ಸಚಿವ ಸಂತೋಷ್ ಲಾಡ್ ಕೆಲವು ವಿಚಾರಗಳಿಗೆ ಡೋಂಟ್ ಕೇರ್. ಬಯ್ದುಕೊಂಡ್ರೂ.. ಕೂಗಾಡಿದ್ರೂ.. ಹಾರಾಡಿದ್ರೂ.. ಕಿವಿಗೆ ಹಾಕಿಕೊಳ್ಳೋದಿಲ್ಲ. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ರಸ್ತೆ ಕಾಮಗಾರಿ ಭೂಮಿಪೂಜೆ ವೇಳೆ ಕುರಾನ್ ಪಠಣ ಮಾಡಿಸಿ, ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ ಸಂತೋಷ್ ಲಾಡ್. ಸರ್ಕಾರಿ ಕಾರ್ಯಕ್ರಮದಲ್ಲಿ ಕುರಾನ್ ಪಠಿಸಿದರೆ ಏನು ತಪ್ಪು ಎಂಬ ಪ್ರಶ್ನೆ ಸಹಜ. ಒಟ್ಟಿನಲ್ಲಿ ವಿವಾದವಂತೂ ಆಗಿದೆ.
ಹುಬ್ಬಳ್ಳಿ-ಕಾರವಾರ ರಾಷ್ಟ್ರೀಯ ಹೆದ್ದಾರಿಯಿಂದ ಹುಬ್ಬಳ್ಳಿ ತಾಲೂಕಿನ ಗುಡಿಹಾಳ ಮತ್ತು ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಗುಂಡಿಮಯವಾಗಿದ್ದು, ಸಾಯುತ್ತಲೂ ಇದ್ದಾರೆ. ಕೈಕಾಲು ಮುರಿದುಕೊಳ್ಳುವವರಿಗೆ ಲೆಕ್ಕವೇ ಇಲ್ಲ. ಗಾಡಿಗಳು ಗುಂಡಿಯಲ್ಲಿ ಸಿಕ್ಕಿ ಒದ್ದಾಡುವುದು, ಗಾಯವಾಗುವುದು, ಗಾಡಿಗಳಿಗೆ ಡ್ಯಾಮೇಜ್ ಆಗುವುದು.. ಹೊಸದಲ್ಲ. ಜನ ಸರ್ಕಾರಕ್ಕೆ ದಿನವೂ ಉಗಿಯುತ್ತಿದ್ದರೂ.. ಏನ್ ಈವಾಗ ಎಂದು ಒರೆಸಿಕೊಂಡು ಹೋಗುವ ಅಧಿಕಾರಿಗಳಿದ್ದಾರೆ. ಕೊನೆಗೆ ಅಕ್ಟೋಬರ್ 5 ರಂದು ಹುಬ್ಬಳ್ಳಿ ನಗರದ ವಿಶಾಲ್ ನಗರದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.
ಹುಬ್ಬಳ್ಳಿ ನಗರದ ವಾರ್ಡ್ ನಂಬರ್ 34 ರ ಗುಡಿಹಾಳ ರಸ್ತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಸಂತೋಷ್ ಲಾಡ್, ನೂತನ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಐದು ಕೋಟಿ ಎಪ್ಪತ್ತೆಂಟು ಲಕ್ಷ ವೆಚ್ಚದಲ್ಲಿ, 1.2 ಕಿಲೋ ಮೀಟರ್ ಉದ್ದದ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ಸಿಕ್ಕಿತ್ತು. ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ಗಣೇಶ ಸ್ತೋತ್ರದ ಪ್ರಾರ್ಥನೆ ಜೊತೆಗೆ ಕುರಾನ್ ಪಠಣ ಮಾಡಲಾಗಿತ್ತು. ಇದು ಧಾರವಾಡ ಪೂರ್ವ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ ಆಕ್ರೋಶಕ್ಕೆ ಕಾರಣವಾಗಿದೆ.
ಅರವಿಂದ್ ಬೆಲ್ಲದ ಅವರ ಆಕ್ರೋಶಕ್ಕೆ ಇದಷ್ಟೇ ಕಾರಣ ಅಲ್ಲ. ಸಾಮಾನ್ಯವಾಗಿ ಸರ್ಕಾರಿ ಕಾರ್ಯಕ್ರಮಗಳಿಗೆ ಅಲ್ಲಿನ ಶಾಸಕರೇ ಅಧ್ಯಕ್ಷರಾಗಿರಬೇಕು. ಅದು ನಿಯಮವೂ ಹೌದು. ಆದರೆ.. ಸ್ಥಳೀಯ ಶಾಸಕರನ್ನು ಕಾರ್ಯಕ್ರಮಕ್ಕೆ ಆಹ್ವಾನ ಮಾಡಿಲ್ಲ. ಆ ಮೂಲಕ ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎನ್ನುವುದು ಬೆಲ್ಲದ ಆರೋಪ.
ಪ್ರತಿಭಟನೆಯಾಗಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮುಲ್ಲಾ ಮೋಕ್ಷ ಹೋಮ, ರುದ್ರಪಠಣ ಮೂಲಕ ಶುದ್ದೀಕರಣ ಅಂತ ಹೋಮ-ಹವನ ಮಾಡಲಾಗಿದೆ. ಅರವಿಂದ್ ಬೆಲ್ಲದ್ ಸೇರಿದಂತೆ ಬಿಜೆಪಿಯ ಅನೇಕ ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕ ಅರವಿಂದ್ ಬೆಲ್ಲದ ಆರೋಪವನ್ನು ಅಂದು ಕಾರ್ಯಕ್ರಮ ಆಯೋಜಿಸಿದ್ದ ವಾರ್ಡ್ ನಂಬರ್ 34 ರ ಕಾಂಗ್ರೆಸ್ ಸದಸ್ಯೆಯ ಪುತ್ರ ಹಾಗೂ ಕೆಪಿಸಿಸಿ ಕಾರ್ಯದರ್ಶಿ ನಾಗರಾಜ್ ಗೌರಿ ಅಲ್ಲಗಳೆದಿದ್ದಾರೆ. ಅಂದು ರಸ್ತೆ ನಿರ್ಮಾಣ ಸೇರಿ 14 ಕೋಟಿ ರೂ ಕಾಮಗಾರಿಗಳಿಗೆ ಬೇರೆಡೆ ಪೂಜೆ ಮಾಡಲಾಗಿತ್ತು. ನಂತರ ತಮ್ಮ ಕಾಂಗ್ರೆಸ್ ಜನಸಂಪರ್ಕ ಕಚೇರಿ ಹಾಗೂ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.
ಅಭಿನಂದನಾ ಸಮಾರಂಭ, ಸರ್ಕಾರಿ ಕಾರ್ಯಕ್ರಮವಲ್ಲಾ. ಅದು ಖಾಸಗಿ ಕಾರ್ಯಕ್ರಮ. ಅಲ್ಲಿ ಕುರಾನ್ ಪಠಣಕ್ಕೂ ಮುನ್ನವೇ ಗಣೇಶ ಸ್ತೋತ್ರ ಹೇಳಲಾಗಿತ್ತು. ನಂತರ ಕುರಾನ್ ಪಠಣ ನಡೆದಿದೆ. ಆ ಬಡಾವಣೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಎರಡು ಸಮುದಾಯದವರು ಇದ್ದಾರೆ. ಹೀಗಾಗಿ ಸರ್ವಧರ್ಮ ಭಾವೈಕ್ಯತೆಗಾಗಿ ಈ ಕ್ರಮ ಅನುಸರಿಸಲಾಗಿದೆ. ಆದರೆ ಶಾಸಕರು ಅದು ಸರ್ಕಾರಿ ಕಾರ್ಯಕ್ರಮ ಅಂತ ಬಿಂಬಿಸುತ್ತಿದ್ದಾರೆ ಅಂತ ನಾಗರಾಜ್ ಗೌರಿ ಸಮರ್ಥನೆ ಮಾಡಿಕೊಂಡಿದ್ದಾರೆ.
ಅಂದಹಾಗೆ ಇಲ್ಲಿ ಇನ್ನೂ ಒಂದು ವಿವಾದ ಇದೆ. ಇದೇ ರಸ್ತೆಗೆ ಬಿಜೆಪಿ ಸರ್ಕಾರ ಇದ್ದಾಗಲೇ ಅನುಮೋದನೆ ನೀಡಲಾಗಿತ್ತಂತೆ. ಆ ಅನುದಾನವನ್ನು ಎರಡು ವರ್ಷ ತಡೆ ಹಿಡಿದು, ಅದೇ ಯೋಜನೆಗೆ ಹೊಸದಾಗಿ ಅನುಮೋದನೆ ಪಡೆದು ಕೆಲಸ ಮಾಡಲಾಗ್ತಿದೆಯಂತೆ. ಒಟ್ಟಿನಲ್ಲಿ ಎಲ್ಲವೂ ರಾಜಕೀಯಮಯ.



