ಜೆಡಿಎಸ್. ಜಾತ್ಯತೀತ ಜನತಾದಳ. ಈ ಪಕ್ಷದ ಸಂಸ್ಥಾಪಕರನ್ನೇ ಉಚ್ಚಾಟನೆ ಮಾಡಲಾಗಿದೆ. ಅರ್ಥಾತ್ ದೇವೇಗೌಡರನ್ನೇ ಪಕ್ಷದಿಂದ ಹೊರಹಾಕಲಾಗಿದೆ. ದೇವೇಗೌಡರನ್ನು ಪಕ್ಷದಿಂದ ಹೊರಹಾಕಿರುವುದು ಸಿಎಂ ಇಬ್ರಾಹಿಂ. ಸಿಎಂ ಇಬ್ರಾಹಿಂ ಅವರು ಹಾಗೂ ಅವರ ಜೊತೆಗಿರುವವರ ಪ್ರಕಾರ ದೇವೇಗೌಡರಿಗೂ ಜೆಡಿಎಸ್ʻಗೂ ಇನ್ನು ಮುಂದೆ ಯಾವುದೇ ಸಂಬಂಧ ಇಲ್ಲ. ಜೆಡಿಎಸ್ʻನ ನೂತನ ರಾಷ್ಟ್ರೀಯ ಅಧ್ಯಕ್ಷರು ಸಿ.ಕೆ.ನಾಣು. ಅರೆ ಇದು ಹೇಗೆ ಸಾಧ್ಯ.. ಅಂತೀರಾ.. ಸಾಧ್ಯ ಇದೆ.
ನಡೆದದ್ದು ಇಷ್ಟೇ..
ಬೆಂಗಳೂರಿನ ಕೆ.ಜಿ.ಹಳ್ಳಿಯ ಖಾಸಗಿ ಹೋಟೆಲ್ನಲ್ಲಿ ಸಿ.ಎಂ.ಇಬ್ರಾಹಿಂ ನೇತೃತ್ವದಲ್ಲಿ ಸಭೆ ನಡೆಯಿತು. ಆ ಸಭೆಯಲ್ಲಿದ್ದವರು , ಉಚ್ಚಾಟಿತ ನಾಯಕ ಸಿ.ಎಂ.ಇಬ್ರಾಹಿಂ ಅವರ ಗುಂಪು ಹಾಗೂ ಸಿ.ಕೆ.ನಾಣು ಮತ್ತು ತೆಲಂಗಾಣ ಜೆಡಿಎಸ್ ಅಧ್ಯಕ್ಷ ಸೂರಿ. ಅವರೆಲ್ಲರೂ ಸೇರಿ ಭೆಯಲ್ಲಿ ಒಟ್ಟು ಮೂರು ನಿರ್ಣಯಗಳನ್ನು ಕೈಗೊಂಡರು. ದೇವೇಗೌಡ ಅವರ ವಜಾ, ಸಿ.ಕೆ.ನಾಣು ಅವರು ನೂತನ ಅಧ್ಯಕ್ಷರು ಮತ್ತು ಎನ್‌ಡಿಎಯೇತರ ಪಕ್ಷಗಳ ಪ್ರಮುಖ ನಾಯಕರನ್ನು ಭೇಟಿ ಮಾಡಿ ಪಕ್ಷವನ್ನು ಸಂಘಟಿಸುವ ಹೊಣೆಯನ್ನು ಇಬ್ರಾಹಿಂ ಅವರಿಗೆ ವಹಿಸಿದರು.
ಸಿ.ಕೆ.ನಾಣು ಅವರು ನೂತನ ಅಧ್ಯಕ್ಷರಾಗಿರುವ ಬಗ್ಗೆ ಸಭೆಯಲ್ಲಿ ಒಂದು ಸಾಲಿನ ನಿರ್ಣಯವನ್ನು ತೆಲಂಗಾಣ ಜೆಡಿಎಸ್ ಅಧ್ಯಕ್ಷ ಸೂರಿ ಅವರು ಓದಿ ಹೇಳಿದರು. ಈ ನಿರ್ಣಯಕ್ಕೆ ಇಬ್ರಾಹಿಂ ಅವರ ನೇತೃತ್ವದ ಸಭೆ ಅಂಗೀಕಾರವನ್ನೂ ಕೊಟ್ಟಿತು. ಎನ್‌ಡಿಎ ಜತೆ ಜೆಡಿಎಸ್ ಕೈ ಜೋಡಿಸುವ ಬಗ್ಗೆ ದೇವೇಗೌಡ ಅವರಾಗಲಿ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಾಗಲಿ ರಾಜ್ಯಾಧ್ಯಕ್ಷರ ಅಭಿಪ್ರಾಯವನ್ನು ಪರಿಗಣಿಸಿಲ್ಲ. ಜಾತ್ಯಾತೀತ ನಿಲುವನ್ನು ಹೊಂದಿರುವ ಜೆಡಿಎಸ್ ಸಿದ್ಧಾಂತವನ್ನು ಗಾಳಿ ತೂರಲಾಗಿದೆ. ತಮಗೆ ಪಕ್ಷದ ಮುಖಂಡರ ಬೆಂಬಲ ಇರುವ ಕಾರಣ ದೇವೇಗೌಡ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿದೆ ಎಂದು ಸಭೆ ಒಮ್ಮತದ ತೀರ್ಮಾನಕ್ಕೆ ಬಂದಿತು.
ಸಿಎಂ ಇಬ್ರಾಹಿಂ ಮುಂದೇನು ಮಾಡ್ತಾರೆ..?
ಸಿಎಂ ಇಬ್ರಾಹಿಂ ಅವರ ಪ್ರಕಾರ ಅವರೇ ಈಗಲೂ ಜೆಡಿಎಸ್ ರಾಜ್ಯಾಧ್ಯಕ್ಷ. ಕುಮಾರಸ್ವಾಮಿ ಅವರನ್ನು ದೇವೇಗೌಡರು ಘೋಷಿಸಿದ್ದರೂ ಅದಕ್ಕೆ ಮಾನ್ಯತೆ ಇಲ್ಲ. ಇನ್ನು ಸಿ.ಕೆ.ನಾಣು ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಬದಲಾವಣೆ ನನ್ನ ನಿರ್ಣಯವಲ್ಲ. ರಾಷ್ಟ್ರೀಯ ಮಂಡಳಿಯ ತೀರ್ಮಾನವಾಗಿದೆ. ಸಭೆಯಲ್ಲಿ ಕೈಗೊಂಡಿರುವ ನಿರ್ಣಯದ ಬಗ್ಗೆ ಚುನಾವಣಾ ಆಯೋಗಕ್ಕೆ ಹೇಳುತ್ತೇವೆ. ಸಿ.ಕೆ.ನಾಣು ಅವರು ಅಧ್ಯಕ್ಷರಾಗಿರುವ ಪಕ್ಷಕ್ಕೆ ಚಿಹ್ನೆ ನೀಡಬೇಕು ಎಂದು ಆಯೋಗಕ್ಕೆ ಮನವಿ ಮಾಡುತ್ತೇವೆ ಎನ್ನುತ್ತಾರೆ ಇಬ್ರಾಹಿಂ.
ದೇವೇಗೌಡರನ್ನು ವಜಾ ಮಾಡಿದ ಮೇಲೆ ಎಲ್ಲಾ ರಾಜ್ಯಗಳ ಅಧ್ಯಕ್ಷರ ನೇಮಕ ಮಾಡುವ ಹೊಣೆಯನ್ನು ನಾಣು ಅವರಿಗೆ ಕೊಡಲಾಗಿದೆ. ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ಮಾಡಲಾಗುತ್ತದೆ. ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿಯವರಿಗೂ ಆಹ್ವಾನ ನೀಡಲಾಗುತ್ತದೆ. ಅಲ್ಲದೇ, ನಿತೀಶ್ ಕುಮಾರ್, ಅಖಿಲೇಶ್ ಯಾದವ್ ಸೇರಿದಂತೆ ಇತರೆ ರಾಜ್ಯಗಳ ಮುಖಂಡರು ಸಹ ಬರಲಿದ್ದಾರೆ ಎನ್ನುವುದು ಸಿಎಂ ಇಬ್ರಾಹಿಂ ವಾದ.
ದೇವೇಗೌಡ, ಕುಮಾರಸ್ವಾಮಿ ಮತ್ತಿತರರ ಕಥೆ ಏನು?
ಜೆಡಿಎಸ್‌ನಲ್ಲಿ ಈಗಲೂ ದೇವೇಗೌಡರೇ ರಾಷ್ಟ್ರೀಯ ಅಧ್ಯಕ್ಷರು. ಕುಮಾರಸ್ವಾಮಿ ನೂತನ ರಾಜ್ಯಾಧ್ಯಕ್ಷರು. ರಾಜ್ಯದಲ್ಲಿ ಈಗ ಗೆದ್ದಿರುವ ೧೯ ಶಾಸಕರು, ವಿಧಾನಪರಿಷತ್, ರಾಜ್ಯಸಭಾ ಸದಸ್ಯರು (ದೇವೇಗೌಡರೂ ಸೇರಿ) ಹಾಗೂ ಸಂಸದ (ಪ್ರಜ್ವಲ್ ರೇವಣ್ಣ) ಅವರೆಲ್ಲ ಈಗಲೂ ದೇವೇಗೌಡರ ಜೊತೆಯಲ್ಲೇ ಇದ್ಧಾರೆ. ಆದರೆ ದೇವೇಗೌಡರು ಬಿಜೆಪಿ ಜೊತೆ ಹೋಗುವ ನಿರ್ಧಾರಕ್ಕೆ ಕೇರಳ, ತೆಲಂಗಾಣ ಜೆಡಿಎಸ್ ಒಪ್ಪಿಗೆ ಸೂಚಿಸಿಲ್ಲ. ಅವರೇ ಈಗ ಸಿಎಂ ಇಬ್ರಾಹಿಂ, ನಾಣು ಅವರ ನೇತೃತ್ವದಲ್ಲಿ ತಮ್ಮದೇ ವೊರಿಜಿನಲ್ ಜೆಡಿಎಸ್ ಎಂದು ವಾದ ಮಂಡಿಸುತ್ತಿದ್ದಾರೆ.
ಎಚ್ಚರಿಕೆ : ಸದ್ಯಕ್ಕೆ ದೇವೇಗೌಡರಾಗಲೀ, ಕುಮಾರಸ್ವಾಮಿ ಅವರಾಗಲೀ ಇದಕ್ಕೆ ಕನಿಷ್ಠ ಪ್ರತಿಕ್ರಿಯೆಯನ್ನೂ ಕೊಟ್ಟಿಲ್ಲ. ಆದರೆ ಇಬ್ರಾಹಿಂ ಅವರಾಗಲೇ ಚುನಾವಣಾ ಆಯೋಗದ ಬಾಗಿಲು ತಟ್ಟುವ ಸೂಚನೆ ಕೊಟ್ಟಿದ್ದಾರೆ. ಯಾರಿಗೆ ಗೊತ್ತು.. ಆಯೋಗ, ಕಾನೂನಿನ ಒಳಸೂಕ್ಷ್ಮಗಳು ಏನೇನಿವೆಯೋ..



