ಮುಡಾ ಹಗರಣ.. ಇಷ್ಟು ವರ್ಷಗಳ ರಾಜಕೀಯ ಜೀವನದಲ್ಲಿ ಸಿದ್ಧರಾಮಯ್ಯ ಕಂಡು ಕೇಳರಿಯದ ಇಕ್ಕಟ್ಟಿಗೆ ಸಿಲುಕಿಸಿದೆ. ಇದೇ ಮೊದಲ ಬಾರಿಗೆ ಹಗರಣದ ಕಪ್ಪು ಮಸಿ ಸಿದ್ಧರಾಮಯ್ಯ ಅವರಿಗೆ ತಟ್ಟಿದೆ. ಕಾಂಗ್ರೆಸ್ಸಿಗರೇ ಹೇಳೋ ಪ್ರಕಾರ ಈ ಹಗರಣದಲ್ಲಿ ಸಿದ್ಧರಾಮಯ್ಯ ಅವರನ್ನು ಕಾನೂನಿನ ಕಟಕಟೆಯಲ್ಲಿ ತಪ್ಪಿತಸ್ಥರಾಗಿ ನಿಲ್ಲಿಸುವುದು ಅಸಾಧ್ಯ. ಆದರೆ.. ಕಪ್ಪು ಚುಕ್ಕೆಯಂತೂ ತಗುಲಿದೆ. ಇಷ್ಟ ವರ್ಷಗಳ ರಾಜಕೀಯ ಜೀವನದಲ್ಲಿ ಮೈಂಟೇನ್ ಮಾಡಿದ್ದ ಕ್ಲೀನ್ ಇಮೇಜ್ ಇನ್ನು ಮುಂದೆ ಇರುವುದಿಲ್ಲ ಎನ್ನುತ್ತಾರೆ.
ಆದರೆ.. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ರಾಜ್ಯದ ಎಲ್ಲ ಸಚಿವರೂ.. ಸಿದ್ಧರಾಮಯ್ಯ ಬೆನ್ನಿಗೆ ನಿಂತಿದ್ದಾರೆ. ಸತೀಶ್ ಜಾರಕಿಹೊಳಿ, ಎಂಬಿ ಪಾಟೀಲ್, ಜಮೀರ್ ಅಹ್ಮದ್, ಎಚ್‌ಸಿ ಮಹದೇವಪ್ಪ, ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ, ಕೃಷ್ಣ ಭೈರೇಗೌಡ, ಭೈರತಿ ಸುರೇಶ್.. ಹೀಗೆ ಎಲ್ಲರೂ ಸಿದ್ಧು ಜೊತೆಯಲ್ಲೇ ಇದ್ದಾರೆ. ಆದರೆ.. ಮೌನವಾಗಿರೋದು ರಾಹುಲ್ ಗಾಂಧಿ.
ಏಕೆಂದರೆ.. ಪ್ರಕರಣದಲ್ಲಿ ಸಿದ್ಧರಾಮಯ್ಯ ಅವರ ಜೊತೆಗಿದ್ದೇವೆ ಎಂದು ಹೈಕಮಾಂಡ್ ನಾಯಕರೇನೋ ಹೇಳುತ್ತಿದ್ಧಾರೆ. ಆದರೆ.. ರಾಹುಲ್ ಗಾಂಧಿ ಮಾತ್ರ ಈ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿಲ್ಲ. ಸೋನಿಯಾ, ಪ್ರಿಯಾಂಕಾ ಗಾಂಧಿಯವರೂ ಸೈಲೆಂಟ್. ಈ ಮೌನದ ಹಿಂದೆ ಬೇರೆಯ ತಂತ್ರಗಾರಿಕೆ ಇದೆಯಾ ಎಂಬ ಕುತೂಹಲವೂ ಇದೆ.
ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರನ್ನು ವಿಚಾರಣೆಗೆ ಒಳಪಡಿಸಲು ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅನುಮತಿ ನೀಡಿದ ಬೆಂಗಳೂರಿಗೆ ಬಂದಿದ್ದ ಮಲ್ಲಿಕಾರ್ಜುನ ಖರ್ಗೆ, ಸಿದ್ಧರಾಮಯ್ಯ, ಡಿಕೆಶಿ ಸೇರಿದಂತೆ ಪ್ರಮುಖರ ಜೊತೆ ಸುದೀರ್ಘ ಸಭೆ ನಡೆಸಿದ್ದಾರೆ. ಮಾತುಕತೆ ವೇಳೆ ಸರ್ಕಾರಕ್ಕೆ ಯಾವುದೇ ಸಮಸ್ಯೆಯಾಗದಂತೆ ಮಾರ್ಗಗಳು, ನ್ಯಾಯಾಲಯಗಳ ತೀರ್ಪಿನ ಸಾಧಕ-ಬಾಧಕಗಳು, ಪರಿಣಾಮ ಮತ್ತು ಪಕ್ಷದ ನಿಲುವು ಕುರಿತು ಚರ್ಚೆ ನಡೆಸಿದ್ದಾರೆ. ಆದರೆ.. ಮಾಧ್ಯಮಗಳ ಎದುರು ಜಾಣತನದ ನಡೆ ಪ್ರದರ್ಶನ ಮಾಡಿದ್ಧಾರೆ.
ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳಲ್ಲಿ ಬಿಜೆಪಿ ರಾಜ್ಯಪಾಲರನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಹೇಳಿಕೆ ನೀಡಿದ್ದು ಬಿಟ್ಟರೆ, ಖರ್ಗೆ ಬೇರೆ ಟೀಕೆಯನ್ನೇನೂ ಮಾಡಿಲ್ಲ. ಅಷ್ಟೇ ಅಲ್ಲ, ಮರುದಿನ ಪತ್ರಕರ್ತರ ಎದುರು ಪದೇ ಪದೇ ಹೇಳಿದ್ದನ್ನೇ ಹೇಳ್ಬೇಕೇನ್ರಿ.. ಪದೇಪದೆ ಅದೇ ಮಾತನ್ನು ಚರ್ಚಿಸುವುದರಲ್ಲಿ ಅರ್ಥವಿಲ್ಲ, ನಿನ್ನೆ ಮತ್ತು ಮೊನ್ನೆ ಪಕ್ಷದ ಅಧ್ಯಕ್ಷನಾಗಿ ಹೇಳಿಕೆ ನೀಡಿದ್ದೇನೆ, ನಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ರಾಜ್ಯಾದಂತ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ ಮತ್ತು ಪತ್ರಿಕಾ ಗೋಷ್ಠಿಗಳನ್ನು ನಡೆಸುತ್ತಿದ್ದಾರೆ, ಎಲ್ಲವನ್ನೂ ಮಾಧ್ಯಮದವರ ಮುಂದೆ ಸ್ಪಷ್ಟಪಡಿಸಲಾಗಿದೆ, ಹಾಗಾಗಿ ಮತ್ತೊಮ್ಮೆ ಹೇಳಿಕೆ ನೀಡುವ ಅಗತ್ಯವಿಲ್ಲ ಎಂದು ಸಿಡುಕಿದ್ದಾರೆ.
ರಾಹುಲ್ ಗಾಂಧಿ ಕೋಲ್ಕತ್ತಾದದಲ್ಲಿ ನಡೆದ ಡಾಕ್ಟರ್ ಗ್ಯಾಂಗ್ ರೇಪ್ & ಮರ್ಡರ್ ಕೇಸಿನಲ್ಲಿ ಮಮತಾ ಬ್ಯಾನರ್ಜಿ ರಾಜೀನಾಮೆಗೆ ಒತ್ತಾಯಿಸಿದ್ದರು. ಮಮತಾ ಬ್ಯಾನರ್ಜಿ ಅವರ ಟಿಎಂಸಿ, ಲೋಕಸಭೆಯಲ್ಲಿ ಕಾಂಗ್ರೆಸ್ ಮಿತ್ರಪಕ್ಷವಾಗಿತ್ತು. ಯಾವಾಗ ಮಮತಾ ರಾಜೀನಾಮೆ ಕೇಳಿದರೋ.. ಆಟ ಟಿಎಂಸಿ ನಾಯಕರೆಲ್ಲ ಒಟ್ಟಾಗಿ.. ಸಿದ್ಧರಾಮಯ್ಯ ಹೆಸರು ಹೇಳಿ ಕೌಂಟರ್ ಕೊಟ್ಟಿದ್ದಾರೆ. ರಾಹುಲ್ ಗಾಂಧಿಯವರೇ, ಹಾಗಾದರೆ ನಿಮ್ಮ ಮುಖ್ಯಮಂತ್ರಿಯವರಿಗೆ ರಾಜೀನಾಮೆ ನೀಡಲು ಹೇಳುವಿರಾ? ನಿಮ್ಮ ಸಿಎಂ ಮೇಲೆ ಭ್ರಷ್ಟಾಚಾರದ ಆರೋಪವಿದೆ. ಸರಿಯಾದ ಮಾಹಿತಿಯಿಲ್ಲದೇ, ಮಮತಾ ಬ್ಯಾನರ್ಜಿ ಸರ್ಕಾರ ಯಾವ ಕ್ರಮಗಳನ್ನು ತೆಗೆದುಕೊಂಡಿದೆ ಎನ್ನುವುದನ್ನು ಅರಿಯದೇ ನೀವು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದೀರಿ. ಈಗ, ನಿಮ್ಮ ಮುಖ್ಯಮಂತ್ರಿಗಳ ವಿರುದ್ದ ದಯವಿಟ್ಟು ಕ್ರಮವನ್ನು ತೆಗೆದುಕೊಳ್ಳಿ ಎನ್ನುತ್ತಿದ್ದಾರೆ.
ಆದರೆ.. ಖರ್ಗೆ ಮತ್ತು ರಾಹುಲ್ ಗಾಂಧಿಯವರ ಈ ರೀತಿಯ ವರ್ತನೆ ರಾಜಕೀಯವಾಗಿ ಬೇರೆಯದೇ ಸಂದೇಶ ನೀಡುತ್ತಿದೆ. ಅದಕ್ಕೆ ಕಾರಣವೂ ಇದೆ. ಪ್ರಕರಣದಲ್ಲಿ ಸಿದ್ಧರಾಮಯ್ಯ ಅವರನ್ನು ತನಿಖಾ ಸಂಸ್ಥೆಗಳು ವಿಚಾರಣೆ ನಡೆಸುವ ಪರಿಸ್ಥಿತಿ ತಲೆದೋರಿದರೆ.. ಏನಾಗಲಿದೆ ಎಂದು ಕಾದು ನೋಡಬೇಕು. ಅಕಸ್ಮಾತ್.. ಸಿದ್ಧರಾಮಯ್ಯ ಅರೆಸ್ಟ್ ಆದರೆ.. ಕೇಜ್ರಿವಾಲ್ ಮಾಡಿದಂತೆ ಮಾಡುವುದಕ್ಕೆ ಆಗುವುದಿಲ್ಲ. ಕೇಜ್ರಿವಾಲ್ ಅವರದ್ದೇನೋ.. ಎರಡು ರಾಜ್ಯಗಳಲ್ಲಿ ಮಾತ್ರವೇ ಅಸ್ಥಿತ್ವದಲ್ಲಿ ಇರುವ ಪಕ್ಷ. ಆದರೆ. ಕಾಂಗ್ರೆಸ್ ಪರಿಸ್ಥಿತಿ ಹಾಗಲ್ಲ. ಅದು ರಾಷ್ಟ್ರೀಯ ಪಕ್ಷ. ಹೀಗಾಗಿಯೇ.. ಸಿದ್ಧರಾಮಯ್ಯ ವಿಷಯದಲ್ಲಿ ಕಾಂಗ್ರೆಸ್ ಜೊತೆಗಿದ್ದೂ ಇಲ್ಲದಂತೆ.. ಇಲ್ಲದೆಯೂ ಇದ್ದಂತೆ.. ಗರಗಸದ ಮೇಲಿನ ನಡಿಗೆ ಇಡುತ್ತಿದೆ.



