ಕೋಗಿಲು ಕ್ರಾಸ್‌ನಲ್ಲಿ 167 ಮನೆಗಳ ತೆರವು ಕಾರ್ಯಾಚರಣೆ ಮಾಡಿದ್ದು, ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿಕೆ ನೀಡಿದಾಗ.. ಡೋಂಟ್ ಕೇರ್ ಎಂಬಂತೆ ಮಾತನಾಡಿದ್ದು, ವೇಣುಗೋಪಾಲ್ ಹೇಳಿದ ತಕ್ಷಣ ಸಡನ್ ಸರೆಂಡರ್ ಆಘಿದ್ದರ ಹಿಂದೆ.. ಒಂದು ಲೆಕ್ಕಾಚಾರವೂ ಇದೆ. ಕೆಸಿ ವೇಣುಗೋಪಾಲ್ ಮಾತಿಗೆ ಎಷ್ಟು ಬಗ್ಗುತ್ತೇವೋ.. ಅಷ್ಟರಮಟ್ಟಿಗೆ ತಮ್ಮ ಸಿಎಂ ಕುರ್ಚಿ ಸೇಫ್ ಎಂಬ ಲೆಕ್ಕಾಚಾರವೂ ಇದ್ದಂತೆ ಇದೆ. ಕೆಸಿ ವೇಣುಗೋಪಾಲ್, ಕೇವಲ ಕಾಂಗ್ರೆಸ್ ನಾಯಕರಷ್ಟೇ ಅಲ್ಲ, ರಾಹುಲ್ ಗಾಂಧಿಯ ಪರಮಾಪ್ತರು. ಹೀಗಾಗಿಯೇ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಇಬ್ಬರ ವರಸೆಯೂ ಬದಲಾಗಿದೆ. ಇಷ್ಟಕ್ಕೂ ಕೆಸಿ ವೇಣುಗೋಪಾಲ್ ಯಾರು ಎಂದರೆ.. ಎಷ್ಟು ಸ್ಟ್ರಾಂಗ್ ಎಂದರೆ..
ಕೆ.ಸಿ. ವೇಣುಗೋಪಾಲ್, ಪೂರ್ಣ ಹೆಸರು : ಕುರುಪ್ಪಸ್ಸೇರಿ ವರ್ಕಿ ಚೆರಿಯನ್ ವೇಣುಗೋಪಾಲ್. ಹುಟ್ಟಿದ್ದು ಕೇರಳದಲ್ಲಿಯೇ. ಕಣ್ಣೂರು ಜಿಲ್ಲೆಯ ಪಯ್ಯನ್ನೂರುನಲ್ಲಿ. ಮೂರು ಬಾರಿ ಅಲಪ್ಪಿಯಿಂದ ಶಾಸಕರಾಗಿದ್ದವರು. ಅದೇ ಕ್ಷೇತ್ರದಿಂದ ಸಂಸದರೂ ಆದರು ವೇಣುಗೋಪಾಲ್. ದೇವಸ್ವಂ ಸಚಿವರೂ ಆಗಿದ್ದವರು. ಅದು ಕೇರಳದಲ್ಲಿ ಮುಜುರಾಯಿಯಂಥದ್ದೇ ಖಾತೆ. ಕೇಂದ್ರದಲ್ಲಿ ಸಚಿವರೂ ಆಗಿದ್ದ ವೇಣುಗೋಪಾಲ್ ಅವರನ್ನು ಸೋತಾಗಲೂ ಕಾಂಗ್ರೆಸ್ ಬಿಡಲಿಲ್ಲ. ಸೋನಿಯಾ, ರಾಹುಲ್ ಒತ್ತಾಸೆಯಿಂದಾಗಿ ಕೇರಳದ ನಾಯಕ ರಾಜಸ್ತಾನದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಹೋದರು. 2024ರಲ್ಲಿ ಮತ್ತೆ ಗೆದ್ದಿರುವ ವೇಣುಗೋಪಾಲ್, ಈಗ ಲೋಕಸಭೆ ಸದಸ್ಯ.
ವೇಣುಗೋಪಾಲ್ ಅವರ ಕ್ಷೇತ್ರದಲ್ಲಿ ಮುಸ್ಲಿಮರೇ ನಿರ್ಣಾಯಕರು. ವೇಣುಗೋಪಾಲ್ ಬಹಿರಂಗವಾಗಿಯೇ ಮುಸ್ಲಿಂ ಪಕ್ಷಪಾತಿ ಎಂಬುದು ರಹಸ್ಯವೇನೂ ಅಲ್ಲ. ಪ್ರಸ್ತುತ : ಎಐಸಿಸಿ (AICC) ಪ್ರಧಾನ ಕಾರ್ಯದರ್ಶಿ (ಸಂಘಟನೆ), ಸಾರ್ವಜನಿಕ ಲೆಕ್ಕಪತ್ರ ಸಮಿತಿ (PAC) ಅಧ್ಯಕ್ಷರು ಕೂಡಾ ಆಗಿರುವ ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿಯೂ ಹೌದು.
ವೈಯಕ್ತಿಕವಾಗಿ ಸಿಎಂ ಸಿದ್ದರಾಮಯ್ಯ ಪಕ್ಷಪಾತಿಯಾಗಿರುವ ವೇಣುಗೋಪಾಲ್, ರಾಹುಲ್ ಗಾಂಧಿ ಲೆವೆಲ್ಲಿನಲ್ಲಿ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡುತ್ತಿರುವ ಪ್ರಮುಖ ನಾಯಕರಲ್ಲಿ ಒಬ್ಬರು. ಹಾಗೆಂದು ಡಿಕೆ ಶಿವಕುಮಾರ್ ಅವರಿಗೆ ವಿರೋಧಿಯೇನಲ್ಲ. ಆದರೆ, ಸಿದ್ದರಾಮಯ್ಯ ಮೇಲೆ ಒಂಚೂರು ಪ್ರೀತಿ ಜಾಸ್ತಿ. ವಯನಾಡು ಕ್ಷೇತ್ರಕ್ಕೆ ನೆರವು ಸೇರಿದಂತೆ ಕೇರಳ ರಾಜ್ಯದ ಹಲವು ಕೆಲಸಗಳನ್ನು ಕರ್ನಾಟಕದಿಂದ ಮಾಡಿಸಿಕೊಳ್ಳುತ್ತಿರುವ ವೇಣುಗೋಪಾಲ್ ಅವರು ಹೇಳಿದ್ದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಇಬ್ಬರಿಗೂ ವೇದವಾಕ್ಯ. ಏಕೆಂದರೆ ಅವರು ರಾಹುಲ್ ಗಾಂಧಿ ಅವರಿಗೆ ಪರಮಾಪ್ತ. ಹೀಗಾಗಿಯೇ ಇಬ್ಬರೂ ವೇಣುಗೋಪಾಲ್, ಟ್ವೀಟಿನಲ್ಲಿ ಹೇಳಿದ್ದನ್ನು ತಲೆ ಮೇಲೆ ಹೊತ್ತು ಮಾಡುತ್ತಿದ್ಧಾರೆ. ಬಹಿರಂಗವಾಗಿ ಹೇಳಿಕೊಳ್ಳೋದಕ್ಕೆ ಆಗುತ್ತಿಲ್ಲ. ಹೀಗಾಗಿ..
ವೇಣುಗೋಪಾಲ್ ಅವರು ನಮ್ಮ ನಾಯಕರು, ನಮಗೆ ಸಲಹೆ ನೀಡುವ ಎಲ್ಲಾ ಅಧಿಕಾರ ಅವರಿಗಿದೆ. ನಮ್ಮದು ರಾಷ್ಟ್ರೀಯ ಪಕ್ಷ. ನಮ್ಮಲ್ಲಿ ರಾಷ್ಟ್ರೀಯ ನಾಯಕರು ಸಲಹೆ ನೀಡುತ್ತಾರೆ. ಈ ಹಿಂದೆಯೂ ಅನೇಕ ಸಲಹೆ ನೀಡಿದ್ದಾರೆ, ಈಗಲೂ ನೀಡಿದ್ದಾರೆ, ಮುಂದೆಯೂ ನೀಡುತ್ತಾರೆ. ಆದರೆ ಎಂದಿಗೂ ಅವರು ಆಡಳಿತದಲ್ಲಿ ಹಸ್ತಕ್ಷೇಪ ಮಾಡಿಲ್ಲ ಎಂದು ಹೇಳುತ್ತಿದ್ದಾರೆ ಸಿಎಂ ಮತ್ತು ಡಿಸಿಎಂ.



