ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಅಂತಾರಾಷ್ಟ್ರೀಯ ಸಂಚು ನಡೆದಿದೆ. ಷಡ್ಯಂತ್ರವೇ ನಡೆದಿದೆ ಎನ್ನುವುದು ಬಿಜೆಪಿ ನಾಯಕರ, ಹಿಂದೂ ಕಾರ್ಯಕರ್ತರ ವಾದವಷ್ಟೇ ಅಲ್ಲ. ಕಾಂಗ್ರೆಸ್ ಸರ್ಕಾರದ ಡಿಸಿಎಂ ಡಿಕೆ ಶಿವಕುಮಾರ್ ಅವರು ಹೇಳುತ್ತಿರುವುದು ಇದೇ ಮಾತನ್ನು. ಕೋಟಾ ಶ್ರೀನಿವಾಸ್ ಪೂಜಾರಿಯವರಂತೂ ಇದರ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆಗಳ ತನಿಖೆಗೆ ಒತ್ತಾಯಿಸಿ ಅಮಿತ್ ಶಾಗೆ ಪತ್ರವನ್ನೇ ಬರೆದಿದ್ದಾರೆ. ಇದರ ನಡುವೆ ಬಿಜೆಪಿ ಶಾಸಕರಾಗಿರುವ ಜನಾರ್ದನ ರೆಡ್ಡಿ ಸಸಿಕಾಂತ್ ಸೆಂಥಿಲ್ ಹೆಸರು ಹೇಳಿದ್ದಾರೆ.
ಜನಾರ್ದನ ರೆಡ್ಡಿ ಪ್ರಕಾರ..
ಎಸ್‌ಐಟಿ ರಚನೆಗೆ ಒತ್ತಡ ಹಾಕಿದವರು ಸಸಿಕಾಂತ್ ಸೆಂಥಿಲ್. ಮಾಸ್ಕ್ ಮ್ಯಾನ್‌ಗೆ ಬುರುಡೆ ಕೊಟ್ಟಿದ್ದೂ ಕೂಡಾ ಸಸಿಕಾಂತ್ ಸೆಂಥಿಲ್. ದಕ್ಷಿಣ ಕನ್ನಡದ ಇಬ್ಬರು ವ್ಯಕ್ತಿಗಳೊಂದಿಗೆ ಸಸಿಕಾಂತ್ ಸೆಂಥಿಲ್ ಸೇರಿ ಧರ್ಮಸ್ಥಳಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಕಾರ್ಯಸೂಚಿಗಳನ್ನು ಸಿದ್ಧಪಡಿಸಿದ್ದಾರೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ಈ ಪ್ರಕರಣದಲ್ಲಿ ಆಸಕ್ತಿ ಇರಲಿಲ್ಲವಾದರೂ, ಹೈಕಮಾಂಡ್‌ನ ಒತ್ತಡ ತಂದು ಎಸ್‌ಐಟಿ ತನಿಖೆ ಮಾಡಿಸಲಾಗಿದೆ. ಹೈಕಮಾಂಡ್ ಮಟ್ಟದಲ್ಲಿ ಸಸಿಕಾಂತ್ ಸೆಂಥಿಲ್ ಪ್ರಭಾವಿ. ಹೀಗಾಗಿ ಅಲ್ಲಿಂದ ಒತ್ತಡ ತಂದು ಎಸ್‌ಐಟಿ ರಚನೆ ಮಾಡಲಾಗಿದೆ. ಇಲ್ಲದಿದ್ದರೆ ಬೆಳಗ್ಗೆ ಎಸ್‌ಐಟಿ ರಚನೆ ಇಲ್ಲ ಎಂದಿದ್ದ ಸಿದ್ಧರಾಮಯ್ಯ, ಏಕಾಏಕಿ ಎಸ್‌ಐಟಿ ರಚನೆ ಮಾಡಿ, ಸಂಜೆಯ ಹೊತ್ತಿಗೆ ಘೋಷಣೆ ಮಾಡುತ್ತಿರಲಿಲ್ಲ.
ಯಾರಿದು ಸಸಿಕಾಂತ್ ಸೆಂಥಿಲ್..?
2009ರಿಂದ 2019ರವರೆಗೆ ರಾಜ್ಯ ಸರ್ಕಾರದಲ್ಲಿ ಐಎಎಸ್ ಅಧಿಕಾರಿಯಾಗಿದ್ದವರು. ರಾಜೀನಾಮೆ ನೀಡುವ ವೇಳೆ ಅವರು ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. 2017ರಿಂದ ಅವರು ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯಾಗಿದ್ದರು. ಐಎಎಸ್ ಸ್ಥಾನಕ್ಕೆ 2019ರಲ್ಲಿ ರಾಜೀನಾಮೆ ನೀಡಿದ ಬಳಿಕ 2020ರಲ್ಲಿ ಅವರು ಕಾಂಗ್ರೆಸ್ ಪಕ್ಷ ಸೇರಿದ್ದರು. ಸದ್ಯಕ್ಕೆ ತಮಿಳುನಾಡಿದ ತಿರುವಲ್ಲೂರು ಕ್ಷೇತ್ರದ ಕಾಂಗ್ರೆಸ್ ಸಂಸದ.
ಇದು ಸಂಚು ಎಂಬ ಅನುಮಾನ ಏಕೆ..?
ಧರ್ಮಸ್ಥಳ ತಲೆಬುರುಡೆ ಪ್ರಕರಣವನ್ನು ರಾಜ್ಯದ ಯಾವ ಮಾಧ್ಯಮಗಳೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಕೆಲವು ಸಣ್ಣ ಸಣ್ಣ ಎಡಪಂಥೀಯ ಪತ್ರಿಕೆಗಳು ಬಿಟ್ಟರೆ, ಮಿಕ್ಕಂತೆ ಇದು ಸುದ್ದಿಯಾಗಿದ್ದು ಯೂಟ್ಯೂಬ್ ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ಮಾತ್ರ. ಆದರೆ.. ರಾಜ್ಯದ ಯಾವ ಸಮಸ್ಯೆಗಳ ಬಗ್ಗೆಯೂ ಸುದ್ದಿ ಮಾಡದ ಅಲ್ ಜಜೀರಾ, ಬಿಬಿಸಿ ಮೊದಲಾದ ಟಿವಿ ಚಾನೆಲ್ಲುಗಳಿಗೆ ದಿಢೀರನೆ ಸ್ಪೇಸ್ ಕೊಟ್ಟಿದ್ದವು. ಅಂತಾರಾಷ್ಟ್ರೀಯ ಪತ್ರಿಕೆ, ಮಾಧ್ಯಮಗಳಲ್ಲಿ ಸುದ್ದಿ ದೊಡ್ಡದಾಗಿ ಪ್ರಸಾರವಾಗಿತ್ತು. ಅದಾದ ಮೇಲೆ ಕ್ರಮೇಣ ರಾಷ್ಟ್ರಮಟ್ಟದ ಟಿವಿ ಚಾನೆಲ್ಲುಗಳು ಎಂಟ್ರಿ ಕೊಟ್ಟವು. ಎಡಪಂಥದ ಸಂಗಟನೆಗಳಷ್ಟೇ ಪ್ರತಿಭಟನೆ ಮಾಡಿದವು. ರಾಜ್ಯದ ಪ್ರಭಾವಿ ಹಾಗೂ ಮುಖ್ಯವಾಹಿನಿಯ ಮಾಧ್ಯಮಗಳು ಸುದ್ದಿಯನ್ನು ಸೀರಿಯಸ್ ಆಗಿ ಪರಿಗಣಿಸಿದ್ದು ಎಸ್‌ಐಟಿ ರಚನೆ ಆದ ಮೇಲೆ. ಒನ್ ಸೈಡ್ ಆಗಿ ನಡೆಯುತ್ತಿದ್ದ ಪ್ರಚಾರಕ್ಕೆ ಸಮಾಂತರವಾಗಿ ತನಿಖೆ ಶುರು ಮಾಡಿದ ಬೆನ್ನಲ್ಲೆ.. ಇಡೀ ಪ್ರಕರಣ ಬೇರೆಯದೇ ಸ್ವರೂಪ ಪಡೆಯುತ್ತಿದೆ.



