ಗೆಲ್ಲುವವರೆಗೆ ಕೈಕಾಲು ಹಿಡಿಯುವ ರಾಜಕೀಯ ನಾಯಕರು, ಗೆದ್ದ ಮೇಲೆ ತಲೆ ಮೇಲೇ ಕೂತುಕೊಳ್ತಾರೆ. ಬಡವರ ಕಣ್ಣೀರು ಕಾಣಲ್ಲ, ನರಳಾಟ ಕಿವಿಗೆ ಕೇಳಲ್ಲ. ಕಾಲು ಮುಟ್ಟುವುದು, ವಿನಯವಂತಿಕೆ ಎಲ್ಲವೂ ಚುನಾವಣೆಗೆ ವೋಟು ಕೇಳುವವರೆಗೆ ಮಾತ್ರ. ವೋಟು ಕೇಳುವಾಗ ಬಚ್ಚಲು ಮನೆಗೇ ಬಂದು ಕಕ್ಕ ತೊಳೆಯೂವುದಕ್ಕೂ ಹಿಂದೆ ಮುಂದೆ ನೋಡದ ನಾಯಕರು, ಗೆದ್ದ ಮೇಲೆ ಮತದಾರರ ಕಣ್ಣಿಗೂ ಬೀಳಲ್ಲ. ಮನೆ ಹತ್ತಿರ ಹೋದರೆ ಗೇಟಿನ ಹತ್ತಿರವೂ ಸೇರಿಸಲ್ಲ. ಇದು ಹೊಸದೇನಲ್ಲ. ಅಪರೂಪವೇನಲ್ಲ. ಗೆದ್ದ ಮೇಲೂ ಜನರ ಕಷ್ಟ ಕೇಳುವ ನಾಯಕರು ಸಿಕ್ಕರೆ ಅಪರೂಪ ಎನ್ನಬಹುದು. ಯಾವ ಪಕ್ಷಗಳ ಶಾಸಕರೂ ಇದಕ್ಕೆ ಹೊರತಲ್ಲ.
ಆದರೆ ಕಷ್ಟ ಎಂದು ಮನವಿ ಪತ್ರ ತಂದ ಬಡ ರೈತನೊಬ್ಬನಿಗೆ ಶಾಸಕನೊಬ್ಬ ಕಾಲಿನಿಂದ ಒದ್ದ ಘಟನೆ ಜರುಗಿದೆ. ಇದು ನಡೆದಿರುವುದು ರಾಜಸ್ಥಾನದಲ್ಲಿ (Rajasthana). ಒದ್ದವನು (congress MLA) ಕಾಂಗ್ರೆಸ್ ಶಾಸಕ. ರಾಜಸ್ಥಾನ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ತಲೆನೋವು ಹೆಚ್ಚಾಗಿದೆ. ಒಂದೆಡೆ ಬಂಡಾಯ, ಜೊತೆಗೆ ಶಾಸಕರ ವರ್ತನೆ ಕೂಡ ಪಕ್ಷಕ್ಕೆ ತೀವ್ರ ಹಿನ್ನಡೆ ತಂದಿದೆ. ನೆರವು ಕೇಳಿ ಕಾಂಗ್ರೆಸ್ ಶಾಸಕ ರಾಜೇಂದ್ರ ಬಿದುರಿ ಬಳಿ ಬಂದ ರೈತನ ಕಾಲಿನಿಂದ ಒದ್ದು ಹೊರಗೆ ಹಾಕಿದ ವಿಡಿಯೋ ವೈರಲ್ ಆಗಿದೆ. ಏರುಧ್ವನಿಯಲ್ಲಿ ಗದರಿಸಿ ರೈತನ ಹೊರಕ್ಕೆ ಕಳುಹಿಸಿದ ಶಾಕನ ನಡೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಬಿಜೆಪಿ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಅಂದಹಾಗೆ ಇದು ಹಳೆಯ ವಿಡಿಯೊ. 2011ರಲ್ಲಿ ನಡೆದಿದ್ದು, ಈ ವಿಡಿಯೋ ಇದೀಗ ಮತ್ತೆ Viral video ವೈರಲ್ ಆಗಿದೆ. ಲೋಭಿ ರಾಮ್ ಅನ್ನೋ ರೈತ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕ್ಷೇತ್ರದ ಶಾಸಕನ ಭೇಟಿಯಾಗಲು ಹಲವು ದಿನಗಳಿಂದ ಅಲೆದಾಡಿದ್ದಾರೆ. ಕೊನೆಗೆ ಕಾಂಗ್ರೆಸ್ ಶಾಸಕ ರಾಜೇಂದ್ರ ಬಿದುರಿ ತನ್ನ ಗ್ರಾಮದ ಪಕ್ಕದಲ್ಲಿರುವ ಪಟ್ಟಣದ ಹೊಟೆಲ್ನಲ್ಲಿ ಉಳಿದುಕೊಂಡಿದ್ದಾರೆ ಅನ್ನೋದನ್ನು ಅರಿತು ಅಲ್ಲಿಗೆ ತೆರಳಿದ್ದಾರೆ.
ಹೊಟೆಲ್ ಲಾಂಜ್ ಬಳಿ ತೆರಳಿದ ರೈತ, ಶಾಸಕರು ಆಗಮಿಸುತ್ತಿದ್ದ ತಲೆಗೆ ಸುತ್ತಿತ್ತ ರಾಜಸ್ಥಾನಿ ಪೇಟ ತೆಗೆದು ಗೌರವ ಸೂಚಿಸಿದ್ದಾರೆ. ಇಷ್ಟೇ ಅಲ್ಲ ತನ್ನ ಮನವಿಗೆ ಸ್ಪಂದಿಸುವಂತೆ ಶಾಸಕನ ಕಾಲಿಗೆ ಎರಗಿದ್ದಾರೆ. ರೈತನ ನೋಡುತ್ತಿದ್ದಂತೆ ರಾಜೇಂದ್ರ ಬಿದುರಿ ಪಿತ್ತ ನೆತ್ತಿಗೇರಿದೆ. ರೈತನ ಗದರಿಸಲು ಆರಂಭಿಸಿದ್ದಾರೆ. ಕಾಲಿಗೆ ಎರಗುತ್ತಿದ್ದಂತೆ ಮಾರುದ್ದ ದೂರಕ್ಕೆ ಸರಿದ ಶಾಸಕ, ಮತ್ತೆ ಗದರಿಸಿ ಕಾಲಿನಿಂದ ಒದ್ದಿದ್ದಾರೆ. ಕಾಲಿಗೆ ಎರಗುವಾಗ ಪಕ್ಕದಲ್ಲೇ ಇಟ್ಟಿದ್ದ ರಾಜಸ್ಥಾನಿ ಪೇಟಾಗೆ ಶಾಕಕ ಕಾಲಿನಿಂದ ಒದ್ದಿದ್ದಾರೆ.
ಈ ನಡೆಯಿಂದ ರೈತ ಕೂಡ ಬೆಚ್ಚಿ ಬಿದ್ದಿದ್ದಾರೆ. ಎದ್ದು ನಿಂತು ಕೈಮುಗಿ ಕ್ಷಮೆ ಕೇಳಿ ಮನವಿಗೆ ಸ್ಪಂದಿಸುವಂತೆ ಮನವಿ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಶಾಸಕನ ದರ್ಪದಿಂದ ಹೊರಗೆ ಹೋಗುವಂತೆ ಗದರಿಸಿದ್ದಾರೆ. ಇಷ್ಟೇ ಅಲ್ಲ ದೂರದಲ್ಲಿ ಬಿದ್ದಿರುವ ರಾಜಸ್ಥಾನಿ ಪೇಟ ತೆಗೆದು ಹೊರಗೆ ಹೋಗುವಂತೆ ಸೂಚಿಸಿದ್ದಾರೆ. ಪಕ್ತದಲ್ಲಿ ನಿಂತಿದ್ದ ಸೆಕ್ರಟರಿ, ಅಧಿಕಾರಿಗಳು ಗಪ್ ಚುಪ್ ಆಗಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ. ಹೊಟೆಲ್ ಸಿಸಿಟಿವಿಯಲ್ಲಿ ದಾಖಲಾಗಿರುವ ಈ ದೃಶ್ಯ ಕಾಂಗ್ರೆಸ್ ಪಕ್ಷದ ಸಂಕಷ್ಟ ಹೆಚ್ಚಿಸಿದೆ. ಘಟನೆ ಹಳೆಯದೇ ಇರಬಹುದು. ಈ ಘಟನೆಗೆ ಇವತ್ತಿನವರೆಗೂ ಆ ಶಾಸಕ ಕ್ಷಮೆ ಕೇಳಿಲ್ಲ ಎನ್ನುವುದೂ ಅಷ್ಟೇ ನಿಜ.



