ಸಿನಿಮಾಗಳಲ್ಲಿ ನಾಯಕ ನಟರಿಗೆ ನಿರ್ಮಾಪಕರಾದವರು ಸಂಭಾವನೆ ಕೊಡೋದನ್ನು ಕೇಳಿದ್ದೆವು. ಶೇರ್ ಕೊಡೋದನ್ನೂ ಕೇಳಿದ್ದೆವು. ಆದರೆ ಇದು ಹೊಸದು. ಅಂದಹಾಗೆ ಆರೋಪ ಮಾಡಿರುವುದು ಚಿತ್ರರಂಗದಲ್ಲಿ ನಿರ್ದೇಶಕರಾಗಿಯೂ ಗುರುತಿಸಿಕೊಂಡಿರುವ, ಪತ್ರಕರ್ತರೂ ಆಗಿದ್ದ ಚಕ್ರವರ್ತಿ ಚಂದ್ರಚೂಡ್. ಕನ್ನಡ ಚಿತ್ರರಂಗದ ಸ್ಟಾರ್ ನಟಿಯೊಬ್ಬರಿಗೆ ಹತ್ತಿರವಾಗಿ, ಈಗ ದೂರವಾಗಿರುವ ಚಕ್ರವರ್ತಿ ಚಂದ್ರಚೂಡ್, ನಟ ಸುದೀಪ್ ಅವರ ಆಪ್ತರೂ ಹೌದು.
ಹೀರೋಗಳು ಏನೇನೋ ಮಾಡ್ತಾರೆ. ಹೀರೋಗಳಿಗೆ ಯಾರ್‌ಯಾರೋ.. ಏನೇನೋ ಮಾಡ್ತಾರೆ. ಆದರೆ ಸಿನಿಮಾ ನಿರ್ಮಾಪಕರೇ ಹೀರೋಗಳಿಗೆ ಕಾಂಡೋಂ ತಂದು ಕೊಡ್ತಾರಂತೆ. ಆ ವ್ಯವಸ್ಥೆಯನ್ನೂ ಮಾಡ್ತಾರಾ ಹೇಗೆ.. ಏನು ಎಂದು ಬಿಡಿಸಿ ಹೇಳುವ ಅಗತ್ಯವಿಲ್ಲ.
ತಮಿಳಿನ ವಿಜಯ್ ಅಭಿನಯದ ಜನನಾಯಗನ್ ಸಿನಿಮಾ ಕೋರ್ಟಿನಲ್ಲಿದೆ. ಸದ್ಯಕ್ಕೆ ರಿಲೀಸ್ ಆಗುವ ಲಕ್ಷಣಗಳಿಲ್ಲ. ಪರಿಸ್ಥಿತಿ ನೋಡಿದರೆ ತಮಿಳುನಾಡು ಎಲೆಕ್ಷನ್ ಮುಗಿಯುವವರೆಗೂ ಸಿನಿಮಾ ರಿಲೀಸ್ ಆಗುವುದು ಅನುಮಾನ. ಸಿನಿಮಾದ ನಿರ್ಮಾಪಕರು ಕನ್ನಡದವರು. ಕೆವಿಎನ್ ಪ್ರೊಡಕ್ಷನ್ ಹೌಸ್‌ನ ವೆಂಕಟ್ ಚಿತ್ರದ ನಿರ್ಮಾಪಕರು. ಸಿನಿಮಾಗೆ ಸುಮಾರು 300 ಕೋಟಿ ಬಂಡವಾಳ ಹಾಕಿದ್ದಾರಂತೆ. ಈಗ ಸಿನಿಮಾ ರೆಡಿ. ಆದರೆ ರಿಲೀಸ್ ಮಾಡುವಂತಿಲ್ಲ. ಹಾಕಿದ್ದ ಅಷ್ಟೂ ಬಂಡವಾಳ ಕೊಳೆಯುತ್ತಿದೆ.
ಈ ಸಿನಿಮಾದ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್ಲಿನಲ್ಲಿ ಮಾತನಾಡಿದ್ದ ಚಕ್ರವರ್ತಿ ಚಂದ್ರಚೂಡ್ ʻʻಕೆಲವು ನಿರ್ಮಾಪಕರು ಹೀರೋಗಳ ವಿಚಾರ ಬಂದರೆ ಅವರ ಮನೆಯ ಕಮೋಡ್ ಕೂಡ ಚಿನ್ನದಲ್ಲಿ ನೋಡಿಕೊಳ್ಳುತ್ತಾರೆ. ಅವರ ಮನೆಗೆ ಕಾಂಡೋಮ್ ಕೂಡ ತೆಗೆದುಕೊಂಡು ಹೋಗುತ್ತಾರೆ. ಆದರೆ ತಂತ್ರಜ್ಞರು, ಲೈಟ್ ಬಾಯ್ಸ್, ಪ್ರೊಕ್ಷಡನ್ ಹುಡುಗರು, ರೈಟರ್ ವಿಚಾರ ಬಂದರೆ ಸರಿಯಾಗಿ ಹಣ ಕೊಡಲ್ಲ. ಹೇಳಿಕೊಳ್ಳೋಕೆ ಆಗಲ್ಲ. ದೊಡ್ಡ ದೊಡ್ಡ ನಿರ್ಮಾಪಕರು ಈ ರೀತಿ ಮಾಡುತ್ತಾರೆʼʼ ಎಂದು ಮಾತನಾಡಿದ್ದರು. ಕೊಟ್ಟಿದ್ದ ಹೆಡ್ ಲೈನ್/ಥಂಬ್ ಲೈನ್ ʻಕಮೋಡ್ ಟು ಕಾಂಡೋಂʼ. ಇದರ ಬಗ್ಗೆ ನಿರ್ಮಾಪಕರ ಸಂಘ ಆಕ್ರೋಶ ವ್ಯಕ್ತಪಡಿಸಿದೆ. ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದು, ಚಂದ್ರಚೂಡ್ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ನಿರ್ಮಾಪಕರ ಸಂಘದ ಹಿರಿಯ ನಿರ್ಮಾಪಕ ಕೆ ಮಂಜು, ನಟಿ, ನಿರ್ದೇಶಕಿ ಹಾಗೂ ನಿರ್ಮಾಪಕಿಯೂ ಆಗಿರುವ ಪ್ರಿಯಾ ಹಾಸನ್ ಮೊದಲಾದವರು ಕಿಡಿ ಕಾರಿದ್ದಾರೆ.
ಪ್ರಿಯಾ ಹಾಸನ್ : ಚಂದ್ರಚೂಡ್ ಅವರ ವಿಡಿಯೋ ನೋಡಿದಾಗ ನನಗೆ ಅಸಹ್ಯ ಅನಿಸಿತು. ಅಷ್ಟು ಅಸಭ್ಯವಾದ ಪದವನ್ನು ಅವರು ಬಳಸಿದ್ದಾರೆ. ಹೆಣ್ಮಕ್ಕಳು ಕೇಳಲು ಹಿಂಜರಿಯುವಂತಹ ಪದ ಬಳಕೆ ಮಾಡಿದ್ದಾರೆ. ಡಾ. ರಾಜ್ಕುಮಾರ್ ಅವರು ನಿರ್ಮಾಪಕರನ್ನು ಅನ್ನದಾತರು ಎಂದಿದ್ದರು. ಆದರೆ ಈಗ ಚಂದ್ರಚೂಡ್ ಇಷ್ಟು ಹೀನಾಯವಾಗಿ ಮಾತನಾಡಿರುವುದು ಎಲ್ಲ ನಿರ್ಮಾಪಕರ ಮನಸ್ಸಿಗೆ ನೋವು ಉಂಟುಮಾಡಿದೆ.
ಕೆ ಮಂಜು : ಗೊತ್ತಿಲ್ಲದೇ ಏನೇನೋ ಮಾತನಾಡಬಾರದು. ಹೀರೋಗೆ ನಿರ್ಮಾಪಕರು ಕಾಂಡೋಮ್ ಕೊಟ್ಟಿದ್ದಾರೆ ಅಂತ ಚಂದ್ರಚೂಡ್ ಹೇಳಿದ್ದಾರೆ. ಅದನ್ನು ಇವರು ನೋಡಿದ್ದಾರಾ? ಅಂಥ ನಿರ್ಮಾಪಕ ಯಾರು ಅನ್ನೋದು ಹೇಳಿದರೆ ಅಂಥವರನ್ನು ನಾವು ದೂರ ಇಡುತ್ತೇವೆ.ದು ಚಂದ್ರಚೂಡ್ ಅವರ ದುರಹಂಕಾರದ ಪರಮಾವಧಿ. ತಮ್ಮ ಯೂಟ್ಯೂಬ್ನಲ್ಲಿ ನೋಡುಗರ ಸಂಖ್ಯೆ ಜಾಸ್ತಿ ಮಾಡಿಕೊಳ್ಳಲು ಹೇಳಿರಬಹುದು. ಆ ರೀತಿ ಆಗಬಾರದು. ನಿರ್ಮಾಪಕರ ಕಷ್ಟ ಏನು ಎಂಬುದು ನಿರ್ಮಾಪಕರಿಗೆ ಮಾತ್ರ ಗೊತ್ತು. ಕಳೆದ 3 ತಿಂಗಳಿಂದ ಸುಮಾರು 200 ಕೋಟಿ ರೂಪಾಯಿ ನಷ್ಟ ಆಗಿದೆ. ಇನ್ನು 9 ತಿಂಗಳು ಲೆಕ್ಕ ಹಾಕಿಕೊಳ್ಳಿ. ನಿರ್ಮಾಪಕರು ಸಂಕಷ್ಟದಲ್ಲಿ ಇದ್ದಾರೆ. ನೀವು ಯಾಕೆ ಈ ರೀತಿ ಮಾತನಾಡುತ್ತೀರಿ.
ಈ ವಿಷಯದ ಬಗ್ಗೆ ಚಂದ್ರಚೂಡ್ ಸ್ಪಷ್ಟನೆಯನ್ನೂ ಕೊಟ್ಟಿದ್ದು ʻʻನಾನು ಮಾತನಾಡಿರುವುದು ತಮಿಳು ಸಿನಿಮಾ, ಅಲ್ಲಿಯ ವಾತಾವರಣ, ರಾಜಕೀಯ ವ್ಯವಸ್ಥೆಯ ಬಗ್ಗೆ ಹೊರತು ಕನ್ನಡ ನಿರ್ಮಾಪಕರ ಬಗ್ಗೆ ಆಗಲಿ ಕನ್ನಡ ಚಿತ್ರ ರಂಗದ ಬಗ್ಗೆ ಅಲ್ಲವೇ ಅಲ್ಲ. ಅಲ್ಲದೆ “ಕಮೋಡ್ ಟು ಕಾಂಡೋಮ್” ಅನ್ನುವ ಉಪಮೆಯನ್ನು ಬಳಸಿದ್ದೇನೆ ಅಷ್ಟೇ ವಿನಃ ಯಾವುದೇ ನಿರ್ಮಾಪಕರ ವಿರುದ್ಧ ಅಲ್ಲ. ಜೊತೆಗೆ ಒಬ್ಬ ಕನ್ನಡ ನಿರ್ಮಾಪಕ ತಮಿಳು ರಾಜಕೀಯಕ್ಕೆ ಹೇಗೆ ಸಿಲುಕಿದ್ದಾರೆ ಎಂಬ ಹಿನ್ನೆಲೆಯಲ್ಲಿ ಧ್ವನಿ ಎತ್ತಿದ್ದೇನೆ. ತಮಿಳು ಚಿತ್ರ ರಂಗದಲ್ಲಿಯೂ ಕೆಲಸ ಮಾಡಿದ ಅನುಭವ ಇರುವುದರಿಂದ ಅಲ್ಲಿ ನಾಯಕ ಕೇಂದ್ರೀತ ವಾತಾವರಣ ಹೇಗಿದೆ ಮತ್ತು ಅದರ ಪರಿಣಾಮಗಳನ್ನು ವಿವರಿಸಿದ್ದೇನೆʼʼ ಎಂದಿದ್ದಾರೆ.
ಚಂದ್ರಚೂಡ್ ಅವರು ಡೈರೆಕ್ಟರ್ ಅಗಿದ್ದರೂ, ಚಿರಪರಿಚಿತ ಮುಖವಲ್ಲ. ವಾಸ್ತವವಾಗಿ ಸುದೀಪ್ ಅವರೊಂದಿಗೆ ಇರುತ್ತಾರೆ ಎಂಬುದನ್ನು ಬಿಟ್ಟರೆ ಪ್ರತ್ಯೇಕ ಐಡೆಂಟಿಟಿ ಇಲ್ಲ. ಹೀಗಾಗಿ ಸುದೀಪ್ ಅವರ ಹೆಸರೂ ಥಳುಕು ಹಾಕಿಕೊಂಡಿದೆ. ‘ಸುದೀಪ್ ಅವರಿಗೆ ಇಂಥದ್ದೆಲ್ಲ ಗೊತ್ತಿರಲ್ಲ. ಈ ರೀತಿ ಆದರೆ ಇಂಥವರನ್ನು ಅವರು ಹತ್ತಿರಕ್ಕೆ ಸೇರಿಸಿಕೊಳ್ಳಲ್ಲ. ಯಾಕೆಂದರೆ ಸುದೀಪ್ ಅವರು ಕ್ಲೀನ್ ವ್ಯಕ್ತಿ ಎಂದು ಕಿಚ್ಚ ಸುದೀಪ್‌ಗೆ ಕ್ಲೀನ್ ಚಿಟ್ ಕೊಟ್ಟಿದ್ದಾರೆ ಕೆ ಮಂಜು.



