ಮುಗಿದೇ ಹೋಯಿತು ಎನ್ನುವಷ್ಟರ ಮಟ್ಟಿಗೆ ನೆಲಕಚ್ಚಿದ್ದ ಕೋವಿಡ್ ಪ್ರಕರಣಗಳು ಚಳಿಗಾಲದಲ್ಲಿ ಮತ್ತೆ ತೀವ್ರಗೊಂಡಿವೆ. ಇಂಡೋನೇಷ್ಯಾ, ಮಲೇಷ್ಯಾ ಹಾಗೂ ಸಿಂಗಾಪುರದಂಥ ಆಗ್ನೇಯ ಏಷ್ಯಾ ದೇಶಗಳಲ್ಲಿ ಮತ್ತೆ ಕೋವಿಡ್ ಕಾಲದ ನಿಯಮಗಳು ನಿಧಾನವಾಗಿ ಜಾರಿಗೆ ಬರುತ್ತಿವೆ. ಭಾರತದಲ್ಲಿ ಪ್ರಕರಣ ಸಂಖ್ಯೆ ಏರಿಕೆಯಾಗುತ್ತಿದ್ದರೂ ಆತಂಕದ ಪರಿಸ್ಥಿತಿ ಇಲ್ಲ. ಆದರೆ ಕೇರಳದಲ್ಲಿ ಕೋವಿಡ್ ಹೊಸ ತಳಿ ಎಓ.1 ಪತ್ತೆಯಾಗಿದೆ. ಇಷ್ಟೇ ಅಲ್ಲ ಕೋವಿಡ್‌ನಿಂದ ಸಾವು ಕೂಡ ಸಂಭವಿಸಿದೆ. ಇತರ ರಾಜ್ಯಗಳಲ್ಲೂ ಕೋವಿಡ್ ಸಂಖ್ಯೆ ಏರಿಕೆಯತ್ತ ಸಾಗುತ್ತಿದೆ. ಇದರ ಬೆನ್ನಲ್ಲೇ ಕೇಂದ್ರ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ.
ರಾಜ್ಯ ಸರ್ಕಾರ ಈಗಾಗಲೇ ಕೋವಿಡ್ ಮಾರ್ಗಸೂಚಿ ಪ್ರಕಟಿಸಿದ್ದು, ಗೈಡ್ ಲೈನ್ಸ್ ಪ್ರಕಾರ 60 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಕೇರಳದಲ್ಲಿ ಕೋವಿಡ್ ಸೋಂಕು ಹೆಚ್ಚಾಗುತ್ತಿದ್ದರೂ, ಸದ್ಯಕ್ಕೆ ಗಡಿ ನಿರ್ಬಂಧ ಇಲ್ಲ. ಇದು ಸ್ವಲ್ಪ ಮಟ್ಟಿಗೆ ಶಬರಿಮಲೆ ಯಾತ್ರಿಗಳಿಗೆ ರಿಲೀಫ್ ಕೊಟ್ಟಿದೆ. ಆದರೆ ಅಯ್ಯಪ್ಪನ ದರ್ಶನಕ್ಕೆ ಹೋಗುವವರು ಜ್ವರ, ಕೆಮ್ಮು, ನೆಗಡಿಯಂತಹ ಸಾಂಕ್ರಾಮಿಕ ರೋಗಗಳಿಂದ ಬಳಲುತ್ತಿದ್ದರೆ ಪರೀಕ್ಷೆ ಮತ್ತು ಚಿಕಿತ್ಸೆಗೆ ಒಳಪಡಬೇಕು.
ರಾಜ್ಯದಲ್ಲಿ ಆಸ್ಪತ್ರೆಗಳಲ್ಲಿ ಪರೀಕ್ಷೆಗಳನ್ನು ಹೆಚ್ಚು ಮಾಡುವ ಮೂಲಕ ರಾಜ್ಯದಲ್ಲಿನ ಕೋವಿಡ್ ಸ್ಥಿತಿಗತಿ ಪರಿಶೀಲನೆಗೆ ಸರ್ಕಾರ ಮುಂದಾಗಿದೆ.. ಒಂದು ವೇಳೆ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದು ತಿಳಿದುಬಂದರೆ, ಕಟ್ಟುನಿಟ್ಟಿನ ನಿರ್ಬಂಧ ಕ್ರಮಗಳನ್ನು ಕೈಗೊಳ್ಳುವ ಕುರಿತು ನಿರ್ಧಾರ ತೆಗೆದುಕೊಳ್ಳಲಿದೆ.



