ರಾಜ್ಯದಲ್ಲಿ ಸಿಎಂ ಸಿದ್ಧರಾಮಯ್ಯ ಕುರ್ಚಿ ಭದ್ರವಾಗಿದೆ ಎನ್ನುವುದು ಮೇಲ್ನೋಟಕ್ಕೆ ಕಾಣುತ್ತಿರುವ ಅಂಶ. ಆದರೆ, ಒಳಗೊಳಗೆ ನಡೆಯುತ್ತಿರುವ ಬೆಳವಣಿಗೆಗಳು ಆ ನಿರ್ಧಾರಕ್ಕೆ ಪೂರಕವಾಗಿಲ್ಲ ಎಂಬ ಮಾಹಿತಿಯೂ ಸತ್ಯ. ಏಕೆಂದರೆ, ಕಾಂಗ್ರೆಸ್ಸಿನಲ್ಲಿ ಸಿಎಂ ರೇಸಿನಲ್ಲಿರುವ ನಾಯಕರು ಪದೇ ಪದೇ ದೆಹಲಿಗೆ ಹೋಗುತ್ತಿದ್ದಾರೆ. ಬರುತ್ತಿದ್ದಾರೆ. ಸಭೆ ನಡೆಸುತ್ತಿದ್ದಾರೆ. ಅದರಲ್ಲಿ ಮುಖ್ಯವಾಗಿ ಸತೀಶ್ ಜಾರಕಿಹೊಳಿ, ಪರಮೇಶ್ವರ್ ಇದ್ದಾರೆ.
ನಾನು ದೆಹಲಿಗೆ ಪದೇ ಪದೆ ಹೋಗುತ್ತಿರುತ್ತೇನೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ತಮ್ಮ ದೆಹಲಿ ಪ್ರವಾಸದ ಹಿಂದೆ ಯಾವುದೇ ರಾಜಕೀಯ ಇಲ್ಲ ಎನ್ನುತ್ತಿದ್ದಾರೆ ಸತೀಶ್ ಜಾರಕಿಹೊಳಿ. ಹೊಸ ಸಿಎಂ ಕೂಗಿನ ಬೆನ್ನಹಿಂದೆಯೇ ನಿಮ್ಮ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆಯಲ್ಲ ಎಂಬ ಪ್ರಶ್ನೆಗೆ ಮುಗುಳ್ನಗೆಯ ಉತ್ತರ ಕೊಡುತ್ತಿದ್ದಾರೆ. ಮೊನ್ನೆ ದೆಹಲಿಗೆ ಹೋಗಿದ್ದೀರಿ. ಪಕ್ಷದ ಹೈಕಮಾಂಡ್ ನಿಮ್ಮ ಜೊತೆ ಮಾತನಾಡಿದೆಯಲ್ಲ ಎಂಬ ಪ್ರಶ್ನೆಗೂ ಮುಗುಳ್ನಗೆಯೇ ಸತೀಶ್ ಜಾರಕಿಹೊಳಿಯವರ ಉತ್ತರ.
ಮತ್ತೊಬ್ಬರೆಂದರೆ ಜಿ.ಪರಮೇಶ್ವರ್. ಪರಮೇಶ್ವರ್ ಕೂಡಾ ದೆಹಲಿಗೆ ಹೋಗಿ ಹೈಕಮಾಂಡ್ ಮಟ್ಟದಲ್ಲಿ ನಾಯಕರನ್ನೆಲ್ಲ ಭೇಟಿ ಮಾಡಿ ಬಂದಿದ್ದಾರೆ. ಈ ಹಿಂದೆ ಸಚಿವ ಸತೀಶ್ ಜಾರಕಿಹೊಳಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದ ಡಾ.ಜಿ.ಪರಮೇಶ್ವರ್ ಅವರು, ಇದೀಗ ಸಚಿವ ಎಂಬಿ. ಪಾಟೀಲ್ ಅವರನ್ನು ಭೇಟಿ ಮಾಡಿದ್ದಾರೆ. ಪರಮೇಶ್ವರ್, 2013ರಲ್ಲಿ ಸಿಎಂ ರೇಸಿನಲ್ಲಿ ಮುಂಚೂಣಿಯಲ್ಲಿದ್ದವರು. ಆದರೆ, ಸೋತ ಕಾರಣ, ಅವಕಾಶ ಸಿದ್ಧರಾಮಯ್ಯನವರ ಪಾಲಿಗೆ ಸಲೀಸಾಗಿ ಸಿಕ್ಕಿತ್ತು. ಪರಮೇಶ್ವರ್ ಅವರ ಸೋಲಿಗೆ ಸಿದ್ಧರಾಮಯ್ಯನವರೇ ಕಾರಣ ಎನ್ನುವ ಮಾತುಗಳು ದಶಕ ಕಳೆದರೂ ಇವತ್ತಿಗೂ ಚಾಲ್ತಿಯಲ್ಲಿವೆ. ಈ ನಡುವೆ ಪರಮೇಶ್ವರ್ ಅವರ ಮೀಟಿಂಗ್ ಮೇಲೆ ಮೀಟಿಂಗ್ ಕುತೂಹಲ ಹುಟ್ಟಿಸಿದೆ.
ಪರಮೇಶ್ವರ ಅವರು ಇತ್ತೀಚೆಗೆ ವಿಶೇಷ ವಿಮಾನದಲ್ಲಿ ಸಿದ್ದರಾಮಯ್ಯ, ವಸತಿ ಸಚಿವ ಜಮೀರ್ ಅಹಮದ್ ಖಾನ್, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸೇರಿದಂತೆ ಅವರ ಬೆಂಬಲಿಗರೊಂದಿಗೆ ದೆಹಲಿಗೆ ಭೇಟ ನೀಡಿದ್ದರು. ಸಿದ್ದರಾಮಯ್ಯ ಹಾಗೂ ಇತರೆ ನಾಯಕರು ಹೈಕಮಾಂಡ್ ಜೊತೆ ಮಾತುಕತೆ ನಡೆಸಿದ ಬಳಿಕ ರಾಜ್ಯಕ್ಕೆ ಮರಳಿದ್ದರೂ ಪರಮೇಶ್ವರ್ ಅವರು ದೆಹಲಿಯಲ್ಲಿಯೇ ಉಳಿದುಕೊಂಡಿದ್ದು, ಹಲವರ ಆಶ್ಚರ್ಯಕ್ಕೆ ಕಾರಣವಾಗಿತ್ತು. ದೆಹಲಿಯಲ್ಲಿದ್ದ ಪರಮೇಶ್ವರ್ ಅವರು ರಾಹುಲ್ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಿದ್ದರು. ಇದು ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿತ್ತು.
ಆದರೆ ಇಂತಹ ಭೇಟಿ, ಮಾತುಕತೆಗಳಿಗೆಲ್ಲ ಎಂಬಿ ಪಾಟೀಲ್ ಹೇಳೋದೇ ಬೇರೆ. ಅವರಿಗೆ ಟಾಂಗ್ ಕೊಟ್ಟಿರೋದು ಬೇರಾರೋ ಅಲ್ಲ, ಅವರದ್ದೇ ಸರ್ಕಾರದ ಸಚಿವ ಶಿವಾನಂದ ಪಾಟೀಲ್. ಅವರ ಮಾತಿಗೆ ಉತ್ತರ ಕೊಟ್ಟಿರೋ ಸಚಿವ ಎಂಬಿ ಪಾಟೀಲ್ ಈಗ ಅಂತಹ ಸನ್ನಿವೇಶ ಬಂದಿಲ್ಲ, ಸಿದ್ದರಾಮಯ್ಯ ಅವರೇ ಸಿಎಂ ಆಗಿರ್ತಾರೆ. ನಾನು ಹಿರಿಯನಿದ್ದೇನೆ. ಒಂದಲ್ಲ ಒಂದು ದಿನ ಮುಖ್ಯಮಂತ್ರಿ ಆಗ್ತೇನೆ. ಆದರೆ ಶಿವಾನಂದ ಪಾಟೀಲ್ ಆಗೊಲ್ಲ. ಯಾಕೆಂದರೆ ಅವರು ಜೆಡಿಎಸ್‌ನಿಂದ ಬಂದವರು. ವಿಜಯಪುರದಿಂದ ಸಿಎಂ ಆಗೋದು ನಾನೇ ಎಂದು ಶಿವಾನಂದ ಪಾಟೀಲ್‌ಗೆ ತಿರುಗೇಟು ನೀಡಿದ್ದಾರೆ.
ಉಪಸಂಹಾರ : ವಿಷಯವೇನೆಂದರೆ, ಸದ್ಯಕ್ಕೆ ಸಿಎಂ ರೇಸ್ ನಡೆಯುತ್ತಿರುವುದಂತೂ ಸತ್ಯ. ಆದರೆ, ಇದೆಲ್ಲದರ ಕೇಂದ್ರ ಬಿಂದು ಡಿಕೆ ಶಿವಕುಮಾರ್ ಅವರೇ ಹೊರತು, ಸಿದ್ಧರಾಮಯ್ಯ ಅಲ್ಲ. ಅಕಸ್ಮಾತ್, ಸಿದ್ಧರಾಮಯ್ಯ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ಎದುರಾದರೆ, ತಮ್ಮತಮ್ಮಲ್ಲಿ ಒಬ್ಬರಿಗೆ ಬೆಂಬಲ ಕೊಡೋಣ ಎಂಬ ಮಾತುಕತೆ ನಡೆಯುತ್ತಿದೆಯಂತೆ. ಆ ಕಾರಣಕ್ಕಾಗಿಯೇ ವಾಲ್ಮೀಕ ಸಮುದಾಯದ ಸತೀಶ್ ಜಾರಕಿಹೊಳಿ, ಪರಿಶಿಷ್ಟ ವರ್ಗದ ನಾಯಕ ಪರಮೇಶ್ವರ್ ಹಾಗೂ ಲಿಂಗಾಯತ ಸಮುದಾಯಕ್ಕೆ ಸೇರಿರುವ ಎಂಬಿ ಪಾಟೀಲ್ ನಡುವೆ ಮಾತುಕತೆ ನಡೆಯುತ್ತಿದೆ ಎಂಬ ಮಾಹಿತಿಗಳಿವೆ. ಆದರೆ, ಎಲ್ಲವೂ ಹೈಕಮಾಂಡ್ ಆಗ ತೆಗೆದುಕೊಳ್ಳೋ ನಿರ್ಧಾರದ ಮೇಲೆಯೇ ಅವಲಂಬಿತವಾಗಿದೆ ಎನ್ನುವುದಂತೂ ಸ್ಪಷ್ಟ.



