ʻʻಸಿನಿಮಾ ಆಫರ್ ಕೊಡ್ತಾರೆ. ನಾವೂ ಖುಷಿಯಿಂದ ಓಕೆ ಅಂತೀವಿ. ಪತ್ರಿಕೆಗಳಲ್ಲಿ ಆ ಸಿನಿಮಾದ ಜಾಹೀರಾತುಗಳೂ ಬರುತ್ತೆ. ನಮ್ಮ ಫೋಟೋನೂ ಬರುತ್ತದೆ. ಅದನ್ನ ತೋರಿಸ್ಕೊಂಡು ಊರೆಲ್ಲ ಹೇಳ್ಕೊಂಡು ಓಡಾಡ್ತೀವಿ. ಇನ್ನೇನು ಶೂಟಿಂಗ್ ಶುರು ಆಗಬೇಕು. ಆಗ ಶುರುವಾಗುತ್ತೆ. ನಿಮ್ಮನ್ನ ಹೀರೋಯಿನ್ ಮಾಡಿದ್ದೀವಿ, ಋಣ ತೀರಿಸಿ ಅಂತೆಲ್ಲ ಕೇಳೋಕ್ ಶುರು ಮಾಡ್ತಾರೆ.. ಇನ್ನೊಂದಿಷ್ಟು ಜನ ನೇರವಾಗಿಯೇ ಬನ್ನಿ, ನಮ್ಮ ಜೊತೆ ಮಲಗಿ ಅಂತಾ ಕರೀತಾರೆ. ಒಪ್ಕೊಂಡೋವ್ರಿಗೆ ಓಕೆ.
ಒಪ್ಪದೇ ಇದ್ದವರ ಹಣೆಬರಹ ಚೇಂಜ್ ಆಗುತ್ತದೆ. ಅವಳಿಗೆ ಸಿಕ್ಕಾ ಪಟ್ಟೆ ತಿ.. ಗಾಂಚಾಲಿ.. ಧಿಮಾಕು.. ಎಂದೆಲ್ಲ ಕಥೆ ಕಟ್ಟುತ್ತಾರೆ. ಚಿತ್ರದ ಹೀರೋಯಿನ್ ಚೇಂಜ್ ಆಗಿರ್ತಾರೆ. ಅದು ನಾಯಕಿಗೆ ಗೊತ್ತಿರಲ್ಲ.. ಕೆಲವರು ಅನಿವಾರ್ಯವಾಗಿ ಅಡ್ಜಸ್ಟ್ ಮಾಡ್ಕೊಳ್ತಾರೆʼʼ ಹೀಗೆಲ್ಲ ಹೇಳಿಕೊಂಡಿದ್ದಾರೆ ಸಂಯುಕ್ತಾ ಹೆಗಡೆ.
ಸಂಯುಕ್ತಾ ಹೆಗಡೆ ಯಾರು ಅಂತಾ ನಿಮಗೂ ಗೊತ್ತು. ಕಿರಿಕ್ ಪಾರ್ಟಿ ಮೂಲಕ ಬೆಳಕಿಗೆ ಬಂದ ಪ್ರತಿಭೆ. ಸಂಯುಕ್ತಾ ಹೆಗಡೆ ಜೊತೆಯಲ್ಲೇ ʻಸಾನ್ವಿ ಜೋಸೆಫ್ʼ ಪಾತ್ರದಲ್ಲಿ ಸಿನಿಮಾ ರಂಗಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ, ಕನ್ನಡ, ತೆಲುಗು, ತಮಿಳು, ಹಿಂದಿ..ಗಳಲ್ಲಿ ಮೆರೆಯುತ್ತಿದ್ದರೆ, ಅದೇ ಚಿತ್ರದಲ್ಲಿ ಆರ್ಯ ಪಾತ್ರದಲ್ಲಿ ನಟಿಸಿದ್ದ ಸಂಯುಕ್ತಾ ಹೆಗಡೆ ಕಣ್ಮರೆಯೇ ಆಗಿಬಿಟ್ಟಿದ್ದಾರೆ. ಅದಾದ ನಂತರ ಸಂಯುಕ್ತಾ ನಟಿಸಿದ್ದು ಕಡಿಮೆಯೇ. ಆದರೆ.. ಕಿರಿಕ್ಕುಗಳೇ ಜಾಸ್ತಿ ಆಗಿ ʻಕಿರಿಕ್ ಕ್ವೀನ್ʼ ಎಂದು ಬಿರುದು ಪಡೆದುಕೊಂಡಿದ್ದ ಸಂಯುಕ್ತಾ ಹೆಗಡೆಗೆ ದೊಡ್ಡ ದೊಡ್ಡ ಅವಕಾಶಗಳು ಸಿಗಲೇ ಇಲ್ಲ. ಕನ್ನಡ ಮತ್ತು ತೆಲುಗು ಎರಡರಲ್ಲೂ ನಟಿಸುತ್ತಾ ಹೋದ ಸಂಯುಕ್ತಾ ಹೆಗಡೆ.. ಅವರು ನಟಿಸಿದ್ದು 10 ಚಿತ್ರಗಳಲ್ಲಿ ಅಷ್ಟೇ.
ಸಂಯುಕ್ತಾ ಒಳ್ಳೆಯ ಡ್ಯಾನ್ಸರ್. ಸುಂದರಿಯೂ ಹೌದು. ಅದ್ಭುತ ನಟಿಯೂ ಹೌದು. ಫಿಸಿಕ್ ಸೂಪರ್ಬ್. ಸ್ಟಂಟ್ ಕೂಡಾ ಮಾಡಬಲ್ಲ ಕಲಾವಿದೆ. ಹೀಗಿದ್ದರೂ ನಟಿಸಿದ್ದು ಕಡಿಮೆಯೇ. ಇಷ್ಟಕ್ಕೂ ಅವರಿಗೆ ಆದ ಸಮಸ್ಯೆ ಏನು..? ಅದರ ಬಗ್ಗೆ ಸಂಯುಕ್ತಾ ಹೆಗಡೆ ಅವರೇ ಹೇಳಿಕೊಂಡಿರೋದು ಇಷ್ಟು. ಅದು ಚಿತ್ರರಂಗದಲ್ಲಿ ನಡೆಯುತ್ತಿರೋ ಕಾಸ್ಟಿಂಗ್ ಕೌಚ್ʻನ ಇನ್ನೊಂದು ಸ್ಟೈಲ್.
ಮೊದಲಾದರೆ ರಾಜಿ, ಕಾಂಪ್ರಮೈಸ್ ಅನ್ನೋ ವರ್ಡ್ ಯೂಸ್ ಮಾಡ್ತಾ ಇದ್ರು. ಈಗ ಅದೂ ಇಲ್ಲ. ಡೈರೆಕ್ಟ್ ಆಗಿ ಈಗ ಬನ್ನಿ, ನಮ್ಮ ಜೊತೆ ಮಲಗಿ ಅಂತಾರೆ. ಶೂಟಿಂಗ್ ಇರಲಿ.. ಇಲ್ಲದೇ ಇರಲಿ.. ನಮ್ಮ ಜೊತೆ ಟೈಂ ಸ್ಪೆಂಡ್ ಮಾಡಿ ಅಂತಾರೆ. ಪ್ರಶ್ನೆ ಮಾಡಿದ್ರೆ.. ನಿಮಗೆ ಏನೂ ಗೊತ್ತಿಲ್ವಾ.. ಡ್ರಾಮಾ ಮಾಡ್ಬೇಡಿ ಅಂತಾ ನಗ್ತಾರೆ. ಆ ವಿಷಯದಲ್ಲಿ ಪ್ರೊಡ್ಯೂಸರ್, ಡೈರೆಕ್ಟರ್, ಆಕ್ಟರ್.. ಎಲ್ಲರೂ ಒಂದೇ ಎಂದಿದ್ದಾರೆ ಸಂಯುಕ್ತಾ ಹೆಗಡೆ.
ಸಂಯುಕ್ತಾ ಹೆಗಡೆ ಇದುವರೆಗೆ ನಟಿಸಿರುವ ಚಿತ್ರಗಳಲ್ಲಿ ಆ ರೀತಿಯ ಅನುಭವ ಆಗಿದೆಯೇ ಎಂದರೆ.. ನೋ.. ಇಲ್ಲ. ನಾನು ನಟಿಸಿದ ಎಲ್ಲ ಚಿತ್ರಗಳಲ್ಲೂ ಚಿತ್ರತಂಡದವರು ನನ್ನನ್ನು ಗೌರವದಿಂದ ನಡೆಸಿಕೊಂಡಿದ್ದಾರೆ ಎಂದಿದ್ದಾರೆ. ಅಂದಹಾಗೆ ಎಂದಿನಂತೆ.. ಸಂಯುಕ್ತಾ ಹೆಗಡೆ ಅವರೂ ಹಾಸಿಗೆಗೆ ಕರೆದವರು ಯಾರು.. ಎಂದು ಹೇಳಲ್ಲ.



