ನಿಖಿಲ್ ಕುಮಾರಸ್ವಾಮಿ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಮಾಡುವುದಕ್ಕೆ ಕುಮಾರಸ್ವಾಮಿ ಮನಸ್ಸು ಮಾಡಿರುವುದು ರಹಸ್ಯವೇನಲ್ಲ. ಹೊರಗೆ ಕಾರ್ಯಕರ್ತರೇ ಬಾಸ್ ಎನ್ನುವಂತಿದ್ದರೂ.. ಪಕ್ಷದ ನೇತೃತ್ವವನ್ನು ನಿಖಿಲ್ ಅವರಿಗೇ ಕೊಡುವುದಕ್ಕೆ ಮನಸ್ಸು ಮಾಡಿ ಆಗಿದೆ. ಅಷ್ಟೇ ಅಲ್ಲ, ಅದಕ್ಕೆ ದೇವೇಗೌಡರ ಆಶೀರ್ವಾದವೂ ಇದೆ. ಆದರೆ.. ಮುಂದಕ್ಕೆ ಹೋಗಿದ್ದೇಕೆ ಎಂಬ ಪ್ರಶ್ನೆಗೆ ಉತ್ತರಗಳೂ ಇವೆ. ಜೆಡಿಎಸ್‌ನ ಕೆಲವು ಶಾಸಕರ ಅಸಮಾಧಾನ, ಅತೃಪ್ತಿ ಕೂಡಾ ಇದಕ್ಕೆ ಕಾರಣವಂತೆ.
ಜೆಡಿಎಸ್ ಮೂಲಗಳ ಪ್ರಕಾರ.. ಹೋಲ್ಡ್ ಆನ್ ಎಂದಿದ್ದೇ ದೇವೇಗೌಡ..!
ಪಕ್ಷದ ಹಿರಿಯ ಶಾಸಕರಿಗೆ ಅಸಮಾಧಾನ ಶುರುವಾಗಿತ್ತು. ನಾವು ಕುಮಾರಣ್ಣನ ಹಿಂದೆ ನಿಲ್ಲುವುದು ಬೇರೆ, ನಿಖಿಲ್ ಕುಮಾರಸ್ವಾಮಿಯವರ ಹಿಂದೆ ನಿಲ್ಲುವುದು ಹೇಗೆ? ಅಂತ ಕಿರಿಕಿರಿ ಮಾಡಿಕೊಂಡಿದ್ದರು. ಯಾವಾಗ ಈ ವಿಷಯ ದೊಡ್ಡ ಗೌಡರ ಕಿವಿಗೆ ಬಿತ್ತೋ.. ಆಗ ದೇವೇಗೌಡರು ಕುಮಾರಸ್ವಾಮಿಗೆ ಹೋಲ್ಡ್ ಆನ್ ಸಿಗ್ನಲ್ ಕೊಟ್ಟರು. ಅಂದರೆ.. ನೀನು ದೆಹಲಿಯಲ್ಲಿ ಬೇರುಗಳನ್ನು ಗಟ್ಟಿ ಮಾಡಿಕೋ.. ಇದನ್ನು ಆಮೇಲೆ ನೋಡೋಣ. ಸಮಯ ಬಂದೇ ಬರುತ್ತದೆ, ಆತುರ ಬೇಡ ಎಂಬ ಸಿಗ್ನಲ್ ಕೊಟ್ಟರು. ಪ್ರಧಾನಿ ನರೇಂದ್ರ ಮೋದಿಯವರು ನಂಬಿಕೆ ಇಟ್ಟು ಕೇಂದ್ರ ಸಂಪುಟದಲ್ಲಿ ದೊಡ್ಡ ಖಾತೆ ಕೊಟ್ಟಿದ್ದಾರೆ. ಅ ಕಡೆ ಗಮನ ಕೊಟ್ಟು ಕೆಲಸ ಮಾಡು, ಇಲ್ಲಿನ ಪರಿಸ್ಥಿತಿ ತಂತಾನಾಗಿಯೇ ಕ್ಲಿಯರ್ ಆಗುತ್ತದೆ ಎಂದು ಕುಮಾರಸ್ವಾಮಿ ಕನಸಿನ ಓಟಕ್ಕೆ ಲೈಟ್ ಆಗಿ ಬ್ರೇಕ್ ಹಾಕಿದರು. ನಿಖಿಲ್ ಪಟ್ಟಾಭಿಷೇಕ ಕಾರ್ಯವೂ ಮುಂದಕ್ಕೆ ಹೋಗಿದ್ದೇ ಆಗ.
ದೇವೇಗೌಡರು ಅಂದುಕೊಂಡಂತೆಯೇ ಆಯಿತು..!
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಇಷ್ಟು ಹೊತ್ತಿಗೆ ನಿಖಿಲ್ ಪಟ್ಟಾಭಿಷೇಕ ಆಗಿ ಏಳೆಂಟು ತಿಂಗಳಾಗುತ್ತಿತ್ತು. ಬ್ರೇಕ್ ಹಾಕಿದ ಮೇಲೆ.. ಜೆಡಿಎಸ್‌ನ ಬಹುತೇಕ ಶಾಸಕರಿಗೆ, ‘ಪಕ್ಷ ಕಟ್ಟುತ್ತಿರುವವರೇ ದೊಡ್ಡ ಗೌಡರು ಮತ್ತು ಕುಮಾರಸ್ವಾಮಿ. ಅದಕ್ಕೆ ಅಗತ್ಯವಾದ ಬಂಡವಾಳ ಹಾಕುವವರೂ ಅವರೇ. ಹೀಗಾಗಿ ನಿಖಿಲ್ ಕುಮಾರಸ್ವಾಮಿ ಪಕ್ಷಾಧ್ಯಕ್ಷರಾಗಿ ಬಂದು ಕೂತರೆ ತಪ್ಪೇನು?’ ಅನ್ನಿಸತೊಡಗಿದೆ. ದೇವೇಗೌಡರ ಲೆಕ್ಕಾಚಾರ ಸರಿಯಾಗಿಯೇ ಆಗಿದೆ. ಅಷ್ಟೇ ಅಲ್ಲ.. ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದರೂ ಕೂಡಾ.. ತಮ್ಮ ಹಿಂದೆ ಜೆಡಿಎಸ್ ಕಾರ್ಯಕರ್ತರು ಬರುವುದಿಲ್ಲ. ಹೊಸ ಹೋರಾಟ ಶುರು ಮಾಡಬೇಕು ಎಂದು ಅನ್ನಿಸೋಕೆ ಶುರುವಾಗಿದೆ. ಇದೆಲ್ಲ ಆಗಿ ಪಕ್ಷ ತೊರೆಯುವ ಉತ್ಸಾಹದಲ್ಲಿದ್ದವರು ತಮ್ಮ ರಾಜಕೀಯ ನಡೆಗೆ ತಾತ್ಕಾಲಿಕ ಬ್ರೇಕ್ ಹಾಕಿಕೊಂಡಿದ್ದಾರೆ.
ಜೆಡಿಎಸ್ ಪಾಳಯದ ಪ್ರಕಾರ, ಜೂನ್ ತಿಂಗಳಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ರಾಜ್ಯ ಪ್ರವಾಸ ಆರಂಭವಾಗಲಿದೆ. ಕುತೂಹಲದ ಸಂಗತಿ ಎಂದರೆ ನಿಖಿಲ್ ಅವರನ್ನು ಹೊತ್ತೊಯ್ಯುವ ರಥ ಮೊದಲು ಎಲ್ಲಿಂದ ಹೊರಡಬೇಕು. ರಾಜ್ಯದ ಯಾವ್ಯಾವ ಭಾಗಗಳಲ್ಲಿ ಸಂಚರಿಸಬೇಕು? ಅನ್ನುವು ದರ ನೀಲನಕ್ಷೆ ದೊಡ್ಡ ಗೌಡರ ಕಣ್ಣಳತೆಯ ಸಿದ್ಧವಾಗುತ್ತಿದೆ.
ದೇವೇಗೌಡರನ್ನು ರಾಜಕೀಯ ರಂಗದ ಸರ್ವತಂತ್ರಗಳನ್ನೂ ಬಲ್ಲ, ಮುಂದಾಲೋಚನೆ ಇರುವ ಚದುರಂಗ ಪ್ರವೀಣ ಎಂದು ಸುಮ್ಮನೆ ಹೇಳಲ್ಲ.