ಭಾನುವಾರ (ಡಿ.3) ಮೈಸೂರು ಜಿಲ್ಲೆಯ ಸಾಲಿಗ್ರಾಮ ಸಮೀಪ ಭವಾನಿ ರೇವಣ್ಣ ಅವರ ಕಾರಿಗೆ ವಿರುದ್ಧ ದಿಕ್ಕಿನಿಂದ ಬಂದ ಬೈಕ್ ಸವಾರ ಡಿಕ್ಕಿ ಹೊಡೆದಿದ್ದ. ಬೈಕ್ ಸವಾರ ಬಂದಿದ್ದು ರಾಂಗ್ ರೂಟಿನಲ್ಲಿ. ಇದರಿಂದ ಕಾರಿನ ಮುಂಭಾಗ ಡ್ಯಾಮೇಜ್ ಆಗಿತ್ತು. ಘಟನೆ ನಡೆಯುತ್ತಿದ್ದಂತೆ ಕಾರಿನಿಂದ ಇಳಿದ ಭವಾನಿ ರೇವಣ್ಣ ಅವರು ಬೈಕ್ ಸವಾರನನ್ನು ಬಾಯಿಗೆ ಬಂದಂತೆ ಬೈದಿದ್ದರು.
ಸಾಯೋಕೆ 1.5 ಕೋಟಿ ಕಾರೇ ಆಗಬೇಕಿತ್ತಾ, ಸುಟ್ರು ಹಾಕ್ರೋ ಈ ಗಾಡಿನ..
ನಿನಗೆ ಅಂತಹ ಅರ್ಜೆಂಟ್ ಏನಿತ್ತು? ಗಾಡಿಗೆ ಎಷ್ಟು ಡ್ಯಾಮೇಜ್ ಆಗಿದೆ. ರೆಡಿ ಮಾಡಿಸುವುದು ಹೇಗೆ? ಕೊಡ್ತಿಯಾ ₹ 50 ಲಕ್ಷ ರಿಪೇರಿ ಮಾಡಿಸೋಕೆ? ಸ್ಥಳದಲ್ಲಿರುವವರು ಹಣ ಕೊಡಂಗಿದ್ರೆ ನ್ಯಾಯ ಮಾತಾಡಕ್ಕೆ ಬನ್ನಿ ಅವನು ಸತ್ತೋಯ್ತಾನೆ ಅಂತ ಅವನ ಬಗ್ಗೆ ಯೋಚೆ ಮಾಡ್ತಾ ಇದ್ದೀಯಲ್ಲಾ, ಒಂದೂವರೆ ಕೋಟಿ ರೂ. ಗಾಡಿ ಡ್ಯಾಮೇಜ್ ಯಾರ್ ಕಟ್ಟಿಕೊಡ್ತಾರೆ ?
ದೇಶ ಮುಳುಗಿ ಹೋಗಿತ್ತಾ, ರೈಟಲ್ಲಿ ಬಂದು ಗುದ್ದಿದ್ದೀಯಲ್ಲಾ, ಒಂದೂವರೆ ಕೋಟಿ ಗಾಡಿ ಇದು. ಡ್ಯಾಮೇಜ್ ಮಾಡಿದ್ದೀಯಲ್ಲ, ಸಾಯಂಗಿದ್ರೆ ಬಸ್‌ಗೆ ಸಿಕ್ಕಾಕೊಂಡು ಸಾಯಬೇಕಿತ್ತು. ನನ್ನ ಕಾರ್ ಡ್ಯಾಮೇಜ್ ಮಾಡೋಕೆ ನೀನ್ಯಾವನು?
ಇದು ಯಾವ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತೆ. ಗಾಡಿ ಸೀಜ್ ಮಾಡಿಸು. ಈ ಗ್ರಾಮ ಎಸ್‌ಐ ಬರೋಕೆ ಹೇಳಿ..
ಹೀಗೆಲ್ಲ ಹೇಳಿದ್ದ ಭವಾನಿ ರೇವಣ್ಣ ಬೈಗುಳದ ಮಧ್ಯೆ ಬೇವರ್ಸಿ.. ಸೂ..ಮಗ.. ಎಂದೆಲ್ಲ ಬೈದಿದ್ದರು. ಸಾಲಿಗ್ರಾಮ ಪೊಲೀಸ್ ಠಾಣೆಯ ಸಿಪಿಐ ಜಿ.ಕೃಷ್ಣರಾಜು ಸ್ಥಳಕ್ಕೆ ಭೇಟಿ ನೀಡಿದ್ದರು.
ಘಟನೆಯ ವಿಡಿಯೋ ವೈರಲ್ ಆಗೋಕೆ ಶುರುವಾದವು. ಅಪಘಾತದ ಬಳಿಕ ವಾಹನ ಸವಾರನ ಆರೋಗ್ಯ ವಿಚಾರಿಸದೇ ಕಾರಿನ ಬಗ್ಗೆ ಯೋಜಿಸಿದ ಭವಾನಿ ರೇವಣ್ಣ ವಿರುದ್ಧ ನೆಟ್ಟಿಗರು ವ್ಯಾಪಕ ಆಕ್ರೋಶ ಹೊರಹಾಕಿದರು. ಬಡವ ಸತ್ರೂ ಇವರಿಗೆ ಚಿಂತೆ ಇಲ್ಲ. ಆದರೆ ಇವರ ಒಂದೂವರೆ ಕೋಟಿ ಕಾರಿಗೆ ಏನು ಆಗಬಾರದು”, “ದೊಡ್ಡ ಗೌಡರ ಮನೆಗೆ ದೊಡ್ಡತನ ನೋಡಿ” ” ಅಕ್ಕೋ ಸಮಾಧಾನ ಮಾಡ್ಕೊಳಿ ” ಎಂದೆಲ್ಲ ಕಿಡಿಕಾರಿದರು. ಭವಾನಿ ರೇವಣ್ಣ ಅವರ ಪರ ವಿರೋಧ ಚರ್ಚೆಯೇ ಶುರುವಾಗಿ ಹೋಯ್ತು.
ಕ್ಷಮೆ ಕೇಳಿದ ದೇವೇಗೌಡ, ಹೆಚ್.ಡಿ.ರೇವಣ್ಣ :
ಪತ್ನಿ ವರ್ತನೆಯ ಬಗ್ಗೆ ಯಾರಿಗಾದರೂ ನೋವಾದರೆ ಕ್ಷಮೆ ಕೋರುತ್ತೇನೆ. ಬೈಕ್ ಸವಾರ ಕುಡಿದು ಬೈಕ್ ಓಡಿಸಿದ್ದ. ನಾವೇನು ಅವರ ಬಳಿ ಡ್ಯಾಮೇಜ್ ಹಣ ಕೊಡಿ ಎಂದು ಕೇಳಲಿಲ್ಲ. ಏನಾದರೂ ಹೆಚ್ಚು ಕಮ್ಮಿ ಆಗಿದ್ರೆ ಯಾರು ಹೊಣೆ? ಬೇಕಾದರೆ ಭವಾನಿ ರೇವಣ್ಣ ಅವರಿಂದಲೂ ಕ್ಷಮೆ ಕೇಳಿಸುತ್ತೇನೆ. ಸಿಟ್ಟಾಗಿ ಭವಾನಿ ಮಾತನಾಡಿದ್ದಾರೆ. ಹೆಚ್ಚು ಕಡಿಮೆ ಆಗಿದ್ದರೆ ಏನಾಗಾಗುತ್ತಿತ್ತು?, ಅವರು ಏನೂ ಅಹಂಕಾರ ಮಾಡಿಲ್ಲ. ಭವಾನಿ ಅವರು ಯಾರದ್ದೋ ಸ್ನೇಹಿತನ ಕಾರಿನಲ್ಲಿ ಹೋಗಿದ್ದರು. ಅವರು ಸಿಟ್ಟಿನಲ್ಲಿ ಮಾತನಾಡಿದ್ದಾರೆ. ನಮ್ಮಕುಟುಂಬ ಯಾರಿಗೂ ನೋವು ಆಗುವ ಕೆಲಸ ಮಾಡಲ್ಲ. ಏನಾದರೂ ಹೆಚ್ಚು ಕಡಿಮೆ ಆಗಿದ್ದರೆ ಏನಾಗುವುದು? ಇವರದ್ದೇ ಪ್ರಾಣ ಹೋಗಿದ್ದರೆ ಏನು ಮಾಡುವುದು? , ಭವಾನಿ ಯಾವತ್ತೂ ಯಾರಿಗೂ ನೋವು ಮಾಡಿಲ್ಲ. ಸ್ನೇಹಿತರ ಕಾರು ಅಂತ ಹಾಗೇ ಮಾಡಿದ್ದಾರೆ. ನಮ್ಮ ಕುಟುಂಬ ಆ ತರ ಇಲ್ಲ. ಗಾಡಿ ಅವಘಡ ಆದ ಮೇಲೆ ದೂರು ಕೊಡದಿದ್ದರೆ ತಪ್ಪಾಗಲ್ಲವಾ? ಘಟನೆ ನಡೆದ ಬಳಿಕ ಠಾಣೆಗೆ ತಿಳಿಸಬೇಕಲ್ಲವಾ? ಯಾರಿಗಾದರೂ ನೋವಾಗಿದ್ದರು ವಿಷಾದ ವ್ಯಕ್ತಪಡಿಸುತ್ತೇನೆ. ಅವರು ಕುಡಿದು ಬಂದು ಮುಂದೆನೇ ಗುದ್ದಿದ್ದಾರೆ. ಕಾರಿನಲ್ಲಿದ್ದವರ ಪ್ರಾಣಕ್ಕೆ ತೊಂದರೆ ಆಗಿದ್ದರೆ? ಎಷ್ಟೇ ನಿಧಾನವಾಗಿ ಹೋಗಿದ್ದರು ಬಂದು ಮಧ್ಯದಲ್ಲಿ ಗುದ್ದಿದ್ದಾನೆ. ಅದನ್ನು ದೊಡ್ಡ ವಿಚಾರ ಮಾಡಬೇಡಿ ಎಂದು ಮನವಿ ಮಾಡಿದರು. ಅವರ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ ಹೆಚ್.ಡಿ. ರೇವಣ್ಣ.
ಅಲ್ಲದೆ ದೇವೇಗೌಡರು ಕೂಡಾ ಭವಾನಿ ರೇವಣ್ಣ ಪರವಾಗಿ ಕ್ಷಮೆ ಕೇಳಿದ್ಧಾರೆ. ಬೇಕು ಎಂದು ಆಗಿದ್ದಲ್ಲ, ಆ ಕ್ಷಣದ ಸಿಟ್ಟನ್ನು ಹೊರಹಾಕಿದ್ಧಾರೆ ಎಂದಿದ್ದಾರೆ. ಸೂರಜ್ ರೇವಣ್ಣ ಕೂಡಾ ಘಟನೆಗೆ ವಿಷಾದ ವ್ಯಕ್ತಪಡಿಸಿ ಅಮ್ಮನ ಪರವಾಗಿ ನಾನು ಕ್ಷಮೆ ಕೋರುತ್ತೇನೆ ಎಂದಿದ್ದಾರೆ.



