ಸಿಎಂ ಸಿದ್ಧರಾಮಯ್ಯ ವಿರುದ್ಧ ಮುಡಾ ಹಗರಣ ಇನ್ನೂ ಮುಕ್ತಿ ಕಂಡಿಲ್ಲ. ಸಿಎಂ ಬೆನ್ನಿಗೆ ಹೈಕಮಾಂಡ್ ನಿಂತಿದೆ. ಸಚಿವರು, ಶಾಸಕರು ಎಲ್ಲರೂ ಇದ್ದಾರೆ. ಆದರೆ.. ಒಳಗೊಳಗೇ ಒಂದು ಆಸೆಯಂತೂ ಇದೆ. ಹೀಗಾಗಿಯೇ ಪೈಪೋಟಿಯೂ ಶುರುವಾಗಿದೆ. ಆರ್.ವಿ.ದೇಶಪಾಂಡೆ, ಪರಮೇಶ್ವರ್, ಸತೀಶ್ ಜಾರಕಿಹೊಳಿ ಪದೇ ಪದೇ ದೆಹಲಿಗೆ ಹೋಗಿ ಬರುತ್ತಿದ್ದಾರೆ. ಇದ್ದಕ್ಕಿದ್ದಂತೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಹೆಸರೂ ಕೇಳಿ ಬರ್ತಿದೆ. ಆದರೆ.. ರೇಸಿನಲ್ಲಿರುವ ಬಹುತೇಕರಿಗೆ ಕಂಟಕಗಳೂ ಶುರುವಾಗಿವೆ.
ಮಲ್ಲಿಕಾರ್ಜುನ ಖರ್ಗೆ : ಸಿದ್ದರಾಮಯ್ಯ ಅವರು ಅಧಿಕಾರದಿಂದ ಕೆಳಗಿಳಿದಿದ್ದೇ ಆದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸ್ಥಾನಕ್ಕೆ ಪರಿಗಣಿಸಬಹುದು ಎಂದು ಹೇಳಲಾಗುತ್ತಿತ್ತು. ಆದರೆ, ಇದೀಗ ಖರ್ಗೆ ಕುಟುಂಬದ ವಿರುದ್ಧ ಕೆಐಎಡಿಬಿ ನಿವೇಶನ ಹಂಚಿಕೆ ವಿವಾದ ಕೇಳಿ ಬಂದಿದೆ. ಅದು ತೀವ್ರ ಸ್ವರೂಪಕ್ಕೆ ತಿರುಗುತ್ತಿದೆ. ಕೌಂಟರ್ ಮಾಡೋಕೆ ಹೋಗಿರುವ ಪ್ರಿಯಾಂಕ್ ಖರ್ಗೆ, ಹಳಿ ತಪ್ಪುತ್ತಿದ್ದಾರೆ. ಅದನ್ನು ಛಲವಾದಿ ನಾರಾಯಣ ಸ್ವಾಮಿ ಶಕ್ತಿಯನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಖರ್ಗೆಯವರಿಗೆ ಅನುಭವ, ಅರ್ಹತೆ ಎಲ್ಲ ಇದ್ದೂ ಒಂದಲ್ಲ ಒಂದು ಕಾರಣಕ್ಕೆ ಹಲವು ವರ್ಷಗಳಿಂದ ಸಿಎಂ ಸ್ಥಾನ ಮಿಸ್ ಮಾಡಿಕೊಳ್ಳುತ್ತಿದ್ದಾರೆ.
ಎಂ.ಬಿ.ಪಾಟೀಲ್ : ಮತ್ತೊಂದೆಡೆ ಕೈಗಾರಿಕಾ ಸಚಿವ ವಿರುದ್ಧವೂ ಆರೋಪ ಕೇಳಿ ಬಂದಿದೆ. ಅವರೂ ಅಕ್ರಮವಾಗಿ ಭೂಮಿ ಪಡೆದ ಆರೋಪ ಎದುರಿಸುತ್ತಿದ್ದಾರೆ. ಸಿಎಂ ರೇಸಿನಲ್ಲಿ ಇದ್ದಾರೆ ಎಂಬ ಕಾರಣಕ್ಕೇ ಎಂಬಿ ಪಾಟೀಲ್ ವಿರುದ್ಧ ಆರೋಪಗಳು ಕೇಳಿ ಬಂದವಾ..? ಎಂಬಿ ಪಾಟೀಲರಿಗೆ ಎದುರಾಗಿ ಸವಾಲ್ ಹಾಕುತ್ತಿರುವುದು ಮುರುಗೇಶ್ ನಿರಾಣಿ.
ಆರ್.ವಿ.ದೇಶಪಾಂಡೆ : ಮುಖ್ಯಮಂತ್ರಿ ಹುದ್ದೆಗೇರಲು ತಮಗೂ ಆಸೆ ಇದೆ ಎಂದು ಬಹಿರಂಗವಾಗಿ ಹೇಳಿರುವ ದೇಶಪಾಂಡೆ ಅವರಿಗೆ ಅವರ ಜಾತಿಯೇ ಮುಳುವಾಗಬಹುದು.ಆರ್.ವಿ.ದೇಶಪಾಂಡೆ ಬ್ರಾಹ್ಮಣರು. ಇದ್ದಕ್ಕಿದ್ದಂತೆ ದಿಢೀರ್ ಎಂದು ಹೆಸರು ಬಂದ ಕಾರಣ, ಅವರಿಗಿನ್ನೂ ಕಂಟಕಗಳು ಶುರುವಾಗಿಲ್ಲ.
ಪರಮೇಶ್ವರ್ : ಪರಮೇಶ್ವರ್ ದಲಿತರು. ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ, ಸ್ವತಃ ಸೋತಿದ್ದ ಕಾರಣಕ್ಕೆ ಸಿಎಂ ಪಟ್ಟಕ್ಕೇರಲು ಸಾಧ್ಯವಾಗಲಿಲ್ಲ. ರೇಸಿನಲ್ಲೇನೋ ಇದ್ದಾರೆ. ದಲಿತ ಎನ್ನುವ ಶಕ್ತಿಯೂ ಇದೆ. ಹೈಕಮಾಂಡ್ ನಾಯಕರ ಜೊತೆ ಮಾತನಾಡುತ್ತಿದ್ದಾರೆ. ಆದರೆ, ಪರಮೇಶ್ವರ್ ಅವರು ತಾವು ರೇಸಿನಲ್ಲಿದ್ದೇನೆ ಎಂದು ಹೇಳಿಕೊಳ್ಳಲ್ಲ. ಇದೇ ಅವರಿಗೆ ಮೈನಸ್ ಆಗಬಹುದು. ಇತ್ತೀಚೆಗೆ ನಡೆದಿರುವ ಕೆಲವು ಪ್ರಕರಣಗಳು ಪರಮೇಶ್ವರ್ ಅವರಿಗೆ ಪರಿಸ್ಥಿತಿ ನಿಭಾಯಿಸಲು ಬರುವುದಿಲ್ಲ ಎಂಬ ವಾತಾವರಣ ಗಟ್ಟಿಗೊಳಿಸಿವೆ.
ಸತೀಶ್ ಜಾರಕಿಹೊಳಿ : ಬೆಳವಾಗಿಯ ನಾಯಕ. ನಾಯಕ ಸಮುದಾಯದವರು. ಸಿದ್ಧರಾಮಯ್ಯ ಎಸ್ ಎಂದರೆ, ಮುಂದಕ್ಕೆ ಹೆಜ್ಜೆ ಇಡುವವರು. ಖರ್ಗೆಯವರು ಸಿಎಂ ಆಗುವುದಾದರೆ ನೋ ಎನ್ನುವವರಲ್ಲ. ಆದರೆ, ಅದೇ ಮಾತನ್ನು ಡಿಕೆ ಶಿವಕುಮಾರ್ ಹೆಸರು ಬಂದರೆ ಹೇಳುವವರಲ್ಲ.
ಹೆಚ್.ಸಿ.ಮಹದೇವಪ್ಪ : ದಲಿತ ನಾಯಕ. ಸಿದ್ಧರಾಮಯ್ ಎಸ್ ಅಂದ್ರೆ ಎಸ್, ನೋ ಅಂದ್ರೆ ನೋ ಎನ್ನುವ ನಾಯಕ.
ಇವರಿಬ್ಬರೂ ಎದುರಾಳಿ ನಾಯಕರ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಎಂಬ ಆರೋಪವೂ ಇದೆ.
ಡಿಕೆ ಶಿವಕುಮಾರ್ : ಸಿದ್ಧರಾಮಯ್ಯ ಏನಾದರೂ ಕೆಳಗಿಳಿದರೆ.. ಡಿಕೆ ಶಿವಕುಮಾರ್ ಅವರಿಗೆ ಸ್ಥಾನ ಎನ್ನುವ ವಾತಾವರಣ ಏನೋ ಇದೆ. ಆದರೆ, ಅದು ಅಷ್ಟು ಸುಲಭ ಅಲ್ಲ. ಸದ್ಯಕ್ಕೆ ಸಿಎಂ ಪೋಸ್ಟ್ ಖಾಲಿ ಇಲ್ಲ ಎನ್ನುತ್ತಾ ಸಿಎಂ ರೇಸ್ ವೇಗವನ್ನು ತಣ್ಣಗೆ ಮಾಡುತ್ತಿರುವ ನಾಯಕ.



