ಪೊಲೀಸರು ಪ್ರತಿಭಟಿಸುವುದು ಹೊಸದಲ್ಲ. ಆದರೆ ಪೊಲೀಸರ ಪ್ರತಿಭಟನೆಗೆ ಕೆಲವು ಲಿಮಿಟ್ ಇರುತ್ತವೆ. ಅವರು ಲಿಖಿತವಾಗಿ ಪ್ರತಿಭಟಿಸಬಹುದೇ ಹೊರತು, ಕೆಲಸವನ್ನೇ ಕೈಬಿಟ್ಟು ಪ್ರತಿಭಟನೆ ನಡೆಸುವಂತಿಲ್ಲ. ಪೊಲೀಸರಿಗೆ ಎಂತಹ ನೋವೇ ಆಗಲಿ, ಎಂತಹ ಅವಮಾನವೇ ಆಗಲಿ, ಯಾವ ರೀತಿಯ ಕಷ್ಟವೇ ಎದುರಾಗಲಿ.. ಯಾವುದಕ್ಕೂ ಅವರು ಪ್ರತಿಭಟನೆ ನಡೆಸುವಂತಿಲ್ಲ. ಏಕೆಂದರೆ ಅಂತಹ ನಿಯಮಗಳಿಗೆ ಒಪ್ಪಿಕೊಂಡೇ ಪೊಲೀಸ್ ವೃತ್ತಿ ಆರಿಸಿಕೊಂಡಿರುತ್ತಾರೆ. ಪೊಲೀಸರು ಪ್ರತಿಭಟನೆ ನಡೆಸಬಹುದು.. ಆದರೆ ಅದು ಲಿಖಿತ ರೂಪದಲ್ಲಿ ಪ್ರತಿಭಟನೆ ದಾಖಲಿಸಬಹುದೇ ಹೊರತು.. ಕೆಲಸ ಮಾಡದೇ.. ರಸ್ತೆಗೆ ಇಳಿದು ಪ್ರತಿಭಟನೆ ನಡೆಸುವುದಂತೂ ಸಾಧ್ಯವಿಲ್ಲ. ಆದರೆ ಅದೂ ಆಗಿ ಹೋಗಿದೆ. ಅದಕ್ಕೆ ಕಾರಣವಾಗಿದ್ದು ಲಾಯರ್ಸ್ ವರ್ಸಸ್ ಪೊಲೀಸ್ ಯುದ್ಧ.
ಘಟನೆಯ ವಿವರ :
ಗುರುವಾರ ರಾತ್ರಿ ೮ ಗಂಟೆ ಸುಮಾರಿನಲ್ಲಿ ಮಾರ್ಕೆಟ್ ರಸ್ತೆಯ ನಗರ ಠಾಣೆ ಮುಂಭಾಗ ಪೊಲೀಸ್ ಒಬ್ಬರು ವಕೀಲರ ಬೈಕ್ ತಡೆದಿದ್ದರು. ವಕೀಲ ಪ್ರೀತಂ ಎಂಬ ಲಾಯರ್ ಎಂಬುವವರು ಹೆಲ್ಮೆಟ್ ಹಾಕಿರಲಿಲ್ಲ ಎಂದು ಆರೋಪಿಸಿದ್ದರು. ಬೈಕ್ ಕೀ ಕಿತ್ತುಕೊಂಡು ಹೋಗಿದ್ದರು. ಇದನ್ನು ಪ್ರಶ್ನಿಸಿದ ಲಾಯರ್ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎನ್ನುವುದು ವಕೀಲರ ಆರೋಪ. ಅದು ಗುರುವಾರ ರಾತ್ರಿ ನಡೆದ ಘಟನೆ. ಆದರೆ ಬೈಕ್ ತಡೆದಿದ್ದಕ್ಕೆ ವಕೀಲ ಪ್ರೀತಂ, ಪೊಲೀಸ್ ಕಪಾಳಕ್ಕೆ ಹೊಡೆದಿದ್ದ ಕಾರಣಕ್ಕೇ ಘಟನೆ ನಡೆಯಿತು ಎನ್ಜುವುದು ಪೊಲೀಸರ ವಿವರಣೆ.
ಆದರೆ ಶುಕ್ರವಾರ ಬೆಳಗ್ಗೆ ಹೊತ್ತಿಗೆ ಅದು ತೀವ್ರ ಸ್ವರೂಪಕ್ಕೆ ತಿರುಗಿತ್ತು. ವಕೀಲರೆಲ್ಲ ಪ್ರತಿಭಟನೆ ನಡೆಸ ನ್ಯಾಯಾಲಯದ ಕಲಾಪ ಬಹಿಷ್ಕರಿಸಿದರು. ಆರೋಪಿ ಪೊಲೀಸನನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು. ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಚಿಕ್ಕಮಗಳೂರು ವಕೀಲರ ಸಂಘದ ಅಧ್ಯಕ್ಷ ಎಚ್.ಎಂ.ಸುಧಾಕರ್ ನೇತೃತ್ವದಲ್ಲಿ ನಡೆದ ಹೋರಾಟಕ್ಕೆ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಅವರು ಬೆಳಗ್ಗೆಯೇ ಬೆಂಗಳೂರಿನಿಂದ ಹೊರಟು ಮಧ್ಯಾಹ್ನದ ವೇಳೆಗೆ ನಗರಕ್ಕಾಗಮಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರಲ್ಲದೆ, ಕೂಡಲೇ ತಪ್ಪಿತಸ್ಥ ಪೊಲೀಸ್ ಸಿಬ್ಬಂದಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು. ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಪೃಥ್ವಿರಾಜ್ ರೈ ಅವರೂ ನಗರಕ್ಕಾಗಮಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.
ಪ್ರಕರಣ ಕೇವಲ ಚಿಕ್ಕಮಗಳೂರಿಗೆ ಸೀಮಿತವಾಗದೆ ವ್ಯಾಪಕವಾಗುತ್ತಿರುವುದನ್ನು ನೋಡಿದ ಪೊಲೀಸ್ ಇಲಾಖೆ ಪೊಲೀಸರು ಆರೋಪಿಸಿದ್ದ ಪೊಲೀಸರನ್ನು ಅಮಾನತು ಮಾಡಿತು. ಒಟ್ಟು ೬ ಪೊಲೀಸರನ್ನು ಸಸ್ಪೆಂಡ್ ಮಾಡಿತು. ಒಬ್ಬ ಪೊಲೀಸ್ʻನನ್ನು ಅರೆಸ್ಟ್ ಮಾಡಿದ್ದಷ್ಟೇ ಅಲ್ಲ, ಇತರೆ ಆರೋಪಿ ಪೊಲೀಸರ ಬಂಧನಕ್ಕೂ ಮುಂದಾಯಿತು. ಆಗ ಪೊಲೀಸರು ಪ್ರತಿಭಟನೆಗಿಳಿದರು.
ಕರ್ತವ್ಯಕ್ಕೆ ಹಾಜರಾಗಬೇಕಿದ್ದ ಪೊಲೀಸರು ನೇರವಾಗಿ ರಸ್ತೆಗಿಳಿದು ಪ್ರತಿಭಟನೆ ಮಾಡಿದ್ದಾದರು. ಕಡೂರು-ಬೆಂಗಳೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಸುಮಾರು ೬ ಪೊಲೀಸ್ ಠಾಣೆ ಪೊಲೀಸರು ಕರ್ತವ್ಯವವನ್ನು ಬಹಿಷ್ಕರಿಸಿದರು. ಸಸ್ಪೆಂಡ್ ಆದ ಪೊಲೀಸರ ಕುಟುಂಬದವರೂ ಪ್ರತಿಭಟನೆಗೆ ಬಂದರು. ಯಾವ ಮನವೊಲಿಕೆ, ಸಂಧಾನಕ್ಕೂ ಬಗ್ಗದೇ ಹೋದಾಗ ಕೊನೆಗೆ ಅರೆಸ್ಟ್ ಆಗಿದ್ದ ಪೊಲೀಸ್ ಪೇದೆ ಗುರು ಪ್ರಸಾದ್ʻನನ್ನು ಪೊಲೀಸರು ಬಿಡುಗಡೆ ಮಾಡಬೇಕಾಯ್ತು.
ಅದಾದ ಮೇಲೆ ವಕೀಲ ಪ್ರೀತಂ, ಸುರೇಂದ್ರ, ಸುಧಾಕರ್, ನಂದೀಶ್, ಮಹೇಶ್ ಕುಮಾರ್ ಸೇರಿದಂತೆ ಕೆಲವು ವಕೀಲರ ಮೇಲೆ ಕೇಸ್ ರಿಜಿಸ್ಟರ್ ಆಯ್ತು. ಈಗ ಪೊಲೀಸರೇನೋ ಪ್ರತಿಭಟನೆ ಕೈಬಿಟ್ಟಿದ್ಧಾರೆ. ಆದರೆ ಲಾಯರ್ಸ್ ವರ್ಸಸ್ ಲಾಯರ್ಸ್ ಗಲಾಟೆ, ಪೊಲೀಸ್ ವರ್ಸಸ್ ಪೊಲೀಸ್ ಆಗಿಯೂ ಬದಲಾಗಿ ಹೋಗಿದೆ.
ಕೆಲವು ವರ್ಷಗಳ ಹಿಂದೆ ರಾಜ್ಯಾದ್ಯಂತ ಪೊಲೀಸರು ಮುಷ್ಕರ ನಡೆಸುವ ಯೋಜನೆ ರೂಪಿಸಿದ್ದರು. ಆಗಲೂ ಪರಮೇಶ್ವರ್ ಅವರೇ ಗೃಹ ಸಚಿವರಾಗಿದ್ದರು. ಕೊನೆಗೆ ಹರಸಾಹಸ ಮಾಡಿ ಪೊಲೀಸರನ್ನು ಮನವೊಲಿಸಿ, ಬೆದರಿಕೆ ಹಾಕಿ ಪ್ರತಿಭಟನೆ ಕೈಬಿಡುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಆದರೆ ಈಗ ದಿಢೀರ್ ಎಂದು ನಡೆದ ಹೋರಾಟ, ಪ್ರತಿಭಟನೆ ಎದುರು ಗೃಹ ಇಲಾಖೆ ಮೌನವಾಗಿದೆ. ಇತಿಹಾಸದಲ್ಲೇ ಮೊದಲ ಬಾರಿ ಪೊಲೀಸರು ಪ್ರತಿಭಟನೆ ನಡೆಸಿ, ಚರಿತ್ರೆ ಸೃಷ್ಟಿಸಿದ್ದಾರೆ.



