ಸಿದ್ದರಾಮಯ್ಯ ಆರ್ಥಿಕ ಶಿಸ್ತು ಉಲ್ಲಂಘನೆ ಮಾಡಿದ್ದಾರೆ. ಈ ಹಿಂದೆಲ್ಲ ಪ್ರತಿ ಬಾರಿ ಆರ್ಥಿಕ ಶಿಸ್ತಿನ ಪಾಠ ಮಾಡುತ್ತಿದ್ದ ಸಿದ್ದರಾಮಯ್ಯ (Siddaramaiah), ಈ ಬಾರಿ ತಾವೇ ಹೇಳುತ್ತಿದ್ದ ಮಾತನ್ನು ಉಲ್ಲಂಘನೆ ಮಾಡಿದ್ಧಾರೆ. ಗ್ಯಾರಂಟಿ ಯೋಜನೆಗಳಿಗಾಗಿ 52 ಸಾವಿರ ಕೋಟಿ ಹೊರೆ ಹೊತ್ತ ಸಿದ್ದರಾಮಯ್ಯ, ಸಾಲ ಮಾಡಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಯ್ತು. (Financial descipline)
ಒಂದು ರಾಜ್ಯ ಸರ್ಕಾರದ ಸಾಲದ ಪ್ರಮಾಣ ಯಾವತ್ತಿಗೂ ರಾಜ್ಯದ ಒಟ್ಟಾರೆ ಜಿಡಿಪಿಗಿಂತ ಶೇ.25ಕ್ಕಿಂತ ಕಡಿಮೆ ಇರಬೇಕು. ಶೇ.3ರ ಗಡಿ ದಾಟಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಿದ್ದರೂ ರಾಜ್ಯ ಸರ್ಕಾರದ ಸಾಲದ ಪ್ರಮಾಣ ಈ ಬಾರಿ ಒಟ್ಟು 85,818 ಕೋಟಿಗೆ ಏರಿಕೆಯಾಗಿದೆ. ಬಜೆಟ್ ಒಟ್ಟಾರೆ ಕೊರತೆ ಶೇ.3ರ ಗಡಿ ದಾಟಬಾರದು. ಆದರೆ, ಈ ಬಾರಿ ಕೊರತೆ ಶೇ.3ರ ಗಡಿ ದಾಟಲಿದೆ.
ಬೊಮ್ಮಾಯಿ ಸರ್ಕಾರದ ಕಾಲದಲ್ಲಿ ರಾಜ್ಯ ಸರ್ಕಾರದ ಒಟ್ಟಾರೆ ಸಾಲ 5.6 ಲಕ್ಷ ಕೋಟಿ ಇತ್ತು. ರಾಜ್ಯದ ಒಟ್ಟು ಜಿಡಿಪಿ ಪೈಕಿ ಶೇ. 25ರಷ್ಟು ಮಾತ್ರ ಸಾಲ ಇರಬೇಕಾದ್ದು ಸರ್ಕಾರದ ಜವಾಬ್ದಾರಿ. ಇದನ್ನು ಮೀರದಂತೆ ಬಜೆಟ್ ನಿರ್ವಹಣೆ ಮಾಡಬೇಕಾಗುತ್ತದೆ. ಆದ್ರೆ ಬೊಮ್ಮಾಯಿ ಸರ್ಕಾರದ ಬಜೆಟ್ನಲ್ಲಿ ಈ ಮಿತಿ ಅತಿ ಸನಿಹಕ್ಕೆ ಬಂದಿತ್ತು. ಬೊಮ್ಮಾಯಿ ಅವರು 2023-24ನೇ ಆರ್ಥಿಕ ವರ್ಷದಲ್ಲಿ 77,750 ಕೋಟಿ ರೂ. ಸಾಲ ಪಡೆಯಲು ತೀರ್ಮಾನಿಸಿದ್ದರು. ಶೇ. 2.6ರಷ್ಟು ಕೊರತೆ ಬಜೆಟ್ ಮಂಡಿಸಿದ್ದ ಬೊಮ್ಮಾಯಿ, ರಾಜ್ಯದ ಒಟ್ಟು ಜಿಡಿಪಿ ಪೈಕಿ ಶೇ. 3ರ ಒಳಗೆ ಕೊರತೆ ಬಜೆಟ್ ಮಂಡನೆ ಮಾಡಿದ್ದರು. ಅತೀ ಸನಿಹಕ್ಕೆ, ಶೇ.3ರ ಸನಿಹಕ್ಕೆ ಬಂದು.. ಶೇ 2.6ಕ್ಕೇ ನಿಲ್ಲಿಸಿದ್ದರು. ಆಗಲೂ ಸಿದ್ದರಾಮಯ್ಯ ಬೊಮ್ಮಾಯಿಯವರಿಗೆ ಆರ್ಥಿಕ ಶಿಸ್ತಿನ ಪಾಠ ಮಾಡಿದ್ದರು.
ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರೂ ಕೂಡಾ ಬಿಜೆಪಿ ಸರ್ಕಾರದ ಸಾಲದ ನೀತಿ ವಿರುದ್ಧ ಹರಿಹಾಯ್ದಿದ್ದರು. ನಾಲ್ಕು ವರ್ಷಗಳ ಅವಧಿಯಲ್ಲಿ ಬಿಜೆಪಿ ಸರ್ಕಾರ ಮಾಡಿದ್ದ ಸಾಲವನ್ನು ಪ್ರಶ್ನಿಸಿದ್ದರು. 2018ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದಾಗ ರಾಜ್ಯದ ಒಟ್ಟು ಸಾಲ ಕೇವಲ 2.4 ಲಕ್ಷ ಕೋಟಿ ರೂ. ಇತ್ತು ಎಂದು ಸಿದ್ದರಾಮಯ್ಯ ಹೇಳಿದ್ದರು.ಆದರೆ, ಇದೀಗ ಅವರೇ ಶಿಸ್ತು ಉಲ್ಲಂಘನೆ ಮಾಡಿದ್ದಾರೆ.
ಇದಕ್ಕೂ ಮುನ್ನ ನಡೆದ ಬಜೆಟ್ ಪೂರ್ವಭಾವಿ ಸಭೆಗಳಲ್ಲೂ ಸಿದ್ದರಾಮಯ್ಯ ಬಜೆಟ್ ಶಿಸ್ತಿನ ಪಾಠ ಮಾಡಿದ್ದರು. ಆದರೆ 52 ಸಾವಿರ ಕೋಟಿ ಹೆಚ್ಚುವರಿ ಹೊರೆ ಹೊತ್ತುಕೊಂಡ ಸಿದ್ದರಾಮಯ್ಯನವರಿಗೆ ಆರ್ಥಿಕ ಮೂಲಗಳೇ ಸಿಕ್ಕಿಲ್ಲ. ಹೀಗಾಗಿಯೇ ಬಜೆಟ್ಟಿನ ಭಾಷಣದಲ್ಲಿ ಕೇಂದ್ರ ಸರ್ಕಾರದ ಮೇಲೆ ಹಾಗೂ ಬಿಜೆಪಿ ಸರ್ಕಾರದ ಮೇಲೆ ಹರಿಹಾಯ್ದಿದ್ದಾರೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ರಾಜ್ಯದ ಹಣಕಾಸು ಸ್ಥಿತಿ ಗಂಭೀರವಾಗಿದೆ.



