ದೇಶದಲ್ಲಿ ಕೋಟ್ಯಂತರ ಜನ ಹಿಂದೂ ಧರ್ಮದಿಂದ ಕ್ರೈಸ್ತರಾಗಿ ಮತಾಂತರವಾಗಿದ್ದಾರೆ. ಹಿಂದೂ ಆಚರಣೆಗಳನ್ನು ಕೈಬಿಟ್ಟು, ಕ್ರೈಸ್ತರಂತೆಯೇ ಬದುಕುತ್ತಿದ್ದಾರೆ. ಆದರೆ, ಜಾತಿಗಳನ್ನು ಮಾತ್ರ ಹಿಂದೂ ಧರ್ಮದ್ದೇ ಇಟ್ಟುಕೊಂಡಿದ್ಧಾರೆ. ಏಕೆಂದರೆ ಮೀಸಲಾತಿಯನ್ನು ಜಾತಿ ಆಧಾರದ ಮೇಲೆ ಕೊಡಲಾಗಿದೆಯೇ ಹೊರತು, ಧರ್ಮದ ಆಧಾರದ ಮೇಲೆ ಅಲ್ಲ. ಸಂವಿಧಾನದ ಪ್ರಕಾರ ಹಿಂದೂಗಳಲ್ಲಿರುವ ಜಾತಿಗಳಿಗೆ ಮಾತ್ರವೇ ಮೀಸಲಾತಿ ಸೌಲಭ್ಯ ಇದೆ. ಹೀಗೆ ಕನ್ವರ್ಟ್ ಆಗಿರುವವರಿಗೆ ನಾನು ಈ ಮೊದಲು ದಲಿತ ಅಥವಾ ಹಿಂದುಳಿದ ಜಾತಿಯಲ್ಲಿದ್ದೆ ಎಂದರೂ ಕೊಡುವುದಕ್ಕೆ ಸಾಧ್ಯವಾಗುವುದಿಲ್ಲ. ಹೀಗಿರುವಾಗಲೇ ರಾಜ್ಯದಲ್ಲಿ ಶುರುವಾಗುತ್ತಿರುವ ಹೊಸ ಜಾತಿ ಗಣತಿ ಸಮೀಕ್ಷೆಯಲ್ಲಿ ಕ್ರೈಸ್ತರನ್ನು ಹಿಂದೂಗಳ ಜಾತಿಗಳಿಂದ ಗುರುತಿಸುವ ಪ್ರಕ್ರಿಯೆ ಶುರುವಾಗಿದೆ.
ಇತ್ತೀಚೆಗೆ ನಡೆದ ಸಾಮಾಜಿಕ ಆರ್ಥಿಕ ಸಮೀಕ್ಷೆಯ ಕುರಿತಂತೆ ಕಾಂಗ್ರೆಸ್ಸಿಗರೂ ಸೇರಿದಂತೆ ಹಲವು ಸಮುದಾಯಗಳು ವಿರೋಧಿಸಿದ್ದವು. ಸ್ವಾಮೀಜಿಗಳು ಕೂಡಾ ವಿರೋಧ ವ್ಯಕ್ತಪಡಿಸಿದ್ದರು. ಕೊನೆಗೆ ರಾಹುಲ್ ಗಾಂಧಿಯವರೇ ಸೂಚನೆ ಕೊಟ್ಟ ಮೇಲೆ ಅದನ್ನು ವಾಪಸ್ ಪಡೆದು ಹೊಸದಾಗಿ ಸಮೀಕ್ಷೆ ನಡೆಸುವುದಕ್ಕೆ ಸಿಎಂ ಸಿದ್ಧರಾಮಯ್ಯ ಮುಂದಾಗಿದ್ದಾರೆ. ಈ ವೇಳೆ ಹಳೆಯ ಸಮೀಕ್ಷೆಯಲ್ಲಿ ಉಲ್ಲೇಖವಾಗಿದ್ದ ಮತಾಂತರಿ ಜಾತಿಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗುತ್ತಿದೆ.
ಅಂದರೆ ನೂರಕ್ಕೂ ಹೆಚ್ಚು ಹೊಸ ಜಾತಿಗಳಿದ್ದು, ಅವುಗಳಲ್ಲಿ ಬ್ರಾಹ್ಮಣ ಕ್ರಿಶ್ಚಿಯನ್, ಲಿಂಗಾಯತ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್, ಗೌಡ ಕ್ರಿಶ್ಚಿಯನ್.. ಅಷ್ಟೇ ಅಲ್ಲ.. ಮುಸ್ಲಿಮರಾಗಿ ಕನ್ವರ್ಟ್ ಆಗಿರುವವರ ಹಿಂದಿನ ಹಿಂದೂ ಜಾತಿಗಳನ್ನೂ ಸೇರಿಸಲಾಗಿದೆ. ಇದು ಒಡೆಯುವ ತಂತ್ರ ಅಲ್ಲವೇ ಎನ್ನುವುದು ಬಿಜೆಪಿ ಪ್ರಶ್ನೆ.
ಬಿಜೆಪಿಯ ಕೆಲವು ಮುಖಂಡರು ಇಂತಹ ಜಾತಿಗಳನ್ನು ಉಲ್ಲೇಖಿಸಿ, ಅವುಗಳನ್ನು ಕೈಬಿಡಬೇಕು ಎಂದು ಒತ್ತಾಯ ಮಾಡಿದ್ದಾರೆ. ಬೆಂಗಳೂರು ಬಿಜೆಪಿ ಉತ್ತರ ಜಿಲ್ಲಾ ಘಟಕದ ಅಧ್ಯಕ್ಷ ಎಸ್ ಹರೀಶ್, ಕೇಂದ್ರ ಘಟಕದ ಅಧ್ಯಕ್ಷ ಸಪ್ತಗಿರಿ ಗೌಡ ಅವರ ವಾದ ಇಷ್ಟೇ.
ಕ್ರೈಸ್ತರಲ್ಲಿ ಕ್ಯಾಥೊಲಿಕ್, ಪ್ರೊಟಸ್ಟೆಂಟ್, ಪೆಂಟಕೋಸ್ಟ್.. ಇತ್ಯಾದಿ ಪಂಗಡಗಳಿವೆ. ಆದರೆ, ಅವುಗಳನ್ನು ಕೈಬಿಟ್ಟು ಕೇವಲ ಕ್ರೈಸ್ತ ಎಂದಷ್ಟೇ ನಮೂದಿಸಿರುವ ಸರ್ಕಾರ, ಹಿಂದೂ ಜಾತಿಗಳನ್ನು ಮಾತ್ರವೇ ಗುರುತಿಸಿ.. ಅವರಿಗೂ ಹಿಂದೂಗಳ ಜಾತಿ ಆಧಾರದ ಮೇಲೆ ಮೀಸಲಾತಿ ಕೊಡುವ ಪ್ರಯತ್ನ ಮಾಡುತ್ತಿದೆ. ಇದು ತಪ್ಪಲ್ಲವೇ.. ಸಂವಿಧಾನ ವಿರೋಧಿ ಅಲ್ಲವೇ.. ಹೊಸ ಜಾತಿಗಳನ್ನು ಸೃಷ್ಟಿಸಲು, ಸೇರಿಸಲು ಅಧಿಕಾರ ಕೊಟ್ಟವರು ಯಾರು.. ಮತಾಂತರವಾಗಿರುವ ಕ್ರೈಸ್ತರಿಗೂ ಜಾತಿಯೊಳಗೆ ನುಸುಳಿ, ಮೀಸಲಾತಿ ಕಬಳಿಸುವ ಸಂಚು ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಯಾವ್ಯಾವ ಜಾತಿಗಳಿವೆ..?
ಹಿಂದೂಗಳಲ್ಲಿ ಇರುವ ಬಹುತೇಕ ಜಾತಿಗಳಲ್ಲಿ ಹಲವು ಜಾತಿಗಳ ಮುಂದೆ ಕ್ರೈಸ್ತ ಎಂದು ಸೇರಿಸಲಾಗಿದೆ. ಅಧಿಕೃತವಾಗಿ ಬಿಡುಗಡೆಯಾಗಿರುವ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ವರದಿಯಲ್ಲಿಯೇ ಬ್ರಾಹ್ಮಣ, ಲಿಂಗಾಯತ, ಬಣಜಿಗ, ನೇಕಾರ, ಕುರುಬ, ಮಡಿವಾಳ, ಬಿಲ್ಲವ, ಬಂಜಾರ, ವಡ್ಡ, ಒಕ್ಕಲಿಗ, ಗೌಡ, ಸಾದರ, ಶೆಟ್ಟಿ.. ಮುಂತಾದ ಜಾತಿಗಳ ಎದುರು ಕ್ರೈಸ್ತ ಎಂದು ಸೇರಿಸಲಾಗಿದೆ.
ಕಾನೂನು ಏನು ಹೇಳುತ್ತದೆ..?
ಮೀಸಲಾತಿ ಸೌಲಭ್ಯ ಪಡೆಯುವುದಕ್ಕಾಗಿ ಮತಾಂತರ ಇಲ್ಲವೇ ಮರುಮತಾಂತರವಾಗುವುದಾದರೆ ಅದು ಸಾಮಾಜಿಕವಾಗಿ ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ಸಿಗಬೇಕೆಂಬ ಆಶಯವನ್ನು ಮಣಿಸುವುದರಿಂದ ಅದಕ್ಕೆ ಅನುಮತಿ ನೀಡಲಾಗದು. ಹೀಗೆ ಮಾಡುವುದು ಸಂವಿಧಾನಕ್ಕೆ ಮಾಡುವ ವಂಚನೆಯಾಗುತ್ತದೆ. ಮತಾಂತರವಾಗುವವರನ್ನು ಜಾತಿಯಿಂದ ಗುರುತಿಸಬಾರದು. ಅಂತಹವರು ವಾಮ ಮಾರ್ಗದ ಮೂಲಕ ಮೀಸಲಾತಿ ಪಡೆಯುವುದು ತಪ್ಪು. ಅದರಿಂದ ಅಗತ್ಯ ಇರುವವರಿಗೆ ಮೀಸಲಾತಿ ದೊರೆಯುವುದಿಲ್ಲ ಎಂದು ಸುಪ್ರೀಂಕೋರ್ಟ್ ಹಲವು ಪ್ರಕರಣಗಳಲ್ಲಿ ಅಭಿಪ್ರಾಯಪಟ್ಟಿದೆ.



