ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರನ್ನು ಪ್ರತಿನಿತ್ಯ ಬೈದುಕೊಂಡು ತಿರುಗಾಡುತ್ತಿದ್ದ ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿಯ ಶಾಸಕರಾಗಿದ್ದುಕೊಂಡು ಕಾಂಗ್ರೆಸ್ ಜೊತೆ ಕೈಜೋಡಿಸಿದ್ದ ಶಿವರಾಂ ಹೆಬ್ಬಾರ್, ಎಸ್ ಟಿ ಸೋಮಶೇಖರ್ ಇಬ್ಬರನ್ನೂ ಪಕ್ಷದಿಂದ ಆಚೆ ಹಾಕಲಾಗಿದೆ. ಅಂದರೆ ವಿಜಯೇಂದ್ರ ಅವರಿಗೆ ಬಹಿರಂಗವಾಗಿ ತಲೆನೋವು ತರುತ್ತಿದ್ದ ಎಲ್ಲರಿಗೂ ಶಾಸ್ತಿಯಾಗಿದೆ ಎಂದು ಖುಷಿಪಡುತ್ತಿರುವಾಗಲೇ ಹೈಕಮಾಂಡ್ ಒಂದು ಎಚ್ಚರಿಕೆ ಸಂದೇಶವನ್ನೂ ನೀಡಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ಅಗರ್ವಾಲ್ ಅವರು ಶಹಬ್ಬಾಸ್ ಗಿರಿ ನೀಡಿದ್ದಾರೆ. ಬಹಿರಂಗವಾಗಿ ʻʻವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರ ಮುಂದೆ ಬಹಿರಂಗವಾಗಿ ನಾನು ಅದನ್ನು ಹೇಗೆ ಹೇಳಲಿ. ಹಾಗಿದ್ದರೂ ರಾಜ್ಯಾಧ್ಯಕ್ಷರ ಕೆಲಸ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ” ಎಂದು ವಾಚಾಮಗೋಚರವಾಗಿ ಹೊಗಳಿದ್ದಾರೆ. ಆದರೆ ಡೋರ್ ಕ್ಲೋಸ್ ಆಗುತ್ತಿದ್ದಂತೆಯೇ ಬುದ್ದಿವಾದವನ್ನೂ ಹೇಳಿದ್ದಾರಂತೆ.
ವಿಜಯೇಂದ್ರ ಮತ್ತು ಆರ್ ಅಶೋಕ್ ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿರುವ ರಾಧಾ ಮೋಹನ್ ಅಗರ್ವಾಲ್ ʻಕರ್ನಾಟಕ ಬಿಜೆಪಿಯಲ್ಲಿರುವಷ್ಟು ಬಣಗಳು ಯಾವ ರಾಜ್ಯದಲ್ಲೂ ಇಲ್ಲ. ಅವರು ಕೇಳಿದರೆ ನೀವು ಸರಿ ಇಲ್ಲ ಅಂತಾರೆ. ನಿಮ್ಮನ್ನು ಕೇಳಿದರೆ ಅವರು ಸರಿ ಇಲ್ಲ ಅಂತಾರೆ. ಮೊದಲು ನೀವು ಸರಿಯಾಗಿ. ನಿಮ್ಮ ಬಗ್ಗೆ ಮಾತನಾಡುತ್ತಿರುವ ಯಾರ ಜೊತೆ ಸಮನ್ವಯ ಸಾಧಿಸುವ ಪ್ರಯತ್ನ ಮಾಡಿದೀರಿ. ಯಾರನ್ನು ಮಾತನಾಡಿಸಿದ್ದೀರಿ. ಸಂಬಂಧ ಸರಿಪಡಿಸಿಕೊಳ್ಳುವ ಪ್ರಯತ್ನವನ್ನೇ ಮಾಡದೆ, ಹೈಕಮಾಂಡ್ ಮೇಲೆ ನೀವು ಹೇಳಿದಂತೆಯೇ ನಡೆಯಬೇಕು ಎಂದು ಒತ್ತಡ ಸೃಷ್ಟಿಸುತ್ತಿದ್ದೀರಿ. ಪಕ್ಷ ಕಟ್ಟುವ, ಸಂಘಟನೆ ಮಾಡುವ, ನಾಯಕನಾಗಲು ಉದ್ದೇಶ ಇರುವವರ ವರ್ತನೆ ಹೀಗೆ ಇರಬಾರದುʼʼ ಎಂದು ಹೇಳಿದ್ದಾರೆ ರಾಧಾ ಮೋಹನ್ ಅಗರ್ವಾಲ್.
ರಾಜ್ಯದ ಸ್ಥಿತಿ ಖಾಸಗಿ ಸಮೀಕ್ಷೆಗಳಷ್ಟು ಸರಳವಾಗಿಲ್ಲ. ಸುಲಭವಾಗಿಲ್ಲ. ಹೋರಾಟಗಳನ್ನೇನೋ ಸಂಘಟಿಸುತ್ತಿದ್ದೀರಿ. ಮಾಧ್ಯಮಗಳಲ್ಲಿಯೂ ಅಬ್ಬರ ಜೋರಾಗಿದೆ. ಆದರೆ ಸ್ಥಳೀಯ ಮಟ್ಟದಲ್ಲಿ ಪಕ್ಷದ ಸಂಘಟನೆ ಆಗುತ್ತಿಲ್ಲ. ಕಾರ್ಯಕರ್ತರು ಇನ್ನೂ ಆಕ್ಟಿವ್ ಆಗಿಲ್ಲ. ಅವುಗಳನ್ನೂ ಗಮನಹರಿಸಿ. ಈಗಾಗಲೇ ರಾಜ್ಯದಲ್ಲಿ ಪಕ್ಷದ ಶಾಸಕರ ಸಂಖ್ಯೆ 66ರಿಂದ 62ಕ್ಕೆ ಇಳಿದಿದೆ. ಮೈಮರೆಯಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ಅಶೋಕ್ ಅವರನ್ನು ಕರೆದು ಕೂರಿಸಿಕೊಂಡು ಮಾತನಾಡಿರುವ ಅಗರ್ವಾಲ್ ಪಕ್ಷದ ಎಲ್ಲ ಶಾಸಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವಂತೆ ಸಲಹೆ ನೀಡಿದ್ದಾರೆ. ದೇಶದಲ್ಲಿರುವ ಕಾಂಗ್ರೆಸ್ಸಿನ ಲೆಕ್ಕವೇ ಬೇರೆ. ರಾಜ್ಯ ಕಾಂಗ್ರೆಸ್ಸಿನ ಲೆಕ್ಕವೇ ಬೇರೆ. ಆಡಳಿತ ಪಕ್ಷದ ವಿರುದ್ಧ ಪ್ರಬಲವಾಗಿ ಹೋರಾಟ ಮಾಡಿ. ಅದನ್ನು ಬಿಟ್ಟು ಹೇಳಿಕೆ ಕೊಟ್ಟು ಸುಮ್ಮನೆ ಕೂರಬೇಡಿ ಎಂದೂ ಹೇಳಿದ್ದಾರೆ.
ಆದರೆ ಬಹಿರಂಗವಾಗಿ ಹೇಳಿರುವುದು ಮಾತ್ರ ಬೇರೆ.. ಬಹಿರಂಗವಾಗಿ..
ರಾಜ್ಯದಲ್ಲಿ ಇಂದು ಚುನಾವಣೆ ನಡೆದರೆ ಬಿಜೆಪಿ ಜಯಗಳಿಸಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಲಿದೆ. ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಮಾಡಿರುವ ಆರೋಪಗಳ ಬಗ್ಗೆ ಬಹಿರಂಗ ಸವಾಲಿಗೆ ನಾವು ಸಿದ್ದರಿದ್ದೇವೆ. ಬಿಜೆಪಿ ರಾಜ್ಯಾಧ್ಯಕ್ಷರ ಜೊತೆಗೆ ಸಿಎಂ ಸಿದ್ದರಾಮಯ್ಯ ಅವರು ಬಹಿರಂಗ ಚರ್ಚೆಗೆ ಬರಲಿ ನಾವು ಚರ್ಚೆಗೆ ಸಿದ್ಧರಿದ್ದೇವೆ. ಸತ್ಯಾಸತ್ಯತೆ ಹೊರಬರಲಿದೆ. ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರ ಮುಂದೆ ಬಹಿರಂಗವಾಗಿ ನಾನು ಅದನ್ನು ಹೇಗೆ ಹೇಳಲಿ. ಹಾಗಿದ್ದರೂ ರಾಜ್ಯಾಧ್ಯಕ್ಷರ ಕೆಲಸ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ ಎಂದು ಹೇಳಿದ್ದಾರೆ.



