ಒಂದು ಕಡೆ ವಿಜಯೇಂದ್ರ ಬೆನ್ನ ಹಿಂದೆ ರೇಣುಕಾಚಾರ್ಯ ನೇತೃತ್ವದಲ್ಲಿ ಒಂದು ದೊಡ್ಡ ಹೋರಾಟ ಮತ್ತು ಯತ್ನಾಳ್ ನೇತೃತ್ವದಲ್ಲಿ ಮತ್ತೊಂದ ಹೋರಾಟ ನಡೆಯುತ್ತಿದ್ದರೆ, ಅತ್ತ ದೆಹಲಿ ಹೈಕಮಾಂಡ್ ಕೈ ಕಣ್ಣು ಕಿವಿ ಎಲ್ಲವನ್ನೂ ಮುಚ್ಚಿಕೊಂಡೇ ಕುಳಿತಿದೆ. ಇದು ರಾಜಕೀಯ ಗೊತ್ತಿಲ್ಲದೇ ಇರುವವರಿಗೆ ಏನೋ ಸಂಥಿಂಗ್ ನಡೆಯುತ್ತಿದೆ ಎನ್ನಿಸುತ್ತಿದೆಯಾದರೂ.. ಪಕ್ಷದಲ್ಲೇ ಇರುವವರಿಗೆ ಹೊಸದೇನಲ್ಲ.
ಯತ್ನಾಳ್ ಬಣದಲ್ಲಿ ಲಿಂಬಾವಳಿ, ರಮೇಶ್ ಜಾರಕಿಹೊಳಿ, ಬಿಪಿ ಹರೀಶ್, ಕುಮಾರ್ ಬಂಗಾರಪ್ಪ, ಸಿದ್ದೇಶ್ವರ್..ಮೊದಲಾದವರಿದ್ದರೆ, ರೇಣುಕಾಚಾರ್ಯ ಟೀಂನಲ್ಲಿ ಬಿಸಿ ಪಾಟೀಲ್ ಇದ್ಧಾರೆ. ಉಳಿದವರು ಹೊರಗೆ ಗುರುತಿಸಿಕೊಳ್ಳುತ್ತಿಲ್ಲ. ಹೀಗಿರುವಾಗಲೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣ ಮತ್ತೆ ದೆಹಲಿಗೆ ಪ್ರಯಾಣ ಬೆಳೆಸಲು ಮುಂದಾಗಿದೆ. ದೆಹಲಿಗೆ ಬನ್ನಿ ಅನ್ನೋ ಸಿಗ್ನಲ್ ಕೊಟ್ಟಿದ್ದಾರಂತೆ ಅಮಿತ್ ಶಾ.
ವಿಷಯ ಏನೆಂದರೆ ಪೇಜಾವರ ತೀರ್ಥರ ಆಸ್ಪತ್ರೆ ಉದ್ಘಾಟನೆಯಲ್ಲಿ ಲಿಂಬಾವಳಿ, ಶಾ ಕೈಗೆ ಒಂದು ʻಲವ್ ಲೆಟರ್ʼ ಕೊಟ್ಟರಲ್ಲ. ಆ ಪತ್ರದ ಪರಿಣಾಮವೇ ಯತ್ನಾಳ್ ಬಣದ ದೆಹಲಿ ಪ್ರಯಾಣ ಎನ್ನಲಾಗ್ತಿದೆ. ಆದರೆ, ಸ್ವತಃ ಅವರೇನೂ ಕರೆ ಮಾಡಿ ದೆಹಲಿಗೆ ಬನ್ನಿ ಎಂದು ಕರೆದಿಲ್ಲ. ಪತ್ರ ಕೊಟ್ಟು ಏನನ್ನೋ ಹೇಳೋಕೆ ಹೋದಾಗ, ದೆಹಲಿಗೆ ಬಂದಾಗ ಮಾತನಾಡೋಣ ಎಂದಿದ್ದಾರಂತೆ. 5 ಸೆಕೆಂಡಿನಲ್ಲಿ ಇನ್ನೆಷ್ಟು ಮಾತನಾಡೋಕೆ ಸಾಧ್ಯ ಅಂತಾರೆ ವಿಜಯೇಂದ್ರ ಬಣದ ಲೀಡರ್ಸ್. ಆದರೆ ಅದನ್ನೇ ಆಹ್ವಾನ ಎಂದು ಪರಿಗಣಿಸಿರುವ ಯತ್ನಾಳ್ ಪಡೆ, ದೆಹಲಿಗೆ ಹೋಗಿ ಅಮಿತ್ ಶಾ ಅವರನ್ನು ಭೇಟಿ ಮಾಡೋದಕ್ಕೆ ಸಿದ್ಧವಾಗಿದೆ.
ಇನ್ನು ರೇಣುಕಾಚಾರ್ಯ ನಡೆಸುತ್ತಿರುವ ವೀರಶೈವ ಲಿಂಗಾಯತ ಮಹಾಸಂಗಮ ಸಮಾವೇಶವನ್ನು ಯತ್ನಾಳ್ ಬಣದ ನಾಯಕ ಬಿಪಿ ಹರೀಶ್ ಖಂಡಿಸಿದ್ದಾರೆ. ಯಡಿಯೂರಪ್ಪ ಅವರನ್ನ ಸಿಎಂ ಕುರ್ಚಿಯಿಂದ ಕೆಳಗೆ ಇಳಿಸುವಾಗ ಲಿಂಗಾಯತ ಸ್ವಾಮೀಜಿಗಳನ್ನ ಇಟ್ಟುಕೊಂಡು ಆಟ ಆಡುತ್ತಿದ್ದರು. ಈಗ ಸಹ ಲಿಂಗಾಯತರ ಸಮಾವೇಶ ಮಾಡುತ್ತಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಬದಲಾವಣೆ ಆಗಲೇ ಬೇಕು. ಜೊತೆಗೆ ಪಕ್ಷ ವಿರೋಧಿಗಳು ಹಾಗೂ ಮ್ಯಾಚ್ ಫಿಕ್ಸರ್‍ಗಳಿಗೆ ಪಾಠ ಕಲಿಸಬೇಕು ಹೇಳಿದ್ದಾರೆ.
ಯಡಿಯೂರಪ್ಪ ಮತ್ತು ವಿಜಯೇಂದ್ರ ಬಗ್ಗೆ ಪಕ್ಷದ ವರಿಷ್ಠರಿಗೆ ಹಾಗೂ ಸಂಸದರಿಗೆ ದೂರು ನೀಡಿದ್ದೇವೆ. ಅವರು ಸಹ ಇವರ ಬಗ್ಗೆ ನಮ್ಮ ಮುಂದೆ ಗುಣಗಾನ ಮಾಡಿದ್ದಾರೆ. ವಿಜಯೇಂದ್ರ ಜೊತೆ ಓಡಾಡುವ ಪಕ್ಷ ವಿರೋಧಿಗಳಿಗೆ ತಕ್ಕ ಪಾಠ ಆಗಲಿದೆ. ಈ ಅಪ್ಪ ಮಕ್ಕಳ ಆಟವನ್ನ ತುಂಬಾ ನೋಡಿದ್ದೇನೆ ಎಂದೆಲ್ಲ ಟೀಕಿಸಿದ್ದಾರೆ. ಯತ್ನಾಳ್ ಜೊತೆ ಇರಲಿ ಬಿಡಲಿ, ನನ್ನ ಹೋರಾಟ ಮಾತ್ರ ನಿರಂತರವಾಗಿ ನಡೆಯುತ್ತದೆ ಎಂದು ಅವರು ಹೇಳಿದ್ದಾರೆ.
ಒಟ್ಟಿನಲ್ಲಿ ಯತ್ನಾಳ್ ಮತ್ತು ವಿಜಯೇಂದ್ರ ನಡುವಿನ ತಿಕ್ಕಾಟದಿಂದಾಗಿ ಹಲವು ಪ್ರಕರಣಗಳ ಮಧ್ಯೆಯೂ ನಿರಾಳವಾಗಿ ಉಸಿರಾಡುತ್ತಿರುವುದು ಕಾಂಗ್ರೆಸ್. ಕಾಂಗ್ರೆಸ್ಸಿನವರ ಕುಮ್ಮುಕ್ಕಿನಿಂದಲೇ ಯತ್ನಾಳ್ ಬಣದ ನಾಯಕರು ಹೀಗೆಲ್ಲ ಎಗರಾಡುತ್ತಿದ್ದಾರೆ ಎಂಬ ಟೀಕೆ, ವಿಜಯೇಂದ್ರ ಟೀಮಿನ ನಾಯಕರದ್ದು. ಒಟ್ಟಿನಲ್ಲಿ ಬಿಜೆಪಿ ಎಂದರೆ ಭಾರತೀಯ ಜಗಳ ಪಾರ್ಟಿ ಎಂಬಂತಾಗಿದೆ.



