ಒಂದೋ ಎರಡೋ ಸಿನಿಮಾ ಮಾಡಿದವರಿಗೂ ಅಭಿಮಾನಿಗಳಿರ್ತಾರೆ. ಅಂಥಾದ್ದರಲ್ಲಿ 50+ ಸಿನಿಮಾ ಮಾಡಿರೋ ದರ್ಶನ್ ಅಭಿಮಾನಿ ಬಳಗ ಇನ್ನೂ ದೊಡ್ಡದು. ಇಂತಹ ಅಭಿಮಾನಿ ಬಳಗಕ್ಕೆ ಒಬ್ಬ ಮಾಡಿದ್ದಾನಂತೆ. ಅದೂ ಕೂಡಾ.. ಕನ್ನಡಿಗರು ಆರಾಧಿಸುತ್ತಿದ್ದ ಅಂಬಾರಿ ಅರ್ಜುನನ ಹೆಸರಲ್ಲಿ. ಹೌದು.. ಅಂಬಾರಿ ಅರ್ಜುನನ ಭಕ್ತಗಣ ಹಾಗೂ ದರ್ಶನ್ ಅವರ ಅಭಿಮಾನಿಗಳ ಸೈನ್ಯ.. ಎರಡಕ್ಕೂ ಮೋಸ ಮಾಡಿರುವ ಆರೋಪ ಕೇಳಿ ಬಂದಿದೆ.
ನಟ ದರ್ಶನ್ ಪ್ರಾಣಿಗಳ ಪ್ರೇಮಿ. ಇತ್ತೀಚೆಗೆ ಅಂಬಾರಿ ಹೊರುತ್ತಿದ್ದ ಆನೆ ಅರ್ಜುನ ಸಾವನ್ನಪ್ಪಿತ್ತು. ಸಾವಿನ ಹಿಂದಿನ ಕಥೆಗಳೇನೇ ಇರಲಿ.. ಸಾವಿನ ನಂತರ ಅಷ್ಟು ಬಾರಿ ಅಂಬಾರಿ ಹೊತ್ತಿದ್ದ ಆನೆಗೆ ಒಂದು ಪುಟ್ಟ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ಧ್ವನಿ ಎತ್ತಿದ್ದರು ನಟ ದರ್ಶನ್. ಅದಕ್ಕೆ ಬೇಕಾದ ಸಹಕಾರವನ್ನೂ ನೀಡುವುದಾಗಿ ಹೇಳಿದ್ದರು. ಅಷ್ಟೇ ಅಲ್ಲ.. ಅರಣ್ಯ ಇಲಾಖೆಯವರು ಮಾಡದಿದ್ದರೆ.. ಸ್ವತಃ ತಾವೇ ನಿರ್ಮಾಣ ಮಾಡುವುದಾಗಿ ಹೇಳಿಕೊಂಡಿದ್ದರು.
ದರ್ಶನ್ ಮೈಸೂರಿನವರು. ಅಂಬಾರಿ ಮತ್ತು ಅಂಬಾರಿ ಹೊರುತ್ತಿದ್ದ ಅರ್ಜುನನ ಮೇಲೆ ಪ್ರೀತಿಯಲ್ಲ, ಭಕ್ತಿಯೇ ಹೆಚ್ಚು. ನಾಡದೇವಿ ಚಾಮುಂಡೇಶ್ವರಿಯ ವಿಗ್ರಹವನ್ನು ಹಲವು ಬಾರಿ ಹೊತ್ತಿದ್ದ ಅರ್ಜುನ, ಅರಣ್ಯ ಇಲಾಖೆಯವರ ನಿರ್ಲಕ್ಷ್ಯದಿಂದಲೇ ಮೃತಪಟ್ಟಿದ್ದ. ಇದೀಗ ದರ್ಶನ್ ಅವರ ಈ ಬಯಕೆಯನ್ನೇ ವಂಚಕನೊಬ್ಬ ಬಂಡವಾಳವನ್ನಾಗಿ ಮಾಡಿಕೊಂಡಿದ್ಧಾನೆ. ಲಕ್ಷ ಲಕ್ಷ ವಂಚಿಸಿದ್ಧಾನೆ.
ಮೈಸೂರು ಜಿಲ್ಲೆಯ ನವೀನ್ ಹೆಚ್.ಎನ್ ಎಂಬ ವ್ಯಕ್ತಿ ʻಅರ್ಜುನ ಪಡೆʼ ಎಂಬ ವಾಟ್ಸಾಪ್ ಗ್ರೂಪ್ ಕ್ರಿಯೇಟ್ ಮಾಡಿದ್ದಾನೆ. ಆ ಗ್ರೂಪ್ʻನಲ್ಲಿ ಅರ್ಜುನ ಸ್ಮಾರಕ ಹೋರಾಟಕ್ಕೆ ನಿಮ್ಮ ಬೆಂಬಲ ಬೇಕು. ಅದಕ್ಕಾಗಿ ನಿಮ್ಮ ಕೈಲಾದಷ್ಟು ನೆರವು ನೀಡಿ ಎಂದು ಹಣಕ್ಕಾಗಿ ಬೇಡಿಕೆ ಇಟ್ಟಿದ್ಧಾನೆ. ಇದನ್ನು ನಂಬಿದ ಹಲವರು ಹಣ ಸಹಾಯ ಮಾಡಿದ್ದಾರೆ. ಇದರಿಂದ ನವೀನ್ ಹೆಚ್ಎನ್ ಖಾತೆಗೆ ಲಕ್ಷಾಂತರ ಹಣ ಜಮೆ ಆಗಿದೆ ಎಂದು ಮಲೆನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಸಾಗರ್ ಜಾನೆಕೆರೆ ಎಂಬುವವರು ಆರೋಪ ಮಾಡಿದ್ದಾರೆ. ಈತ ಹಣ ಸಂಗ್ರಹಿಸಿದ ಬಗ್ಗೆ ದೂರು ದಾಖಲಾಗಿದೆ.
ಅರ್ಜುನ ಆನೆ ಸ್ಮಾರಕ ನಿರ್ಮಾಣಕ್ಕೆ ಸಹಾಯ ಮಾಡುವಂತೆ ನವೀನ್ ನಟ ದರ್ಶನ್ ಅವರ ಪಿಎಯನ್ನೂ ಸಂಪರ್ಕ ಮಾಡಿದ್ದಾನೆ. ಅವರಿಂದ ಕಲ್ಲನ್ನು ತೆರೆಸಿಕೊಂಡಿದ್ದಾನೆ. ಈ ಕಲ್ಲನ್ನು ಅರಣ್ಯ ಇಲಾಖೆಯವರಿಗೆ 30 ಸಾವಿರ ರೂ.ಗೆ ಮಾರಿದ್ದಾನೆ ಅಂತ ಆರೋಪ ಕೇಳಿಬಂದಿದೆ.
ಸಾರ್ವಜನಿಕರಿಂದ ಹಣ ಪಡೆರಯುವುದಕ್ಕೆ ಈತನಿಗೆ ಅನುಮತಿ ಕೊಟ್ಟವರು ಯಾರು? ಈತನ ವೈಯಕ್ತಿಕ ಖಾತೆಗೆ ಯಾರೂ ಹಣ ಹಾಕಬೇಡಿ. ಅಲ್ಲದೆ ಈತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ. ಈತನ ಖಾತೆಗೆ ನೂರಾರು ಜನರು ಹಣ ಸಂದಾಯ ಮಾಡಿರುವ ಫೊಟೋಗಳು ವೈರಲ್ ಆಗಿವೆ. ಅಂದಹಾಗೆ ಈ ರೀತಿ ಅರ್ಜುನನ ಸ್ಮಾರಕಕ್ಕಾಗಿ ಹಣ ನೀಡಿರುವುದು ಬಹುತೇಕರು ನಟ ದರ್ಶನ್ ಅಭಿಮಾನಿಗಳು. ದರ್ಶನ್ ಅಭಿಮಾನಿ ಕೇಳುತ್ತಿದ್ಧಾನೆ ಎಂದರೆ.. ಬೇಡಿಕೆಯಲ್ಲಿ ಪ್ರಾಮಾಣಿಕತೆ ಇರಬೇಕು ಎಂದು ನಂಬಿಕೊಂಡಿದ್ದೇ.. ಈ ಭಾನಗಡಿಗಳಿಗೆಲ್ಲ ಕಾರಣ.



