ಸಿದ್ದರಾಮಯ್ಯ, ತಮ್ಮ ಇಷ್ಟು ವರ್ಷಗಳ ರಾಜಕೀಯ ಜೀವನದಲ್ಲಿ ಇದೇ ಮೊದಲ ಬಾರಿಗೆ ಎಫ್‌ಐಆರ್ ಹಾಕಿಸಿಕೊಂಡಿದ್ದಾರೆ. ಮುಡಾ ಹಗರಣದಲ್ಲಿ ಸಿದ್ಧರಾಮಯ್ಯನವರೇ ಎ1, ಸಿದ್ದರಾಮಯ್ಯ ಅವರ ಪತ್ನಿ ಎ2, ಅವರ ಬಾಮೈದ ಅಂದರೆ ಪಾರ್ವತಮ್ಮನವರ ತಮ್ಮ ಮಲ್ಲಿಕಾರ್ಜುನ ಎ3. ಲೋಕಾಯುಕ್ತದಲ್ಲಿ ಕೇಸು ದಾಖಲಾಗಿದೆ. ವಿಚಾರಣೆ ಎದುರಿಸಲೇಬೇಕು. ಆದರೆ ಗೊಂದಲ ಹುಟ್ಟಿಸುತ್ತಿರುವುದು ಕಾಂಗ್ರೆಸ್ ಪಕ್ಷದ ನಡೆ.
ಕಾಂಗ್ರೆಸ್ ಪಕ್ಷದಲ್ಲೇನಿದೆ ಗೊಂದಲ್ಲ, ಎಲ್ಲರೂ ಸಿದ್ಧರಾಮಯ್ಯ ಜೊತೆಗಿದ್ದಾರಲ್ಲ ಎನ್ನಬಹುದು. ಕೆಪಿಸಿಸಿ ಅಧ್ಯಕ್ಷ ಹಾಗೂ ಹಾಲಿ ಡಿಸಿಎಂ ಆಗಿರುವ ಡಿಕೆ ಶಿವಕುಮಾರ್, ಹಿರಿಯ ನಾಯಕರಾದ ಸತೀಶ್ ಜಾರಕಿಹೊಳಿ, ಎಚ್‌ಸಿ ಮಹದೇವಪ್ಪ, ಎಂಬಿ ಪಾಟೀಲ್, ಜಮೀರ್ ಅಹ್ಮದ್.. ಹೀಗೆ ಬಹುತೇಕ ನಾಯಕರು ಸಿದ್ಧರಾಮಯ್ಯ ಜೊತೆಗಿದ್ದಾರೆ. ಖುದ್ದು ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ವಾದ್ರಾ ಅವರೂ ಸಿದ್ದು ಜೊತೆಯಲ್ಲಿದ್ದಾರೆ. ಬಹಿರಂಗವಾಗಿ ಅಪಸ್ವರ ಎತ್ತಿರುವ ಏಕೈಕ ನಾಯಕ ಎಂದರೆ ಸದ್ಯಕ್ಕೆ ಕೋಳಿವಾಡ ಮಾತ್ರ. ಆದರೆ ಅಚ್ಚರಿ ಹುಟ್ಟಿಸುತ್ತಿರುವುದು ಮಲ್ಲಿಕಾರ್ಜುನ ಖರ್ಗೆ ಕೊಟ್ಟಿರುವ ಹೇಳಿಕೆ.
ಸಿದ್ದರಾಮಯ್ಯ ವಿರುದ್ಧ ವೈಯಕ್ತಿಕವಾಗಿ ಆರೋಪ ಬಂದರೂ ಬಿಜೆಪಿಯವರು ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಇವತ್ತು ಸಿಎಂ ಆಗಿರ್ತಾರೆ, ನಾಳೆ ಇರಲ್ಲ, ಪಕ್ಷ ಮಾತ್ರ ಮುಂದುವರಿಯುತ್ತದೆ. ಪಕ್ಷದ ಮುಂದೆ ಯಾರೋ ದೊಡ್ಡವರಲ್ಲ ಅನ್ನೋ ಹೇಳಿಕೆ ಪಕ್ಷದವರಲ್ಲಿ ಗೊಂದಲ ಹುಟ್ಟಿಸುತ್ತಿದೆ. ಅದು ಸಿದ್ಧರಾಮಯ್ಯನವರು ರಾಜೀನಾಮೆ ಕೊಡಬೇಕು ಎಂಬ ಸುಳಿವು ಇರಬಹುದೇ ಎಂಬ ಲೆಕ್ಕಾಚಾರ ಶುರುವಾಗಿದೆ.
ಒಮ್ಮೆ ಸಮರ್ಥನೆ.. ಮತ್ತೊಮ್ಮೆ ಇಂತಹ ಹೇಳಿಕೆ.. ಹೀಗೇಕೆ..?
ಬೆಂಗಳೂರಿನಲ್ಲಿ ಮಾತನಾಡಿರುವ ಎಐಸಿಸಿ ಅಧ್ಯಕ್ಷ ಖರ್ಗೆ, ಸಿದ್ಧರಾಮಯ್ಯ ಅವರನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯ ವಿರುದ್ದ ಲೋಕಾಯುಕ್ತಕ್ಕೆ ತನಿಖೆ ವಿಚಾರದ ಬಗ್ಗೆ ಮಾತನಾಡುತ್ತಾ ಗೋದ್ರಾ ಘಟನೆ ನಡೆದಾಗ ಮೋದಿ ರಾಜೀನಾಮೆ ಕೊಟ್ಟರಾ? ಆ ಕಾಲದಲ್ಲಿ ಮೋದಿ, ಅಮಿತ್ ಶಾ ವಿರುದ್ದ ಸಾಕಷ್ಟು ಕೇಸ್ ದಾಖಲಾಗಿದ್ದವು. ವೈಯಕ್ತಿಕವಾಗಿ ಯಾರನ್ನೂ ಟಾರ್ಗೆಟ್ ಮಾಡಬಾರದು. ಅವರ ಇಮೇಜ್ ಡ್ಯಾಮೇಜ್ ಮಾಡೋ ಯತ್ನ ಮಾಡಬಾರದು ಎಂದು ಹೇಳಿದ್ದಾರೆ.
ಅದರ ಜೊತೆಯಲ್ಲೇ ಮುಂದುವರಿದು ʻಅವರ ಜೊತೆ ಪಕ್ಷಕ್ಕೂ ಡ್ಯಾಮೇಜ್ ಆಗುತ್ತದೆ. ನಿಮ್ಮ ಇಂಟ್ರೆಸ್ಟ್ ಇರೋದು ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್ ಮಾಡೋದು. ವೈಯಕ್ತಿಕ ಅಲ್ಲ. ಆದರೆ, ಸಿದ್ದರಾಮಯ್ಯ ಸಿಎಂ ಇವತ್ತು ಇರ್ತಾರೆ, ನಾಳೆ ಇರಲ್ಲ, ಪಕ್ಷ ಮಾತ್ರ ಮುಂದುವರಿಯುತ್ತದೆʼ ಎಂದಿದ್ದಾರೆ.
ಆದರೆ ಅಂತಿಮವಾಗಿ ಖರ್ಗೆ ಹೇಳುವುದು ಇದು. ಸಿದ್ದರಾಮಯ್ಯ ಮೇಲೆ ಎಫ್ ಐ ಆರ್ ದಾಖಲಾದ ಮೇಲೆ ಹೈಕಮಾಂಡ್ ಸಿಎಂ ಸಿದ್ದರಾಮಯ್ಯ ಜೊತೆಗೆ ನಿಲ್ಲುತ್ತಾ ಅನ್ನೋದು ಹೈಪೊಥಿಟಿಕಲ್ ಪ್ರಶ್ನೆ. ನಾವು ಅವರ ಜೊತೆ ನಿಂತಿದ್ದೇವೆ, ಅವರಿಗೆ ಬೆಂಬಲ ಕೊಟ್ಟಿದ್ದೇವೆ. ಯಾಕೆಂದರೆ ಅವರು ಪಕ್ಷವನ್ನು ಪ್ರತಿನಿಧಿಸುತ್ತಾರೆ ಅವರು ವೈಯುಕ್ತಿಕ ಅಲ್ಲ. ಕಾನೂನು ಅದರ ಕ್ರಮ ತೆಗೆದುಕೊಳ್ಳುತ್ತದೆ. ಮುಂದೆ ಅಂತಹ ಸ್ಥಿತಿ ಬಂದ್ರೆ ಕ್ರಮ ತೆಗೆದುಕೊಳ್ಳುವ ಚಿಂತನೆ ಮಾಡುತ್ತೇವೆ. ಕಾನೂನು ಅದರ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.
ಖರ್ಗೆಯವರ ಇಂತಹ ಹೇಳಿಕೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ಸಿನಲ್ಲಿ ಹೊಸ ಗಾಳಿ ಬೀಸೋಕೆ ಶುರುವಾಗಿದೆ. ಸಿದ್ದರಾಮಯ್ಯ ಜೊತೆಗೆ ಹೈಕಮಾಂಡ್ ಇದೆ ಎಂಬ ಕಾರಣಕ್ಕೆ ಭಿನ್ನಮತ ಬಹಿರಂಗಕ್ಕೆ ಬರುವುದು ತಡವಾಗುತ್ತಿದೆ ಅಷ್ಟೇ. ಅದೆಲ್ಲವೂ ಡಿಸೆಂಬರ್ ಹೊತ್ತಿಗೆ ಪ್ರಬಲವಾಗಿ ಸಿದ್ಧರಾಮಯ್ಯ ವಿರುದ್ಧವಾಗಿ ಬೀಸಲಿದೆ ಎನ್ನುವ ಲೆಕ್ಕಾಚಾರ ಕಾಂಗ್ರೆಸ್ಸಿನಲ್ಲಿದೆ. ಏಕೆಂದರೆ ಅಷ್ಟು ಹೊತ್ತಿಗೆ ಮುಡಾ ವರದಿ ಬಂದಿರುತ್ತದೆ. ಎಫ್‌ಐಆರ್ ದಾಖಲಾಗಿರುವ ಹಿನ್ನೆಲೆಯಲ್ಲಿ ಮುಂದಿನ 3 ತಿಂಗಳ ಒಳಗೆ ಚಾರ್ಜ್‌ಶೀಟ್ ಸಲ್ಲಿಸಲೇಬೇಕು. ಈಗ ಸೆಪ್ಟೆಂಬರ್ ಅಂತ್ಯ. ಅಕ್ಟೋಬರ್, ನವೆಂಬರ್ ಹಾಗೂ ಡಿಸೆಂಬರ್ ಅಂತ್ಯದ ಒಳಗೆ ಆರೋಪಪಟ್ಟಿ ಸಲ್ಲಿಕೆಯಾಗಬಹುದು. ಆಗ ಪರಿಸ್ಥಿತಿ ಇದೇ ರೀತಿ ಇರುವುದಿಲ್ಲ. ಏಕೆಂದರೆ ಕಾಂಗ್ರೆಸ್ ಎನ್ನುವುದು ಆಮ್ ಆದ್ಮಿಯಂತೆ ಒಂದೆರಡು ರಾಜ್ಯಗಳಲ್ಲಿ ಮಾತ್ರವೇ ಅಸ್ಥಿತ್ವದಲ್ಲಿರುವ ಪಕ್ಷವಲ್ಲ. ರಾಷ್ಟ್ರೀಯ ಪಕ್ಷ. ಹೀಗಾಗಿ ಕಾಂಗ್ರೆಸ್ ಎದುರು ದೊಡ್ಡ ಸವಾಲೇ ಇದೆ.



