ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ನಾಲ್ಕನೇ ಗ್ಯಾರಂಟಿಯಾದ ಕುಟುಂಬದ ಒಡತಿಗೆ ಪ್ರತಿ ತಿಂಗಳು 2 ಸಾವಿರ ರುಪಾಯಿ ನೀಡುವ ಗೃಹಲಕ್ಷ್ಮಿ ಯೋಜನೆಗೆ ಬುಧವಾರ ಮೈಸೂರಿನಲ್ಲಿ ಚಾಲನೆ ಸಿಗಲಿದೆ. ಈ ಸಂಬಂಧ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಾರ್ಯಕ್ರಮದ ಸಿದ್ಧತೆಗಳು ಭರದಿಂದ ಸಾಗಿದ್ದು, ಅಂತಿಮ ಹಂತ ತಲುಪಿವೆ. ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪಾಲ್ಗೊಳ್ಳಲಿದ್ದಾರೆ.
ಯೋಜನೆ ಜಾರಿ ದಿನವನ್ನು ಕಾಂಗ್ರೆಸ್ ಹಬ್ಬದಂತೆ ಆಚರಿಸಲು ಸಿದ್ಧತೆ ನಡೆಸಿದೆ. ಆಗಸ್ಟ್ 30 ರಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡುವ ಹಿನ್ನಲೆಯಲ್ಲಿ ‘ಮಹಿಳೆಯರು ತಮ್ಮ ಮನೆಯ ಮುಂದೆ ನಾ ಯಜಮಾನಿ ಎಂದು ರಂಗೋಲಿ ಬಿಡಿಸಿ’ ಯೋಜನೆಯನ್ನು ಮನೆಗೆ ಬರಮಾಡಿಕೊಳ್ಳಬೇಕು ಎಂದು ಕರೆ ಕೊಟ್ಟಿದ್ದಾರೆ ಸಚಿವೆಯೂ ಆಗಿರುವ ಲಕ್ಷ್ಮೀ ಹೆಬ್ಬಾಳ್ಕರ್. ಇನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಗೃಹಲಕ್ಷ್ಮಿ ಯೋಜನೆ ಪ್ರತಿಗಳನ್ನು ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಪೂಜೆ ಮಾಡಿಸಲು ನಿರ್ಧರಿಸಿದ್ದಾರೆ. ಗ್ಯಾರಂಟಿ ಕಾರ್ಡುಗಳನ್ನೂ ಚಾಮುಂಡೇಶ್ವರಿ ಮುಂದಿಟ್ಟು ಪೂಜೆ ಮಾಡಲಾಗಿತ್ತು. ಅದೇ ರೀತಿ ಈಗ ಯೋಜನೆಯ ಪ್ರತಿಗಳನ್ನೂ ಚಾಮುಂಡೇಶ್ವರಿ ಸನ್ನಿಧಾನದಲ್ಲಿಟ್ಟು ಪೂಜಿಸಲಾಗುತ್ತಿದೆ. ಮೈಸೂರು ಸಿಎಂ ಸಿದ್ದರಾಮಯ್ಯನವರ ತವರು ಜಿಲ್ಲೆ. ಕನಿಷ್ಠ ಎಂದರೂ 3 ಲಕ್ಷ ಜನರು ಸೇರುವ ನಿರೀಕ್ಷೆ ಇದೆ. ತಾಲೂಕಿನಿಂದ ಹೆಚ್ಚು ಜನ ಫಲಾನುಭವಿಗಳು ಭಾಗವಹಿಸುವ ಸಲುವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪ್ರತಿ ಗ್ರಾಪಂಗೆ 3 ಉಚಿತ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಜೊತೆಗೆ ಕುಡಿಯುವ ನೀರು ಊಟ ತಿಂಡಿ ವ್ಯವಸ್ಥೆಯನ್ನು ಮಾಡಲಾಗಿದೆ. ಯೋಜನೆಯಡಿ ಈಗಾಗಲೇ ರಾಜ್ಯದಿಂದ 1.08 ಕೋಟಿ ಮಹಿಳೆಯರು ನೋಂದಣಿ ಮಾಡಿದ್ದಾರೆ. ಈ ಯೋಜನೆಗಾಗಿ ಸರ್ಕಾರ ಈ ವರ್ಷ 17500 ಕೋಟಿ ರು.ಗಳನ್ನು ಮೀಸಲಿಟ್ಟಿದೆ.
ವಿಶೇಷ ಅದಲ್ಲ, ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳನ್ನು ಗುರುತಿಸುವ ಪ್ರಕ್ರಿಯೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಶಾಸಕರೂ ಉತ್ಸಾಹದಿಂದ ಭಾಗಿಯಾಗುತ್ತಿದ್ದಾರೆ. ಇತ್ತೀಚೆಗೆ ಜೋರಾಗಿರುವ ಆಪರೇಷನ್ ಹಸ್ತದ ಪರಿಣಾಮವೋ ಏನೋ.. ಸದ್ಯಕ್ಕಂತೂ ಬಿಜೆಪಿ ಹಾಗೂ ಜೆಡಿಎಸ್ ಶಾಸಕರ ಕ್ಷೇತ್ರಗಳಲ್ಲೂ ತಯಾರಿ ಜೋರಾಗಿದೆಯಂತೆ.
ಯಶವಂತಪುರ ಶಾಶಕ ಎಸ್.ಟಿ.ಸೋಮಶೇಖರ್ ಅವರಂತೂ ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿನ 17 ಗ್ರಾಮ ಪಂಚಾಯಿತಿ ಹಾಗೂ ಬಿಬಿಎಂಪಿ ವಾರ್ಡ್ಗಳ ಮುಖಂಡರ ಸಭೆ ನಡೆಸಿ ಯೋಜನೆಗೆ ಫಲಾನುಭವಿಗಳಾಗುವ ಅರ್ಹತೆ ಹೊಂದಿರುವ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಹೊಂದಿರುವ ಮಹಿಳೆಯರು ಎಷ್ಟು ಮಂದಿ ಇದ್ದಾರೆ ಎಂಬ ಮಾಹಿತಿ ಸಂಗ್ರಹಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸೋಮಶೇಖರ್ ಒಬ್ಬ ಶಾಸಕನಾಗಿ ಸರ್ಕಾರದ ಯೋಜನೆಯನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೇನೆ. ನನ್ನ ಕ್ಷೇತ್ರದ ಜನ ಯೋಜನೆ ಬಗ್ಗೆ ಕೇಳಿದರೆ ಅದು ಬೇರೆ ಸರ್ಕಾರದ ಯೋಜನೆ ಅನ್ನೋಕಾಗುತ್ತಾ. ಒಬ್ಬ ಶಾಸಕನಾಗಿ ಅದು ನನ್ನ ಕರ್ತವ್ಯ. ಯಾರು ಏನು ಬೇಕಾದರೂ ಅಂದುಕೊಳ್ಳಲಿ ಅನ್ನೋದು ಸೋಮಶೇಖರ್ ಮಾತು.
ಸೋಮಶೇಖರ್ ಅವರೇನೋ ಓಪನ್ ಆಗಿ ಈ ಮಾತು ಹೇಳಿದ್ದಾರೆ. ಆದರೆ ಮೈಸೂರು, ಮಂಡ್ಯ ಸೇರಿದಂತೆ ಆಪರೇಷನ್ ವೇಳೆ ಯಾವ್ಯಾವ ಬಿಜೆಪಿ/ಜೆಡಿಎಸ್ ಶಾಸಕರ ಹೆಸರು ಕೇಳಿ ಬಂದಿವೆಯೋ.. ಅಲ್ಲೆಲ್ಲ ತಯಾರಿ ಜೋರಾಗಿ ನಡೆಯುತ್ತಿದೆ. ಏಕೆಂದರೆ ಕೇವಲ ಸೋಮಶೇಖರ್ ಅಲ್ಲ, ಮುನೇನಕೊಪ್ಪ, ಹೆಬ್ಬಾರ್ ಮೊದಲಾದವರಿಗೆ ಆಗಲೇ ಬಹುತೇಕ ಕಾಂಗ್ರೆಸ್ ಬಾಗಿಲು ಓಪನ್ ಆಗಿದೆ.



