ಕೆಮ್ಮು ನಿವಾರಕ ಸಿರಪ್ ಸೇವಿಸಿ, ಮಧ್ಯ ಪ್ರದೇಶ ಹಾಗೂ ರಾಜಸ್ತಾನದಲ್ಲಿ 11 ಮಕ್ಕಳು ಸಾವನ್ನಪ್ಪಿದ ಘಟನೆ ಆತಂಕ ಸೃಷ್ಟಿಸಿರುವ ನಡುವೆಯೇ, 19 ಕೆಮ್ಮಿನ ಸಿರಪ್ ಮತ್ತು ಆ್ಯಂಟಿಬಯೋಟಿಕ್‌ಗಳ ಉತ್ಪಾದನೆಯಲ್ಲಿ ತೊಡಗಿರುವ 6 ರಾಜ್ಯಗಳ ಘಟಕದಲ್ಲಿ ತಪಾಸಣೆ ನಡೆಸಲು ಕೇಂದ್ರ ಔಷಧ ನಿಯಂತ್ರಕ (ಸಿಡಿಎಸ್‌ಸಿಒ) ಮುಂದಾಗಿದೆ. ತಮಿಳುನಾಡಿನ ಬಳಿಕ ಮಧ್ಯಪ್ರದೇಶ ಹಾಗೂ ಕೇರಳ ಸರ್ಕಾರಗಳು, ಮಕ್ಕಳ ಸಾವಿಗೆ ಕಾರಣವಾಗಿದೆ ಎನ್ನಲಾದ ಕೋಲ್ಡ್ರಿಫ್ ಸಿರಪ್ ಅನ್ನು ನಿಷೇಧಿಸಿವೆ. ಇದರ ನಡುವೆ, ಕೋಲ್ಡ್ರಿಫ್ ಸಿರಪ್‌ನಲ್ಲಿ ಕಲಬೆರಕೆ ಆಗಿದೆ ಎಂದು ತಮಿಳ್ನಾಡಲ್ಲಿ ನಡೆದ ಪರೀಕ್ಷೆಯಲ್ಲಿ ದೃಢವಾಗಿದೆ. ಮಕ್ಕಳಿಗೆ ಕಾಫ್ ಸಿರಪ್ ಕೊಡುವ ಮುನ್ನ ಎಚ್ಚರಿಕೆ ಸೂತ್ರ ಹೇಳಿದೆ ಕೇಂದ್ರ ಸರ್ಕಾರ.
ಸ್ರೆಸನ್ ಫಾರ್ಮಾಸ್ಯುಟಿಕಲ್ಸ್ ಕಂಪನಿಯ ಕೋಲ್ಡ್ರಿಫ್ ಕಾಫ್ ಸಿರಪ್ ಅನ್ನು ರಾಜ್ಯದಲ್ಲೂ ನಿಷೇಧ ಮಾಡಲಾಗಿದೆ. ಕರ್ನಾಟಕ ಫಾರ್ಮಾ ರಿಟೈಲರ್ಸ್ ಮತ್ತು ಡಿಸ್ಟ್ರಿಬ್ಯೂಟರ್ಸ್ ಸಂಸ್ಥೆ ರಾಜ್ಯದ ಎಲ್ಲ ಮೆಡಿಕಲ್ ಸ್ಟೋರ್ ಮತ್ತು ವಿತರಕರಿಗೆ ಪತ್ರ ಬರೆದು ಸೂಚನೆ ನೀಡಿದೆ. ಸರ್ಕಾರದ ಮುಂದಿನ ಆದೇಶದವರೆಗೆ ಸ್ರೆಸನ್ ಫಾರ್ಮಾಸ್ಯುಟಿಕಲ್ಸ್ ಕಂಪನಿಯ ಕೋಲ್ಡ್ ರಿಫ್ ಕಾಫ್ ಸಿರಫ್ ಮಾರಟ ಮಾಡದ್ದಂತೆ ತಿಳಿಸಲಾಗಿದ್ದು, ಕರ್ನಾಟಕದಲ್ಲಿ ಈಗಾಗಲೇ ಮಾರಾಟಗೊಂಡಿರುವ ಮತ್ತು ನಿಮ್ಮ ಬಳಿ ಇರುವ ಕೋಲ್ಡ್ರಿಫ್ ಸಿರಪ್‌ನ ಪ್ರಸ್ತುತ ಸ್ಟಾಕ್ ವಿವರಗಳನ್ನು ಡ್ರಗ್ಸ್ ಕಂಟ್ರೋಲ್ ಇಲಾಖೆ ಕಳುಹಿಸುವಂತೆ ಸೂಚನೆ ನೀಡಲಾಗಿದೆ.
ಇತ್ತೀಚೆಗಷ್ಟೇ ಕೆಮ್ಮಿನ ಸಿರಪ್ ಸೇವಿಸಿ ಮಧ್ಯಪ್ರದೇಶದ 9 ಮತ್ತು ರಾಜಸ್ಥಾನದ 2 ಮಕ್ಕಳು ಮೂತ್ರಪಿಂಡ ವೈಫಲ್ಯದಿಂದ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಆ ಬಗ್ಗೆ ತನಿಖೆ ನಡೆಸುವಂತೆ ತಮಿಳುನಾಡು ಸರ್ಕಾರಕ್ಕೆ ಕೋರಲಾಗಿತ್ತು. ಶುಕ್ರವಾರವಷ್ಟೇ ತಮಿಳುನಾಡು ಕೋಲ್ಡ್ರಿಫ್ ಅನ್ನು ನಿಷೇಧ ಮಾಡಿತ್ತು.
ಇದೆಲ್ಲದರ ಜೊತೆಗೆ 2 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೆಮ್ಮಿನ ಸಿರಪ್ ಕೊಡುವಂತಿಲ್ಲ ಎಂದು ಕೂಡಾ ಸರ್ಕಾರ ಸೂಚನೆ ಕೊಟ್ಟಿದೆ. ವಿಶೇಷ ಏನೆಂದರೆ ಇದು ಹೊಸ ಆದೇಶ ಅಲ್ಲ. ಈ ಆದೇಶ ಈ ಮೊದಲು ಕೂಡಾ ಇತ್ತು. ಈಗ ಮತ್ತೊಮ್ಮೆ ಸುದ್ದಿಯಾಗಿದೆ. ಅಷ್ಟೇ.
ಅಂದಹಾಗೆ ಭಾರತದ ಕೆಮ್ಮಿನ ಔಷಧಿಗಳು ಇತ್ತೀಚೆಗೆ ಆಫ್ರಿಕಾದಲ್ಲೂ ಮಕ್ಕಳ ಸಾವಿಗೆ ಕಾರಣವಾಗಿದ್ದವು. ಅವು ಈಗ ಭಾರತಕ್ಕೂ ಸಾವಿನ ಕಂಟಕ ತಂದಿಟ್ಟಿವೆ. ಕೆಮ್ಮಿನ ಔಷಧಗಳಲ್ಲಿ ಬಳಸುವ ಒಂದು ಕೆಮಿಕಲ್ ಕಿಡ್ನಿ ಸಮಸ್ಯೆಗೆ ಕಾರಣವಾಗುತ್ತದೆ. ಅಂದರೆ ಅಲ್ಪ ಪ್ರಮಾಣದಲ್ಲಿ ಬಳಸಿದರೆ ಔಷಧವಾಗುವ ಅದೇ ಕೆಮಿಕಲ್, ಮಿತಿ ಪ್ರಮಾಣ ಸ್ವಲ್ಪ ಹೆಚ್ಚಾದರೂ ಕಿಡ್ನಿಗಳಿಗೆ ಸಮಸ್ಯೆ ತಂದೊಡ್ಡುತ್ತದೆ. ಈಗ ನಿಷೇಧವಾಗಿರುವ ಈ ಕೆಮ್ಮಿನ ಔಷಧಿಯಲ್ಲೂ ಇದೇ ಅಂಶ ಹೆಚ್ಚಾಗಿದೆ ಎನ್ನಲಾಗಿದ್ದು, ಇದೇ ಕಾರಣಕ್ಕೆ ನಿಷೇಧ ಮಾಡಲಾಗಿದೆ. ಕೆಮ್ಮಿನ ಸಿರಪ್ ಅನ್ನು ಕೊಡುವಾಗ ಮೆಡಿಕಲ್ ಸ್ಟೋರ್ ಮಾಲೀಕರೂ ಕೂಡಾ ಎಚ್ಚರ ವಹಿಸಬೇಕು ಎಂದು ಸೂಚನೆ ನೀಡಲಾಗಿದೆ.



