ಚನ್ನಪಟ್ಟಣ ಚುನಾವಣೆಯಲ್ಲಿ ಮತದಾನ ಮುಗಿದ ಮಾರನೇ ದಿನವೇ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಸೋಲಿನ ಮಾತನಾಡತೊಡಗಿದ್ದರೆ, ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ 100% ಗೆದ್ದೇ ಗೆಲ್ತೇವೆ. ಅಂತರ ಎಷ್ಟು ಅನ್ನೋದು 23ನೇ ತಾರೀಕು ಡಿಸೈಡ್ ಆಗುತ್ತೆ ಅಂತಿದ್ದಾರೆ. ಇಲ್ಲಿ ಟರ್ನಿಂಗ್ ಪಾಯಿಂಟ್ ಆಗಿರುವುದು ಯೋಗೇಶ್ವರ್ ಅವರ ಪ್ರಕಾರ ಜಮೀರ್ ಅಹ್ಮದ್.
ಯೋಗೇಶ್ವರ್ ಮಾತು ಕೇಳುತ್ತಿದ್ದರೆ ಅವರೀಗಾಗಲೇ ಸೋಲೊಪ್ಪಿಕೊಂಡಂತಿದೆ. ಇದು ಕುಮಾರಸ್ವಾಮಿ ರಿಂದ ತೆರವಾದ ಕ್ಷೇತ್ರ, ಅವರು ಕುಟುಂಬಕ್ಕೆ ಉಳಿಸಿಕೊಳ್ಳಲು ಮುಂದಾದ್ರು. ರಾಜಕೀಯ ದೈತ್ಯ ನಾಯಕ ದೇವೇಗೌಡರ ಹಠ, ಮೊಮ್ಮಗನ ಗೆಲ್ಲಿಸುವ ಶಪಥ ಮಾಡಿದ್ರು. ಕೇಂದ್ರ ಸಚಿವ ಕುಮಾರಸ್ವಾಮಿ ಪುತ್ರನನ್ನ ಗೆಲ್ಲಿಸಿಕೊಂಡು ಕ್ಷೇತ್ರ ಉಳಿಸಿಕೊಳ್ಳಲು ಹೋರಾಟ ಮಾಡಿದ್ರು. ಎರಡೂ ಕಡೆಯೂ ಸಮಬಲದ ಹೋರಾಟ ನಡೆದಿದೆ ಎನ್ನುತ್ತಲೇ ಈ ಚುನಾವಣೆ ವೇಳೆ ಕೆಲವರ ಹೇಳಿಕೆಗಳು ಹಾಗೂ ಮಾತುಗಳು ಜನರ ಭಾವನೆಗೆ ಘಾಸಿ ಮಾಡಿದವು. ಸಚಿವ ಜಮೀರ್ ಅವರ ಹೇಳಿಕೆಯಿಂದ ಮುಸ್ಲಿಮರ ವೋಟುಗಳೇನೋ ಬಂದವು. ಆದರೆ ಒಕ್ಕಲಿಗ ಸಮುದಾಯದ ಬರಬೇಕಾಗಿದ್ದ ಮತಗಳು ಬರಲಿಲ್ಲ ಎನ್ನುತ್ತಿದ್ದಾರೆ. ಅಷ್ಟೇ ಅಲ್ಲ ಬಿಜೆಪಿಯಲ್ಲಿದ್ದು ಪಕ್ಷ ಸಂಘಟನೆ ಮಾಡಿದ್ದೆ. ಬಲಗೊಳಿಸಿದ್ದೆ. ಬಿಜೆಪಿ, ಜೆಡಿಎಸ್ ಒಗ್ಗಟ್ಟು ಚೆನ್ನಾಗಿ ಆಗಿದೆ. ಒಕ್ಕಲಿಗರಿಗೆ ಇವತ್ತಿಗೂ ದೇವೇಗೌಡರೇ ದೊಡ್ಡ ಲೀಡರ್. ಡಿ.ಕೆ.ಸುರೇಶ್, ಡಿ.ಕೆ.ಶಿವಕುಮಾರ್, ನಾನು ಒಕ್ಕಲಿಗನಾಗಿದ್ರೂ ನಮ್ಮ ಜನ ಇನ್ನೂ ಅವರಿಗೆ ಅಂಟಿಕೊಂಡು ಕೂತಿದ್ದಾರೆ ಎಂದೂ ಹೇಳಿದ್ದಾರೆ.
ಒಟ್ಟಿನಲ್ಲಿ ಸಿಪಿ ಯೋಗೇಶ್ವರ್ ಅವರ ಮಾತಿನಲ್ಲಿ ಅಸಮಾಧಾನವಂತೂ ಇಣುಕುತ್ತಿದೆ. ಜೊತೆಗೆ ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಪಡೆದಿರುವ ಗರಿಷ್ಠ ಮತಗಳು 85 ಸಾವಿರ. ಗೆಲ್ಲಬೇಕೆಂದರೆ 1 ಲಕ್ಷಕ್ಕೂ ಹೆಚ್ಚು ಮತ ಪಡೆಯಬೇಕು ಎನ್ನುತ್ತಿರುವ ಯೋಗೇಶ್ವರ್ ಯಾರೇ ಗೆದ್ದರೂ ಕೂದಲೆಳೆ ಅಂತರದ ಗೆಲುವು ಅನ್ನೋ ಮೂಲಕ ಗೆದ್ದರೂ ಗೆಲ್ಲಬಹುದು ಎನ್ನುತ್ತಿದ್ದಾರೆ. ಆದರೆ ಇದೇ ಮಾತನ್ನು ನಿಖಿಲ್ ವಿಷಯದಲ್ಲಿ ಹೇಳುವಂತಿಲ್ಲ. ನಿಖಿಲ್ ಅವರ ಪ್ರಕಾರ ಗೆಲುವು 100% ಫಿಕ್ಸ್ ಆಗಿದೆ. ಎಷ್ಟು ಅಂತರದಲ್ಲಿ ಗೆಲ್ಲುತ್ತೇವೆ ಅನ್ನೋದನ್ನ ನವೆಂಬರ್ 23ರಂದು ರಿಸಲ್ಟ್ ಬಂದಾಗ ಗೊತ್ತಾಗುತ್ತೆ ಅಂತಿದ್ದಾರೆ.
ಕಳೆದ 18 ದಿನಗಳ ಹಿಂದೆ ಎನ್‌ಡಿಎ ಅಭ್ಯರ್ಥಿ ಯಾರು ಆಗಬೇಕು ಎಂಬ ಪ್ರಶ್ನೆ ಉದ್ಭವ ಆಯ್ತು, ಆಗ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ನಿವಾಸಕ್ಕೆ ಕರೆದು ನನ್ನ ಹೆಸರು ಘೋಷಣೆ ಮಾಡಿದ್ರು. ಕಳೆದ ಎರಡೂ ಬಾರಿ ರಾಜಕೀಯ ಕುತಂತ್ರದಿಂದ ಸೋಲು ಅನುಭವಿಸಿದೆ. ಈಗಲೂ ಚುನಾವಣೆ ನಿಲ್ಲುವ ಭಾವನೆ ನನ್ನಲ್ಲಿ ಇರಲಿಲ್ಲ. ಆದರೆ ಕೊನೆ ಕ್ಷಣದಲ್ಲಿ ಆದ ರಾಜಕೀಯ ಪರಿಸ್ಥಿತಿಗೆ ಕಾರ್ಯಕರ್ತರು ಆತಂಕ, ಗೊಂದಲಕ್ಕೆ ಪರಿಹಾರ ಕೊಡಬೇಕಿತ್ತು. ಹಾಗಾಗಿ ಸ್ಪರ್ಧೆ ಅನಿವಾರ್ಯ ಆಯ್ತು ಎಂದಿದ್ದಾರೆ.
ಈ ಬಾರಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಿದ್ದಾರೆ. ಅಲ್ಲದೆ ಕುಮಾರಸ್ವಾಮಿ ಅವರ ಜೊತೆಗೆ ವಿಜಯೇಂದ್ರ ತಂತ್ರಗಾರಿಕೆಯೂ ಅದ್ಭುತವಾಗಿ ವರ್ಕೌಟ್ ಆಗಿದೆ ಎನ್ನಲಾಗುತ್ತಿದೆ. ಆದರೆ ಸೋಲು ಗೆಲುವು ನಿರ್ಧಾರವಾಗುವುದು ಮಾತ್ರ ನವೆಂಬರ್ 23ನೇ ತಾರೀಕು.



