ನಟ ದರ್ಶನ್ (actor darshan) ಅವರಿಗೂ ವಿವಾದಗಳಂದ್ರೆ ಏನೋ ಪ್ರೀತಿ ಇರುವಂತಿದೆ. ದರ್ಶನ್ ಅವರು ವಿವಾದಗಳೆಲ್ಲ ಇತ್ಯರ್ಥವಾದವು ಎನ್ನುವ ಸಮಯದಲ್ಲಿಯೇ ಹೊಸದೊಂದು ವಿವಾದವನ್ನು ಮೈಮೇಲೆ ಎಳೆದುಕೊಳ್ತಾರೆ. ಬಹಳ ಸಂದರ್ಭಗಳಲ್ಲಿ ದರ್ಶನ್ ಅವರ ಮಾತುಗಳೇ ಅವರಿಗೆ ವಿಲನ್ ಆಗುತ್ತವೆ. ಅಗತ್ಯವಿದೆಯೋ.. ಇಲ್ಲವೋ.. ಮಾತುಗಳಿಂದಲೇ ಕಾಂಟ್ರವರ್ಸಿ ಮಾಡಿಕೊಳ್ಳೋ ದರ್ಶನ್ (challenging star darshan) ಅವರಿಗೆ ಹಠವೂ ಅಷ್ಟೇ ಇದೆ. ಇತ್ತೀಚೆಗೆ ಟಿವಿ ಚಾನೆಲ್ ಹಾಗೂ ಪತ್ರಿಕೆಯವರ ಕ್ಷಮೆ ಕೇಳಿ ಒಂದು ವಿವಾದ ಇತ್ಯರ್ಥ ಮಾಡಿಕೊಂಡಿದ್ದ ದರ್ಶನ್, ಆ ಸಭೆಯಲ್ಲಿ ಕೊಟ್ಟ ಒಂದು ಮಾತನ್ನೇ ಇನ್ನೂ ಈಡೇರಿಸಿಲ್ಲ. ಸಂಪಾದಕರ ಜೊತೆ ಮಾತನಾಡಿದ ನಂತರ ಪತ್ರಕರ್ತರ ಜೊತೆಯಲ್ಲೂ ಒಮ್ಮೆ ಮಾತನಾಡಿ ಕ್ಷಮೆ ಕೇಳಬೇಕು ಎಂಬ ಆಗ್ರಹ ಸಂಪಾದಕರ ಜೊತೆಗಿನ ಸಭೆಯಲ್ಲಿ ವ್ಯಕ್ತವಾಗಿತ್ತು. ಅದಕ್ಕೆ ಸಮ್ಮತಿ ಸೂಚಿಸಿದ್ದ ದರ್ಶನ್, ಆ ಮಾತುಕತೆ ಆರಂಭವಾಗುವ ಮುನ್ನವೇ ಮತ್ತೊಂದು ವಿವಾದದದಲ್ಲಿ ಸುದ್ದಿಯಾಗಿದ್ದಾರೆ. ಈ ಬಾರಿ ದರ್ಶನ್ ಅವರ ವಿರುದ್ಧ (ವಿರುದ್ಧ ಎಂದೂ ಹೇಳೋಕೆ ಸಾಧ್ಯವಿಲ್ಲ) ಮಾತನಾಡಿರುವುದು ನಟ (actor Dhruva sarja) ಧ್ರುವ ಸರ್ಜಾ.
ದರ್ಶನ್ ಮತ್ತು ಧ್ರುವ ಸರ್ಜಾ ಮಧ್ಯೆ ಏನೋ ಕೋಲ್ಡ್ ವಾರ್ ನಡೆಯುತ್ತಿದೆ ಎಂಬ ಅನುಮಾನ ಹುಟ್ಟಿದೆ. ಕಾವೇರಿ ಹೋರಾಟದ (kaveri protest) ವೇಳೆ ಧ್ರುವ ಸರ್ಜಾ ಅವರು, ದರ್ಶನ್ ಎಂಟ್ರಿ ಕೊಡುತ್ತಿದ್ದಂತೆ ಎದ್ದು ಹೋಗಿದ್ದರು. ಇದೆಲ್ಲದರ ಮಧ್ಯೆ ಧ್ರುವ ಸರ್ಜಾ ಹುಟ್ಟುಹಬ್ಬದ ದಿನ, ಧ್ರುವ ಅವರು ದರ್ಶನ್ ಅವರ ಬಗ್ಗೆ ಕೊಟ್ಟ ಹೇಳಿಕೆ ಸಂಥಿಂಗ್ ಈಸ್ ರಾಂಗ್ ಅನ್ನೋ ಅನುಮಾನ ಹುಟ್ಟುಹಾಕಿದೆ.
ದರ್ಶನ್ ಸರ್ ನಮ್ಮ ಸೀನಿಯರ್. ಅವರಿಗೆ ನಾವು ಗೌರವ ಕೊಟ್ಟೆ ಕೊಡುತ್ತೇವೆ. ಅವರು ಮುಂದೆ ಇದ್ದಾಗ ಮಾತ್ರವಲ್ಲ. ಅವರು ಇಲ್ಲದ ಸಮಯದಲ್ಲೂ ನಾವು ಅಷ್ಟೇ ಮರ್ಯಾದೆ ಕೊಡುತ್ತೇವೆ. ಆದರೆ, ನನಗೆ ಎರಡು ಮೂರು ಪ್ರಶ್ನೆ ಕೇಳಬೇಕು ಅಂತಿದೆ ಅವರಿಗೆ. ಅದು ಕೇಳಿದ ಮೇಲೆ ನನಗೆ ಕ್ಲಿಯರ್ ಆಗುತ್ತದೆ. ಅದು ಕ್ಲಿಯರ್ ಆಗದೆ, ಒಳಗಡೆ ಒಂದು ಹೊರಗಡೆ ಒಂದು ಇಟ್ಟುಕೊಂಡು ನಾಟಕ ಆಡೋದು ನನಗೆ ಸರಿ ಕಾಣಿಸುತ್ತಿಲ್ಲ ಎಂದು ಧ್ರುವ ಸರ್ಜಾ ಹೇಳಿದ್ದರು.
ಸರ್ಜಾ ಕುಟುಂಬದವರನ್ನು ತಮ್ಮ ಆತ್ಮೀಯರ ಬಳಗದಲ್ಲಿಟ್ಟುಕೊಂಡಿರುವ ದರ್ಶನ್, ದರ್ಶನ್ ಅವರನ್ನು ಹಿರಿಯಣ್ಣನ ಸ್ಥಾನದಲ್ಲಿ ನೋಡುತ್ತಿದ್ದ ಧ್ರುವ ಸರ್ಜಾ ಮಧ್ಯೆ ಏನಾಯ್ತು ಎಂಬುದು ನಿಗೂಢವಾಗಿಯೇ ಉಳಿದಿದೆ.
ಈ ಮಧ್ಯೆ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿನೋದ್ ಪ್ರಭಾಕರ್ ಫೈಟರ್ ಚಿತ್ರದ ಪ್ರಮೋಷನ್ನಲ್ಲಿದ್ದೇನೆ. ಏನಾಗಿದೆ.. ಏನಾಯ್ತು ಅನ್ನೋದು ಗೊತ್ತಿಲ್ಲ ಎಂದಿದ್ದಾರೆ. ಮುಂದುವರಿದು ದರ್ಶನ್ ಅವರಿಗಾಗಿ ನಾನು ಯಾರನ್ನು ಬೇಕಾದರು ಎದುರು ಹಾಕಿಕೊಳ್ತೇನೆ. ಅವರು ನನಗೆ ಅಣ್ಣನಿದ್ದಂತೆ ಎಂದಿದ್ದಾರೆ.
ಎಂದಿನಂತೆ ದರ್ಶನ್ ಮೌನವಾಗಿದ್ದಾರೆ. ವಿವಾದಗಳು ಉದ್ಭವವಾದಾಗ ಮಾತನಾಡದೇ ಇರುವುದೇ ದರ್ಶನ್ ಅವರ ಸಮಸ್ಯೆ. ಮೌನವಾಗಿರುವ ಸಮಯದಲ್ಲಿ ಅನಗತ್ಯವಾಗಿ ಮಾತನಾಡುವುದೂ ಕೂಡಾ ದರ್ಶನ್ ಅವರ ಸಮಸ್ಯೆಯ ಮೂಲ. ಈ ಧ್ರುವ ಸರ್ಜಾ ಮತ್ತು ದರ್ಶನ್ ಅವರ ಈ ಸಂಘರ್ಷ ಎಲ್ಲಿಗೆ ಮುಟ್ಟುತ್ತೋ ಗೊತ್ತಿಲ್ಲ. ತಾರಕಕ್ಕಂತೂ ಹೋಗುವುದು ಸಾಧ್ಯವಿಲ್ಲ. ಏಕೆಂದರೆ ಧ್ರುವ ಸರ್ಜಾ ಮಾತನಾಡಿದ್ದಾರಾದರೂ, ದರ್ಶನ್ ಅವರ ಬಗ್ಗೆ ಗೌರವದಿಂದಲೇ ಮಾತನಾಡಿದ್ದಾರೆ.



