ಬಿಜೆಪಿಯಲ್ಲಿದ್ದಾಗ ಬಸನಗೌಡ ಪಾಟೀಲ ಯತ್ನಾಳ್ ನೂರು. ಸಾವಿರ.. ಎರಡು ಸಾವಿರ ಕೋಟಿ ಕೊಟ್ಟವರಿಗೆ ಸಿಎಂ ಪೋಸ್ಟ್ ಕೊಡ್ತಾರೆ. 50.. 100 ಕೋಟಿ ಕೊಟ್ರೆ ಮಿನಿಸ್ಟರ್ ಪೋಸ್ಟ್ ಕೊಡ್ತಾರೆ ಎಂದಿದ್ದರು. ಅದು ರಾಜ್ಯದಲ್ಲಿ ಬಿಜೆಪಿಯನ್ನು ಯಾವ ಮಟ್ಟಿಗೆ ಹಳ್ಳ ಹಿಡಿಸಿತು ಎಂಬುದು ಗೊತ್ತು. ಆದರೀಗ ಅದೇ ಪರಿಸ್ಥಿತಿ ಕಾಂಗ್ರೆಸ್ಸಿನಲ್ಲೂ ಕೇಳಿ ಬಂದಿದೆ. 500 ಕೋಟಿ ಕೊಟ್ಟಿದ್ದರೆ ನನ್ನ ಗಂಡ ಸಿಎಂ ಆಗುತ್ತಿದ್ದರು ಎಂದು ಆರೋಪ ಮಾಡಿರುವುದು ರಾಜ್ಯ ಕಾಂಗ್ರೆಸ್ಸೊಂದರ ಮಾಜಿ ಅಧ್ಯಕ್ಷರ ಪತ್ನಿ. ನವಜೋತ್ ಸಿಂಗ್ ಸಿಧು ಪತ್ನಿ ನವಜೋತ್ ಕೌರ್ ಸಿಧು.
ಕಾಂಗ್ರೆಸ್ ಹೈಕಮಾಂಡ್‌ಗೆ 500 ಕೋಟಿ ರೂ. ಇರುವ ಸೂಟ್‌ಕೇಸ್ ನೀಡುವವರು ಮುಖ್ಯಮಂತ್ರಿ ಅಭ್ಯರ್ಥಿಯಾಗುತ್ತಾರೆ ಎಂದು ಪಂಜಾಬ್‌ನ ಮಾಜಿ ಡಿಸಿಎಂ ನವಜೋತ್ ಸಿಂಗ್ ಸಿಧು ಅವರ ಪತ್ನಿ ಹಾಗೂ ಮಾಜಿ ಶಾಸಕಿ ನವಜೋತ್ ಕೌರ್ ಸಿಧು ಹೇಳಿದ್ದಾರೆ. ಇದು ಸಹಜವಾಗಿಯೇ ಯತ್ನಾಳ್ ಅವರ ಆರೋಪವನ್ನು ಹೋಲುವಂತೆಯೇ ಇದೆ. ಅಂತೆ ಏನು.. ಅಂಥದ್ದೇ ಆರೋಪ. ಸದ್ಯಕ್ಕೆ ಹೈಕಮಾಂಡ್ ಗಪ್ ಚುಪ್.
ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತುಕೊಳ್ಳಲು ನೀಡಬೇಕಾಗುವ 500 ಕೋಟಿ ರೂ. ನಮ್ಮ ಬಳಿ ಇಲ್ಲ ಎಂದಿರುವ ನವಜೋತ್ ಕೌರ್ ʻʻಪಂಜಾಬ್‌ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಐವರು ನಾಯಕರು ಆಕಾಂಕ್ಷಿಗಳಾಗಿದ್ದಾರೆ. ಸಿಧು ಮುಂದೆ ಬರಲು ಈ ಐವರು ಬಿಡುವುದಿಲ್ಲ. ಹೈಕಮಾಂಡ್ ಅರ್ಥಮಾಡಿಕೊಂಡರೆ ಒಳ್ಳೆಯದುʼʼ ಎಂದಿದ್ದಾರೆ.
ಪಂಜಾಬ್ ರಾಜ್ಯಪಾಲ ಗುಲಾಬ್ ಚಂದ್ ಕಟಾರಿಯಾ ಅವರನ್ನು ಭೇಟಿಯಾಗಿ ಬಂದ ಮೇಲೆ ಮಾತನಾಡಿರುವ ಕೌರ್ ʻʻತಮ್ಮ ಪತಿ ಕಾಂಗ್ರೆಸ್‌ಗೆ ನಿಷ್ಠರು. ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದರೆ ಒಳ್ಳೆಯದು, ಇಲ್ಲದಿದ್ದರೆ, ಅವರು ಈಗ ಮಾಡುತ್ತಿರುವ ಕೆಲಸದಿಂದಲೇ ಉತ್ತಮ ಹಣ ಗಳಿಸುತ್ತಿದ್ದಾರೆ. ಸಂತೋಷವಾಗಿದ್ದಾರೆ. ನವಜೋತ್ ಸಿಂಗ್ ಸಿಧು ಅವರನ್ನು ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದರೆ ಸಿಧು ಮತ್ತೆ ಸಕ್ರಿಯ ರಾಜಕಾರಣ ಪ್ರವೇಶಿಸುತ್ತಾರೆʼʼ ಎಂದಿದ್ದಾರೆ.
ಪಂಜಾಬ್‌ನಲ್ಲಿ ಎಲೆಕ್ಷನ್ ನಡೆಯುವುದು 2027ಕ್ಕೆ. ಎರಡು ವರ್ಷ ಮೊದಲೇ ಅಲ್ಲೀಗ ಜಟಾಪಟಿ ಶುರುವಾಗಿದೆ. ಈ ಹಿಂದೆ ಸಿಧು ಅವರು ಬಿಜೆಪಿಯಲ್ಲಿದ್ದರು. ಸಂಸದರೂ ಆಗಿದ್ದರು. ಆದರೆ, ಸಚಿವ ಸ್ಥಾನ ಕೊಡಲಿಲ್ಲ ಎಂದು ಆಕ್ರೋಶಗೊಂಡು ಕಾಂಗ್ರೆಸ್ ಸೇರಿದ್ದರು. ಚನ್ನಿ ಅವರನ್ನು ಸಿಎಂ ಮಾಡಿದಾಗ ಅಸಮಾಧಾನ ಇದ್ದರೂ, ಡಿಸಿಎಂ ಆಗಿ ಕಂಟಿನ್ಯೂ ಆಗಿದ್ದ ಸಿಧು, ನಂತರ ಕಾಂಗ್ರೆಸ್ ಹೀನಾಯವಾಗಿ ಸೋತ ಮೇಲೆ ತೆರೆಮರೆ ಸೇರಿದ್ದಾರೆ.
ಅಂದಹಾಗೆ ಸಿಧು ಪತ್ನಿಯ ಹೇಳಿಕೆ ಮತ್ತೆ ಮತ್ತೆ ಯತ್ನಾಳ್ ಅವರ ಮಾತನ್ನು ನೆನಪಿಸುತ್ತಿದೆ. ಯತ್ನಾಳ್ ಅವರೂ ಇಂಥದ್ದೇ ಆರೋಪ ಮಾಡಿದ್ದರು. ಮೋದಿ, ಅಮಿತ್ ಶಾ ಕರ್ನಾಟಕಕ್ಕೆ ಬರುವ ಸಮಯದಲ್ಲೇ ಮಾಡಿದ್ದ ಆರೋಪ, ಬಿಜೆಪಿಗೆ ಮುಜುಗರ ತಂದಿತ್ತು. ಪಕ್ಷಕ್ಕೆ ಯಾವ ಮಟ್ಟಕ್ಕೆ ಡ್ಯಾಮೇಜ್ ಮಾಡಬೇಕೋ.. ಅಷ್ಟನ್ನೂ ಮಾಡಿತ್ತು. ಆದರೆ, ಯತ್ನಾಳ್ ಅವರಿಗೆ ಗೇಟ್ ಪಾಸ್ ಸಿಕ್ಕಿದ್ದು ಈ ವರ್ಷ. ಸಿಧು ಅವರ ಪರಿಸ್ಥಿತಿ ಏನಾಗುತ್ತದೋ.. ಗೊತ್ತಿಲ್ಲ.



