ಅಭಿಮಾನಿಗಳನ್ನು ದೇವರು ಎಂದು ಕರೆದ ಎಂದ ಜಗತ್ತಿನ ಮೊದಲ ಕಲಾವಿದ ಡಾ.ರಾಜ್ ಕುಮಾರ್. ನಿರ್ಮಾಪಕರನ್ನು ಅನ್ನದಾತರು ಎಂದು ಕರೆದ ಮೊದಲ ನಟರೂ ಡಾ.ರಾಜ್. ನಟನ ಸ್ಥಾನಕ್ಕಿಂತ ನಿರ್ದೇಶಕನ ಸ್ಥಾನ ದೊಡ್ಡದು ಎನ್ನುತ್ತಿದ್ದ ಡಾ.ರಾಜ್, ತಮಗಿಂತ ಕಿರಿಯರನ್ನು ನಿರ್ದೇಶಕರ ಪಟ್ಟಕ್ಕೆ ಕುಳಿತರೆ ಭಕ್ತಿ ಭಾವದಿಂದ ಗೌರವಿಸುತ್ತಿದ್ದರು. ಹೀಗಾಗಿಯೇ ಕನ್ನಡದಲ್ಲಿ ಅಭಿಮಾನಿಗಳನ್ನು ಪ್ರೀತಿಸುವ, ನಿರ್ಮಾಪಕರನ್ನು ಗೌರವಿಸುವ, ನಿರ್ದೇಶಕರನ್ನು ಭಯ ಭಕ್ತಿಯಿಂದ ನೋಡುವ ಸಂಪ್ರದಾಯ ಬೆಳೆದು ಬಂದಿತ್ತು. ಡಾ. ರಾಜ್ ಅಷ್ಟೇ ಅಲ್ಲ, ವಿಷ್ಣುವರ್ಧನ್ ಕೂಡಾ ಹಾಗೆಯೇ ಇದ್ದವರು. ಅಂಬರೀಷ್ ಅವರ ಮಾತುಗಳು ಒರಟಾಗಿದ್ದರೂ, ನಿರ್ದೇಶಕರನ್ನು ಗೌರವದಿಂದ ನಡೆಸಿಕೊಳ್ಳುತ್ತಿದ್ದರು ಎಂದು ಹಲವರು ಹೇಳುತ್ತಾರೆ. ಪುನೀತ್ ಅವರೂ ಅಷ್ಟೆ, ತಮಗಿಂತ ವಯಸ್ಸಿನಲ್ಲಿ ಕಿರಿಯರಾದ ನಿರ್ದೇಶಕರಿಗೆ ಕಾಲು ಮುಟ್ಟಿ ನಮಸ್ಕರಿಸಿದ್ದ ಘಟನೆಗಳಿವೆ. ಶಿವಣ್ಣ ಕೂಡಾ ಅಷ್ಟೆ, ಡೈರೆಕ್ಟರ್ ಹೇಳಿದ್ಮೇಲೆ ದೂಸ್ರಾ ಮಾತಾಡಲ್ಲ. ಅಂತಹ ಡಾ.ರಾಜ್ ಅವರು ಈಗ ದರ್ಶನ್ ಮತ್ತು ಉಮಾಪತಿ ನಡುವಿನ ಜಗಳದಲ್ಲೂ ಅಸ್ತ್ರವಾಗಿದ್ಧಾರೆ.
ಅಯ್ಯೋ ತಗಡೇ… ನಿನಗೆ ‘ರಾಬರ್ಟ್’ ಕಥೆ ಕೊಟ್ಟಿದ್ದೇ ನಾವು. ಕೊಟ್ಟಿದ್ದು, ಮಾಡಿದ್ದನ್ನ ಹೇಳಬಾರದು. ಇದೇ ತರಹ ಸಿಕ್ಕಿಹಾಕಿಕೊಂಡು, ಬಾಯಿಂದ ಹೇಳಿಸಿಕೊಂಡು, ಬುದ್ಧಿ ಕಲಿತಿಲ್ಲ ಅಂದ್ರೆ ನಾವೇನು ಹೇಳೋಣ? ಇಂಥ ಒಳ್ಳೆಯ ಕಥೆಯನ್ನ ಯಾಕೆ ಬಿಟ್ಟೆ ನೀನು? ಕಾಟೇರ ಟೈಟಲ್ ಕೊಟ್ಟಿದ್ದೇ ನಾನು. ಟೈಟಲ್ ಇಟ್ಟಿದ್ದೇ ನಾನು. ಯಾಕೆ ಬಂದು ಬಂದು ಗುಮ್ಮುಸ್ಕೋತೀಯಾ. ಗುಮ್ಮುಸ್ಕೋಬೇಡ. ಎಲ್ಲೋ ಇದ್ಧೀಯಾ, ಚೆನ್ನಾಗಿದ್ದೀಯಾ.. ಅಲ್ಲೇ ಇದ್ಬಿಡು..
ದರ್ಶನ್ ಮಾತು ಹೇಳಿದ್ದು ಕಾಟೇರ ಚಿತ್ರದ ೫೦ನೇ ದಿನದ ಸಂಭ್ರಮಾಚರಣೆಯಲ್ಲಿ.
ದರ್ಶನ್ ಅವರಿಗಾಗಿ ರಾಬರ್ಟ್ ಚಿತ್ರವನ್ನು ನಿರ್ಮಾಣ ಮಾಡಿದ್ದ ಉಮಾಪತಿಯವರಿಗೇ ಹೇಳಿದ್ದ ಮಾತಾಗಿತ್ತು. ಅವುಗಳಿಗೆಲ್ಲ ಮಾಧ್ಯಮಗಳ ಮೂಲಕ ಉತ್ತರ ಕೊಟ್ಟಿದ್ದ ಉಮಾಪತಿ, ಇದೀಗ ಡಾ.ರಾಜ್ ಅವರ ಹಳೆಯ ವಿಡಿಯೋ ಮೂಲಕ ಉತ್ತರ ಕೊಟ್ಟಿದ್ಧಾರೆ.
ಡಾ.ರಾಜ್ ವಿಡಿಯೋ ಸಂದರ್ಶನದ ಹಳೆಯ ವಿಡಿಯೋದಲ್ಲಿ ’ನಿರ್ಮಾಪಕರಾಗಿ ನಮಗೆ ಅನ್ನ ಹಾಕಿದ್ದಾರೆ. ಆದ್ದರಿಂದ ನಮಗೆ ಏನೇ ಮಾಡಿದರೂ ಕೂಡ, ಯಜಮಾನ ಅನ್ನೋದನ್ನ ಒಳಗಡೆಯಿಂದ ಅಳಿಸೋಕೆ ಆಗಲ್ಲ. ಅವನು ನಮಗೆ ಧಣಿ. ನಮಗೆ ಅನ್ನ ಕೊಟ್ಟ ಧಣಿ. ಇದು ನನಗೆ ಚಿಕ್ಕದರಿಂದ ಬಂದಿರೋದುʼ ಎನ್ನುತ್ತಾರೆ ಡಾ.ರಾಜ್. ಅಣ್ಣಾವ್ರ ಆ ಹಳೆಯ ವಿಡಿಯೋ ಹಾಕಿರುವ ಉಮಾಪತಿ ಆ ವಿಡಿಯೋದ ಮೇಲೆ ಒಬ್ಬ ನಿರ್ಮಾಪಕನಿಗೆ ಹೇಗೆ ಗೌರವ ಕೊಡಬೇಕು ಎಂದು ನಮ್ಮ ಯಜಮಾನರನ್ನ ನೋಡಿ ಮತ್ತು ಅವರ ಮಕ್ಕಳನ್ನ ನೋಡಿ ಕಲಿಯಬೇಕು. ಅಣ್ಣಾವ್ರ ಕುಟುಂಬದ ಮೇಲೆ ದಿನದಿಂದ ದಿನಕ್ಕೆ ಗೌರವ ಹೆಚ್ಚಾಗುತ್ತಿದೆ. ನಿಮ್ಮ ಒಂದೊಂದು ಮಾತು, ಒಂದೊಂದು ಮುತ್ತು ಎಂಬ ಸಾಲುಗಳೂ ಇವೆ.
ವಿಡಿಯೋ ಹಾಕಿರುವ ಉಮಾಪತಿ ಸಿನಿಮಾ ಆಗೋವರೆಗೂ ನಿರ್ಮಾಪಕರು. ಸಿನಿಮಾ ಆದ್ಮೇಲೆ ತಗಡು. ಇದೇ ತಗಡು ತಾನೇ ಅವತ್ತು ‘ರಾಬರ್ಟ್’ ಸಿನಿಮಾ ಮಾಡಿದ್ದು? ಎಂದು ಉಮಾಪತಿ ಶ್ರೀನಿವಾಸ್ ಪ್ರಶ್ನಿಸಿದ್ದಾರೆ.
ಅಂದಹಾಗೆ ಡಾ.ರಾಜ್ ಕುಮಾರ್ ಕನ್ನಡದ ಹಾಗೂ ಕನ್ನಡಿಗರ ಸಂಸ್ಕೃತಿಯ ಪ್ರತೀಕವೂ ಹೌದು. ಉಮಾಪತಿ ಮತ್ತು ದರ್ಶನ್ ನಡುವೆ ಜಗಳ ಇವತ್ತಿನದ್ದಲ್ಲ. ಈ ಹಿಂದೆಯೂ ಕೂಡಾ ಜಗಳವಾಗಿತ್ತು. ಆಗ ದರ್ಶನ್ ಅಗತ್ಯವಿಲ್ಲದಿದ್ದರೂ ಪುನೀತ್ ಮತ್ತು ದೊಡ್ಮನೆ ಹೆಸರು ಎಳೆದು ತಂದಿದ್ದರು. ಈಗ ಉಮಾಪತಿ, ಡಾ.ರಾಜ್ ಅವರ ಹೆಸರನ್ನು ಗುರಾಣಿಯಾಗಿ ಬಳಸಿದ್ದಾರೆ.



