ವಿಜಯೇಂದ್ರ. ಹಾಲಿ ಬಿಜೆಪಿ ರಾಜ್ಯಾಧ್ಯಕ್ಷ. ಆದರೆ.. ಅವರ ಪುನರಾಯ್ಕೆ ಬಗ್ಗೆ ಇನ್ನೂ ಇನ್ನೂ ಇನ್ನೂ ಗೊಂದಲಗಳಿವೆ. ವಿಜಯೇಂದ್ರ ಅವರಿಗೆ ಯಡಿಯೂರಪ್ಪ ಅವರ ಪುತ್ರ ಎಂಬ ಹೆಸರಿನ ಬಲ ಇದೆ. ಗೆಲ್ಲುವ ಮತ್ತು ಗೆಲ್ಲಿಸಿಕೊಳ್ಳುವ ತಂತ್ರಗಾರಿಕೆಯೂ ಇದೆ. ಲಿಂಗಾಯತ ಸಮುದಾಯದ ಪ್ರಭಾವಿ ನಾಯಕನಂತೆ ಬೆಳೆಯುತ್ತಿರುವುದು ಕೂಡಾ ಪ್ಲಸ್ ಪಾಯಿಂಟ್.2008-2011 ಮತ್ತು 2019-2021 ಅವಧಿಗಳಲ್ಲಿ ತೆರೆಮರೆಯಿಂದಲೇ ಪ್ರಮುಖ ಪಾತ್ರ ವಹಿಸಿದ್ದ ವಿಜಯೇಂದ್ರ, 2019ರ ಉಪಚುನಾವಣೆಯಲ್ಲಿ ಕೆ.ಆರ್. ಪೇಟೆ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳನ್ನು ಗೆದ್ದಿದ್ದು ಕಡಿಮೆ ಸಾಧನೆ ಅಲ್ಲ. ಇವೆಲ್ಲದರ ಜೊತೆಗೆ ನೆಗೆಟಿವ್ ಅಭಿಪ್ರಾಯಗಳೂ ಇವೆ.
ವಿಜಯೇಂದ್ರ ವಿರುದ್ದ ಇರುವ ನಕರಾತ್ಮಕ ಅಭಿಪ್ರಾಯಗಳು ಹೈಕಮಾಂಡ್‌ಗೆ ಸ್ಪಷ್ಟ ನಿರ್ಧಾರವನ್ನು ಕೈಗೊಳ್ಳಲು ಹಿಂದೇಟು ಹಾಕುವಂತಾಗಿದೆ. ಬಿಜೆಪಿ ಹೈಕಮಾಂಡ್‌ಗೆ ರಾಜ್ಯದ ಬೆಳವಣಿಗೆಗಳ ಬಗ್ಗೆ ಆಂತರಿಕ ಮಾಹಿತಿ ನೀಡುವ ದೆಹಲಿ ನಾಯಕರಲ್ಲೂ ವಿಜಯೇಂದ್ರ ಬಗ್ಗೆ ಅಸಮಾಧಾನ ಇದೆ. ಬಿಎಲ್ ಸಂತೋಷ್ ಹಾಗೂ ಪ್ರಹ್ಲಾದ್ ಜೋಶಿ ಅವರು ರಾಜ್ಯದ ಬೆಳವಣಿಗೆಗಳ ಬಗ್ಗೆ ಹೈಕಮಾಂಡ್ ನಾಯಕರಿಗೆ ನೀಡುವ ಇನ್ ಪುಟ್ಸ್ ಗಳು ಬಹುಮುಖ್ಯ ಪಾತ್ರ ವಹಿಸುತ್ತಿವೆ. ಹೀಗಾಗಿಯೇ ದೆಹಲಿ ನಾಯಕರು ಅಳೆದು ತೂಗಿ ಹೆಜ್ಜೆ ಇಡಲು ಮುಂದಾಗಿದ್ದಾರೆ.
ವಿಜಯೇಂದ್ರ ಬದಲಾಗಿ ಸರ್ವಸಮ್ಮತ ನಾಯಕ ಬಿಜೆಪಿಯಲ್ಲಿ ಯಾರಿದ್ದಾರೆ ಎಂಬ ಪ್ರಶ್ನೆಗೆ ಹೈಕಮಾಂಡ್‌ಗು ಉತ್ತರ ಸಿಕ್ಕಿದೆಯಾ.. ಈ ಮಾತಿಗೆ ಸ್ಪಷ್ಟ ಉತ್ತರ ನೋ. ಹಾಗಾದರೆ.. ವಿಜಯೇಂದ್ರ ಅವರನ್ನು ಘೋಷಿಸಬಾರದೇಕೆ ಎಂಬ ಪ್ರಶ್ನೆಗೆ ಉತ್ತರ ಅವರ ವರ್ತನೆ ಮತ್ತು ವ್ಯಕ್ತಿತ್ವ.
ವಿಜಯೇಂದ್ರ ಅವರ ಅತಿ ದೊಡ್ಡ ಸಮಸ್ಯೆ ಎಂದರೆ.. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎನ್ನುವುದೇ. ವಿಜಯೇಂದ್ರ ಅವರ ಸುತ್ತಮುತ್ತ ಅವರದ್ದೇ ಒಂದು ಕೋಟೆ ಇದೆ. ಆ ಕೋಟೆಯ ಒಳಗೆ ಬೇರೆ ಯಾರಿಗೂ ಪ್ರವೇಶ ಇಲ್ಲ. ಇರಲ್ಲ. ಸಿಗುವುದಿಲ್ಲ. ಸಿಗುತ್ತಿಲ್ಲ. ಅವರು ಹೇಳಿದ್ದೇ ಫೈನಲ್ ಎಂಬಂತೆ ವರ್ತಿಸುತ್ತಿರುವ ವಿಜಯೇಂದ್ರ ಅವರು ಹಿರಿಯ ನಾಯಕರಿಗೆ ಗೌರವ ಕೊಡುವುದಿಲ್ಲ ಎಂಬ ಆರೋಪಗಳೂ ಇವೆ. ನಾಯಕರಾದವರು ಇನ್ನೊಬ್ಬರ ಜೊತೆ ಮಾತನಾಡುವಾಗ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಬೇಕು. ವಿಜಯೇಂದ್ರ ಅವರು ಅಲ್ಲಿ ಎಡವುತ್ತಿದ್ದಾರೆ.
ಹೈಕಮಾಂಡ್ ಹೇಳುತ್ತಿರುವುದು ಇದೇ. ಮೊದಲು ಈ ತಪ್ಪುಗಳನ್ನು ತಿದ್ದಿಕೊಳ್ಳಿ ಎನ್ನುವುದೇ. ಆದರೆ ವಿಜಯೇಂದ್ರ ಆ ನಿಟ್ಟಿನಲ್ಲಿ ಒಂದು ಹೆಜ್ಜೆಯನ್ನೂ ಮುಂದಿಡುತ್ತಿಲ್ಲ. ಸದಾನಂದ ಗೌಡರು ವೈಯಕ್ತಿಕ ಆಸಕ್ತಿ ವಹಿಸಿ.. ಕೆಲವರ ಜೊತೆ ಮಾತುಕತೆಗೆ ಮುಂದಾದರೂ.. ವಿಜಯೇಂದ್ರ ಕಡೆಯಿಂದ ಪಾನ್ ಮೂವ್ ಆಗುತ್ತಿಲ್ಲ. ವಿಜಯೇಂದ್ರರೇ ಆಸಕ್ತಿ ವಹಿಸದೇ ಹೋದರೆ.. ಹೇಗೆ.. ಹೋಗ್ ಹೋಗ್ರಿ ಎಂಬ ಉತ್ತರ ಕೆಲವು ರೆಬಲ್ ನಾಯಕರಿಂದ ಬರುತ್ತಿದೆ.
ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಭದ್ರ ನೆಲೆ ಇರುವುದು ಕರ್ನಾಟಕದಲ್ಲಿ. ಇದು ದಕ್ಷಿಣ ಭಾರತದ ಬಿಜೆಪಿಯ ಹೆಬ್ಬಾಗಿಲು. ಬೇರೆ ಯಾವ ರಾಜ್ಯದಲ್ಲೂ ಬಿಜೆಪಿ ಅಧಿಕಾರ ಗಳಿಸಿಲ್ಲ. ಆದರೆ ಕರ್ನಾಟಕದಲ್ಲಿ ಬಿಎಸ್ ಯಡಿಯೂರಪ್ಪ ಪ್ರಯತ್ನದಿಂದ ಬಿಜೆಪಿ ಆಡಳಿತ ನಡೆಸಿದೆ. ಆದರೆ ಅದೆ ಯಡಿಯೂರಪ್ಪ ಅವರನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮೂಲೆ ಗುಂಪು ಮಾಡಿ, ಹೊಡೆತವನ್ನೂ ತಿಂದಿದೆ. ಆದರೆ ಒಂದಂತೂ ಸತ್ಯ. ವಿಜಯೇಂದ್ರ ಅವರಿಗೆ ಬಿಜೆಪಿ ಬೇಕು. ಬಿಜೆಪಿಗೆ ವಿಜಯೇಂದ್ರ ಬೇಕು. ಅನಿವಾರ್ಯ. ಅದೇ ವೇಳೆ.. ಪಕ್ಷವನ್ನು ಸರಿ ಇಟ್ಟುಕೊಳ್ಳದಿದ್ದರೆ.. ವಿಜಯೇಂದ್ರ ಆದರೂ.. ಅಷ್ಟೇ. ಹೊಡೆತ ಗ್ಯಾರಂಟಿ. ರಾಜಕೀಯದಲ್ಲಿ ನಾಯಕನಾದವನು ಕೆಲವು ಬಾರಿಯಾದರೂ ತಗ್ಗಬೇಕು. ಎಲ್ಲಿ ತಗ್ಗಬೇಕು ಎಂದು ಸರಿಯಾಗಿ ಗೊತ್ತಿದ್ದವನು ಮಾತ್ರ.. ರಾಜನಾಗುತ್ತಾನೆ.



