ರಾಜ್ಯದಲ್ಲೀಗ ಕಾಂಗ್ರೆಸ್ Vs ಕಾಂಗ್ರೆಸ್ ಪರಿಸ್ಥಿತಿ ಉದ್ಭವವಾಗಿದೆ. ಅದರಲ್ಲಿ ಯಾವುದೇ ಅನುಮಾನ ಇಲ್ಲ. ರಾಜ್ಯ ಬಿಜೆಪಿಯಲ್ಲಿ ಯಾವ ಪರಿಸ್ಥಿತಿ ಇದೆಯೋ.. ಅಂತಹುದೇ ಪರಿಸ್ಥಿತಿ ಕಾಂಗ್ರೆಸ್ಸಿನಲ್ಲೂ ಇದೆ. ಹೊಗೆಯಾಡುತ್ತಿದೆ. ಬೆಂಕಿ ಹೊತ್ತಿಕೊಳ್ಳೋದಷ್ಟೇ ಬಾಕಿ. ಅದಕ್ಕೆ ತುಪ್ಪ ಸುರಿದಿರುವುದು ಯತೀಂದ್ರ ಸಿದ್ಧರಾಮಯ್ಯ ಹೇಳಿಕೆ.
ಯತೀಂದ್ರ ಹೇಳಿಕೆ ಕೊಡ್ತಿದ್ದಂತೆಯೇ ತಿರುಗಿಬಿದ್ದ ಡಿಕೆ ಬಣದಲ್ಲಿರುವ ಇಕ್ಬಾಲ್ ಹುಸೇನ್, ಶಿವಗಂಗಾ ಬಸವರಾಜ್, ಮದ್ದೂರಿನ ಉದಯ್, ಕುಣಿಗಲ್ ರಂಗನಾಥ್, ಶಿವರಾಮೇಗೌಡ (ಇವರೆಲ್ಲರೂ ಡಿಕೆ ಪರ ಮಾತನಾಡಿದ್ದಕ್ಕೆ ನೋಟಿಸ್ ಪಡೆದವರು) ಬಹಿರಂಗವಾಗಿ ಗುಮ್ಮತೊಡಗಿದ್ದಾರೆ.
ಇನ್ನು ಸಿದ್ದು ಬಣದಲ್ಲಿರುವ ಸಚಿವ ಸ್ಥಾನ ಕಳೆದುಕೊಂಡಿರುವ ಕೆಎನ್ ರಾಜಣ್ಣ ಅವರಂತೂ ಹೋದಲ್ಲಿ ಬಂದಲ್ಲಿ ಚುಚ್ಚುತ್ತಲೇ ಇದ್ದಾರೆ. ಸಿದ್ದು ಬಣದಲ್ಲಿರುವ ಸತೀಶ್ ಜಾರಕಿಹೊಳಿ ಬ್ಯಾಲೆನ್ಸ್ ಮಾತನಾಡುತ್ತಿದ್ಧಾರೆ. ಮಹದೇವಪ್ಪ, ಜಮೀರ್, ಪರಮೇಶ್ವರ್.. ಯಾವ ಸಮಯದಲ್ಲಿ ಎಲ್ಲಿಗೆ ಬೇಕಾದರೂ ಹೊರಳಬಹುದು. ಸೈಲೆಂಟ್ ಆಗಿ ಪಟ್ಟು ಹಾಕುತ್ತಿರುವುದು ಡಿಕೆ ಶಿವಕುಮಾರ್ ಮಾತ್ರ.
ಶಿವಕುಮಾರ್ ತಂತ್ರ ನಂ.1
ಸಿದ್ದು ಬಣದ ವಿರುದ್ಧ ಮಾತನಾಡದೆ, ಹೈಕಮಾಂಡ್ ಎದುರು ಒಳ್ಳೆ ಹುಡುಗ, ನಾವು ಹೇಳಿದಂತೆ ಕೇಳ್ತಾರೆ ಎಂಬ ಇಮೇಜ್ ಪಡೆಯುವುದು. ಎಲ್ಲವನ್ನೂ ಹೈಕಮಾಂಡ್ ಮೇಲೆ ಎತ್ತಿ ಹಾಕಿ, ಅವರ ಮೇಲೆಯೇ ಒತ್ತಡ ಸೃಷ್ಟಿಸುವುದು. ಇದು ಮಲ್ಲಿಕಾರ್ಜುನ ಖರ್ಗೆ ಅವರಿಗೂ ಇಷ್ಟವಾಗಿದೆಯಂತೆ.
ಶಿವಕುಮಾರ್ ತಂತ್ರ ನಂ.2
ಶಾಸಕರ ಜೊತೆ ಚೆನ್ನಾಗಿ ಮಾತನಾಡಿಸುತ್ತಾ.. ಬಣದಲ್ಲಿರುವವರ ಬೆಂಬಲಿಗರನ್ನು ಹೆಚ್ಚಿಸಿಕೊಳ್ಳೋದು. ಇತ್ತೀಚೆಗೆ ಎಲ್ಲ ಶಾಸಕರ ಜೊತೆ ನಿರಂತರ ಫೋನ್, ವೈಯಕ್ತಿಕ ಮಾತುಕತೆ ಜಾರಿಯಲ್ಲಿಟ್ಟಿದ್ದಾರೆ ಡಿಕೆ.
ಶಿವಕುಮಾರ್ ತಂತ್ರ ನಂ.3
ಸಿಎಂ ಯಾರು ಎಂದು ನಿರ್ಧಾರ ಮಾಡುವುದು ನಾನಲ್ಲ, ಶಾಸಕರ ಬಲ ಅಲ್ಲ, ಹೈಕಮಾಂಡ್ ಎನ್ನುವುದು. ಆಗ ಸಿದ್ದು ಬಣದವರು ಯಾರೂ ಕೂಡಾ ಹೈಕಮಾಂಡ್‌ಗೆ ಅಧಿಕಾರ ಇಲ್ಲ ಎನ್ನುವುದಕ್ಕೆ ಸಾಧ್ಯವಿಲ್ಲ ಎನ್ನುವ ಮಾತು ಹೇಳುವುದಕ್ಕೆ ಆಗಲ್ಲ.
ಶಿವಕುಮಾರ್ ತಂತ್ರ ನಂ.4
ದೆಹಲಿ ನಾಯಕರಿಗೆ ಪದೇ ಪದೇ ನವೆಂಬರ್ ತಿಂಗಳು ನೆನಪಿಸುತ್ತಿರುವುದು. ಆ ಮೂಲಕ ಎರಡೂವರೆ ವರ್ಷದ ನಂತರ ನಾನು ರೆಡಿ ಎನ್ನುವ ಮೆಸೇಜ್ ಕೊಡುವುದು.
ಶಿವಕುಮಾರ್ ತಂತ್ರ ನಂ.5
ಬೆಂಗಳೂರಿನಲ್ಲಿ ರಸ್ತೆ ಗುಂಡಿ ಸೇರಿದಂತೆ ಹಲವು ಸಮಸ್ಯೆಗಳ ವಿರುದ್ಧ ಅಸಮಾಧಾನಗೊಂಡಿರುವ ಉದ್ಯಮಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರು ತಮ್ಮ ವಿರುದ್ಧ ಟೀಕೆ ಮಾಡದಂತೆ ನೋಡಿಕೊಳ್ಳುವುದು. ಆ ಉದ್ಯಮಿಗಳು ಟೀಕೆ ಮಾಡಿದರೆ..ಅದು ಇಂಗ್ಲಿಷ್ ಮೀಡಿಯಾದಲ್ಲಿ ಹೈಲೈಟ್ ಆಗುತ್ತದೆ. ಅವರನ್ನು ಮನವೊಲಿಸಿದರೆ ʻಬ್ಯಾಡ್ ಇಮೇಜ್ʼ ಕಡಿಮೆಯಾಗುತ್ತದೆ.
ಇದಿಷ್ಟನ್ನೂ ಡಿಕೆ ಅನುಸರಿಸ್ತಾ ಇದ್ದರೆ, ಸಿದ್ಧರಾಮಯ್ಯ ಬಣ ಶಾಸಕರ ಬಲ, ಒಬ್ಬ ದಲಿತ, ಒಬ್ಬ ಮುಸ್ಲಿಂ ಹಾಗೂ ಒಬ್ಬ ಲಿಂಗಾಯತ ಶಾಸಕರನ್ನು ಡಿಸಿಎಂ ಮಾಡಿ, ಆ ಮೂಲಕ ನಾಲ್ವರು ಡಿಸಿಎಂ ಹುದ್ದೆ ಸೃಷ್ಟಿಸಿ.. ಡಿಕೆ ಪ್ರಬಲವಾಗದಂತೆ ನೋಡಿಕೊಳ್ಳೋ ಪ್ರಯತ್ನ ಮಾಡ್ತಿದೆ. ಅಷ್ಟೇ ಅಲ್ಲ, ಪದೇ ಪದೇ 5 ವರ್ಷ ನಾನೇ ಸಿಎಂ ಎನ್ನುವುದು ಜೊತೆಯಲ್ಲೇ.. ಸ್ಥಾನ ತೊರೆಯಲೇಬೇಕಾದ ಪರಿಸ್ಥಿತಿ ಬಂದರೆ.. ಅದು ಡಿಕೆಗೆ ಮಾತ್ರ ಸಿಗಬಾರದು ಎಂದು ತಂತ್ರ ರೂಪಿಸುತ್ತಿದೆ. ರಾಜಕೀಯ ಆಟ ಸಾಮಾನ್ಯದ್ದಲ್ಲ.



