ಈ ಬಾರಿಯ ಚುನಾವಣೆಯಲ್ಲಿ ರಾಜ್ಯ ರಾಜಕೀಯದ ಹೈವೋಲ್ಟೇಜ್ ಕ್ಷೇತ್ರ ನಂ.1 ಎಂದರೆ.. ಅದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ. ಏಕೆಂದರೆ ಇಲ್ಲಿ ಸ್ಪರ್ಧೆ ನಡೆಯುತ್ತಿರುವುದು ಡಿಸಿಎಂ ಡಿಕೆ ಶಿವಕುಮಾರ್ ಸಹೋದರ ಡಿಕೆ ಸುರೇಶ್ ಮತ್ತು ದೇವೇಗೌಡರ ಅಳಿಯ ಡಾಕ್ಟರ್ ಮಂಜುನಾಥ್ ಅವರ ಮಧ್ಯೆ. ಡಿಕೆ ಸುರೇಶ್, ಅಣ್ಣನ ರಾಜಕೀಯಕ್ಕೆ ಬೆನ್ನೆಲುಬಾಗಿ ನಿಂತಿದ್ದರೆ, ಡಾ.ಮಂಜುನಾಥ್ ಅವರಿಗೆ ರಾಜಕೀಯವೇ ಹೊಸದು. ಇದುವರೆಗೆ ಸೇವೆಯಲ್ಲಿ ದೊಡ್ಡ ಹೆಸರು ಮಾಡಿದ್ದ ಡಾ.ಮಂಜುನಾಥ್ ಅವರಿಗೆ ಇಡೀ ರಾಜ್ಯದಲ್ಲಿ ಜನರ ಪ್ರೀತಿ ದೊರೆಯುತ್ತದೆ. ಆದರೆ.. ಅದೇ ಡಾ.ಮಂಜುನಾಥ್ ರಾಜಕೀಯಕ್ಕೆ ಬಂದರೆ.. ಅದೇ ರೀತಿ ಜನಪ್ರೀತಿ ಸಿಗುತ್ತದಾ..? ಇಂತಾದ್ದೊಂದು ಕುತೂಹಲಕರ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದರೆ.. ಅಚ್ಚರಿ ಹುಟ್ಟಿಸುವುದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮತದಾರರ ಲೆಕ್ಕ. ಕೇವಲ 10 ತಿಂಗಳ ಹಿಂದೆ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ.. ಅಷ್ಟೂ ಮತದಾರರಲ್ಲಿ ಕಾಂಗ್ರೆಸ್ ಮತದಾರರು ಎಷ್ಟು..? ಬಿಜೆಪಿ ವೋಟರ್ಸ್ ಎಷ್ಟು ಹಾಗೂ ಜೆಡಿಎಸ್ʻಗೆ ಮತಹಾಕಿದವರು ಎಷ್ಟು ಎಂದು ಲೆಕ್ಕ ಹಾಕುತ್ತಾ ಹೋದರೆ.. ಡಿಕೆ ಸುರೇಶ್ ಅವರಿಗೆ ಆಪತ್ತು ಎಂಬ ಸೂಚನೆ ಸಿಗುತ್ತಿದೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿರುವ 8 ವಿಧಾನಸಭಾ ಕ್ಷೇತ್ರಗಳೂ ನಗರ ಹಾಗೂ ಪಟ್ಟಣ ಎನ್ನುವುದೇ ವಿಶೇಷ. ತುಮಕೂರು ಜಿಲ್ಲೆಯ ಕುಣಿಗಲ್, ರಾಮನಗರ ಜಿಲ್ಲೆಯ ಮಾಗಡಿ, ರಾಮನಗರ, ಕನಕಪುರ, ಚನ್ನಪಟ್ಟಣ ಹಾಗೂ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ರಾಜರಾಜೇಶ್ವರಿ ನಗರ, ಬೆಂಗಳೂರು ದಕ್ಷಿಣ ಹಾಗೂ ಆನೇಕಲ್ ಈ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ. ಅಂದರೆ 8 ಕ್ಷೇತ್ರಗಳಲ್ಲಿ ಬೆಂಗಳೂರು ನಗರ ಜಿಲ್ಲೆಯ 3, ತುಮಕೂರು ಜಿಲ್ಲೆಯ 1 ಹಾಗೂ ರಾಮನಗರ ಜಿಲ್ಲೆಯ 4 ಕ್ಷೇತ್ರಗಳು ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿವೆ.
ರಾಜರಾಜೇಶ್ವರಿ ನಗರ, ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿ ಶಾಸಕರಿದ್ದರೆ, ಚನ್ನಪಟ್ಟಣದಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಉಳಿದ ಐದೂ ಕಡೆ ಕಾಂಗ್ರೆಸ್ ಶಾಸಕರೇ ಇದ್ದಾರೆ. ಆದರೆ, ಮತಗಳ ಲೆಕ್ಕಾಚಾರ ನೋಡಿದರೆ ಬಿಜೆಪಿ ಹಾಗೂ ಜೆಡಿಎಸ್ ಮತಗಳು ಕಾಂಗ್ರೆಸ್‌ಗಿಂತ ಹೆಚ್ಚಾಗಿವೆ.
| ವಿಧಾನಸಭಾ ಕ್ಷೇತ್ರ | ಎಂಎಲ್‌ಎ ಮತ್ತು ಪಾರ್ಟಿ | ಕಾಂಗ್ರೆಸ್ | ಬಿಜೆಪಿ | ಜೆಡಿಎಸ್ |
| ಮಾಗಡಿ | ಕಾಂಗ್ರೆಸ್ : ಎಚ್‌ಸಿ ಬಾಲಕೃಷ್ಣ | 94,650 | 20,197 | 82,811 |
| ರಾಮನಗರ | ಕಾಂಗ್ರೆಸ್ : ಇಕ್ಬಾಲ್ ಹುಸೇನ್ | 87,690 | 12,912 | 76,975 |
| ಕನಕಪುರ | ಕಾಂಗ್ರೆಸ್ : ಡಿಕೆ ಶಿವಕುಮಾರ್ | 1,43,023 | 19,753 | 20,631 |
| ಚನ್ನಪಟ್ಟಣ | ಜೆಡಿಎಸ್ : ಎಚ್‌ಡಿ ಕುಮಾರಸ್ವಾಮಿ | 15,374 | 80,677 | 96,592 |
| ಕುಣಿಗಲ್ | ಕಾಂಗ್ರೆಸ್ : ಎಚ್‌ಡಿ ರಂಗನಾಥ್ | 74,276 | 48,151 | 46,974 |
| ರಾಜರಾಜೇಶ್ವರಿ ನಗರ | ಬಿಜೆಪಿ : ಮುನಿರತ್ನ | 1,16,138 | 1,27,980 | 7,795 |
| ಬೆಂಗಳೂರು ದಕ್ಷಿಣ | ಬಿಜೆಪಿ : ಕೃಷ್ಣಪ್ಪ | 1,46,521 | 1,96,220 | 24,612 |
| ಆನೇಕಲ್ | ಕಾಂಗ್ರೆಸ್ : ಶಿವಣ್ಣ | 1,34,797 | 1,03,472 | 6,415 |
| ಒಟ್ಟು | 8,12,917 | 6,09,362 | 3,62,805 |
ಇದು ಲೆಕ್ಕ. ಅಂದರೆ.. ವಿಧಾನಸಭೆ ಚುನಾವಣೆಯ ಮತಗಳ ಲೆಕ್ಕದ ಪ್ರಕಾರ ಬಿಜೆಪಿ+ಜೆಡಿಎಸ್ ಮತಗಳು 9,72,167 ಆಗುತ್ತವೆ. ಕಾಂಗ್ರೆಸ್ ಪಡೆದ ಮತಗಳಿಗಿಂತ 1.60 ಲಕ್ಷ ಮತಗಳಿಗಳು ಹೆಚ್ಚು. ಡಿಕೆ ಸುರೇಶ್ ಗೆಲ್ಲಬೇಕೆಂದರೆ ಇದನ್ನು ಮೀರಲೇಬೇಕು.
ಇತಿಹಾಸದ ಲೆಕ್ಕ ನೋಡಿದರೆ..
ಬೆಂಗಳೂರು ಗ್ರಾಮಾಂತರ ಒಂದು ಕಾಲದಲ್ಲಿ ಜೆಡಿಎಸ್ ಹಿಡಿತದಲ್ಲಿದ್ದ ಕ್ಷೇತ್ರ. 2009ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಎಚ್‌ಡಿ ಕುಮಾರಸ್ವಾಮಿ ಬಿಜೆಪಿಯ ಸಿಪಿ ಯೋಗೇಶ್ವರ್ ಅವರನ್ನು 1,30,275 ಮತಗಳ ಭಾರೀ ಅಂತರದಿಂದ ಸೋಲಿಸಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮೂರನೇ ಸ್ಥಾನ ಗಳಿಸಿತ್ತು.
ಆದರೆ, 2013ರ ಉಪಚುನಾವಣೆಯಲ್ಲಿ ಜೆಡಿಎಸ್‌ನ ಅನಿತಾ ಕುಮಾರಸ್ವಾಮಿಯನ್ನು 1,37,007 ಮತಗಳ ಭಾರೀ ಅಂತರದಿಂದ ಸೋತಿದ್ದರು. ಆಗ ಗೆದ್ದವರು ಡಿಕೆ ಸುರೇಶ್. ಆಮೇಲೆ ಸೋತೇ ಇಲ್ಲ.
2014ರಲ್ಲಿಯೂ ಬಿಜೆಪಿಯ ಮುನಿರಾಜು ಗೌಡರನ್ನು 2,31,480 ಮತಗಳಿಂದ ಸೋಲಿಸಿದ್ದರು. ಈ ವೇಳೆ ಜೆಡಿಎಸ್ ಅಭ್ಯರ್ಥಿ 3,17,870 ಮತಗಳನ್ನು ಪಡೆದುಕೊಂಡಿದ್ದರು.
2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಇದ್ದಿದ್ದರಿಂದ ಅವರು ಸಲೀಸಾಗಿ 2,06,870 ಮತಗಳ ಅಂತರದಿಂದ ಅಶ್ವತ್ಥ ನಾರಾಯಣಗೌಡರನ್ನು ಸೋಲಿಸಿದ್ದರು.
ಆಗ ಜೆಡಿಎಸ್ʻನ 3 ಲಕ್ಷಕ್ಕೂ ಹೆಚ್ಚು ಮತಗಳು (2014ರ ಎಲೆಕ್ಷನ್ ಲೆಕ್ಕದ ಪ್ರಕಾರ) ಕಾಂಗ್ರೆಸ್ಸಿಗೆ ವರ್ಗವಾಗಿದ್ದವು. ಹೀಗಾಗಿಯೇ.. 2 ಲಕ್ಷಕ್ಕೂ ಹೆಚ್ಚು ಮತಗಳ ಅಂತರ ಸಾಧ್ಯವಾಗಿತ್ತು.
ಆದರೆ, ಈ ಬಾರಿ ಇದೇ ಜೆಡಿಎಸ್ ಬಿಜೆಪಿ ಜೊತೆಗಿದೆ. ಸವಾಲು ಸುಲಭ ಅಲ್ಲ. ಬಿಜೆಪಿ ವೋಟುಗಳ ಲೆಕ್ಕ ನೋಡಿದರೆ.. ಬಿಜೆಪಿ ಮತದಾರರು ಅಭ್ಯರ್ಥಿಯನ್ನು ನೋಡದೆ, ಮತ ಹಾಕಿದ್ದಾರೆ ಎಂಬ ಅಂಶ ಗೊತ್ತಾಗುತ್ತದೆ. ಬಿಜೆಪಿಯಿಂದ ಕಣಕ್ಕಿಳಿದಿರುವ ಡಾ.ಮಂಜುನಾಥ್, ದೇವೇಗೌಡರ ಅಳಿಯ. ಕುಮಾರಸ್ವಾಮಿ ಅವರಿಗೆ ಭಾವ. ಹೀಗಾಗಿ ಜೆಡಿಎಸ್ ಮತಗಳು ಚದುರಿ ಹೋಗುವ ಸಾಧ್ಯತೆ ಇಲ್ಲ. ಹೀಗಾಗಿ ಈ ಬಾರಿಯ ಎಲೆಕ್ಷನ್ ಡಿಕೆ ಸುರೇಶ್ ಅವರಿಗೆ ದೊಡ್ಡ ಸವಾಲು.



