ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಕುಮಾರಸ್ವಾಮಿ ಅವರನ್ನೇ ಪಕ್ಷದಿಂದ ಉಚ್ಚಾಟನೆ ಮಾಡಬಹುದಾ? ಇದು ಸಾಧ್ಯವೇ..? ಇಂತಾದ್ದೊಂದು ಪ್ರಶ್ನೆ ಹುಟ್ಟುವುದಕ್ಕೆ ಕಾರಣ ಸಿಎಂ ಇಬ್ರಾಹಿಂ ನೀಡಿರುವ ಹೇಳಿಕೆ. 2024ರ ಲೋಕಸಭೆ ಚುನಾವಣೆಗೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಪಕ್ಷದ ನಾಯಕತ್ವದ ನಿರ್ಧಾರದಿಂದ ಅಸಮಾಧಾನಗೊಂಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರದ ಮಾಜಿ ಸಚಿವ ಸಿಎಂ ಇಬ್ರಾಹಿಂ ಬೆಂಗಳೂರಿನ ಹೊಟೇಲ್ ನಲ್ಲಿ ವಿಶೇಷವಾಗಿ ಮುಸ್ಲಿಂ ಸಮುದಾಯದ ಅನುಯಾಯಿಗಳ ಸಭೆ ನಡೆಸಿದ್ರು.
ಈ ಸಮಯದಲ್ಲಿ ತಮ್ಮನ್ನು ಕಡೆಗಣಿಸಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡ ಬಗ್ಗೆ ಅಸಮಾಧಾನಗೊಂಡ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಪಕ್ಷದ ವರಿಷ್ಠರಾಗಿರುವ ಹೆಚ್ಡಿ ದೇವೇಗೌಡ ಹಾಗೂ ಹೆಚ್ಡಿ ಕುಮಾರಸ್ವಾಮಿ ವಿರುದ್ಧ ತಿರುಗಿಬಿದ್ದಿದ್ದಾರೆ. ಅಲ್ಲದೆ, ನಾನು ಜೆಡಿಎಸ್ ಅಧ್ಯಕ್ಷ, ನನ್ನನ್ನು ತೆಗೆದು ಹಾಕಲು ಸಾಧ್ಯವಿಲ್ಲ. ಪಕ್ಷ ಕುಟುಂಬದ ಸ್ವತ್ತಲ್ಲ ಎಂದು ಹೇಳಿದ್ದಾರೆ.
ಜೆಡಿಎಸ್ ಕರ್ನಾಟಕ ಚಿಂತನ ಮಂಥನ ಸಭೆಯಲ್ಲಿ ಮಾತನಾಡಿದ ಸಿಎಂ ಇಬ್ರಾಹಿಂ ಒರಿಜಿನಲ್ ಜೆಡಿಎಸ್ ನಮ್ಮದೇ, ಅಧ್ಯಕ್ಷ ಸ್ಥಾನದಿಂದ ತೆಗೆಯಲು ಆಗಲ್ಲ. ಚನ್ನಪಟ್ಟಣ ಕ್ಷೇತ್ರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಗೆದ್ದಿದ್ದು ಹೇಗೆ? ಕುಮಾರಸ್ವಾಮಿ ಎಂಎಲ್ಎ ಆಗಿದ್ದಕ್ಕೆ ಅಮಿಶ್ ಶಾ ಕರೆದಿದ್ದು. ಮುಸ್ಲಿಮರ ಮತ ಹಾಕದಿದ್ದರೆ ನೀವು ಸೋತು ಮನೆಯಲ್ಲಿ ಇರಬೇಕಿತ್ತು. ಕುಮಾರಸ್ವಾಮಿ ಬಗ್ಗೆ ವೈಯಕ್ತಿಕ ಟೀಕೆ ಮಾಡಲ್ಲ, ಈಗಲೂ ಅವಕಾಶ ಇದೆ. ನಾವು ಬಿಜೆಪಿ ಜೊತೆ ಹೋಗಲ್ಲ, ಕೋರ್ ಕಮಿಟಿ ರಚನೆ ಮಾಡುತ್ತೇವೆ. ಜೆಡಿಎಸ್ನ ಎಲ್ಲಾ ಶಾಸಕರನ್ನು ಸಂಪರ್ಕ ಮಾಡುತ್ತೇನೆ. ಪಕ್ಷ ಕುಟುಂಬದ ಸ್ವತ್ತು ಅಲ್ಲ, ಸರ್ವರ ಅಭಿಪ್ರಾಯ ಬಹಳ ಮುಖ್ಯ ಎಂದು ಹೇಳಿದ್ದಾರೆ.
ಕುಮಾರಸ್ವಾಮಿ ಅವರನ್ನ ಉಚ್ಚಾಟನೆ ಮಾಡ್ತೀರಾ..?
ನಿಮ್ಮ ನಿಲುವು ಒಪ್ಪದೇ ಹೋದರೆ ಕುಮಾರಸ್ವಾಮಿರನ್ನ ಉಚ್ಚಾಟನೆ ಮಾಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಉಚ್ಚಾಟನೆಗೆ ಕಾಲ ಪಕ್ವ ಆಗಿಲ್ಲ. ನಾನೇ ಜೆಡಿಎಸ್ ಬಿಟ್ಟು ಹೋಗ್ತೀನಿ ಅಂತಾರೆ, ಏನ್ ಮಾಡಲಿ. ನಾನು ಜೆಡಿಎಸ್ ಬಿಟ್ಟು ಹೋಗೊಲ್ಲ. ನಮ್ಮ ಮನೆ ಬಿಟ್ಟು ನಾನು ಯಾಕೆ ಹೋಗಲಿ. ನಮ್ಮ ನಿಲುವು ದೇವೇಗೌಡರಿಗೆ ತಿಳಿಸ್ತೀವಿ. ಅವರು ಒಪ್ಪದೇ ಹೋದರೆ ಏನ್ ಮಾಡ್ತೀವಿ ಅಂತ ಕಾದುನೋಡಿ. ಕುಮಾರಸ್ವಾಮಿ ಉಚ್ಚಾಟನೆ ಮಾಡ್ತೀರಾ ಅನ್ನೋ ಪ್ರಶ್ನೆಗೆ ವೇಯ್ಟ್ ಅಂಡ್ ಸೀ ಎಂದಿದ್ದಾರೆ.
ಇದು ಸಾಧ್ಯವೇ..?
ಒಂದೇ ಮಾತಿನಲ್ಲಿ ಹೇಳಬೇಕು ಎಂದರೆ ಇದು ಸಾಧ್ಯ. ಅಧಿಕೃತವಾಗಿ ಜೆಡಿಎಸ್ ರಾಜ್ಯಾಧ್ಯಕ್ಷರಾಗಿರುವ ಸಿಎಂ ಇಬ್ರಾಹಿಂ ಅವರಿಗೆ ಈ ಅಧಿಕಾರ ಇದೆ. ಆದರೆ ತಾಂತ್ರಿಕವಾಗಿ ಇರುವ ಅಧಿಕಾರ ವಾಸ್ತವದಲ್ಲಿ ಜಾರಿಯಾಗುತ್ತಾ ಅನ್ನೋದು ಪ್ರಶ್ನೆ. ತೀರಾ ಇತ್ತೀಚೆಗೆ ಶಿವಸೇನೆ ಶಾಸಕರು ರಾಜ್ಯಾಧ್ಯಕ್ಷ ಉದ್ಧವ್ ಠಾಕ್ರೆ ಅವರನ್ನು ಧಿಕ್ಕರಿಸಿ ಹೋದಾಗ ಕಾನೂನಾತ್ಮಕವಾಗಿ ಶಾಸಕರ ಸಂಖ್ಯೆಗೇ ಗೆಲುವು ಸಿಕ್ಕಿತ್ತು. ಜೆಡಿಯುನಲ್ಲಿ ನಿತೀಶ್ ಕುಮಾರ್ ಅವರು ಶರದ್ ಯಾದವ್ ಅವರನ್ನೇ ಹೊರಹಾಕಿದ್ದರು. ಅಷ್ಟೇ ಏಕೆ, ಸ್ವತಃ ದೇವೇಗೌಡರೇ ರಾಮಕೃಷ್ಣ ಹೆಗಡೆ ಅವರನ್ನು ಪಕ್ಷದಿಂದ ಹೊರ ಹಾಕಿದ್ದರು (ಪ್ರಧಾನಿಯಾಗಿದ್ದಾಗ, ಜನತಾ ದಳದಲ್ಲಿ). ಅಷ್ಟೇ ಅಲ್ಲ ಕುಮಾರಸ್ವಾಮಿ ಬಿಜೆಪಿ ಜೊತೆ ಸರ್ಕಾರ ಮಾಡಿದಾಗ ದೇವೇಗೌಡರೇ ಕುಮಾರಸ್ವಾಮಿ ಅವರನ್ನು ಹೊರಹಾಕಿದ್ದರು. ಎಲ್ಲವೂ ಇತಿಹಾಸ. ಇವತ್ತಿಗೂ ಕುಮಾರಸ್ವಾಮಿ ಜೆಡಿಎಸ್ನಲ್ಲಿದ್ದಾರೆ. ಎಲೆಕ್ಷನ್ ನಡೆದಾಗ ಅವರೇ ಸಿಎಂ ಕ್ಯಾಂಡಿಡೇಟ್. ಇಷ್ಟಿದ್ದರೂ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರಿಗೆ ಕುಮಾರಸ್ವಾಮಿ ಅವರನ್ನು ಉಚ್ಚಾಟನೆ ಮಾಡುವ ಅಧಿಕಾರವಂತೂ ಇದೆ.



