ನಾನು ರಾಜಕೀಯಕ್ಕೆ ಬಂದಿದ್ದೇ ಮಂಡ್ಯಕ್ಕಾಗಿ. ಮಂಡ್ಯ ಬಿಟ್ಟು ಬೇರೆ ಕಡೆ ಸ್ಪರ್ಧೆ ಮಾಡುವ ಯೋಚನೆ ಕೂಡಾ ನನಗಿಲ್ಲ.
ಕಾಂಗ್ರೆಸ್ಸಿನವರು ಆಹ್ವಾನ ಕೊಟ್ಟಿರುವುದಂತೂ ಹೌದು. ಆದರೆ ನಾನು ಕಾಂಗ್ರೆಸ್ಸಿಗೆ ಹೋಗುತ್ತಿಲ್ಲ.
ನರೇಂದ್ರ ಮೋದಿಯವರ ಬಗ್ಗೆ ವಿಶ್ವಾಸ ಇದೆ. ಅಭಿಮಾನ ಇದೆ.
ಸುಮಲತಾ ಅವರು ಹೇಳಿರುವ ಪ್ರಮುಖ ವಿಷಯಗಳು ಇವು. ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ ಮುಖಂಡರು ತಮ್ಮನ್ನು ಭೇಟಿ ಮಾಡಿದ ಬಳಿಕ ಸುಮಲತಾ ಈ ಮಾತು ಹೇಳಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರವನ್ನು ಬಿಟ್ಟು ಬೇರೆ ಕಡೆ ಸ್ಪರ್ಧಿಸುವುದಿಲ್ಲ. ಅಂಬರೀಷ್ ಅವರನ್ನು ಮಂಡ್ಯದ ಜನತೆ ಅತ್ಯಧಿಕ ಮತಗಳಿಂದ ಗೆಲ್ಲಿಸಿದ್ದಾರೆ. ಅಂತೆಯೇ ನನಗೂ ಆಶೀರ್ವಾದ ಮಾಡಿದ್ದಾರೆ. ನಾನು ರಾಜಕೀಯಕ್ಕೆ ಬಂದಿರುವುದೇ ಮಂಡ್ಯಕ್ಕಾಗಿ. ಮಂಡ್ಯ ಲೋಕಸಭಾ ಕ್ಷೇತ್ರವನ್ನು ಬಿಟ್ಟು ಹೋಗುವುದಿಲ್ಲ. ಅಭಿಮಾನ, ಪ್ರೀತಿ ಸಿಕ್ಕಿರುವ ಕ್ಷೇತ್ರ ಬಿಟ್ಟು ಬೇರೆ ಕಡೆ ಹೋದರೆ ಅದಕ್ಕೆ ಯಾವುದೇ ಅರ್ಥ ಇರಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಸಂಸದೆ ಸುಮಲತಾ ಅಂಬರೀಷ್.
ಮಂಡ್ಯದಲ್ಲಿಯೇ ಸ್ಪರ್ಧಿಸುತ್ತೇನೆ. ಇಲ್ಲವಾದರೆ ಸ್ಪರ್ಧಿಸುವುದು ಬೇಕಾಗಿಲ್ಲ ಎಂದು ಹೇಳಿರುವ ಸುಮಲತಾ ಕಾಂಗ್ರೆಸ್‌ನಿಂದ ಲೋಕಸಭಾ ಚುನಾವಣೆಗೆ ಪ್ರಯತ್ನ ಪಟ್ಟಿದ್ದೇನೆ ಎಂಬುದೆಲ್ಲ ಸತ್ಯಕ್ಕೆ ದೂರ. ನನ್ನ ಗೆಲುವಿಗೆ ಶ್ರಮಪಟ್ಟಿರುವವರಲ್ಲಿ ಪ್ರಮುಖವಾಗಿ ಕಾಂಗ್ರೆಸ್ಸಿಗರು ಸಹ ಇದ್ದಾರೆ. ಅವರಿಗೆ ಅಂಬರೀಷ್ ಕುಟುಂಬದ ಮೇಲೆ ವಿಶ್ವಾಸ ಇದೆ. ಅದೇ ವಿಶ್ವಾಸದ ಮೇಲೆ ಆಂತರಿಕವಾಗಿ ಕಾಂಗ್ರೆಸ್‌ಗೆ ಬರುವಂತೆ ಆಹ್ವಾನ ಬಂದಿದೆ. ಆದರೆ ನಾನು ಕಾಂಗ್ರೆಸ್‌ಗೆ ಹೋಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ಧಾರೆ.
ಈ ಹಿಂದೆ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಬಗ್ಗೆಯೂ ಮಾತನಾಡಿದ್ದ ಸುಮಲತಾ, ಡಿಕೆ ಶಿವಕುಮಾರ್ ಅವರ ಕಾರಣದಿಂದಲೇ ನಾನು ಕಾಂಗ್ರೆಸ್ಸಿಗೆ ಹೋಗುತ್ತಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದರು. ಸಿದ್ದರಾಮಯ್ಯ ಅವರ ಸ್ವಲ್ಪ ಮೃದುವಾಗಿ ಮಾತನಾಡಿದ್ದ ಸುಮಲತಾ, ಮಂಡ್ಯದಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡ್ತಾರಾ.. ಅಥವಾ ಪಕ್ಷೇತರರಾಗಿಯೇ ಸ್ಪರ್ಧೆ ಮಾಡ್ತಾರಾ ಅನ್ನೋ ಕುತೂಹಲವಂತೂ ಇದೆ. ಅದಕ್ಕೆ ಕಾರಣ ಕಳೆದ ಬಾರಿ ಶತ್ರು ಪಕ್ಷವಾಗಿದ್ದ ಜೆಡಿಎಸ್ ಹಾಗೂ ಬಿಜೆಪಿ ಈ ಬಾರಿ ಮಿತ್ರ ಪಕ್ಷಗಳು. ಮಂಡ್ಯದಿಂದಲೇ ಸ್ಪರ್ಧೆ ಮಾಡಿ ಎಂಬ ಒತ್ತಡ ಈಗಾಗಲೇ ಕುಮಾರಸ್ವಾಮಿ, ನಿಖಿಲ್ ಅವರಿಗೆ ಕೇಳಿ ಬರ್ತಾ ಇದೆ. ಈ ನಡುವೆಯೇ ಸುಮಲತಾ ಅವರನ್ನು ಸುಮಲತಾ ಅವರ ಬೆಂಬಲಿಗರು, ಸಂಘಟನೆಗಳು ಭೇಟಿ ಮಾಡುತ್ತಿವೆ. ಜೊತೆಯಲ್ಲೇ ಮಂಡ್ಯ ಜಿಲ್ಲೆಯ ಬಿಜೆಪಿ ಮುಖಂಡರೂ ಭೇಟಿ ಮಾಡಿ ಸುಮಲತಾ ಅವರ ಜೊತೆ ಮಾತುಕತೆ ನಡೆಸಿದ್ದಾರೆ.
ಹಾಲಿ ಸಂಸದರು ಎಂಬ ಸ್ಥಾನಮಾನ ಇದೆ. ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡುವುದು ವಾಡಿಕೆ. ಮೊದಲ ಬಾರಿಗೆ ಮಂಡ್ಯದಲ್ಲಿ ಹೆಚ್ಚು ಮತಗಳು ಲಭಿಸಿವೆ. ಮಂಡ್ಯದಲ್ಲಿ ಬಿಜೆಪಿಯನ್ನು ಉಳಿಸಬೇಕಾಗಿದ್ದು, ನಾವು ಗೆಲುವು ಸಾಧಿಸುತ್ತೇವೆ. ನಾನೇನು ದೊಡ್ಡ ನಾಯಕಿ ಎಂದು ಹೇಳುತ್ತಿಲ್ಲ. ನನಗಿಂತ ದೊಡ್ಡವರಿದ್ದಾರೆ. ಆದರೆ ನಾನು ನನ್ನ ಕೆಲಸವನ್ನು ಮಾಡಿದ್ದೇನೆ. ನನ್ನ ಜತೆ ನನ್ನ ಅಭಿಮಾನಿಗಳು ಮತ್ತು ಮಂಡ್ಯದ ಜನತೆ ಇದ್ದಾರೆ ಎಂಬ ನಂಬಿಕೆ ಇದೆ ಎಂದು ಹೇಳಿದ್ದಾರೆ ಸುಮಲತಾ.
ಕೇಂದ್ರದ ಯೋಜನೆಗಳನ್ನು ಕ್ಷೇತ್ರದಲ್ಲಿ ಅನುಷ್ಠಾನಗೊಳಿಸಲು ಸಮರ್ಪಕವಾಗಿ ಕೆಲಸ ಮಾಡಿದ್ದೇನೆ. ಅನುದಾನ ಬಳಕೆ ಮಾಡಿಕೊಂಡು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗಿದೆ. ನನ್ನ ಬಗ್ಗೆ ಕಪ್ಪುಚುಕ್ಕೆ ಇಲ್ಲ. ಸಂಸತ್‌ನಲ್ಲಿ ಮಾತನಾಡಿರುವ ವಿಷಯಗಳಲ್ಲಿಯೂ ಸಮರ್ಥವಾಗಿ ನಿಭಾಯಿಸಿದ್ದೇನೆ. ಹೀಗಾಗಿ ಬಿಜೆಪಿಯೇ ಮಂಡ್ಯ ಜಿಲ್ಲೆಯ ಸ್ಥಾನವನ್ನು ಉಳಿಸಿಕೊಳ್ಳಲಿದೆ ಎಂಬ ನಂಬಿಕೆ ಇದೆ. ಖಂಡಿತವಾಗಿಯೂ ಬಿಜೆಪಿ ನನಗೆ ಟಿಕೆಟ್ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಂಡ್ಯವನ್ನ ಸುಮಲತಾಗೆ ಬಿಟ್ಟುಕೊಡಿ : ನಾರಾಯಣ ಗೌಡ
ಮಂಡ್ಯ ಲೋಕಸಭಾ ಕ್ಷೇತ್ರವು ಮಾಜಿ ಸಚಿವ ಅಂಬರೀಶ್ ಹುಟ್ಟೂರು ಹಾಗೂ ತವರು ಕ್ಷೇತ್ರವಾಗಿದೆ. ಆದರೆ, ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ರಾಮನಗರ ಜಿಲ್ಲೆ ಲಕ್ಕಿ ಕ್ಷೇತ್ರವಾಗಿದೆ. ಆದ್ದರಿಂದ ನೀವು ಸಿಟ್ಟಿಂಗ್ ಎಂಪಿ ಹಾಗೂ ಅಂಬರೀಶ್ ಅವರ ಪತ್ನಿ ಸುಮಲತಾ ಅವರಿಗೆ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಬಿಟ್ಟುಕೊಡಬೇಕು ಎಂದು ಮೈತ್ರಿ ಪಕ್ಷದ ಮುಖ್ಯಸ್ಥರಾದ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಹೆಚ್.ಡಿ. ಕುಮಾರಸ್ವಾಮಿ ಅವರ ಬಳಿ ಮನವಿ ಮಾಡುತ್ತೇವೆ ಎಂದು ಮಾಜಿ ಸಚಿವ ಕೆ.ಸಿ. ನಾರಾಯಣಗೌಡ ತಿಳಿಸಿದ್ದಾರೆ.



