ರಾಜ್ಯದಲ್ಲಿ ಕಾಂಗ್ರೆಸ್ ಇತ್ತೀಚೆಗೆ ವಿವಾದಗಳು, ಪ್ರಮಾದಗಳಿಂದಲೇ ಸುದ್ದಿಯಾಗುತ್ತಿದೆ. ಕೇವಲ ಎರಡೂವರೆ ವರ್ಷಗಳ ಹಿಂದೆ 136 ಸ್ಥಾನ ಗೆದ್ದು, ಚಕ್ರವರ್ತಿಗಳಂತೆ ಕಂಗೊಳಿಸಿದ್ದ ಕಾಂಗ್ರೆಸ್, ನಂತರ ಲೋಕಸಭೆ ಚುನಾವಣೆಯಲ್ಲೂ ಸಮಾಧಾನಕರ ಪ್ರದರ್ಶನ ನೀಡಿತ್ತು. ನಂತರ ನಡೆದ ಉಪಚುನಾವಣೆಗಳಲ್ಲಿ ಬಿಜೆಪಿ, ಜೆಡಿಎಸ್ ಎರಡೂ ಪಕ್ಷಗಳನ್ನು ಹೊಸಕಿ ಹಾಕಿತ್ತು. ಆದರೆ, ಈಗ ಕೆಲವು ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆ ಫಲಿತಾಂಶ ಬೇರೆಯದೇ ಸಿಗ್ನಲ್ ಕೊಡುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಜಪೆ, ಕಿನ್ನಿಗೋಳಿ, ಉತ್ತರ ಕನ್ನಡ ಜಿಲ್ಲೆಯ ಮಂಕಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಾಧಿಸಿದೆ. ಕಾಂಗ್ರೆಸ್ ಮತಗಳಿಕೆ ಗಣನೀಯವಾಗಿ ಕುಸಿದಿರುವುದು ವಿಶೇಷ.
ದೊಡ್ಡಬಳ್ಳಾಪುರ ನಗರಸಭೆಯ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ರಾಯಚೂರು ಜಿಲ್ಲೆಯ ತುರ್ವಿಹಾಳದ ಪಟ್ಟಣ ಪಂಚಾಯಿತ್‌ನ 4ನೇ ವಾರ್ಡ್‍ಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಜಯ ಸಾಧಿಸಿದ್ದಾರೆ.
ಎಲ್ಲಿ ಎಷ್ಟು ಸ್ಥಾನ?
ಬಜಪೆ (ದಕ್ಷಿಣ ಕನ್ನಡ)
ಒಟ್ಟು ಸ್ಥಾನ – 19
ಬಿಜೆಪಿ 11, ಕಾಂಗ್ರೆಸ್ 4, ಎಸ್‌ಡಿಪಿಐ 3, ಪಕ್ಷೇತರ 1
ಕಿನ್ನಿಗೋಳಿ (ದಕ್ಷಿಣ ಕನ್ನಡ)
ಒಟ್ಟು ಸ್ಥಾನ – 18
ಬಿಜೆಪಿ 10, ಕಾಂಗ್ರೆಸ್ 8
ಬಿಜೆಪಿ ಪ್ರಾಬಲ್ಯ ಇರುವ ಕ್ಷೇತ್ರವಾದರೂ, ಇಲ್ಲಿ ಕಾಂಗ್ರೆಸ್ ಮತಗಳನ್ನು, ಎಸ್‌ಡಿಪಿಐ ಕಿತ್ತುಕೊಂಡಿದೆ. ಇದು ಸೋಲಿಗೆ ಕಾರಣವಾಗಿದೆ.
ಮಂಕಿ(ಉತ್ತರ ಕನ್ನಡ)
ಒಟ್ಟು ಸ್ಥಾನ – 20
ಬಿಜೆಪಿ 12, ಕಾಂಗ್ರೆಸ್ 8
ಬಾಶೆಟ್ಟಿಹಳ್ಳಿ(ಬೆಂಗಳೂರು ಗ್ರಾಮಾಂತರ)
ಒಟ್ಟು ಸ್ಥಾನ – 19
ಬಿಜೆಪಿ – 15
ಕಾಂಗ್ರೆಸ್ – 3
ಅಚ್ಚರಿ ಹುಟ್ಟಿಸಿರುವುದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಾಶೆಟ್ಟಿಹಳ್ಳಿಯ ಫಲಿತಾಂಶ. ಇದು ಡಿಸಿಎಂ ಡಿಕೆ ಶಿವಕುಮಾರ್ ಪ್ರಾಬಲ್ಯ ಇರುವ ಜಿಲ್ಲೆ. ಇಲ್ಲಿ ಕಾಂಗ್ರೆಸ್, ಇನ್ನಷ್ಟು ಹೀನಾಯವಾಗಿ ಸೋತಿದೆ. ಸೋತಿರುವ ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರೇ ನಾಯಕರು ಎನ್ನುವುದು ವಿಶೇಷ.
ರಾಜ್ಯದಲ್ಲೀಗ ಸ್ಥಳೀಯ ಸಂಸ್ಥೆಗಳ ರಾಜ್ಯಾದ್ಯಂತ ಚುನಾವಣೆಗಳು ಗರಿಗೆದರುತ್ತಿವೆ. ಜಿಲ್ಲಾ ಪಂಚಾಯ್ತಿ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆಗಳು ನಡೆಯುವ ದಿನಗಳು ದೂರ ಇಲ್ಲ. ಬೆಂಗಳೂರನ್ನು 5 ಪಾಲಿಕೆಗಳನ್ನಾಗಿ ವಿಭಜಿಸಿರುವ ಕಾಂಗ್ರೆಸ್ ಸರ್ಕಾರಕ್ಕೆ ಆ 5 ಪಾಲಿಕೆಗಳನ್ನೂ ಗೆಲ್ಲಬೇಕು ಎಂಬ ಕನಸಿದೆ. ಗುರಿ ಇದೆ. ಆದರೆ, ಅದಕ್ಕೆ ಪೂರ್ವಭಾವಿಯಾಗಿ ನಡೆದ ಚುನಾವಣೆಗಳಲ್ಲಿ ಬಂದಿರುವ ನೆಗೆಟಿವ್ ರಿಸಲ್ಟ್ ಆತಂಕ ಹುಟ್ಟು ಹಾಕಿದೆ.
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರ ಜನಪ್ರಿಯತೆ, ತಂತ್ರಗಾರಿಕೆಗೆ ಚಾಲೆಂಜ್ ಹಾಕಿದೆ. ಇಷ್ಟು ಬೇಗ ಸರ್ಕಾರ ಜನಪ್ರಿಯತೆ ಕಳೆದುಕೊಳ್ಳುತ್ತಾ ಎನ್ನುವ ಪ್ರಶ್ನೆ ಹುಟ್ಟುಹಾಕಿದೆ. ಆದರೆ ಸಮರ್ಥಕರು ಹೇಳುವುದೇ ಬೇರೆ, ನಾಯಕರು ಈ 4 ಕ್ಷೇತ್ರಗಳಲ್ಲಿ ಮಾತ್ರ ನಡೆದ ಚುನಾವಣೆಯನ್ನು ಸೀರಿಯಸ್ ಆಗಿ ತೆಗೆದುಕೊಳ್ಳಲೇ ಇಲ್ಲ. ಅಖಾಡಕ್ಕೆ ಧುಮುಕಿದರೆ ಫಲಿತಾಂಶವೇ ಬೇರೆ ಎನ್ನುತ್ತಿದ್ದಾರೆ.



