ಬ್ರಹ್ಮಾಂಡ ಸ್ವಾಮೀಜಿ.. ಬ್ರಹ್ಮಾಂಡ ಗುರೂಜಿ ಎಂದೇ ಖ್ಯಾತಿ ಪಡೆದಿರುವ ಹಲವು ಬಾರಿ ಸುದ್ದಿಯಾಗುತ್ತಾರೆ. ಇವರು ಹೇಳುವ ಭವಿಷ್ಯವಾಣಿಗಳಿಂದಲೋ.. ಎಲ್ಲರೂ ಒಂದು ದಿಕ್ಕಿನಲ್ಲಿ ಹೋಗುತ್ತಿದ್ದರೆ.. ಇವರೇ ಇನ್ನೊಂದು ದಿಕ್ಕಿನಲ್ಲಿ ಹೋಗಿ ಸುದ್ದಿಯಾಗುತ್ತಾರೆ. ಅವರು ಹೇಳಿದ ಒಂದು ಭವಿಷ್ಯವಾಣಿ ಹಲವರನ್ನು.. ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್ಸಿಗರನ್ನು ಕೆರಳಿಸಿದೆ. ಅವರು ಬ್ರಹ್ಮಾಂಡ ಗುರೂಜಿಗೆ ರೋಲ್ ಕಾಲ್ ಗಿರಾಕಿ ಎಂದು ಪಟ್ಟವನ್ನೂ ಕಟ್ಟಿದ್ದಾರೆ.
ಬ್ರಹ್ಮಾಂಡ ಗುರೂಜಿ ಹೇಳಿದ್ದು ಏನು..?
ಹಾಸನಾಂಬೆ ದರ್ಶನ ಪಡೆದಿದ್ದ ಬ್ರಹ್ಮಾಂಡ ಗುರೂಜಿ ಸಂಕ್ರಾಂತಿ ಒಳಗೆ ರಾಜಕೀಯ ಕ್ರಾಂತಿ ನಡೆಯಲಿದೆ. ಸಿಎಂ ಸಿದ್ದರಾಮಯ್ಯ ಅವರಿಗೆ ಆರೋಗ್ಯ ಕ್ಷೀಣಿಸುವ ಸಾಧ್ಯತೆ ಇದ್ದು, ಅವರ ಬಳಿಕ ಇಬ್ಬರಿಗೆ ಸಿಎಂ ಆಗುವ ಯೋಗ ಇದೆ. ಆದರೆ ಬಹಳ ಹಗ್ಗ ಜಗ್ಗಾಟ ನಡೆಯಲಿದ್ದು, ಈಗ ಮುಖ್ಯಮಂತ್ರಿ ಸ್ಥಾನ ಸಿಗದಿದ್ದರೆ ಮತ್ತೆ 10 ವರ್ಷಗಳ ಬಳಿಕ ಅವಕಾಶ ಸಿಗಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಇದೇ ಕೊನೆಯಾಗಲಿದೆ ಎಂದು ಭವಿಷ್ಯ ಹೇಳಿದ್ದರು. ಸಂಕ್ರಾಂತಿ ಒಳಗಡೆ ಕೇತು ಮತ್ತು ಸೂರ್ಯ ರಾಹು ಜೊತೆಗೆ ಜರುಗುತ್ತಾನೆ. ಬಹಳ ದೊಡ್ಡ ಗಲಾಟೆಗಳು ನಡೆಯುತ್ತವೆ. ಸ್ಥಾನ ಪಲ್ಲಟ ಆಗುತ್ತೆ, ಪಕ್ಷಪಾತ, ಬೇಧ ಭಾವ ಆಗುತ್ತೆ ಎಂದಿದ್ದರು.
ಅಷ್ಟಕ್ಕೇ ನಿಂತಿರಲಿಲ್ಲ.. ನರೇಂದ್ರ ಮೋದಿ ಅವರು ದೇಶದ ರಕ್ಷಾ ಕವಚ ಆಗಿದ್ದಾರೆ. 75 ವರ್ಷ ತುಂಬಿರುವ ನರೇಂದ್ರ ಮೋದಿ ಅವರಿಗೆ ಆರೋಗ್ಯ, ಐಶ್ವರ್ಯ ಕೊಟ್ಟು ದೇವರು ಕಾಪಾಡಲಿ ಅಂತ ಹಾರೈಸಿ.. ಇನ್ನು ಮುಂದೆ ಒಬ್ಬ ಸನ್ಯಾಸಿ ದೇಶದ ಪ್ರಧಾನಿ ಆಗ್ತಾರೆ, ದೇಶದ ಚುಕ್ಕಾಣಿ ಹಿಡಿಯುತ್ತಾರೆ. ದೇಶದಲ್ಲಿ ಬ್ರಹ್ಮಚಾರಿ ಅಧಿಕಾರಕ್ಕೆ ಬರಬೇಕು. ಇಲ್ಲದಿದ್ದರೆ ಇಡೀ ಜಗತ್ತಿಗೇ ಶನಿ ಪ್ರವೇಶ ಆಗಲಿದೆ ಎಂದು ಎಚ್ಚರಿಕೆ ಕೊಟ್ಟಿದ್ದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರೋದಿಲ್ಲ. ಕಾಂಗ್ರೆಸ್‌ಗೆ ರಾಜ್ಯದಲ್ಲಿ ಇದೇ ಕೊನೆ ಅವಧಿ, ಮತ್ತೆ ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರೋದಿಲ್ಲ ಎಂದು ಹೇಳಿರುವ ಭವಿಷ್ಯ ಕಾಂಗ್ರೆಸ್ಸಿಗರನ್ನು ಕೆರಳಿಸಿದೆ. ರೋಲ್ ಕಾಲ್ ಮಾಡುವ ಗುರೂಜಿಗಳಿಂದ ಕಾಂಗ್ರೆಸ್ ಪಕ್ಷದ ಭವಿಷ್ಯ ನಿರ್ಧಾರವಾಗುವುದಿಲ್ಲ. ನಾಡಿನ ಜನರೇ ಅದನ್ನು ತೀರ್ಮಾನ ಮಾಡುತ್ತಾರೆ ಎಂದು ಶಾಸಕ ಕೆ.ಎಂ.ಉದಯ್ ಶನಿವಾರ ಬ್ರಹ್ಮಾಂಡ ಗುರೂಜಿ ಅವರಿಗೆ ತಿರುಗೇಟು ನೀಡಿದ್ದಾರೆ.
ವಿಧಾನಸಭಾ ಚುನಾವಣೆಗಳಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಬೇಕು ಎಂದು ರಾಜ್ಯದ ಮತದಾರರು ನಿರ್ಧರಿಸುತ್ತಾರೆ. ಆದರೆ, ಕೇವಲ ಬ್ರಹ್ಮಾಂಡ ಗುರೂಜಿ ಹೇಳಿದರೆಂಬ ಒಂದು ಮಾತಿನಿಂದ ಯಾವ ಪಕ್ಷವು ಅಧಿಕಾರಕ್ಕೆ ಬರುವುದಿಲ್ಲ. ಆತನ ಹಿನ್ನೆಲೆ ಏನು..? ಆತ ಎಷ್ಟು ರೋಲ್ ಕಾಲ್ ಮಾಡ್ತಾನೆ..ಎನ್ನುವುದು ಗೊತ್ತಿದೆ. ಕೇವಲ ಟಿವಿ ಮುಂದೆ ಕುಳಿತುಕೊಂಡು ಬುರುಡೆ ಜ್ಯೋತಿಷ್ಯ ಹೇಳಿ ಮಂಕು ಬೂದಿ ಎರಚಿ ಜನರನ್ನು ಯಾಮಾರಿಸಿ ರೋಲ್ ಕಾಲ್ ಮೂಲಕ ಬದುಕು ನಡೆಸುತ್ತಿರುವ ಈತನಿಗೆ ಕಾಂಗ್ರೆಸ್ ಭವಿಷ್ಯ ಹೇಳುವ ನೈತಿಕ ಹಕ್ಕಿಲ್ಲ ಎಂದು ನೇರವಾಗಿಯೇ ಉಗಿದು ಉಪ್ಪಾಕಿದ್ದಾರೆ.



