ʻಹಾಸ್ಯದ ಹೆಸರಲ್ಲಿ ಅಪಹಾಸ್ಯ ನಡೆಯುತ್ತಿರುವುದು ಹೊಸದೇನಲ್ಲ. ಕಾಮಿಡಿ ಎಂದುಬಿಟ್ಟರೆ ಏನನ್ನು ಬೇಕಾದರೂ ಜಯಿಸಿಕೊಳ್ಳಬಹುದು ಎಂಬ ಧೈರ್ಯವೂ ಇದೆ. ದೇವರು, ಧರ್ಮದ ಬಗ್ಗೆ ಎಲ್ಲರಿಗೂ ಉಪದೇಶ ಹೇಳುವ ಜಗ್ಗೇಶ್ ಜಡ್ಜ್ ಆಗಿರುವ ಕಾರ್ಯಕ್ರಮದಲ್ಲೇ ಇಂಥಾದ್ದೊಂದು ಅಪಹಾಸ್ಯ ನಡೆದಿದ್ದು, ಕೋರ್ಟ್ ತಪರಾಕಿ ಕಾಯುತ್ತಿದೆ.
ಆಗಿದ್ದು ಏನೆಂದರೆ..
ಕಾಮಿಡಿ ಶೋನಲ್ಲಿ ʻಶ್ರೀಕೃಷ್ಣ ಸಂಧಾನʼ ಎಂಬ ಸ್ಕಿಟ್ ತಯಾರಿ ನಡೆಯುತ್ತದೆ. ಆ ತಯಾರಿಯಲ್ಲಿ ಮಹಾಭಾರತದ ಪಾತ್ರಗಳಾದ ಶ್ರೀಕೃಷ್ಣ, ಪಾಂಡವರು ಮತ್ತು ಧೃತರಾಷ್ಟ್ರನನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವ ಡೈಲಾಗ್ಸ್ ಇವೆ. ಶ್ರೀಕೃಷ್ಣನ ಪಾತ್ರಧಾರಿಗೆ ಎಗರಿ ಎಗರಿ ಕಪಾಳಕ್ಕೆ ಹೊಡೆಯುವ ದೃಶ್ಯ ಇದೆ. ಅದು ಕಾಮಿಡಿ. ಶ್ರೀಕೃಷ್ಣನನ್ನು ಡ್ಯಾಷ್ ಭಾಷೆಯಲ್ಲಿ ಬಯ್ಯುವ ಡೈಲಾಗ್ ಇದೆ. ಅದೂ ಕಾಮಿಡಿ. ದ್ರೌಪದಿಯ ಮೇಲೆ ಸಾರಾಯಿ ಸುರಿಯುವ ಸೀನ್ಸ್ ಇವೆ. ಅದೂ ಕಾಮಿಡಿಯಂತೆ. ಶ್ರೀಕೃಷ್ಣನನ್ನು ಹೊಡೆಯುವ ಸೀನ್ಸ್, ಕಪಾಳಕ್ಕೆ ಬಾರಿಸುವ ಸೀನ್ಸ್ ಇವೆ. ಅದೂ ಕಾಮಿಡಿಯೇ. ಶ್ರೀಕೃಷ್ಣ, ದುರ್ಯೋಧನನಿಗೆ ಎಣ್ಣೆ ಹೊಡೆಯೋಕೆ ಹೋಗೋಣ್ವಾ ಎಂದು ಕರೆಯುವ ಡೈಲಾಗ್ ಇದೆ. ದ್ರೌಪದಿ ಐಟಂ ಸಾಂಗ್ ಮಾಡುವಂತೆ ನಟಿಸುತ್ತಾಳೆ. ಇಂತಹದ್ದೆಲ್ಲ ನಾಟಕದಲ್ಲಿ ನಡೆದಿತ್ತು.
ಈ ಕುರಿತ ಪ್ರಕರಣ ಕೋರ್ಟಿನಲ್ಲಿ ವಿಚಾರಣೆಗೆ ಬಂದಿದ್ದಾಗ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಏನು ಬೇಕಾದರೂ ಮಾಡಬಹುದೇ.. ಎಂದು ಸಿಟ್ಟಾಗಿದ್ದರು. ಇದೀಗ ಪ್ರಕರಣದಲ್ಲಿ ಜಡ್ಜ್‌ಗಳಾಗಿದ್ದ ಜಗ್ಗೇಶ್, ತಾರಾ, ಯೋಗರಾಜ್ ಭಟ್ ಅವರಿಗೂ ನೋಟಿಸ್ ಕೊಡುವ ಸಾಧ್ಯತೆ ಇದೆ.
ಕಾಮಿಡಿ ಕಿಲಾಡಿಗಳು ಶೋನ ತೀರ್ಪುಗಾರರನ್ನು ಜಡ್ಜ್ ಎಂದೇ ಕರೆಯುತ್ತಾರೆ. ಆ ಜಡ್ಜ್‌ಗಳು ಈಗ ನಿಜವಾದ ಕೋರ್ಟ್ ಕಟಕಟೆಗೆ ಬರಬೇಕು. ಕಾಮಿಡಿ ಕಿಲಾಡಿಗಳು ಶೋನ ಜಡ್ಜ್‌ಗಳಿಗೂ ನೋಟಿಸ್ ಕೊಡೋಕೆ ಕೋರ್ಟ್ ಸೂಚಿಸಿದೆ.
ಹಾಸ್ಯದ ಸ್ಕಿಟ್‌ನ ಪಾತ್ರಧಾರಿಗಳು, ಮಹಾಭಾರತದ ಶ್ರೀಕೃಷ್ಣ, ಪಾಂಡವರು, ಧೃತರಾಷ್ಟ್ರನ ಪಾತ್ರಧಾರಿಗಳನ್ನು ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ. ಆ ಮೂಲಕ ಹಿಂದೂ ಧರ್ಮದ ಭಾವನೆಗೆ ಧಕ್ಕೆ ಬರುವಂತೆ ಬಿಂಬಿಸಿದ್ದಾರೆ ಎಂದು ಆರೋಪಿಸಿ ಹುಬ್ಬಳ್ಳಿಯ ಕೇಶ್ವಾಪುರದ ಪ್ರಶಾಂತ್ ನರಗುಂದ ಕಳೆದ ನ.15ರಂದು ಹುಬ್ಬಳ್ಳಿಯ ಸಬ್ ಅರ್ಬನ್ ಠಾಣೆಗೆ ದೂರು ನೀಡಿದ್ದರು. ನಂತರ ದೂರನ್ನು ಬೆಂಗಳೂರಿನ ಸುಬ್ರಹ್ಮಣ್ಯಪುರ ಠಾಣೆಗೆ ವರ್ಗಾಯಿಸಲಾಗಿತ್ತು. ಈ ಪ್ರಕರಣ ರದ್ದು ಕೋರಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.
ಹೈಕೋರ್ಟ್ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ಫೆಬ್ರವರಿ 27ಕ್ಕೆ ಮುಂದೂಡಿದ್ದು, ಝೀ ವಾಹಿನಿ, ಕಾರ್ಯಕ್ರಮದ ಕಲಾವಿದರು, ನಿರ್ದೇಶಕರ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶವನ್ನು ವಿಸ್ತರಣೆ ಮಾಡಿದೆ.
ಶೋನ ನಿರ್ಮಾಪಕರು “ನಾವು ಮಹಾಭಾರತವನ್ನೇ ಅಣಕಿಸುತ್ತಿಲ್ಲ, ಬದಲಾಗಿ ಹಳ್ಳಿಯ ಅನಕ್ಷರಸ್ಥರು ನಾಟಕ ಪ್ರದರ್ಶಿಸುವಾಗ ಮಾಡುವ ತಪ್ಪುಗಳನ್ನು ತೋರಿಸುತ್ತಿದ್ದೇವೆ” ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ, ಹಾಸ್ಯದ ಹೆಸರಿನಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದನ್ನು ನ್ಯಾಯಾಲಯ ಒಪ್ಪಿಲ್ಲ.ಅರ್ಜಿದಾರರ ಪ್ರಕಾರ, ಶ್ರೀಕೃಷ್ಣ ಮತ್ತು ದ್ರೌಪದಿ ಪಾತ್ರಗಳನ್ನು ಅತ್ಯಂತ ಕೆಳಮಟ್ಟದಲ್ಲಿ ತೋರಿಸಲಾಗಿದೆ. ನ್ಯಾಯಮೂರ್ತಿಗಳು ಇದನ್ನು “ಓದಲು ಅಸಾಧ್ಯವಾದಷ್ಟು ಅಸಭ್ಯ” (unreadable) ಎಂದು ಬಣ್ಣಿಸಿದ್ದಾರೆ.



