ಗೋಲ್ಡನ್ ಸ್ಟಾರ್ ಗಣೇಶ್ ಅವರನ್ನು ಆರಾಧಿಸುತ್ತಿರುವ ಅಭಿಮಾನಿಗಳ ಪಾಡು.. ಕಳೆದ ಕೆಲವು ವರ್ಷಗಳಿಂದ ಮುಂಗಾರು ಮಳೆಯ ಪ್ರೀತಂನಂತೆಯೇ ಆಗಿದೆ. ಅವರು ಸಿಕ್ಕಲ್ಲ, ಇವರು ಬಿಡಲ್ಲ.. ಗೋಲ್ಡನ್ ಸ್ಟಾರ್ ಗಣೇಶ್ ಕೆಲವು ವರ್ಷಗಳಿಂದ ಹುಟ್ಟುಹಬ್ಬದ ದಿನದ ಸಂಭ್ರಮಕ್ಕೆ ಸಿಗುತ್ತಿಲ್ಲ. ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಈ ಬಾರಿಯೂ ಅಷ್ಟೆ, ಗಣೇಶ್ ಹುಟ್ಟುಹಬ್ಬದ ದಿನ ಅಂದ್ರೆ ಇಂದು ಜುಲೈ ೨ನೇ ತಾರೀಕು ಊರಲ್ಲಿ ಇಲ್ಲ. ಅಭಿಮಾನಿಗಳಿಗೆ ಸಿಗುವುದಿಲ್ಲ.
ನನ್ನ ಆತ್ಮೀಯ ಅಭಿಮಾನಿಗಳೇ, ಜುಲೈ 2ರಂದು ನಾನು ನನ್ನ ಬೆಂಗಳೂರು ನಿವಾಸದಲ್ಲಿ ಲಭ್ಯವಿಲ್ಲ. ಅದೇಕೋ ತಮ್ಮೊಂದಿಗೆ ನನ್ನ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕೆಂಬ ನನ್ನ ಹಂಬಲ ಈ ಬಾರಿಯೂ ಕೈಗೂಡುತ್ತಿಲ್ಲ. ಹೀಗಾಗಿ ನನ್ನ ಪ್ರೀತಿಯ ಅಭಿಮಾನಿಗಳು ಮನೆಯ ಬಳಿ ಬಾರದೇ ತಾವು ಇದ್ದಲ್ಲಿಂದಲೇ ನನ್ನನ್ನು ಹರಸಿ, ಆಶೀರ್ವದಿಸಿ. ಮುಂದಿನ ವರ್ಷ ಖಂಡಿತ ಒಟ್ಟಿಗೆ ಹುಟ್ಟುಹಬ್ಬ ಆಚರಿಸೋಣ. ಅನಾನುಕೂಲಕ್ಕೆ ಕ್ಷಮೆಯಿರಲಿ. ಎಂದಿನ ತಮ್ಮ ಅಭಿಮಾನದ ನಿರೀಕ್ಷೆಯೊಂದಿಗೆ, ನಿಮ್ಮವ ಗಣೇಶ
ಎಂದು ಪೋಸ್ಟ್ ಮಾಡಿ ಸುಮ್ಮನಾಗಿದ್ದಾರೆ ಗಣೇಶ್.
ಅಭಿಮಾನಿಗಳಿಗೆ ಇದು ಸಮಾಧಾನ ತಂದಿಲ್ಲ. ಪದೇ ಪದೇ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ತಪ್ಪಿಸಿಕೊಳ್ಳುತ್ತಿರೋ ಬಗ್ಗೆ ಅಸಮಾಧಾನ, ಆಕ್ರೋಶವಂತೂ ಇದೆ. ಆದರೆ.. ಬೇರೆ ಮಾರ್ಗವಿಲ್ಲ. ಎಲ್ಲಿದ್ದೀರೋ.. ಅಲ್ಲಿಂದಲೇ ಹ್ಯಾಪಿ ಬರ್ತ್ ಡೇ ಗಣೇಶ್ ಎಂದು ಹೇಳಿ..
ಗಣೇಶ್ ಅವರೇಕೆ ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ಸಿಕ್ಕದೆ ನಾಪತ್ತೆಯಾಗ್ತಾರೆ.. ಗೊತ್ತಿಲ್ಲ.



