ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಇಂದು ನಿನ್ನೆಯದಲ್ಲ. ವೀರಶೈವರೇ ಬೇರೆ.. ಲಿಂಗಾಯತರೇ ಬೇರೆ ಎನ್ನುವುದು ಒಂದು ವಾದವಾದರೆ, ವೀರಶೈವ-ಲಿಂಗಾಯತ ಪ್ರತ್ಯೇಕ ಅಲ್ಲ, ಎರಡೂ ಒಂದೇ ಎನ್ನುವುದು ಇನ್ನೊಂದು ವಾದ. ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಕ್ಕೆ ಪರೋಕ್ಷವಾಗಿ ಬೆಂಬಲ ನೀಡಿದ್ದ ಸಿದ್ಧರಾಮಯ್ಯ, ಈ ಬಾರಿ ಬಹಿರಂಗವಾಗಿಯೇ ಕಾಣಿಸಿಕೋಡಿರುವುದು ರಾಜಕೀಯದಲ್ಲಿ ವಿಶೇಷ ಬೆಳವಣಿಗೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಬಲ ಜಾತಿಗಳ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ಹಾಗೂ ಮುಖ್ಯಮಂತ್ರಿ ಬದಲಾವಣೆ ಚರ್ಚೆ ನಡುವೆಯೇ ಪ್ರತ್ಯೇಕ ಲಿಂಗಾಯತ ಧರ್ಮ ಪರ ನಿಲುವಿನ ಸ್ವಾಮೀಜಿಗಳು ಕಾಣಿಸಿಕೊಂಡಿದ್ದ ಬೆಂಗಳೂರಿನ ಸಮಾವೇಶದಲ್ಲಿ ಸಿದ್ಧರಾಮಯ್ಯ ಕಾಣಿಸಿಕೊಂಡರು. ‘ಬಸವ ಸಂಸ್ಕೃತಿ ಅಭಿಯಾನ 2025’ ಸಮಾರೋಪದಲ್ಲಿ ಸಿದ್ದು ಅವರನ್ನು ಹಾಡಿ ಹೊಗಳಿ, ಹಣೆಗೆ ವಿಭೂತಿ ಹಚ್ಚಿ.. ಹೂಮಳೆ ಸುರಿಸಿದ 301 ಸ್ವಾಮೀಜಿಗಳು ಸಿದ್ಧರಾಮಯ್ಯ ಅವರನ್ನು ಬಸವಣ್ಣ ಎಂದೇ ಹಾಡಿ ಹೊಗಳಿದರು.
ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಭಾಲ್ಕಿ ಬಸವಲಿಂಗ ಪಟ್ಟದ್ದೇವರು ಅವರಂತೂ ಸಿದ್ದರಾಮಯ್ಯ ಎದೆ ಸೀಳಿದರೆ ಬಸವಣ್ಣ ಕಾಣುತ್ತಾರೆ. ಅವರೊಬ್ಬ ಕಳಂಕರಹಿತ, ಪ್ರಾಮಾಣಿಕ ರಾಜಕಾರಣಿ ಎಂದು ಹೊಗಳಿದರೆ, ನಾನು ಚಮಚಾಗಿರಿ ಮಾಡುತ್ತಿದ್ದೇನೆ ಎಂದುಕೊಂಡರೂ ಪರವಾಗಿಲ್ಲ. ಸಿದ್ದರಾಮಯ್ಯ ಮಾಡಿದ ಒಳ್ಳೆಯ ಕೆಲಸಗಳನ್ನು ನೆನೆಯುತ್ತೇನೆ ಎಂದ ಜಾಗತಿಕ ಲಿಂಗಾಯತ ಮಹಾಸಭಾದ ಶಿವಾನಂದ ಜಾಮದಾರ್ ಅವರು, ಸಿದ್ಧರಾಮಯ್ಯ ಅವರ ಒಂದಿಷ್ಟು ಕೆಲಸಗಳ ಪಟ್ಟಿ ಹೇಳಿದರು.
ಕಾರ್ಯಕ್ರಮದಲ್ಲಿ ಸಾಣೇಹಳ್ಳಿ ಸ್ವಾಮೀಜಿ, ಚಿತ್ರದುರ್ಗದ ಮಾದಾರ ಚನ್ನಯ್ಯ ಸ್ವಾಮೀಜಿ ಸೇರಿ ಮುನ್ನೂರಕ್ಕೂ ಹೆಚ್ಚು ಲಿಂಗಾಯತ ಮಠಗಳ ಸ್ವಾಮೀಜಿಗಳು, ಸಚಿವರಾದ ಕೆ.ಎಚ್.ಮುನಿಯಪ್ಪ, ಶರಣಪ್ರಕಾಶ್ ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಕರ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಮುಖಂಡರಾದ ಬಿ.ಆರ್.ಪಾಟೀಲ್, ಅಶೋಕ್ ಖೇಣಿ, ಸಾಹಿತಿ ಗೊ.ರು.ಚನ್ನಬಸಪ್ಪ, ವಿಶ್ರಾಂತ ನ್ಯಾ.ಎಚ್.ನಾಗಮೋಹನ್‌ದಾಸ್, ಮಾತೆ ಗಂಗಾದೇವಿ ಇತರರು ಇದ್ದರು.
ವಿಷಯ ಅದಷ್ಟೇ ಅಲ್ಲ.. ಈ ಸಮಾವೇಶಕ್ಕೆ ಹೋಗಕೂಡದು ಎಂದು ವೀರಶೈವ ಲಿಂಗಾಯತ ಪೀಠಗಳ ಸ್ವಾಮೀಜಿಗಳು ಆಗ್ರಹ ಮಾಡಿದ್ದರು. ಹೋದರೆ ಹುಷಾರ್ ಎಂದು ಎಚ್ಚರಿಕೆಯನ್ನೂ ಕೊಟ್ಟಿದ್ದರು. ಸಿದ್ಧರಾಮಯ್ಯ ಡೋಂಟ್ ಕೇರ್ ಎಂದು ಸಮಾವೇಶಕ್ಕೆ ಹೋದರಷ್ಟೇ ಅಲ್ಲ.. ಲಿಂಗಾಯತ ಸ್ವಾಮೀಜಿಗಳ ಒಂದು ಸಮೂಹದ ವಿರೋಧದ ನಡುವೆಯೂ ಹೋದರು ಎನ್ನುವುದು ಮುಖ್ಯ.
ಅಷ್ಟೇ ಅಲ್ಲದೆ.. ಸಿದ್ಧರಾಮಯ್ಯ ಅವರ ಬೆಂಬಲಿಗರೇ ನಾಚುವಂತೆ ಸ್ವಾಮೀಜಿಗಳ ಸಮೂಹವೇ ಸಿದ್ಧರಾಮಯ್ಯ ಅವರನ್ನು ಹೊಗಳಿದೆ. ಬಸವಣ್ಣನವರು ಸ್ಥಾಪಿಸಿದ್ದು ಲಿಂಗಾಯತ ಧರ್ಮ ಎಂದು ಹೇಳುವ ಮೂಲಕ ಬಹಿರಂಗವಾಗಿಯೇ ಸಿದ್ಧರಾಮಯ್ಯ ʻಪ್ರತ್ಯೇಕ ಲಿಂಗಾಯತ ಧರ್ಮʼ ಹೋರಾಟಕ್ಕೆ ಬೆಂಬಲ ಕೊಟ್ಟಂತಾಗಿದೆ. ಇದು ಸರಿಯೇ.. ತಪ್ಪೇ.. ಅದು ಬೇರೆಯದೇ ಪ್ರಶ್ನೆ.
ಕುರುಬ ಸಮುದಾಯದವರು ಈ ಹಿಂದೆ ಜಾತಿ ಸಮಾವೇಶ ಮಾಡಿದಾಗ.. ಅದರಿಂದ ದೂರವೇ ಉಳಿದಿದ್ದ ಕುರುಬ ಸಮುದಾಯದ ಸಿದ್ಧರಾಮಯ್ಯ, ಲಿಂಗಾಯತರಲ್ಲಿ ಒಂದು ಬಣದ ವಿರೋಧದ ನಡುವೆಯೂ ಹೋಗಿದ್ದು ಹಲವು ಪ್ರಶ್ನೆ ಹುಟ್ಟುಹಾಕಿದೆ. ರಾಜಕೀಯದಲ್ಲಿ ಒಂದೊಂದು ಮಾತಿಗೂ ವಿಶೇಷ ಅರ್ಥವೇ ಇದೆ.



