ಸಿಎಂ ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೆಳಗಿಳೀತಾರಾ.. ಮಾನಸಿಕವಾಗಿ ರೆಡಿ ಆಗಿದ್ದಾರಾ.. ಈ ಪ್ರಶ್ನೆಗೆ ಉತ್ತರ ಕೇಳಿದರೆ ಎಸ್ ಎನ್ನಲೇಬೇಕು. ಅಧಿಕಾರ ಇದ್ದಷ್ಟು ದಿನ ಇರುತ್ತೇನೆ ಎನ್ನುತ್ತಿದ್ದಾರೆ ಸಿದ್ದರಾಮಯ್ಯ. ಆ ಪ್ರಕಾರ ನೋಡಿದರೆ ಏನ್ ಬೇಕಾದರೂ ಆಗಬಹುದು ಎನ್ನುವ ಸೂಚನೆ ಸಿಗುತ್ತದೆ. ಆದರೆ ಹಾಗಿಲ್ಲ. ಬಹಿರಂಗವಾಗಿಯೇ ನಡೆದಿರುವ ಬೆಳವಣಿಗೆಗಳನ್ನು ಸ್ವಲ್ಪ ಯೋಚಿಸಿ ನೋಡಿದರೆ ಸಾಕು, ಏನು ಎನ್ನುವುದು ಅರ್ಥವಾಗಿಬಿಡುತ್ತದೆ.
ಬಹಿರಂಗ ಸಾಕ್ಷಿ ನಂ.1
ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರನ್ನು ಅಸ್ಸಾಂ ರಾಜ್ಯದ ವಿಧಾನಸಭೆ ಚುನಾವಣೆ ವೀಕ್ಷಕರನ್ನಾಗಿ ನೇಮಿಸಿ ಎಐಸಿಸಿ ಆದೇಶ ಹೊರಡಿಸಿದ್ದಾರೆ. ಅದರಲ್ಲೇನು ವಿಶೇಷ ಅಂತೀರಾ. ಅಸ್ಸಾಂ ಎಲೆಕ್ಷನ್ ಇರೋದು ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ. ಏಪ್ರಿಲ್ ತಿಂಗಳ ಕೊನೆಯ ಹೊತ್ತಿಗೆ ಅಲ್ಲಿ ಚುನಾವಣೆ ಮುಗಿಯಬೇಕು. ಆಗ ಕೇವಲ ಅಸ್ಸಾಂ ಅಲ್ಲ, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ರಾಜ್ಯಗಳ ಚುನಾವಣೆಯೂ ಇರಲಿದೆ. ಹೀಗಿರುವಾಗ ರಾಜ್ಯದ ಉಪಮುಖ್ಯಮಂತ್ರಿಯೂ ಆಗಿರುವ ಡಿಕೆ ಶಿವಕುಮಾರ್ ಅವರನ್ನು ಅಸ್ಸಾಂ ವೀಕ್ಷಕರನ್ನಾಗಿ ನೇಮಿಸಿದೆ ಎಂದರೆ ಅದರ ಅರ್ಥ ಏಪ್ರಿಲ್‌ವರೆಗಂತೂ ನೋ ಪ್ರಾಬ್ಲಂ. ಉಪ ಮುಖ್ಯಮಂತ್ರಿಯೊಬ್ಬರನ್ನು ವಿಧಾನಸಭೆ ವೀಕ್ಷಕರನ್ನಾಗಿ ನೇಮಿಸುವುದು ವಿರಳ. ಹೀಗಾಗಿ ಅಸ್ಸಾಂ ಚುನಾವಣೆ ಮುಗಿಯುವವರೆಗೂ (ಮಾರ್ಚ್-ಏಪ್ರಿಲ್‌ವರೆಗೂ) ರಾಜ್ಯದಲ್ಲಿ ಅಧಿಕಾರ ಬದಲಾವಣೆಯಿಲ್ಲ ಎಂಬ ಚರ್ಚೆಗಳು ಚಾಲ್ತಿಯಲ್ಲಿವೆ.
ಬಹಿರಂಗ ಸಾಕ್ಷಿ ನಂ.2
ಇನ್ನು ಸಿದ್ದರಾಮಯ್ಯ ಬಜೆಟ್ ಮಂಡನೆಗೆ ಸಿದ್ಧತೆ ನಡೆಸಿದ್ದಾರೆ. ನೇರವಾಗಿಯೇ ಎಲ್ಲ ಅಧಿಕಾರಿಗಳ ಜೊತೆ ಚರ್ಚೆ, ವಿವರಣೆ, ಮಾಹಿತಿ ಕಲೆಹಾಕುತ್ತಿದ್ದಾರೆ. ಅದರ ಅರ್ಥ ಸಿದ್ದರಾಮಯ್ಯ ಅವರೇ ಬಜೆಟ್ ಮಂಡನೆ ಮಾಡಲಿದ್ದಾರೆ. ಅದರ ಸಂದೇಶವೂ ಸಿಂಪಲ್. ಈ ಬಾರಿಯ ಬಜೆಟ್‌ನ್ನೂ ಸಿದ್ದರಾಮಯ್ಯ ಅವರೇ ಮಂಡನೆ ಮಾಡಲಿದ್ದಾರೆ. ಬಜೆಟ್ ಸಿದ್ದತೆ ಮಾಡಿ ಫೆಬ್ರವರಿಯಲ್ಲಿ ಬಜೆಟ್ ಮಂಡನೆಗೆ ಸಿಎಂ ಅವರೇ ದಿನಾಂಕ ನಿಗದಿ ಮಾಡುತ್ತಾರೆ. ಈ ಬಾರಿ ಅಭಿವೃದ್ಧಿಗೆ ಹೆಚ್ವು ಮಹತ್ವದ ಕೊಡುವ ಚಿಂತನೆ ಇದೆ. ಕಳೆದ ವರ್ಷಕ್ಕಿಂತ ಜಾಸ್ತಿ ಬಜೆಟ್ ಗಾತ್ರ ದಾಟಲಿದೆ.
ಸಿದ್ದರಾಮಯ್ಯ ಅವರೇನೋ ಒಂದೊಂದು ಘಳಿಗೆಗೆ ಒಂದೊಂದು ಮಾತು ಹೇಳುತ್ತಿದ್ದಾರೆ. ನಾನೇ ಪೂರ್ಣಾವಧಿಗೆ ಸಿಎಂ ಎನ್ನುವ ಸಿದ್ದರಾಮಯ್ಯ, ನಂತರ ಹೇಳೋದು ಹೈಕಮಾಂಡ್ ಹೇಳಿದಂತೆ ಎಂಬ ಮಾತು. ಅಧಿಕಾರ ಎಷ್ಟು ದಿನ ಇರುತ್ತದೋ ಗೊತ್ತಿಲ್ಲ ಎನ್ನುವ ಸಿದ್ದರಾಮಯ್ಯ ಅವರೇ, ತಕ್ಷಣದಲ್ಲೇ ಅದಕ್ಕೆ ಉಲ್ಟಾ ಎಂಬಂತೆ ಮಾತನಾಡಿಬಿಡುತ್ತಾರೆ. ಅದು ವಿದಾಯದ ಮಾತೋ.. ಬಂಡಾಯದ ಮಾತೋ.. ಅರ್ಥವಾಗದೆ ಜನ ಇನ್ನಷ್ಟು ಹುಳ ಬಿಟ್ಟುಕೊಳ್ತಾರೆ. ಸಿದ್ದರಾಮಯ್ಯ ಅವರಿಗೆ ಸದ್ಯಕ್ಕೆ ಬೇಕಿರುವುದೇ ಅದು. ಎಲ್ಲಿಯವರೆಗೆ ಜನ ಗೊಂದಲದಲ್ಲಿರ್ತಾರೋ.. ಅಲ್ಲಿಯವರೆಗೆ ಸಿದ್ದರಾಮಯ್ಯ ಅವರ ಸಿಎಂ ಪಟ್ಟ ಸೇಫ್. ಸಿದ್ದರಾಮಯ್ಯ ಹೋರಾಟ ಮಾಡಿ ಲೀಡರ್ ಆದವರಲ್ಲ, ಅದ್ಭುತ ತಂತ್ರಗಾರಿಕೆ ಮಾಡಿಯೇ ಗೆದ್ದವರು ಎನ್ನುವುದು ರಾಜಕೀಯ ಪಂಡಿತರ ವಿಶ್ಲೇಷಣೆ.



