ಬೆಂಗಳೂರು ಗ್ರಾಮಾಂತರ – ಡಿ.ಕೆ. ಸುರೇಶ್ (ಹಾಲಿ ಸಂಸದ)
ಮಂಡ್ಯ- ಸ್ಟಾರ್ ಚಂದ್ರು (ವೆಂಕಟೇರಮಣಗೌಡ)
ತುಮಕೂರು- ಎಸ್.ಪಿ. ಮುದ್ದಹನುಮೇಗೌಡ (ಕಾಂಗ್ರೆಸ್ಸಿನಲ್ಲೇ ಇದ್ದು, ಬಿಜೆಪಿಗೆ ಹೋಗಿ ಇತ್ತೀಚೆಗೆ ವಾಪಸ್ ಆದವರು)
ಮೈಸೂರು- ಎಂ. ಲಕ್ಷ್ಮಣ್
ಚಿಕ್ಕಬಳ್ಳಾಪುರ- ರಕ್ಷಾ ರಾಮಯ್ಯ
ಕೋಲಾರ- ಕೆ.ಎಚ್. ಮುನಿಯಪ್ಪ (ಸಚಿವರಾಗಿದ್ದರೂ, ಲೋಕಸಭೆಗೆ ಮನಸ್ಸು ಮಾಡಿದ್ದಾರೆ.)
ಬೆಂಗಳೂರು ಕೇಂದ್ರ-ಎನ್.ಎ. ಹ್ಯಾರಿಸ್ (ಶಾಸಕರಾಗಿದ್ದರೂ, ಲೋಕಸಭೆಗೆ ಮನಸ್ಸು ಮಾಡಿದ್ದಾರೆ)
ಬೆಂಗಳೂರು ದಕ್ಷಿಣ- ಸೌಮ್ಯಾ ರೆಡ್ಡಿ (ಸಚಿವ ರಾಮಲಿಂಗಾ ರೆಡ್ಡಿ ಪುತ್ರ, ಎಲೆಕ್ಷನ್ ಸೋತಿದ್ದವರು)
ಹಾಸನ- ಶ್ರೇಯಸ್ ಪಟೇಲ್
ಶಿವಮೊಗ್ಗ – ಗೀತಾ ಶಿವರಾಜಕುಮಾರ್ (ದೊಡ್ಮನೆ ಸೊಸೆ ಮತ್ತು ಬಂಗಾರಪ್ಪನವರ ಮಗಳು. ಸಚಿವ ಮಧು ಬಂಗಾರಪ್ಪ ಅವರ ಅಕ್ಕ)
ಚಿತ್ರದುರ್ಗ- ಬಿ.ಎನ್. ಚಂದ್ರಪ್ಪ
ವಿಜಯಪುರ- ಮಾಜಿ ಶಾಸಕ ರಾಜು ಅಲಗೂರು
ಬೀದರ್- ರಾಜಶೇಖರ್ ಪಾಟೀಲ್
ಕಲಬುರಗಿ- ರಾಧಾಕೃಷ್ಣ (ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ. ಮೊದಲಿಗೆ ಒಪ್ಪದೇ ಇದ್ದ ರಾಧಾಕೃಷ್ಣ ಅವರನ್ನು ಖರ್ಗೆಯವರೇ ಮನವೊಲಿಸಿದರು ಎಂಬ ಮಾತುಗಳಿವೆ)
ಉಡುಪಿ-ಚಿಕ್ಕಮಗಳೂರು- ಜಯಪ್ರಕಾಶ್ ಹೆಗ್ಡೆ/ ಡಾ. ಅಂಶುಮಂತ್
ಮುಂಬರುವ ಲೋಕಸಭಾ ಚುನಾವಣೆಗೆ ತನ್ನ ಮೊದಲ ಪಟ್ಟಿ ಘೋಷಣೆ ಬಗ್ಗೆ ಚರ್ಚಿಸಲು ಈ ವಾರಾಂತ್ಯದೊಳಗೆ ದೆಹಲಿಯಲ್ಲಿ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ರಾಜ್ಯದ ಹತ್ತಕ್ಕೂ ಹೆಚ್ಚು ಕ್ಷೇತ್ರಗಳು ಸೇರಿದಂತೆ ಗೊಂದಲವಿಲ್ಲದ ಕ್ಷೇತ್ರಗಳಿಗೆ ಅಭ್ಯರ್ಥಿ ಹೆಸರು ಘೋಷಣೆಯಾಗುವ ಸಾಧ್ಯತೆಯಿದೆ. ಈ ಸಭೆಯ ಹಿನ್ನೆಲೆಯಲ್ಲಿ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂಭವನೀಯರ ಪಟ್ಟಿ ಫೈನಲ್ ಮಾಡಿ, 15 ಕ್ಷೇತ್ರಗಳಿಗೆ ಲಿಸ್ಟ್ ಅಂತಿಮಗೊಳಿಸಿದ್ದಾರೆ.
ಮೊದಲ 15 ಮಂದಿಯ ಪಟ್ಟಿಯಲ್ಲಿ ಹಾಲಿ ಸಚಿವರ ಪೈಕಿ ಒಬ್ಬರ ಹೆಸರು ಮಾತ್ರ ಇದೆ. ಅದು ಕೋಲಾರ ಕ್ಷೇತ್ರಕ್ಕೆ ಕೆ.ಎಚ್. ಮುನಿಯಪ್ಪ. ಇನ್ನು ಹಾಲಿ ಶಾಸಕರ ಪೈಕಿ ಬೆಂಗಳೂರು ಕೇಂದ್ರಕ್ಕೆ ಎನ್.ಎ. ಹ್ಯಾರೀಸ್ ಅವರ ಹೆಸರು ಇದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ಅವರ ಹೆಸರನ್ನು ಕಲಬುರಗಿ ಕ್ಷೇತ್ರಕ್ಕೆ ಅಖೈರುಗೊಳಿಸಲಾಗಿದೆ.
ಶಿವಮೊಗ್ಗ ಕ್ಷೇತ್ರಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವರ ಪತ್ನಿ ಗೀತಾ ಶಿವರಾಜಕುಮಾರ್, ಬೆಂಗಳೂರು ಗ್ರಾಮಾಂತರಕ್ಕೆ ಡಿ.ಕೆ. ಸುರೇಶ್, ಮಂಡ್ಯ ಕ್ಷೇತ್ರಕ್ಕೆ ಸ್ಟಾರ್ ಚಂದ್ರು (ವೆಂಕಟೇರಮಣಗೌಡ), ಮೈಸೂರಿಗೆ ಲಕ್ಷ್ಮಣ್, ಹಾಸನಕ್ಕೆ ಶ್ರೇಯಸ್ ಪಟೇಲ್, ತುಮಕೂರಿಗೆ ಈಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮುದ್ದಹನುಮೇಗೌಡ, ಚಿಕ್ಕಬಳ್ಳಾಪುರಕ್ಕೆ ರಕ್ಷಾ ರಾಮಯ್ಯ ಅವರಿಗೆ ಟಿಕೆಟ್ ನೀಡುವುದಕ್ಕೆ ಗೊಂದಲವಿಲ್ಲ.
ಆದರೆ, ಉಡುಪಿ- ಚಿಕ್ಕಮಗಳೂರು ಕ್ಷೇತ್ರಕ್ಕೆ ಜಯಪ್ರಕಾಶ್ ಹೆಗ್ಡೆ ಪರಿಗಣಿಸಲಾಗಿದೆಯಾದರೂ, ಸ್ಥಳೀಯ ಕಾಂಗ್ರೆಸ್ಸಿಗರ ವಿರೋಧ ಇರುವ ಕಾರಣ ಜಿಲ್ಲಾಧ್ಯಕ್ಷ ಹಾಗೂ ಕಾಡಾ ಅಧ್ಯಕ್ಷರಾಗಿರುವ ಡಾ. ಅಂಶುಮಂತ್ ಅವರ ಹೆಸರು ಪರಿಗಣನೆಯಲ್ಲಿದೆ.



