ಸಿದ್ದರಾಮಯ್ಯ ಅವರಿಗೆ ಏಕವಚನ ಹೊಸದಲ್ಲ. ಕಾಂಗ್ರೆಸ್ಸಿಗರಲ್ಲದವರನ್ನು ಎಂತಹ ಹಿರಿಯರೇ ಆದರೂ ಹಲವು ಸಾರಿ ಏಕವಚನದಲ್ಲಿಯೇ ಸಂಬೋಧಿಸುವ ಸಿದ್ದರಾಮಯ್ಯ, ಅದಕ್ಕೆ ಸಮರ್ಥನೆಯನ್ನೂ ಕೊಡ್ತಾರೆ. ನನ್ನದು ಹಳ್ಳಿ ಸೊಗಡಿನ, ಆಡು ಮಾತಿನ ಭಾಷೆ. ನಾನ್ ಮಾತಾಡದೇ ಅಂಗೇ.. ಅಂತಾರೆ. ಆದರೆ ಇದೇ ಮೊದಲ ಬಾರಿಗೆ ಸಿದ್ದರಾಮಯ್ಯ ತಾವು ಆಡಿದ ಮಾತಿಗೆ ಕ್ಷಮೆ ಕೇಳಿದ್ದಾರೆ. ಅದೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಗ್ಗೆ ಮಾತನಾಡಿದ್ದಕ್ಕೆ ಹಾಗೂ ಅವದು ದಲಿತ ಬುಡಕಟ್ಟಿನ ಮಹಿಳೆಯಾಗಿರುವ ಕಾರಣಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಭಾಷಣದಲ್ಲಿ ಹೇಳಿದ್ದೇನು?
ಚಿತ್ರದುರ್ಗದಲ್ಲಿ ಆಯೋಜಿಸಿದ್ದ ಶೋಷಿತರ ಜಾಗೃತಿ ಸಮಾವೇಶದಲ್ಲಿನ ಭಾಷಣದಲ್ಲಿ ಮಾತನಾಡುತ್ತಾ ಬಿಜೆಪಿ ಸರ್ಕಾರ ಸಂಸತ್ ಭವನ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಆಹ್ವಾನ ನೀಡಿಲ್ಲ. ರಾಮ ಮಂದಿರ ಉದ್ಘಾಟನೆಗೂ ಆಹ್ವಾನ ನೀಡಿಲ್ಲ ಎಂದು ಹೇಳುತ್ತಾ ಅವಳಿಗೆ ಎಂಬ ಪದ ಬಳಸಿದ್ದಾರೆ. ದ್ರೌಪದಿ ಮುರ್ಮು ಅವರನ್ನು ಏಕವಚನದಲ್ಲಿ ಸಂಬೋಧಿಸಿದ್ದನ್ನು ರಾಜ್ಯ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಖಂಡಿಸಿದ್ದರು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಿದ್ದರಾಮಯ್ಯ ವಜಾಗೆ ಆಗ್ರಹಿಸಿ್ದರು. ಈ ಬೆಳವಣಿಗೆ ಬೆನ್ನಲ್ಲೇ ಸಿದ್ದಾರಾಮಯ್ಯ ಟ್ವೀಟ್ ಮೂಲಕ ವಿಷಾಧ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಇದು ಸಿದ್ದರಾಮಯ್ಯ ತಮ್ಮ ಮಾತಿಗೆ ಕೇಳಿರುವ ಮೊದಲ ಕ್ಷಮೆ ಎನ್ನುವುದೇ ವಿಶೇಷ.
ಕ್ಷಮೆಯಲ್ಲೂ ಆಡು ಮಾತಿನ ವಾದ ಬಿಡದ ಸಿದ್ದರಾಮಯ್ಯ : ಸಿದ್ದರಾಮಯ್ಯ ತಮ್ಮ ಮಾತಿಗೆ ಕ್ಷಮೆ ಅಥವಾ ವಿಷಾದವನ್ನೇನೋ ಹೇಳಿದ್ಧಾರೆ. ಆದರೆ ಅಲ್ಲಿಯೂ ತಮ್ಮದು ಆಡುಮಾತಿನ ಭಾಷೆ ಎನ್ನುವ ಉತ್ತರವನ್ನೂ ಕೊಟ್ಟಿದ್ಧಾರೆ. ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕಾಗಿ ರಾಷ್ಟ್ರಪತಿಗಳಾಗಿರುವ ದ್ರೌಪದಿ ಮುರ್ಮು ಅವರಿಗೆ ಸಂಸತ್ ಭವನ ಉದ್ಘಾಟನೆಗೆ ಆಹ್ವಾನ ನೀಡದೆ ಬಿಜೆಪಿ ನಾಯಕರು ಅವಮಾನಿಸಿರುವುದು ನನಗೆ ತೀವ್ರ ನೋವು ಉಂಟುಮಾಡಿದ್ದು ಮಾತ್ರವಲ್ಲ ನನ್ನಲ್ಲಿ ಆಕ್ರೋಶ ಹುಟ್ಟಿಸಿತ್ತು.ಶೋಷಿತರ ಜಾಗೃತಿ ಸಮಾವೇಶದಲ್ಲಿ ಸ್ವಲ್ಪ ಭಾವುಕನಾಗಿ ಈ ಆಕ್ರೋಶವನ್ನು ಹೊರಹಾಕುವ ಭರದಲ್ಲಿ ಬಾಯ್ತಪ್ಪಿನಿಂದ ರಾಷ್ಟ್ರಪತಿಗಳನ್ನು ಏಕವಚನದಲ್ಲಿ ಸಂಭೋದಿಸಿದೆ. ಗ್ರಾಮೀಣ ಪ್ರದೇಶದಿಂದ ಬಂದ ನನ್ನಂತಹವರು ಅಪ್ಪ-ಅಮ್ಮ ಸೇರಿದಂತೆ ಹಿರಿಯರನ್ನು ಕೂಡಾ ಏಕವಚನದಲ್ಲಿ ಸಂಭೋದಿಸುವುದು ರೂಢಿ.ಗೌರವಾನ್ವಿತ ರಾಷ್ಟ್ರಪತಿಗಳು ನನ್ನಂತೆಯೇ ಶೋಷಿತ ಸಮಾಜದಿಂದ ಬಂದವರು, ಅವರ ಬಗ್ಗೆ ಅಪಾರ ಗೌರವವಿದೆ. ಅವರನ್ನು ಏಕವಚನದಲ್ಲಿ ಸಂಬೋಧಿಸಬಾರದಿತ್ತು. ಅಚಾತುರ್ಯದಿಂದ ಆಗಿರುವ ಈ ಪ್ರಮಾದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ ಸಿದ್ದರಾಮಯ್ಯ.
ಗ್ರಾಮೀಣ ಶೈಲಿ ಅನ್ನೋ ತೇಪೆ ಇನ್ನೂ ಎಷ್ಟು ವರ್ಷ ಹಚ್ಚುತ್ತೀರಿ : ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿದ ನಂತರವೂ ಬಿಜೆಪಿ ನಾಯಕರು ಆಕ್ರೋಶ ಕಡಿಮೆಯಾಗಿಲ್ಲ. ಮಾತನಾಡುವಾಗ ಏಕಚವನದಲ್ಲಿ ಮಾತನಾಡಿ ಬಳಿಕ ಅದಕ್ಕೆ ಗ್ರಾಮೀಣ ಶೈಲಿ ಅನ್ನೋ ತೇಪೆ ಹಚ್ಚುವುದನ್ನು ಎಷ್ಟು ವರ್ಷ ಮಾಡುತ್ತೀರಿ ಎಂದು ಕಿಡಿ ಕಾರಿದ್ದಾರೆ.



