ಹಿಂದೂ ಧರ್ಮದಲ್ಲಿ (Hinduism) ಹುಟ್ಟಿ, ಮದುವೆಯೂ ಆಗಿ ಕೆಲವು ವರ್ಷ ಸಂಸಾರ ನಡೆಸಿದ ಮಹಿಳೆಯೊಬ್ಬರು ಗಂಡನ ಮೇಲೆ ವೈವಾಹಿಕ ಹಾಗೂ ಕೌಟುಂಬಿಕ ದೌರ್ಜನ್ಯದ ಕೇಸ್ (A case of marital and domestic violence) ಹಾಕಿದ್ದರು. ಆದರೆ ಪತಿಯ ವಿರುದ್ಧ ಕೌಟುಂಬಿಕ ದೌರ್ಜನ್ಯದ ಕೇಸ್ ದಾಖಲಿಸಿದ್ದ ಆ ಮಹಿಳೆ, ಮತಾಂತರವಾಗಿ ಕ್ರೈಸ್ತ ಧರ್ಮೀಯನೊಬ್ಬನನ್ನು ಮದುವೆಯಾಗಿದ್ದರು. ಇದೀಗ ಹೈಕೋರ್ಟ್ ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿ ಪರಿಹಾರವೂ ಸಾಧ್ಯವಿಲ್ಲ. ಮತಾಂತರವಾದ (conversion) ಕಾರಣ ಆಕೆಯ ಮೊದಲ ಮದುವೆಯೇ ಅಸಿಂಧುವಾಗಿದೆ ಎಂದು ಅಭಿಪ್ರಾಯ ಪಟ್ಟಿದೆ.
ಪ್ರಕರಣ ಏನು?
ಹಿಂದು ಧರ್ಮಕ್ಕೆ ಸೇರಿದ ಬೆಂಗಳೂರಿನ ರಾಜಾಜಿನಗರದ ವ್ಯಕ್ತಿ ವಿದ್ಯಾರಣ್ಯಪುರದ ಯುವತಿಯ ಜೊತೆ ಮದುವೆಯಾಗಿದ್ದರು. 2000ರ ಸೆ.10ರಂದು ಹಿಂದೂ ಧಾರ್ಮಿಕ ಸಂಪ್ರದಾಯದಂತೆ ಮದುವೆಯಾಗಿದ್ದರು. ದಂಪತಿಗೆ ಒಂದು ಹೆಣ್ಣು ಮತ್ತು ಗಂಡು ಮಗು ಜನಿಸಿತ್ತು. ಆದರೆ, ಚಿಕ್ಕ ವಯಸ್ಸಿನಲ್ಲಿ ಗಂಡು ಮಗು ಸಾವನ್ನಪ್ಪಿತ್ತು. ನಂತರ ಭಿನ್ನಾಭಿಪ್ರಾಯಗಳು ಏರ್ಪಟ್ಟು ಪತ್ನಿ ಮತ್ತು ಪತಿ ನಡುವೆ ಕಂದಕ ಸೃಷ್ಟಿಯಾಗಿತ್ತು. 2013ರಲ್ಲಿ ಪತಿ ವಿರುದ್ದ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಸೆಕ್ಷನ್ 12 ಅಡಿಯಲ್ಲಿ ಪರಿಹಾರ ಕೋರಿ ಪತ್ನಿ ಮ್ಯಾಜಿಸ್ಟ್ರೇಟ್ ಕೋರ್ಟ್ ಮೊರೆ ಹೋಗಿದ್ದರು.
ಮದುವೆ ಸಂದರ್ಭದಲ್ಲಿ ತಮ್ಮ ಪೋಷಕರು ಪತಿಗೆ ನಗದು ಮತ್ತು ಚಿನ್ನಾಭರಣ ರೂಪದಲ್ಲಿ ಸಾಕಷ್ಟು ವರದಕ್ಷಿಣೆ ನೀಡಿದ್ದಾರೆ. ಇದರ ಹೊರತಾಗಿಯೂ ಪತಿ ಹೆಚ್ಚುವರಿ ವರದಕ್ಷಿಣೆಗೆ ಬೇಡಿಕೆಯಿಟ್ಟು, ತನ್ನನ್ನು ಅನುಚಿತವಾಗಿ ನಡೆಸಿಕೊಳ್ಳುತ್ತಿದ್ದಾರೆ. ಆಧ್ದರಿಂದ ಪರಿಹಾರ ನೀಡಲು ಪತಿಗೆ ಆದೇಶಿಸುವಂತೆ ಪತ್ನಿ ಕೋರಿದ್ದರು. ಪತ್ನಿಯ ಎಲ್ಲ ಆರೋಪಗಳನ್ನು ಅಲ್ಲಗಳೆದಿದ್ದ ಪತಿ, ಪತ್ನಿ ತಾನಾಗಿಯೇ ನನ್ನನ್ನು ಬಿಟ್ಟು ಹೋಗಿದ್ದಾರೆ. ಆಕೆಯ ನಿರ್ಲಕ್ಷ್ಯದಿಂದಲೇ ಗಂಡು ಮಗು ಸಾವನ್ನಪ್ಪಿದೆ. ಆಕೆ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದು, ಹೆಣ್ಣು ಮಗುವನ್ನು ಸಹ ಮತಾಂತರ ಮಾಡಲು ಯತ್ನಿಸಿದ್ದಾರೆ. ಪಾರ್ಶ್ವವಾಯುನಿಂದ ಬಳಲುತ್ತಿರುವ ಕಾರಣ ನನ್ನ ಜೀವನ ನಿರ್ವಹಣೆ ಮಾಡಿಕೊಳ್ಳಲು ಅಸಮರ್ಥನಾಗಿದ್ದೇನೆ. ಆಧ್ದರಿಂದ ಪತ್ನಿಯ ಅರ್ಜಿ ವಜಾಗೊಳಿಸಬೇಕು ಎಂದು ಕೋರಿದ್ದರು. ಪತಿಗೆ ಪೆರಾಲಿಸಿಸ್ ಸ್ಟ್ರೋಕ್ ಆಗಿರುವುದನ್ನೂ ಕೋರ್ಟ್ ಗಂಭೀರವಾಗಿಯೇ ಪರಿಗಣಿಸಿತ್ತು.
ಪತಿ ಮತ್ತು ಪತ್ನಿಯ ವಾದ ಆಲಿಸಿದ್ದ ಹಾಗೂ ಅವರು ಒದಗಿಸಿದ್ದ ಸಾಕ್ಷ್ಯಾಧಾರ ಪರಿಶೀಲಿಸಿದ್ದ ಮ್ಯಾಜಿಸ್ಟ್ರೇಟ್ ಕೋರ್ಟ್, (magistrate court) ಪತಿಯ ಕೌಟುಂಬಿಕ ದೌರ್ಜನ್ಯವನ್ನು ಸಾಬೀತುಪಡಿಸುವಲ್ಲಿ ಪತ್ನಿ ವಿಫಲವಾಗಿದ್ದಾರೆ. ಹಾಗಾಗಿ, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಪರಿಹಾರ ಪಡೆಯಲು ಪತ್ನಿ ಅರ್ಹವಾಗಿಲ್ಲ ಎಂದು ಸ್ಪಷ್ಟಪಡಿಸಿ ಅರ್ಜಿ ವಜಾಗೊಳಿಸಿತ್ತು. ಈ ಆದೇಶ ಪ್ರಶ್ನಿಸಿ ಪತ್ನಿ ಮೇಲ್ಮನವಿ ಸಲ್ಲಿಸಿದ್ದರು. ಮೇಲ್ಮನವಿಯ ವಿಚಾರಣೆ ನಡೆಸಿದ್ದ 57ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ, ಪತಿಯಿಂದ ಪತ್ನಿಯ ಮೇಲೆ ಕೌಟುಂಬಿಕ ದೌರ್ಜನ್ಯ ನಡೆದಿಲ್ಲ ಎಂದು ತೀರ್ಮಾನಿಸಿ, ಜೀವನಾಂಶ ಘೋಷಿಸಲು ನಿರಾಕರಿಸಿತ್ತು. ಆದರೆ, ತನ್ನ ಜೀವನ ನಿರ್ವಹಣೆ ಮಾಡಿಕೊಳ್ಳಲು ಪತ್ನಿ ಅಸಮರ್ಥಳಾಗಿರುವ ಕಾರಣ ಪತಿಯು ನಾಲ್ಕು ಲಕ್ಷ ರು. ಪರಿಹಾರ ಪಾವತಿಸಬೇಕೆಂದು 2015ರ ನ.13ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಪತಿ ಹೈಕೋರ್ಟ್‌ಗೆ ಕ್ರಿಮಿನಲ್ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಹೈಕೋರ್ಟ್ ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ಮತ್ತು ಸೆಷನ್ಸ್ ನ್ಯಾಯಾಲಯ ಎರಡೂ ಸಹ ಪತ್ನಿಯ ಮೇಲೆ ಪತಿ ಕೌಟುಂಬಿಕ ದೌರ್ಜನ್ಯ ಎಸಗಿಲ್ಲ ಎಂಬುದಾಗಿ ತೀರ್ಮಾನಿಸಿವೆ. ಇಂತಹ ಸನ್ನಿವೇಶದಲ್ಲಿ ಪರಿಹಾರ ಘೋಷಿಸಲು ಅವಕಾಶವಿಲ್ಲ.ಕೌಟುಂಬಿಕ ದೌರ್ಜನ್ಯ ಸಾಬೀತಾದರೆ ಮಾತ್ರ ಪರಿಹಾರ ಒದಗಿಸಬಹುದು ಎಂದು ಹೇಳಿದೆ. ಮದುವೆ ಇನ್ನೂ ಅಸ್ಥಿತ್ವದಲ್ಲಿದೆ ಎಂಬ ಮಹಿಳೆಯ ವಾದವನ್ನೂ ಪುರಸ್ಕರಿಸದ ಹೈಕೋರ್ಟ್, ವಿಚ್ಚೇಧನ ದೊರಕುವ ಮೊದಲೇ ಮತಾಂತರವಾಗಿರುವುದರಿಂದ ಮದುವೆಯೂ ಅಸಿಂಧುವಾಗುತ್ತದೆ ಎಂದು ಹೇಳಿದೆ. ವಿವಾಹ ವಿಚ್ಛೇದನ ಮಂಜೂರಾಗದಿದ್ದರೂ ಪತ್ನಿ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿರುವ ಕಾರಣ ಮದುವೆಯೇ ಅಸಿಂಧುಗೊಳ್ಳುತ್ತದೆ. ಆದ್ದರಿಂದ ಸೆಷನ್ಸ್ ನ್ಯಾಯಾಲಯವು ಪತ್ನಿಗೆ ನಾಲ್ಕು ಲಕ್ಷ ರು. ಪರಿಹಾರ ಘೋಷಿಸುವ ಮೂಲಕ ತಪ್ಪೆಸಗಿದೆ. ಇದು ನ್ಯಾಯದಾನದ ಹಾದಿ ತಪ್ಪಿದಂತಾಗಿದೆ ಎಂದು ನಿರ್ಧರಿಸಿದ ಹೈಕೋರ್ಟ್, ಸೆಷನ್ಸ್ ನ್ಯಾಯಾಲಯದ ಆದೇಶ ರದ್ದುಪಡಿಸಿದೆ.



