ಹುಟ್ಟು ಉಚಿತ.. ಸಾವು ಖಚಿತ.. ಹುಟ್ಟಿದ ಮೇಲೆ ಸಾಯಲೇಬೇಕು ಅನ್ನೋದು ವಿಧಿ ನಿಯಮ. ಆದರೆ, ಈ ಹುಟ್ಟು ಸಾವಿನ ಚಕ್ರದಲ್ಲಿ ಯಾರೊಬ್ಬರೂ ಸಾವನ್ನು ಅಪೇಕ್ಷಿಸುವುದಿಲ್ಲ. ಸಾವು ಯಾವಾಗಲೂ ಅನಿರೀಕ್ಷಿತವೇ. ಅಂತಹ ಅನಿರೀಕ್ಷಿತ ಸಾವುಗಳು ಇತ್ತೀಚೆಗೆ ಹೆಚ್ಚುತ್ತಿವೆ. ಕಿರಿಯ ವಯಸ್ಸಿನಲ್ಲೇ ಹೃದಯಾಘಾತ, ಅಪಘಾತದ ಸಾವುಗಳಂತೂ ದಿನೇ ದಿನೇ ಹೆಚ್ಚುತ್ತಲೇ ಇವೆ. ಚಿತ್ರರಂಗಕ್ಕಂತೂ (film industry) ಸಾವುಗಳದ್ದೇ ಸುದ್ದಿ. ಕೇವಲ ಕನ್ನಡದಲ್ಲಿ ಅಷ್ಟೇ ಅಲ್ಲ, ಭಾರತೀಯ ಚಿತ್ರರಂಗದಲ್ಲೂ ಸಾವು ನೋವು ಕಣ್ಣೀರು ಸಾಮಾನ್ಯವಾಗಿ ಹೋಗಿದೆ. ಸ್ಪಂದನಾ ಸಾವು, ಧಾರಾವಾಹಿ ನಟನ ನಿಧನ. ಮಲಯಾಳಂ ಡೈರೆಕ್ಟರ್ ಸಾವು, ಹಿಂದಿಯ ಆರ್ಟ್ ಡೈರೆಕ್ಟರ್ ಆತ್ಮಹತ್ಯೆ, ಬೆಂಗಾಲಿ ನಟಿಯರ ನಿಗೂಢ ಸಾವುಗಳು, ಸಿನಿಮಾ ಸೆಟ್ಟುಗಳಲ್ಲಿ ಆಕಸ್ಮಿಕ ಬೆಂಕಿ ಅವಘಡ.. ಹೀಗೆ ಒಂದಲ್ಲ…ಒಂದು ಸಾವು ನೋವುಗಳದ್ದೇ ಸುದ್ದಿ.
ಕಿರಿಯ ವಯಸ್ಸಿನಲ್ಲಿಯೇ ಆಗುತ್ತಿರುವ ದುಃಖ ಸಣ್ಣ. ಹೃದಯಾಘಾತದ ಸಾವುಗಳು, ಆತ್ಮಹತ್ಯೆಗಳು, ಅಪಾಘಾತದಲ್ಲಿ ಸಾವುಗಳು, ಕಾರಣವೇ ಇಲ್ಲದ ಸಡನ್ ಡೆತ್ ಪ್ರಕರಣಗಳು ಹೆಚ್ಚುತ್ತಿವೆ. ಇವೆಲ್ಲದರ ಮಧ್ಯೆಯೇ ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ (Astrologer Prakash Ammannaya) ಚಿತ್ರರಂಗದಲ್ಲಿರುವವರಿಗೆ ಅಪಾಯ ಎಂದು ಭವಿಷ್ಯ ನುಡಿದಿದ್ದಾರೆ. ಅವರು ಹೇಳಿರುವುದು ಇಷ್ಟು.
ಪ್ರಕಾಶ್ ಅಮ್ಮಣ್ಣಾಯ (Astrologer Prakash Ammannaya) ಅವರ ಪ್ರಕಾರ
ಕರ್ಕ, ವೃಶ್ಚಿಕ, ಮೀನ ರಾಶಿಯಲ್ಲಿ ಯಾವುದೇ ಗ್ರಹವೂ ಮೀನಾಂಶದಲ್ಲಿ ಬಂದರೆ ಮೋಕ್ಷ ಎಂದರ್ಥ. ಮೋಕ್ಷ ಎಂದರೆ ನಿರ್ಗಮನ ಎಂದೂ ವ್ಯಾಖ್ಯಾನಿಸಬಹುದು. ಅಕ್ಟೋಬರ್ 30 ಕ್ಕೆ ರಾಹು ಗ್ರಹ ಮೀನರಾಶಿಯಲ್ಲಿ ಮೀನಾಂಶ ಪಡೆಯುತ್ತಾನೆ. ರಾಹುವಿನಿಂದ ಛಾಯಾ ಲೋಕದ ಚಿಂತನೆಯನ್ನೂ ಮಾಡಬಹುದು. ಛಾಯಾಲೋಕ ಎಂದರೆ ಬಣ್ಣ ಹಾಕಿ ನಟಿಸುವವರು. ಸಿನಿಮಾ, ನಾಟಕ, ಧಾರಾವಾಹಿಗಳಲ್ಲಿ ಇರುವವರಿಗೆ ಅಪಾಯ ಸೂಚನೆ. ಅವರಿಗೇನೋ ಉತ್ತಮ ಆಗಬಹುದು. ಆದರೆ ಛಾಯಾ ಲೋಕಕ್ಕೆ ನಷ್ಟ. ಈಗಾಗಲೇ ಅವರ ಮೇಲೆ ದಾಳಿ, ಅವರಲ್ಲಿ ಅನಿರೀಕ್ಷಿತ ಮರಣಗಳಾಗುತ್ತಿರುವುದನ್ನು ಕಾಣುತ್ತೇವೆ. ಹೆಚ್ಚಾಗಿ ಹೃದಯಾಘಾತ, ಅಪಘಾತ ಮರಣಗಳಾಗುತ್ತಿದೆ.
ಪ್ರಕಾಶ್ ಅಮ್ಮಣ್ಣಾಯ (Astrologer Prakash Ammannaya) ಅವರೇ ಸೂಚಿಸಿದ ಪರಿಹಾರ
ಸಣ್ಣದ್ದಾಗಿ ನಾಗಾರಾಧನೆ, ಮಧ್ಯಮ ಪರಿಹಾರ ಆಶ್ಲೇಷಾ ಬಲಿ, ಅತಿ ದೊಡ್ಡ ಪರಿಹಾರ ಎಂದರೆ ನಾಗ ಮಂಡಲ ಸೇವೆ. 18 ವರ್ಷಗಳಿಗೊಮ್ಮೆ ರಾಹು ಮೀನ ರಾಶಿಗೆ ಬರುವುದು. ಅದರಲ್ಲಿ ಕೆಲವೇ ಸಮಯ ಮೀನಾಂಶದಲ್ಲಿ ಇರುತ್ತಾನೆ.
( ತಪ್ಪಾಗಿ ತಿಳಿಯಬಾರದು: ನಿರ್ಗಮನ ಎಂದರೆ ಸಾವು ಎಂದೇ ಅಲ್ಲ ಜಿಗುಪ್ಸೆಗೊಂಡು ಆ ರಂಗವನ್ನೇ ಬಿಟ್ಟು ನಿರ್ಗಮಿಸೋದೂ ಆಗಬಹುದು)
ಕಾರಣ ಇದೆ-ಅತಿಯಾದ ಬೆಳಕಿನ ಕಿರಣ, ಕ್ಷಣ ಕ್ಷಕ್ಕೆ ಬದಲಾಗುವ ಭಾವನಾ ಉದ್ವೇಗ,ಪ್ರವಾಸ,ಆಹಾರ ಇತ್ಯಾದಿ ವೈಪರೀತ್ಯ
ಪ್ರಕಾಶ್ ಅಮ್ಮಣ್ಣಾಯ (Astrologer Prakash Ammannaya) ಕರ್ನಾಟಕದ ಬಹುತೇಕರಿಗೆ ಗೊತ್ತಿರುವ ಹೆಸರು. ಜ್ಯೋತಿಷ್ಯ ಶಾಸ್ತ್ರದಲ್ಲಿ (Astrologey) ಖ್ಯಾತ ಹೆಸರು. ಅವರು ಹೇಳಿದ್ದು ಕೆಲವು ನಿಜವಾಗಿವೆ. ಸುಳ್ಳೂ ಆಗಿವೆ. ಆದರೆ ಜ್ಯೋತಿಷ್ಯ (Jyothishya Shasthra) ನಂಬುವ ಅನೇಕರಿಗೆ ಅಮ್ಮಣ್ಣಾಯ ಅವರ ಈ ಮಾತು ಆತಂಕ ತಂದಿರುವುದಂತೂ ನಿಜ. ಇತ್ತೀಚೆಗೆ ಅಮ್ಮಣ್ಣಾಯ ಅವರ ಜ್ಯೋತಿಷ್ಯದ ವ್ಯಾಖ್ಯಾನಗಳು ಸುಳ್ಳಾಗಿರುವುದೇ ಹೆಚ್ಚು. ಎಲೆಕ್ಷನ್, ನಾಯಕರು ಸೇರಿದಂತೆ ಕೆಲವರ ಬಗ್ಗೆ ನುಡಿದ ಭವಿಷ್ಯವಾಣಿಗಳು ಸುಳ್ಳಾಗಿವೆ. ಪ್ರಕಾಶ್ ಅಮ್ಮಣ್ಣಾಯ ಭವಿಷ್ಯ ಹೇಳುವುದಿಲ್ಲ. ಮನಸ್ಸಿನೊಳಗಿನ ಆಸೆಯನ್ನೇ ಜ್ಯೋತಿಷ್ಯದಂತೆ ಹೇಳುತ್ತಾರೆ ಎಂದು ಹೇಳುವವರೂ ಇದ್ದಾರೆ. ಆದರೆ, ಅಮ್ಮಣ್ಣಾಯ ಅವರ ಹಿಂದಿನ ಜ್ಯೋತಿಷ್ಯಗಳನ್ನು ನೋಡಿದವರಿಗೆ ಇದ್ದರೂ ಇರಬಹುದು ಎಂಬ ಅನುಮಾನ ಕಾಡುತ್ತದೆ.



