ರಾಮೇಶ್ವರಂ ಕೆಫೆ. ಬೆಂಗಳೂರಿನಲ್ಲಿ ಸಿಕ್ಕಾಪಟ್ಟೆ ಫೇಮಸ್. ಇಲ್ಲಿ ಸಿಗುವ ಸಸ್ಯಾಹಾರಿ ತಿಂಡಿಗಳಿಗೆ ಲಕ್ಷಾಂತರ ಗ್ರಾಹಕರಿದ್ದಾರೆ. ಈ ರಾಮೇಶ್ವರಂ ಖ್ಯಾತಿ ಪಡೆದಿರುವುದು ಪುಳಿಯೋಗರೆ, ದೋಸೆ, ಬಿಸಿಬೇಳೆ ಬಾತ್, ಉಪ್ಪಿಟ್ಟು.. ತರದ ತಿಂಡಿಗಳಿಗೆ. 2021ರಲ್ಲಿ ಇಂದಿರಾನಗರದ ಪುಟ್ಟ ಸ್ಥಳದಲ್ಲಿ ಆರಂಭವಾದ ‘ದಿ ರಾಮೇಶ್ವರಂ ಕೆಫೆ’ಗೆ ಬೆಂಗಳೂರಿನಲ್ಲಿ ಹಲವಾರು ಕಡೆ ಔಟ್ ಲೆಟ್ ಇವೆ. ಅಂತಹ ಔಟ್ ಲೆಟ್ʻಗಳಲ್ಲಿ ಒಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಿರುವ ರಾಮೇಶ್ವರಂ ಕೆಫೆ.
ಈ ಕೆಫೆಯಲ್ಲಿ ಗುರುವಾರ ಬೆಳಗ್ಗೆ ಗ್ರಾಹಕರೊಬ್ಬರು ಪೊಂಗಲ್ ತಗೊಳ್ತಾರೆ. ಲೋಕನಾಥ್ ಎಂಬುವವರು 300 ರೂ. ಕೊಟ್ಟು ಪೊಂಗಲ್ ತಗೊಳ್ತಾರೆ. 180 ರೂ.ಗೆ ಫಿಲ್ಟರ್ ಕಾಫಿ ಖರೀದಿಸಿದ್ದರು. ಒಟ್ಟು ಬಿಲ್ 504 ರೂ. ಆಗಿತ್ತು. ಅವರು ಅದನ್ನು ತಿನ್ನುತ್ತಿದ್ದಾಗ ಅದರಲ್ಲಿ ಜಿರಳೆ ಕಾಣಿಸಿಕೊಂಡಿದೆ. ತಕ್ಷಣವೇ ಅವರು ಹೋಟೆಲ್ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಹೋಟೆಲ್ ಸಿಬ್ಬಂದಿ ತಪ್ಪಾಗಿದೆ ಎಂದು ಕೈ ಮುಗಿದು ಕೇಳಿಕೊಂಡಿದ್ದಾರೆ. ಆ ವಿಡಿಯೋ ವೈರಲ್ ಆಗುತ್ತೆ. ರಾಜ್ಯಾದ್ಯಂತ ರಾಮೇಶ್ವರಂ ಕೆಫೆಗೆ ಒಮ್ಮೆಯಾದರೂ ಹೋಗಿದ್ದ ಗ್ರಾಹಕರು ಬೆಚ್ಚಿ ಬಿದ್ದಿದ್ದಾರೆ.
ಏಕೆಂದರೆ ವೈರಲ್ ಆದ ವಿಡಿಯೋದಲ್ಲಿ ರಾಮೇಶ್ವರಂ ಕೆಫೆಯ ಸಿಬ್ಬಂದಿ ಕ್ಷಮೆ ಕೇಳುವುದೂ ಇದೆ. ಪ್ಲೇಟ್‌ನ ಒಳಗಿದ್ದ ಜಿರಳೆಯನ್ನು ತೆಗೆದುಹಾಕಲು ಪ್ರಯತ್ನಿಸಿರುವುದು ಕಂಡಿದೆ. ಆಗ ಗ್ರಾಹಕ ಅದನ್ನು ತೆಗೆದಿದ್ದು ಏಕೆ ಎಂದು ಪ್ರಶ್ನೆ ಮಾಡುತ್ತಿರುವುದು ವಿಡಿಯೋದಲ್ಲಿದೆ. ಆದರೆ.. ಆಮೇಲೆ ಗೊತ್ತಾದದ್ದೇ ಬೇರೆ.
ಈ ವಿಡಿಯೋ ಮಾಡಿದ್ದವರು 25 ಲಕ್ಷ ಕೊಟ್ಟರೆ ವಿಡಿಯೋ ಡಿಲೀಟ್ ಮಾಡ್ತೇವೆ ಎಂಬ ಬೆದರಿಕೆ ಹಾಕುವುದಕ್ಕೆ ಶುರು ಮಾಡಿದರೋ.. ಇದು ಯಾವುದೋ ಸಂಚು ಎಂಬ ಅನುಮಾನ ಬರುವುದಕ್ಕೆ ಶುರುವಾಗಿದೆ. ಆನಂತರ ಸ್ವಲ್ಪ ತಾಳ್ಮೆಯಿಂದ ವಿಡಿಯೋ ನೋಡಿದವರಿಗೆ.. ವಿಡಿಯೋದಲ್ಲಿ ಕಾಣಿಸುತ್ತಿರುವ ಹುಳ, ಜಿರಲೆ ಅಲ್ಲ. ಅಲ್ಲದೆ ಅದು ಬದುಕಿದೆ ಎಂದು ಗೊತ್ತಾಗಿದೆ. ಏಕೆಂದರೆ ರಾಮೇಶ್ವರಂ ಕೆಫೆ ಫೇಮಸ್ ಆಗಿರುವುದು ರುಚಿಗಷ್ಟೇ ಅಲ್ಲ. ಶುಚಿತ್ವಕ್ಕೆ. ಇದು ʻರಾಮೇಶ್ವರಂ ಕೆಫೆʼಯ ಖ್ಯಾತಿಗೆ ಮಸಿ ಬಳಿಯುವ ಸಂಚು ಎಂದು ಅರ್ಥ ಮಾಡಿಕೊಂಡ ಸಿಬ್ಬಂದಿ ನೇರವಾಗಿ ಪೊಲೀಸರ ಬಳಿ ಹೋಗಿದ್ದಾರೆ.
ಹಣಕ್ಕೆ ಬೇಡಿಕೆಯೊಡ್ಡಿ ಕರೆ ಮಾಡಿದ ವ್ಯಕ್ತಿಯ ಬಗ್ಗೆ ರಾಮೇಶ್ವರಂ ಕೆಫೆ ಬಳಿ ಫೋನ್ ಕರೆ ದಾಖಲೆಗಳು, ಸಂದೇಶ ಸ್ಕ್ರೀನ್‌ಶಾಟ್‌ಗಳು ಮತ್ತು ಇತರ ದಾಖಲೆಗಳನ್ನು ಪೊಲೀಸರಿಗೆ ಸಲ್ಲಿಕೆ ಮಾಡಿ, ಬ್ಲಾಕ್ ಮೇಲ್ ಕೇಸು ಹಾಕಿದ್ದಾರೆ.
‘ನಮ್ಮ ಆಹಾರದಲ್ಲಿ ಹುಳು ಅಥವಾ ಕೀಟ ಕಂಡುಬಂದಿದೆ ಎಂಬ ಆಧಾರ ರಹಿತ ಆರೋಪವನ್ನು ನಾವು ಸ್ಪಷ್ಟವಾಗಿ ನಿರಾಕರಿಸುತ್ತೇವೆ. ನಮ್ಮ ಆಹಾರ ತಯಾರಿಕೆಯ ಸುರಕ್ಷತೆ ಮತ್ತು ನೈರ್ಮಲ್ಯದ ಬಗ್ಗೆ ಹೆಚ್ಚು ಗಮನ ವಹಿಸುತ್ತೇವೆ. ನಾವು ಕಟ್ಟುನಿಟ್ಟಾದ ಗುಣಮಟ್ಟದ ಪ್ರೋಟೋಕಾಲ್‌ಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತೇವೆ. ವಿಶೇಷವಾಗಿ ವಿಮಾನ ನಿಲ್ದಾಣಗಳಂತಹ ಸೂಕ್ಷ್ಮ ಸ್ಥಳಗಳಲ್ಲಿ, ಅಲ್ಲಿ ನಿಯಮಿತ ಪರಿಶೋಧನೆ ಮತ್ತು ನೈರ್ಮಲ್ಯ ತಪಾಸಣೆಗಳು ಕಡ್ಡಾಯವಾಗಿರುತ್ತವೆ. ಇಲ್ಲಿ ಹಣವನ್ನು ಸುಲಿಗೆ ಮಾಡಲು ಮತ್ತು ನಮ್ಮ ಬ್ರ್ಯಾಂಡ್‌ಗೆ ಕಳಂಕ ತರುವ ದುರುದ್ದೇಶದಿಂದ ಕಿಡಿಗೇಡಿಗಳು ಈ ಪ್ರಯತ್ನ ನಡೆಸಿದ್ದಾರೆ ಎಂದು ಹೇಳಿದ್ದಾರೆ ದಿ ರಾಮೇಶ್ವರಂ ಕೆಫೆಯ ಸಂಸ್ಥಾಪಕಿ ದಿವ್ಯಾ ರಾಘವ್.
ಈ ಹಿಂದೆಯೂ ಕೂಡಾ ಇದೇ ರೀತಿಯ ಪ್ರಯತ್ನಗಳು ರಾಮೇಶ್ವರಂ ಕೆಫೆಯ ವಿರುದ್ಧ ನಡೆದಿವೆ. ಆಹಾರದಲ್ಲಿ ಕಲ್ಲು, ಕೀಟಗಳನ್ನು ಹಾಕಿ ಬಳಿಕ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ನಾವು ಬೆದರಿಕೆ ಅಥವಾ ಬ್ಲ್ಯಾಕ್‌ಮೇಲ್‌ಗೆ ಹೆದರುವುದಿಲ್ಲ. ಈ ಘಟನೆ ಸಂಬಂಧ ನಾವು ಅಧಿಕಾರಿಗಳೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತಿದ್ದೇವೆ. ಇಂತಹ ಅನುಚಿತ ಕೃತ್ಯಗಳನ್ನು ಬಹಿರಂಗಪಡಿಸಿ, ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇವೆ ಎಂದಿದ್ದಾರೆ. ಜೊತೆಗೆ ಗ್ರಾಹಕರಿಗೂ ಭರವಸೆ ನೀಡಿರುವ ಕೆಫೆ ಮಾಲೀಕರು ಸುಳ್ಳು ವಿಡಿಯೋ ನಂಬಬೇಡಿ.ರಾಮೇಶ್ವರಂ ಕೆಫೆ ಊಟ, ತಿಂಡಿ ಸೇಫ್, ಸ್ಚಚ್ಚ, ಸುರಕ್ಷಿತ ಎಂದು ಹೇಳಿದ್ದಾರೆ.



