ಕಾಟೇರದಲ್ಲಿ ಒಂದು ದೃಶ್ಯದಲ್ಲಿ ಭಕ್ತ ಪ್ರಹ್ಲಾದ ಚಿತ್ರದ ಹಿರಣ್ಯಕಶಿಪು ಡೈಲಾಗ್ ಹೇಳ್ತಾರೆ ನಟ ದರ್ಶನ್. ಅಂದರೆ ಸಿನಿಮಾದಲ್ಲಿ ಭಕ್ತ ಪ್ರಹ್ಲಾದ ನಾಟಕ ಮಾಡ್ತಾ ಇರ್ತಾರೆ. ನಾನೂ ಆ ಪಾತ್ರ ಮಾಡಬೇಕು ಅನ್ನೋದು ಬಿರಾದಾರ್ ಆಸೆ. ಅದನ್ನು ದರ್ಶನ್ ಬಳಿ ಹೇಳಿಕೊಂಡಾಗ.. ನಾಟಕದ ಮೇಷ್ಟನ್ನೇ ಬೆದರಿಸುತ್ತಾನೆ ಕಾಟೇರ. ಆಗಲೇ ಪ್ರೇಕ್ಷಕರಿಗೆ ಗೊತ್ತಾಗೋದು, ಬಿರಾದಾರ್ʻಗೆ ಮಾತು ಬರಲ್ಲ, ಅವನು ಮೂಗ ಅನ್ನೋದು.
ಕಾಟೇರನಿಗೆ ಅದೂ ಗೊತ್ತಿರುತ್ತೆ. ಆದರೆ ಬಿರಾದಾರ್ʻಗೆ ನಟಿಸುವಂತೆ ಮಾಡಬೇಕು. ಅತ್ತ ಹಿರಣ್ಯಕಶಿಪು ಪಾತ್ರಧಾರಿಯೋ ಕುಮಾರ್ ಗೋವಿಂದ್. ಕಾಟೇರನ ಅಕ್ಕ ಶೃತಿಯ ಗಂಡ. ಬಾವ. ಅಂತಹ ಬಾವ ಮಾಡುತ್ತಿದ್ದ ಪಾತ್ರವನ್ನು, ಮೂಗ ಬಿರಾದಾರ್ʻಗೆ ಕೊಡಿಸುತ್ತಾನೆ. ನಾಟಕದ ಪರದೆಯ ಹಿಂದೆ ಬಿರಾದಾರ್ ಅಭಿನಯಿಸುತ್ತಿದ್ದರೆ, ತೆರೆಯ ಹಿಂದೆ ಮೂಗ ಬಿರಾದಾರ್ʻಗೆ ಧ್ವನಿಯಾಗಿ ಭಕ್ತ ಪ್ರಹ್ಲಾದನ ಡೈಲಾಗ್ ಹೇಳುವುದು ದರ್ಶನ್ ಪಾತ್ರಧಾರಿ ಕಾಟೇರ.
ಭಕ್ತ ಪ್ರಹ್ಲಾದ ಚಿತ್ರದ ಫೇಮಸ್ ಸೀನ್ ಇದೆಯಲ್ಲ, ನಾ ಅಡಿಯಿಟ್ಟರೆ ಬಿರಿಯುವುದು ಭೂಮಿ.. ಆ ಸುದೀರ್ಘ ಡೈಲಾಗ್ ಹೇಳಿದ್ದನ್ನು ನೋಡಿದವರಿಗೆ ದರ್ಶನ್ ಅವರ ಬಗ್ಗೆ ಪ್ರೀತಿ ಇಮ್ಮಡಿಯಾಗಿದ್ದರೆ ಆಶ್ಚರ್ಯವಿಲ್ಲ. ಹೀಗಾಗಿಯೇ ಕಾಟೇರ ನೋಡಿದ ನಂತರ ವರನಟ ಡಾ. ರಾಜ್ ಕುಮಾರ್ ಅವರ ಸಾಧನೆಗೆ ನಟ ದರ್ಶನ್ ಅವರನ್ನು ಹೋಲಿಸಲಾಗುತ್ತಿದೆ. ಅದಕ್ಕೆಲ್ಲ ಕಾರಣವಾಗಿದ್ದು ಕಾಟೇರ ಅನ್ನೋದರಲ್ಲಿ ಎರಡು ಮಾತಿಲ್ಲ. ಚಿತ್ರದ ಕಥಾ ಹಂದರ ಹಾಗೂ ಅದನ್ನು ಪ್ರೆಸೆಂಟ್ ಮಾಡಿದ ರೀತಿಗಷ್ಟೇ ಅಲ್ಲ, ದರ್ಶನ್ ಅಭಿನಯವೂ ಮೆಚ್ಚುಗೆಗೆ ಪಾತ್ರವಾಗಿದೆ. ಹೀಗಾಗಿಯೇ ಚಿತ್ರದ ಸಕ್ಸಸ್ ಪ್ರೆಸ್ʻಮೀಟ್ʻನಲ್ಲಿ ನಟ ದರ್ಶನ್ ಅವರನ್ನು ರಾಜ್ ಅವರಿಗೆ ಹೋಲಿಸಿ ಪ್ರಶ್ನೆ ಕೇಳಲಾಗಿದೆ.
ಇದನ್ನು ನೆನಪಿಸಿಯೇ ದರ್ಶನ್ ಅವರಿಗೆ ಡಾ.ರಾಜ್ ಅವರಿಗೆ ಹೋಲಿಕೆ ಮಾಡಿ ಪ್ರಶ್ನೆ ಮಾಡಲಾಗಿದೆ. ಅದಕ್ಕೆ ದರ್ಶನ್ ಕೊಟ್ಟಿರುವ ಉತ್ತರ ಡಾ. ರಾಜ್‌ಕುಮಾರ್ ಅವರ ಹೆಸರು ಹೇಳುವುದಕ್ಕೆ ಅಲ್ಲ, ಅವರ ಕಾಲು ಧೂಳಿಗೂ ನಾವು ಸಮ ಅಲ್ಲ. ಪ್ರಯತ್ನ ಮಾಡಬಹುದು. ಆದರೆ ಅವರು ಮಾಡಿದ್ದರಲ್ಲಿ ಶೇಕಡ 0.001ರಷ್ಟು ಕೂಡ ನಾವು ಮಾಡಿಲ್ಲ ಎಂದಿದ್ದಾರೆ.
ದರ್ಶನ್ ಅವರು ನಟಿಸಿರುವುದು 50+ ಸಿನಿಮಾಗಳಲ್ಲಿ. ಅವುಗಳಲ್ಲಿ ಒಂದೇ ಮಾದರಿಯ ಚಿತ್ರಗಳು ಸುಮಾರು 30ರಿಂದ 35 ಇವೆ. ಅಂತಹ ದರ್ಶನ್ ಅವರಿಗೆ 200+ ಸಿನಿಮಾ ಮಾಡಿದ, 150ಕ್ಕೂ ಹೆಚ್ಚು ವಿಭಿನ್ನ ಪಾತ್ರಗಳಲ್ಲಿ ನಟಿಸಿದ ಡಾ.ರಾಜ್ ಅವರಿಗೆ ಹೋಲಿಸುವುದೇ ತಪ್ಪು. ದರ್ಶನ್ ಅವರನ್ನಷ್ಟೇ ಅಲ್ಲ, ಚಿತ್ರರಂಗದ ಯಾರನ್ನೇ ಆಗಲೀ.. ಡಾ.ರಾಜ್ ಅವರಿಗೆ ಹೋಲಿಸಲೂ ಬಾರದು.
ಖುದ್ದು ಡಾ.ರಾಜ್ ಮಗ ಶಿವಣ್ಣ ಕೂಡಾ ಸೇರಿದಂತೆ ಯಾರೊಬ್ಬರನ್ನೂ ಹೋಲಿಸಬಾರದು ಕೂಡಾ. ರಾಜ್ ಅವರ ಸಮಕಾಲೀನರಾದ ಎನ್ʻಟಿಆರ್, ಎಂಜಿಆರ್, ಶಿವಾಜಿ ಗಣೇಶನ್, ಅಕ್ಕಿನೇನಿ ನಾಗೇಶ್ವರ ರಾವ್ ಮೊದಲಾದವರೇ ಡಾ.ರಾಜ್ ಅವರನ್ನು ತಮಗಿಂತ ಶ್ರೇಷ್ಟ ಕಲಾವಿದ ಎಂದು ಹೊಗಳಿರುವಾಗ ಮತ್ತೇನು ಹೇಳಬೇಕಿದೆ.
ಹಾಗೆ ನೋಡಿದರೆ ಒಬ್ಬ ಕಲಾವಿದರನ್ನು ಇನ್ನೊಬ್ಬ ಕಲಾವಿದರ ಜೊತೆ ಹೋಲಿಸುವುದೇ ಹಾಸ್ಯಾಸ್ಪದ. ಪ್ರತಿಯೊಬ್ಬ ನಟನಿಗೂ ಪ್ಲಸ್ ಮತ್ತು ಮೈನಸ್ಸುಗಳಿರುತ್ತವೆ. ಆತ ಅಥವಾ ಆಕೆ ಆ ಮೈನಸ್ಸುಗಳನ್ನು ಮೀರಬೇಕು. ಪ್ಲಸ್ಸುಗಳು ಎದ್ದು ಕಾಣುವಂತೆ ನಟಿಸಬೇಕು. ನ್ಯೂನತೆಗಳನ್ನು ಮೀರಿ ಗೆಲ್ಲಬೇಕು. ಅಷ್ಟೆ.
ಇನ್ನು ದರ್ಶನ್ ಸೇರಿ ಈಗಿನ ಅನೇಕ ಕಲಾವಿದರಿಗೆ ಸ್ಫೂರ್ತಿಯೇ ಡಾ.ರಾಜ್ ಕುಮಾರ್. ಪ್ರಶ್ನೆಯೇ ತಪ್ಪು. ಉತ್ತರ ಸರಿಯಾಗಿದೆ.



