ಕಾಂಗ್ರೆಸ್ ಪಕ್ಷ ಟಾಸ್ಕ್ ನೀಡಿದರೆ ಜೆಡಿಎಸ್ ಶಾಸಕರನ್ನು ಒಡೆದು ಕಾಂಗ್ರೆಸ್‌ಗೆ ತರುತ್ತೇನೆ. ಜಸ್ಟ್ 24 ಗಂಟೆ ಸಾಕು ಎಂದು ಹೇಳಿರುವ ಸಿಪಿ ಯೋಗೇಶ್ವರ್, ರಾಜಕೀಯದಲ್ಲಿ ಬಾಂಬ್ ಸಿಡಿಸಿದ್ದಾರೆ. ಅದಕ್ಕೆ ತಕ್ಕಂತೆ ಜೆಡಿಎಸ್‌ನಲ್ಲಿಯೇ ಇರುವ ಜಿಟಿ ದೇವೇಗೌಡ, ಶರಣಗೌಡ ಕುಂದಕೂರ, ಕರೆಮ್ಮಾಜಿ ನಾಯಕ ಪಕ್ಷದಿಂದ ಒಂದು ಅಂತರ ಕಾಯ್ದುಕೊಂಡೇ ಇದ್ಧಾರೆ. ಈ ನಡುವೆ ಚನ್ನಪಟ್ಟಣ ಸೋಲು ಜೆಡಿಎಸ್ ಶಕ್ತಿಯನ್ನು ಉಡುಗಿಸಿದಂತೆ ಕಾಣುತ್ತಿದೆ.
ಇಂತಹ ಸಂದರ್ಭದಲ್ಲಿಯೇ ಕಾಂಗ್ರೆಸ್ ಪಕ ತಮಗೆ ಟಾಸ್ಕ್ ನೀಡಿದರೆ ಒಂದು ತಿಂಗಳೊಳಗೆ ಜೆಡಿಎಸ್ ವಿಭಜಿಸಿ ಕಾಂಗ್ರೆಸ್‌ನೊಳಗೆ ಸೇರುವಂತೆ ಮಾಡುತ್ತೇನೆ. ಆ ಸಾಮರ್ಥ ತಮಗಿದೆ ಎಂದು ಯೋಗೇಶ್ವರ್ ಹೇಳಿಕೆ ನೀಡಿ ಸಂಚಲನ ಸೃಷ್ಟಿಸಿದ್ದಾರೆ. ಸಹಜವಾಗಿಯೇ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ, ಆಕ್ರೋಶ ಭುಗಿಲೆದ್ದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಜೆಡಿಎಸ್ ಶಾಸಕರು ಕಾಂಗ್ರೆಸ್ ಬರುವ ಬಗ್ಗೆ ನನ್ನೊಂದಿಗೆ ಯಾರೂ ಚರ್ಚಿಲ್ಲ ಎಂದಿದ್ದರೆ, ಕಾಂಗ್ರೆಸ್ಸಿಗೆ ಅಂತಹ ಆಗತ್ಯವಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ. ನಮಗೆ ಅಂತಹ ದುರ್ಗತಿ ಬಂದಿಲ್ಲ ಎನ್ನುವುದು ಬಿಕೆ ಹರಿಪ್ರಸಾದ್ ಅವರ ಮಾತು.
ಜಿ.ಟಿ ದೇವೇಗೌಡ ಹಿರಿಯ ನಾಯಕರು. ಅವರು ಜೆಡಿಎಸ್ಸಿನ ಕೋರ್ ಕಮಿಟಿ ಅಧ್ಯಕ್ಷರಾಗಿದ್ದಾರೆ. ನಾವು ಈ ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ಬನ್ನಿ ಎಂದು ಒಮ್ಮೆ ಆಹ್ವಾನ ನೀಡಿದ್ದೆವು. ಆದರೆ ಅವರು ಕುಮಾರಣ್ಣ ಅವರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ನಮ್ಮ ಆಹ್ವಾನ ತಿರಸ್ಕರಿಸಿದ್ದರು. ಅವರೀಗ ನೊಂದಿದ್ದಾರೆ. ಆದರೆ ಈ ಬಗ್ಗೆ ಯಾರೂ ನನ್ನ ಬಳಿ ಚರ್ಚೆ ಮಾಡಿಲ್ಲ ಎಂದು ಹೇಳಿದ್ಧಾರೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಕೆ ಶಿವಕುಮಾರ್.
ಶಾಸಕರಿಗೆ ಪಕ್ಷಾಂತರ ನಿಷೇಧ ಕಾಯ್ದೆಯ ಭಯ..!
ನಿಯಮಗಳ ಪ್ರಕಾರ ಶಾಸಕರು ಪಕ್ಷ ಬದಲಿಸಿದರೆ ಪಕ್ಷಾಂತರ ನಿಷೇಧ ಕಾಯ್ದೆಯ ತೂಗುಗತ್ತಿ ಎದುರಿಸಬೇಕಾಗುತ್ತದೆ. ಹಾಗಾದರೆ ಅದನ್ನು ತಪ್ಪಿಸಿಕೊಳ್ಳೋಕೆ ಏನು ಮಾಡಬೇಕು ಎಂದರೆ ಇರುವುದು ಎರಡು ಮಾರ್ಗ. ಒಂದೋ ರಾಜೀನಾಮೆ ಕೊಟ್ಟು ಚುನಾವಣೆ ಎದುರಿಸಿ ಗೆದ್ದು ಬರಬೇಕು. ಸಿದ್ದರಾಮಯ್ಯ ಕೂಡಾ ಜೆಡಿಎಸ್ ಬಿಟ್ಟು, ಚುನಾವಣೆ ಎದುರಿಸಿಯೇ ಬಂದವರು. ಈಗ ಜಿಟಿ ದೇವೇಗೌಡ ಶಾಸಕರಾಗಿರುವುದು ಕೂಡಾ ಸಿದ್ಧರಾಮಯ್ಯನವರು ಆಗ ಗೆದ್ದಿದ್ದು ಚಾಮುಂಡೇಶ್ವರಿ ಕ್ಷೇತ್ರದಲ್ಲಿಯೇ.
ಎರಡನೇ ಮಾರ್ಗ ಎಂದರೆ 12 ಶಾಸಕರು ಒಟ್ಟಾಗಿ ಹೋಗುವುದು. ಸಂವಿಧಾನದ ನಿಯಮಗಳ ಪ್ರಕಾರ 3/2 ರಷ್ಟು ಶಾಸಕರು ಪಕ್ಷಾಂತರ ಮಾಡಿದರೆ ಆಗ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗಲ್ಲ. ಈ ಹಿಂದೆ ಶಿವಸೇನೆಯಲ್ಲಿ ಏಕನಾಥ ಶಿಂಧೆ 37 ಶಾಸಕರ ಜೊತೆ ಪಕ್ಷ ಬಿಟ್ಟಿದ್ದರು. ಆಗ ಶಿವಸೇನೆಯ ಒಟ್ಟಾರೆ ಶಕ್ತಿ 54 ಇತ್ತು. ಅದಾದ ನಂತರ ಅಜಿತ್ ಪವಾರ್ ಕೂಡಾ ಎನ್‌ಸಿಪಿಯನ್ನು ಒಡೆದು ಬಂದಿದ್ದರು. ಎರಡೂ ಪ್ರಕರಣಗಳಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗಿರಲಿಲ್ಲ. ಈಗ ಜೆಡಿಎಸ್ ಶಾಸಕರು ಪಕ್ಷಾಂತರ ಮಾಡಿದರೆ 12 ಶಾಸಕರು ಒಟ್ಟಾಗಿ ಬರಬೇಕು. ಆಗ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗುವುದಿಲ್ಲ. ಶಾಸಕತ್ವ ರದ್ದಾಗುವುದಿಲ್ಲ. ಚುನಾವಣೆಗೆ ಸ್ಪರ್ಧೆ ಮಾಡುವುದಕ್ಕೆ ಇರುವ ನಿರ್ಬಂಧವೂ ಇರುವುದಿಲ್ಲ. ಏಕೆಂದರೆ ಜೆಡಿಎಸ್‌ನಲ್ಲಿರುವುದು 18 ಶಾಸಕರ ಬಲ ಮಾತ್ರ.
ಆದರೆ ಕಾಂಗ್ರೆಸ್ ಬಲ ಈಗ 138. ಅವರ ಪಕ್ಷದಲ್ಲಿ ಗೆದ್ದಿರುವವರಿಗೇ ಅಧಿಕಾರ ಸಿಗುತ್ತಿಲ್ಲ. ಹೀಗಿರುವಾಗ ಬೇರೆ ಪಕ್ಷದಿಂದ ಕರೆ ತಂದರೆ ಮೂಲ ಕಾಂಗ್ರೆಸ್ ಶಾಸಕರು ಎಲ್ಲಿಗೆ ಹೋಗಬೇಕು ಎಂಬ ಪ್ರಶ್ನೆ ಮೂಡಿದೆ. ಹೀಗಾಗಿಯೇ ಬಹುತೇಕ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.



