ಬಿಜೆಪಿಯಲ್ಲಿ ವಿಜಯೇಂದ್ರ ವಿರುದ್ಧ ಹೋರಾಟ ನಿರಂತರವಾಗಿ ನಡೆಯುತ್ತಲೇ ಇದೆ. ಸಿಟಿ ರವಿ, ಪ್ರತಾಪ್ ಸಿಂಹ ಮೊದಲಾದ ಮೊದಲ ಸಾಲಿನ ನಾಯಕರೆಲ್ಲ ಹಿಂದೆ ಸರಿದು, ಬಸನಗೌಡ ಪಾಟೀಲ ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿಗೆ ನಾಯಕತ್ವದ ಹೊಣೆ ಹೊರಿಸಿ, ಹಿಂದೆ ಸರಿದಿದ್ದಾರೆ. ಹೈಕಮಾಂಡ್ ಕೂಡಾ ಹೇಳಿದಂತೆ ಹೇಳುತ್ತಿದೆ. ಆದರೆ ಇವರು ಮಾತ್ರ ಡೋಂಟ್ ಕೇರ್. ಹಾಗಾದರೆ ಹೈಕಮಾಂಡಿನವರಿಗೂ ಇದೇ ಬೇಕಿದೆಯಾ..?
ಇದರಿಂದ ಬೇಸತ್ತಿರುವ ವಿಜಯೇಂದ್ರ ಅವರ ಜೊತೆಯಲ್ಲಿರುವ ಕೆಲವು ನಾಯಕರು ಯಡಿಯೂರಪ್ಪ ನಿವಾಸಕ್ಕೆ ತೆರಳಿ ದೂರು ನೀಡಿದ್ದಾರೆ. ದುಃಖ ದುಮ್ಮಾನ ತೋಡಿಕೊಂಡಿದ್ದಾರೆ. ಒಂದು ಪಕ್ಷದಲ್ಲಿ ಈ ರೀತಿ ಎರಡು ಬಣ ಇದ್ದರೆ ಪಕ್ಷಕ್ಕೂ ಅರ್ಥ ಇಲ್ಲ. ಸಂಘಟನೆಗೂ ಅರ್ಥ ಇಲ್ಲ. ಯತ್ನಾಳ್, ಲಿಂಬಾವಳಿ, ಜಾರಕಿಹೊಳಿಯವರ ಆಟಾಟೋಪಕ್ಕೆ ಬ್ರೇಕ್ ಹಾಕದಿದ್ದರೆ ಪಕ್ಷಕ್ಕೂ ಲಾಭವಿಲ್ಲ. ವಿಜಯೇಂದ್ರಗೂ ಲಾಭವಿಲ್ಲ. ನಾವು ಇರೋದಾದರೂ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ.
ಹೌದು, ಇವರದ್ದೆಲ್ಲ ಅತಿಯಾಗಿದೆ. ನನಗೂ ಗೊತ್ತಿದೆ. ಈ ಬಗ್ಗೆ ಹಲವು ಬಾರಿ ಹೈಕಮಾಂಡ್ ನಾಯಕರಿಗೆ ಹೇಳಿದ್ದೇನೆ. ವಾರ್ನ್ ಮಾಡಿ ಎಂದು ಕೇಳಿದ್ದೇನೆ. ಆದರೆ ಜೆಪಿ ನಡ್ಡಾ ಅವರು ಡೋಂಟ್ ವರಿ ಯಡಿಯೂರಪ್ಪಾಜೀ, ಅವರಿಗೆಲ್ಲ ನಾನು ಬುದ್ದಿ ಹೇಳ್ತೇನೆ ಎನ್ನುತ್ತಾರೆ. ಯತ್ನಾಳ್, ಜಾರಕಿಹೊಳಿ ಅವರಿಗೆಲ್ಲ ವಾರ್ನಿಂಗ್ ಕೊಡುತ್ತಾರೆ. ಆದರೆ ಅದು ಕೇವಲ ನಾಲ್ಕೈದು ದಿನ ಅಷ್ಟೇ. ಸುಮ್ಮನಾದವರು ಮತ್ತೆ ತಿರುಗಿ ಬೀಳ್ತಿದ್ದಾರೆ. ನೋಡಿ ನೋಡಿ ನನಗೂ ಬೇಸತ್ತು ಹೋಗಿದೆ ಎಂದಿದ್ದಾರಂತೆ ಯಡಿಯೂರಪ್ಪ.
ಆಗ ಹೋಗಿದ್ದ ನಾಯಕರೆಲ್ಲ ನಾವೊಂದು 20-30 ಜನ ದೆಹಲಿಗೆ ಹೋಗಿ ನಡ್ಡಾ, ಅಮಿತ್ ಶಾ ಅವರನ್ನು ಭೇಟಿ ಮಾಡಿ ಬರುತ್ತೇವೆ. ಒಂದೋ ಈ ಭಿನ್ನಮತೀಯರನ್ನು ಅವರು ಬಾಯಿ ಮುಚ್ಚಿಸಬೇಕು ಇಲ್ಲವೇ ಪಕ್ಷದಿಂದ ಹೊರಹಾಕಬೇಕು ಎಂದು ಕೇಳುತ್ತೇವೆ ಎಂದರಂತೆ. ಆದರೆ ಅದಕ್ಕೂ ಯಡಿಯೂರಪ್ಪ ಬ್ರೇಕ್ ಹಾಕಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರಾಗಿರುವ ವಿಜಯೇಂದ್ರ ಆ ರೀತಿ ದೂರು ಕೊಟ್ಟರೆ ಸೂಕ್ತವಾಗಲ್ಲ ಎಂದೇನೋ ಹೇಳೋಕೆ ಹೋದಾಗ, ನಾಯಕರೆಲ್ಲ ಯಡಿಯೂರಪ್ಪ ವಿರುದ್ಧವೇ ತಿರುಗುಬಿದ್ದಿದ್ದಾರೆ.
ನೀವು ಪ್ರತಿಬಾರಿಯೂ ನಮಗೇ ಬುದ್ದಿ ಹೇಳ್ತೀರಿ. ಅವರನ್ನು ಹೀಗೇ ಬಿಟ್ಟರೆ ನಾಳೆ ಪಕ್ಷದಲ್ಲಿ ನಮ್ಮ ಅಸ್ಥಿತ್ವದ ಕಥೆ ಏನು? ಅವರು ಈಗಾಗಲೇ ಪ್ರತ್ಯೇಕ ಯಾತ್ರೆ ಹೊರಟಿದ್ದಾರೆ. ಒಂದೊಮ್ಮೆ ಆ ಯಾತ್ರೆ ನಡೆದೇ ಬಿಟ್ಟರೆ ವಿಜಯೇಂದ್ರ ಅವರು ಅಧ್ಯಕ್ಷರಾಗಿದ್ದುಕೊಂಡು ಮಾಡೋದಾದ್ರೂ ಏನು..? ಒಂದು ಪಕ್ಷದಲ್ಲಿ ಎರಡು ಪವರ್ ಸೆಂಟರ್ ಇರಬಾರದು ಎಂದಿದ್ದಾರೆ. ಕೊನೆಗೆ ಯಡಿಯೂರಪ್ಪ ಆ ಯಾತ್ರೆ ನಡೆಯುವುದಕ್ಕೆ ಬಿಡುವುದಿಲ್ಲ, ನಡ್ಡಾ ಅವರ ಜೊತೆ ಮಾತನಾಡುತ್ತೇನೆ ಎಂದಿದ್ದಾರಂತೆ. ಅಲ್ಲಿಗೆ ಈ ನಾಯಕರ ಭೇಟಿ ಮುಕ್ತಾಯವಾಗಿದೆ.
ಆದರೆ ಈ ಮಧ್ಯೆ ಯತ್ನಾಳ್, ರಮೇಶ್ ಜಾರಕಿಹೊಳಿ, ಲಿಂಬಾವಳಿ ಪಡೆ ಕುಮಾರಸ್ವಾಮಿ ಅವರಿಗೆ ಹತ್ತಿರವಾಗಲು ಪ್ರಯತ್ನಿಸುತ್ತಿದೆ ಎಂಬ ಮಾಹಿತಿ ಇದೆ. ಆದರೆ ಕುಮಾರಸ್ವಾಮಿಯವರೇ ಸದ್ಯಕ್ಕೆ ಹಿಂದೇಟು ಹಾಕುತ್ತಿದ್ದಾರಂತೆ. ಯಾಕೆಂದರೆ ಯತ್ನಾಳ್ ಬಣದ ಹಿಂದಿರುವ ನಾಯಕನನ್ನು ನಂಬುವುದಕ್ಕೆ ಆಗುವುದಿಲ್ಲ ಎನ್ನುವುದು ಕುಮಾರಸ್ವಾಮಿ ಅಪನಂಬಿಕೆಗೆ ಕಾರಣ. ಒಟ್ಟಿನಲ್ಲಿ ವಿಜಯೇಂದ್ರ ವಿರುದ್ಧದ ಟೀಂ ಸದ್ಯಕ್ಕೆ ತಾವೇ ಬಲಿಷ್ಠರು ಎಂದು ತೋರಿಸುವುದರಲ್ಲಿ ಯಶಸ್ವಿಯಾಗಿದೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟಗಳು ಹಳಿ ತಪ್ಪುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ.



