ಈಕೆಯ ಹೆಸರು ಜಾಸ್ಮಿನ್ ಭಾಸಿನ್. ಮೀರಾ ಜಾಸ್ಮಿನ್ ಅಲ್ಲ. ರಾಜಸ್ಥಾನ ಮೂಲದ ಈ ನಟಿ, ಮೂಲತಃ ಪಂಜಾಬಿಯವರು. ನಟಿಸಿದ್ದು ಕೆಲವೇ ಕೆಲವು ಚಿತ್ರಗಳಲ್ಲಿ. ನಟ ಕೋಮಲ್ ಕುಮಾರ್ ಅಭಿನಯದ ‘ಕರೋಡ್‌ಪತಿ’ ಸಿನಿಮಾದಲ್ಲಿ ನಟಿಸಿದ್ದ ಜಾಸ್ಮಿನ್, ‘ಬಿಗ್ ಬಾಸ್’ ಶೋನಲ್ಲೂ ಕಾಣಿಸಿಕೊಂಡಿದ್ರು. ಕನ್ನಡದಲ್ಲಿ ಒಂದು ಸಿನಿಮಾ ಮಾಡಿದವರು, ಆಮೇಲೆ ತೆಲುಗು, ತಮಿಳು, ಮಲಯಾಳಂ, ಪಂಜಾಬಿ ಸೇರಿ ಕೆಲವೇ ಕೆಲವು ಚಿತ್ರಗಳಲ್ಲಿ ನಟಿಸಿದ್ರು. ಸೀರಿಯಲ್, ಮ್ಯೂಸಿಕ್ ಆಲ್ಬಂಗಳಲ್ಲಿ ನಟಿಸುತ್ತಿದ್ದರಾದರೂ, ಮಾಡೆಲಿಂಗ್ ಲೋಕದಲ್ಲಿ ಹೆಸರುವಾಸಿಯಾಗಿದ್ದರು.
ಅಂತಹ ನಟಿಗೆ ಈಗ ಕಣ್ಣು ಕಾಣುತ್ತಿಲ್ಲ. ಹೌದು, ಆಕೆಯ ಕಣ್ಣುಗಳಿಗೆ ಕಂಪ್ಲೀಟ್ ಬ್ಯಾಂಡೇಜ್ ಹಾಕಲಾಗಿದೆ. ಚಿಕಿತ್ಸೆ ನಡೆಯುತ್ತಿದೆ. ಎಂತಹ ಪರಿಸ್ಥಿತಿ ಎಂದರೆ.. ಕಣ್ಣಿನ ಒಳಗೆ ತುರಿಕೆಯಾದರೂ.. ನೋವಾದರೂ.. ನೋವನ್ನು ಅದುಮಿಟ್ಟುಕೊಳ್ಳಬೇಕು. ಅಂತಹ ವಿಚಿತ್ರ ನೋವು, ಸಂಕಟದಲ್ಲಿದ್ಧಾರೆ ಜಾಸ್ಮಿನ್. ಇದಕ್ಕೆಲ್ಲ ಕಾರಣವಾಗಿದ್ದು ಜಾಸ್ಮಿನ್ ಧರಿಸುತ್ತಿದ್ದ ಕಾಂಟ್ಯಾಕ್ಟ್ ಲೆನ್ಸ್.
ಕಣ್ಣು ಕಾಣಿಸದಿದ್ದರೂ.. ಫ್ಯಾಷನ್ ಶೋನಲ್ಲಿ ರ್ಯಾಂಪ್ ವಾಕ್ :
ಜುಲೈ 17 ರಂದು ದೆಹಲಿಯಲ್ಲೊಂದ ಫ್ಯಾಷನ್ ಶೋನಲ್ಲಿ ಭಾಗವಹಿಸಿದ್ಧಾಗ.. ಕಣ್ಣಿನಲ್ಲಿ ನೋವು ಶುರುವಾಯಿತು ಮತ್ತು ಆ ನೋವು ಜಾಸ್ತಿ ಆಗುತ್ತಾ ಹೋಯಿತು. ನನ್ನ ಲೆನ್ಸ್‌ನಲ್ಲಿ ಏನು ಸಮಸ್ಯೆ ಆಯಿತೋ ಗೊತ್ತಾಗ್ಲಿಲ್ಲ. ಕಣ್ಣು ಕಾಣಿಸ್ತಾ ಇರಲಿಲ್ಲ. ಸನ್ ಗ್ಲಾಸ್ ಹಾಕ್ಕೊಂಡು ಈವೆಂಟ್ ಮುಗಿಸಿದೆ. ಸ್ಟೇಜ್ ಮೇಲೆ ಏನೂ ಕಾಣಿಸ್ತಿರಲಿಲ್ಲ. ಈವೆಂಟ್ ಮುಗಿಸಿಕೊಂಡು ಡಾಕ್ಟರ್ ಬಳಿ ಹೋದೆ. ಆಗ ಡಾಕ್ಟರ್ ಕಾರ್ನಿಯಾ ಡ್ಯಾಮೇಜ್ ಆಗಿದೆ ಎಂದು ಹೇಳಿ, ಕಣ್ಣಿಗೆ ಬ್ಯಾಂಡೇಜ್ ಹಾಕಿದ್ರು ಅಂತಾ ಬರ್ಕೊಂಡಿದ್ಧಾರೆ ಜಾಸ್ಮಿನ್. ಹೌದು, ಆ ದಿನ ಮೀರಾ ಜಾಸ್ಮಿನ್ ವಿಡಿಯೋ ನೋಡಿದವರಾರೂ.. ಈಕೆಗೆ ಕಣ್ಣು ಕಾಣುತ್ತಿರಲಿಲ್ಲ ಎಂದು ನಂಬುವುದಕ್ಕೆ ಆಗುವುದಿಲ್ಲ. ಆಕೆಯ ಕಾನ್ಫಿಡೆನ್ಸ್ ಮೆಚ್ಚುವಂಥದ್ದೇ. ಆದರೆ.. ಕಾನ್ಫಿಡೆನ್ಸ್ ಒಂದೇ ಕಣ್ಣಿನ ದೃಷ್ಟಿ ಕೊಡುವುದಿಲ್ಲ.
ಜಾಸ್ಮಿನ್ ಅವರಿಗೆ ಇನ್ನೂ 34 ವರ್ಷ. ಬದುಕು ದೊಡ್ಡದಿದೆ. ಆದರೆ.. ಕಣ್ಣುಗಳು.. ಕಾಂಟ್ಯಾಕ್ಟ್ ಲೆನ್ಸ್ ಎಲ್ಲರಿಗೂ ಅಡ್ಜಸ್ಟ್ ಆಗುವುದಿಲ್ಲ. ಕೆಲವರಿಗೆ ತುರಿಕೆ, ಉರಿ, ನೋವು ಕಾಣಿಸಿಕೊಳ್ಳುತ್ತದೆ. ಅಲ್ಲದೆ ಲೆನ್ಸ್ ಧರಿಸಿದವರು ಹೆಚ್ಚು ಹೆಚ್ಚು ದೂಳು ಇರುವ ವಾತಾವರಣದಲ್ಲಿ ಓಡಾಡುವುದೂ ಅಪಾಯಕಾರಿ. ಜಾಸ್ಮಿನ್ ಅವರಿಗೆ ಆಗಿರುವ ಈ ಅನಾಹುತ, ಕಾಂಟ್ಯಾಕ್ಟ್ ಲೆನ್ಸ್ ಬಳಸುವವರಿಗೆ ಎಚ್ಚರಿಕೆ ಗಂಟೆ ಎಂದರೂ ತಪ್ಪಿಲ್ಲ.
ಲೆನ್ಸ್ ಬಳಸುವವರು ಈ ತಪ್ಪು ಮಾಡಬೇಡಿ.. :
ಸಾಮಾನ್ಯವಾಗಿ ಕನ್ನಡಕ ಧರಿಸಿದ್ರೆ ಬ್ಯೂಟಿ ಹಾಳಾಗುತ್ತೆ ಎನ್ನುವವರು ಲೆನ್ಸ್ ಬಳಸ್ತಾರೆ. ಆದರೆ..
ಲೆನ್ಸ್ ಸರಿಯಾಗಿ ಬಳಸದೆ ಹೋದ್ರೆ ಕಣ್ಣು ಹಾನಿಗೊಳಗಾಗುವ ಸಾಧ್ಯತೆ ಹೆಚ್ಚು. ಲೆನ್ಸ್ ಗಳನ್ನು ಕವರ್ʻನಲ್ಲಿ ಇಡಲಾಗುತ್ತದೆ. ಕವರ್ʻಗಳಿಂದ ತೆಗೆಯುವ ಮುನ್ನ ಕೈಗಳನ್ನು ಸ್ವಚ್ಛವಾಗಿ ತೊಳೆಯಬೇಕು. ಮತ್ತೆ ಕವರ್ ಗೆ ಹಾಕುವ ಮೊದಲೂ ಕೂಡ ಕೈಗಳನ್ನು ಸ್ವಚ್ಛವಾಗಿ ತೊಳೆದು ಇಡಬೇಕು. ಲೆನ್ಸ್ ಹಾಗೂ ಕವರ್ ಕ್ಲೀನಾಗಿರಬೇಕು. ಅದನ್ನು ಸ್ವಚ್ಛಗೊಳಿಸಲು ಲಿಕ್ವಿಡ್ ನೀಡಲಾಗುತ್ತದೆ. ಆ ಲಿಕ್ವಿಡ್ ಓಪನ್ ಮಾಡಿದ ಒಂದು ತಿಂಗಳು ಮಾತ್ರ ಬಳಕೆಗೆ ಯೋಗ್ಯವಾಗಿರುತ್ತದೆ. ಆ ನಂತ್ರ ಅದನ್ನು ಬಳಸಿದ್ರೆ ಅದು ಸೋಂಕಿಗೆ ಕಾರಣವಾಗುತ್ತದೆ. ಲೆನ್ಸ್ ಧರಿಸಿದ ನಂತ್ರ ತಲೆ ಸ್ನಾನ ಅಥವಾ ಸ್ನಾನ ಮಾಡಬಾರದು. ಲೆನ್ಸ್ ಧರಿಸಿದ ವೇಳೆ ಕಣ್ಣುಗಳನ್ನು ಕ್ಲೀನ್ ಮಾಡಲು ಟ್ಯಾಪ್ ವಾಟರ್ ಬಳಸಬಾರದು. ಲೆನ್ಸ್ ಇರುವಾಗಲೇ ಕಣ್ಣುಗಳನ್ನು ಯಾವುದೇ ಕಾರಣಕ್ಕೂ ಉಜ್ಜಿಕೊಳ್ಳಬಾರದು. ಲೆನ್ಸ್ ಧರಿಸಿ ಮಲಗಬಾರದು. ಲೆನ್ಸ್ ಧರಿಸಿದ ನಂತ್ರ ಉರಿ, ನೋವು ಕಾಣಿಸಿಕೊಂಡಲ್ಲಿ ತಕ್ಷಣ ವೈದ್ಯರನ್ನು ಭೇಟಿಯಾಗ್ಬೇಕು. ನಿರ್ಲಕ್ಷ್ಯ ಮಾಡಿದಲ್ಲಿ ಶಾಶ್ವತವಾಗಿ ದೃಷ್ಟಿ ಕಳೆದುಕೊಳ್ಳುವ ಅಪಾಯವಿರುತ್ತದೆ.



