ್ದು, ದೆಹಲಿ ಅಂಗಳದಲ್ಲೂ ಭಾರೀ ಚರ್ಚೆಯನ್ನು ಹುಟ್ಟು ಹಾಕಿದೆ.
ವಿಜಯೇಂದ್ರ ಇಲ್ಲದೇ ಟಿಕೆಟ್ ಕುರಿತು ಸಭೆ : ಬಿಜೆಪಿ ಐವರು ರಾಜ್ಯ ನಾಯಕರು ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಟಿಕೆಟ್ ವಿಚಾರವಾಗಿ ದಳಪತಿಯ ಜೊತೆ ಮಾತುಕತೆ ನಡೆಸಿದ್ದಾರೆ. ದೆಹಲಿಯ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಬಗ್ಗೆ ಮಹತ್ವದ ಚರ್ಚೆ ನಡೆಸಿದ್ದಾರೆ. ವಿಷಯ ಏನಂದ್ರೆ.. ಆ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೇ ಇಲ್ಲ. ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್ ಅಶೋಕ್, ವಿ ಸೋಮಣ್ಣ, ಬೊಮ್ಮಾಯಿ, ಅಶ್ವಥನಾರಾಯಣ್, ಸಿ ಟಿ ರವಿ, ಅರವಿಂದ್ ಬೆಲ್ಲದ್ ಭಾಗಿಯಾಗಿ ಮಾತುಕತೆ ನಡೆಸಿದ್ದಾರೆ.
ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆಯ ಟಿಕೆಟ್ ಸಿಗದಿದ್ದರೆ ಬಂಡಾಯವಾಗಿ ಅಥವಾ ಬೇರೆ ಪಕ್ಷ ಸೇರಿ ಸ್ಪರ್ಧೆ ಮಾಡುವುದಾಗಿ ಬಹಿರಂಗವಾಗಿ ಹೇಳಿಕೆ ನೀಡುತ್ತಿರುವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಬಗ್ಗೆ ಬಿಜೆಪಿ ನಾಯಕರ ಎದುರೇ ಜೆಡಿಎಸ್ ನಾಯಕ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕುಮಾರಸ್ವಾಮಿ ಅವರನ್ನು ಸಚಿವರಾದ ಜೋಶಿ ಹಾಗೂ ಸೋಮಣ್ಣ ಅವರು ಸಮಾಧಾನಪಡಿಸಿ ಸರಿಪಡಿಸುವ ಭರವಸೆಯನ್ನು ನೀಡಿದ್ದಾರೆ ಜೋಷಿ ಮತ್ತು ಸೋಮಣ್ಣ.
ರಾತ್ರಿ ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಸಿ.ಪಿ.ಯೋಗೇಶ್ವರ್ ಗೆ ಟಿಕೆಟ್ ನೀಡುವ ಸಂಬಂಧ ಚರ್ಚೆ ನಡೆಯಿತು. ಅಂತಿಮವಾಗಿ, ಈ ಬಗ್ಗೆ ಹೈಕಮಾಂಡ್ ತೀರ್ಮಾನಕ್ಕೆ ಬಿಡಲು, ಚನ್ನಪಟ್ಟಣದಲ್ಲಿ ಎನ್‌ಡಿಎ ಅಭ್ಯರ್ಥಿಯನ್ನು ನಿಲ್ಲಿಸಿ, ಗೆಲ್ಲಿಸಲು ತೀರ್ಮಾನಿಸಲಾಯಿತು. ಸಭೆ ಬಳಿಕ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಉಪ ಚುನಾವಣೆಯಲ್ಲೂ ಒಟ್ಟಿಗೆ ಹೋಗುವ ಬಗ್ಗೆ ಚರ್ಚೆ ಮಾಡಲಾಗಿದೆ. ಬೈಎಲೆಕ್ಷನ್ನಲ್ಲಿ ಗೆಲ್ಲಬೇಕು ಎನ್ನುವುದು ಒಂದೇ ಉದ್ದೇಶ. ಟಿಕೆಟ್ ನೀಡುವ ಬಗ್ಗೆ ಹೈಕಮಾಂಡ್ ತೀರ್ಮಾನಿಸಲಿದೆ ಎಂದು ಆರ್.ಅಶೋಕ್ ಹೇಳಿದ್ದಾರೆ.
ಸಿಪಿ ಯೋಗೇಶ್ವರ್ ಹಠ ಏನು..?
ಟಿಕೆಟ್ಗಾಗಿ ಪಟ್ಟು ಹಿಡಿದು ದೆಹಲಿಯಲ್ಲಿ ಠಿಕಾಣಿ ಹೂಡಿರುವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಬಿಜೆಪಿ ನಾಯಕರ ಎದುರು ಹೊಸ ಪ್ರಸ್ತಾವನೆ ಇಟ್ಟಿದ್ದಾರಂತೆ. ಜೆಡಿಎಸ್ನಿಂದಾದರೂ ಓಕೆ.. ಬಿಜೆಪಿಯಿಂದಲಾದ್ರೂ ಓಕೆ.. ಒಟ್ಟು ನನಗೆ ಟಿಕೆಟ್ ಬೇಕೆ ಬೇಕು.. ಟಿಕೆಟ್ ಸಿಗದಿದ್ದರೆ ಬಿಎಸ್ಪಿ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯೋದಾಗಿ ಹೇಳಿದ್ದಾರಂತೆ.
ಏಕೆಂದರೆ ಯೋಗೇಶ್ವರ್ ಅವರೇನಾದರೂ ಮೈತ್ರಿಗೆ ಜೈ ಎಂದುಬಿಟ್ಟರೆ.. ಅವರ ರಣಕ್ಷೇತ್ರವೇ ಕೈ ಇಂದ ತಪ್ಪಿ ಹೋಗಲಿದೆ. ರಾಮನಗರದಲ್ಲಿ ಕುಮಾರಸ್ವಾಮಿ ಮತ್ತು ಚನ್ನಪಟ್ಟಣದಲ್ಲಿ ಯೋಗೇಶ್ವರ್ ಗೆಲ್ಲುತ್ತಿದ್ದರು. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಗೆದ್ದರು. ಈಗ ತಮ್ಮ ಕ್ಷೇತ್ರವನ್ನು ತಾವೇ ಬಿಟ್ಟುಕೊಟ್ಟರೆ ಹೇಗೆ ಅನ್ನೋದು ಯೋಗೇಶ್ವರ್ ಪ್ರಶ್ನೆ.
ಇನ್ನು ಜೆಡಿಎಸ್ ಸ್ಥಿತಿ ಇದಕ್ಕಿಂತಲೂ ಘೋರ. ಇಡೀ ರಾಮನಗರ ಜಿಲ್ಲೆಯಲ್ಲಿ ಅಸ್ಥಿತ್ವ ಇರುವುದು ಸದ್ಯಕ್ಕೆ ಚನ್ನಪಟ್ಟಣದಲ್ಲಿ ಮಾತ್ರ. ಅದನ್ನೂ ಬಿಜೆಪಿಗೆ ಬಿಟ್ಟುಕೊಟ್ಟರೆ, ರಾಮನಗರ ಜಿಲ್ಲೆಯಲ್ಲಿ ಜೆಡಿಎಸ್ ಝೀರೋ ಆಗುತ್ತದೆ. ಹೀಗಾಗಿ ಕುಮಾರಸ್ವಾಮಿಯೂ ಹಠ ಹಿಡಿಯುತ್ತಿದ್ದಾರೆ.
ಮೈತ್ರಿ ನಾಯಕರು ಟಿಕೆಟ್ ಗೊಂದಲ ಬಗೆ ಹರಿಸುವುದರದಲ್ಲೇ ಬ್ಯುಸಿಯಾಗಿದ್ದರೆ, ಕಾಂಗ್ರೆಸ್ ನಾಯಕರು ಸೈಲೆಂಟ್ ಆಗಿಯೇ ಚನ್ನಪಟ್ಟಣ ಕೈ ವಶಕ್ಕೆ ತಂತ್ರ-ರಣತಂತ್ರಗಳನ್ನು ರೂಪಿಸುತ್ತಿದ್ದಾರೆ. ಚನ್ನಪಟ್ಟಣದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜನೆಗೆ ಸರ್ಕಾರ ಮುಂದಾಗಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಆದೇಶದ ಮೇರೆಗೆ ಈ ಮೇಳ ಆಯೋಜನೆ ಮಾಡಲಾಗಿದ್ದು, ಚನ್ನಪಟ್ಟಣ ನಗರದ ಬಾಲಕರ ಪದವಿಪೂರ್ವ ಕಾಲೇಜು ಆವರಣದಲ್ಲಿ ಬೃಹತ್ ವೇದಿಕೆ ಸಿದ್ಧವಾಗಿದೆ. ಇದು ಚನ್ನಪಟ್ಟಣ ಉಪಚುನಾವಣೆಗೂ ಸಹ ಸಹಕಾರಿಯಾಗಲಿದೆ ಅನ್ನೋ ಲೆಕ್ಕಾಚಾರ ಕಾಂಗ್ರೆಸ್ನದ್ದು.. ಈಗಾಗಲೇ 8 ಸಾವಿರಕ್ಕೂ ಹೆಚ್ಚು ಜನರು ನೊಂದಣಿ ಮಾಡಿಕೊಂಡಿದ್ದಾರೆ.



