ನಿಶಾ ನರಸಪ್ಪ. (Nisha Narasappa) ವಯಸ್ಸು ಇನ್ನೂ 30ರ ಅಕ್ಕಪಕ್ಕ ಇರಬೇಕು. ನೋಡುವುದಕ್ಕೆ ಸುಂದರಿ. ಆದರೆ ಈಕೆ ಮೇಲೀಗ ಸುಮಾರು 50 ಲಕ್ಷಕ್ಕೂ ಹೆಚ್ಚು ವಂಚನೆ ಮಾಡಿದ ಆರೋಪ ಇದೆ. ಏಕೆಂದರೆ ಈಕೆ ಜನರನ್ನು ವಂಚಿಸಿದ್ದು ವಂಶಿಕಾ (Vamshika) ಹೆಸರಲ್ಲಿ. ವಂಶಿಕಾ. ಮಾಸ್ಟರ್ ಆನಂದ್ (Master Anand) ಮತ್ತು ಯಶಸ್ವಿನಿಯವರ (yashaswini) ಮುದ್ದಿನ ಮಗಳು. ಈಕೆ ಈಗ ಕಿರುತೆರೆ ಸೆನ್ಸೇಷನ್ (Small Screen Sensation) ಎಂದರೂ ತಪ್ಪಿಲ್ಲ. ತಂದೆ ಮಾಸ್ಟರ್ ಆಗಿದ್ದಾಗ ಪಡೆದುಕೊಂಡಿದ್ದ ಖ್ಯಾತಿಯನ್ನೂ ಮೀರಿಸುವಂತೆ ಬೇಬಿ ವಂಶಿಕಾ (Baby Vamshika) ಸಂಚಲನ ಸೃಷ್ಟಿಸಿದ್ದಾಳೆ. ಆದರೆ ಆಕೆಯ ಖ್ಯಾತಿಯನ್ನೇ ಎನ್`ಎನ್ ಪ್ರೊಡಕ್ಷನ್ಸ್ ಸಂಸ್ಥೆಯ ನಿಶಾ ನರಸಪ್ಪ (Nisha Narasappa) ಎಂಬುವವರು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ನನ್ನಮ್ಮ ಸೂಪರ್ ಸ್ಟಾರ್ (Nannamma Super Star) ಹಾಗೂ ಗಿಚ್ಚಿ ಗಿಲಿಗಿಲಿ (Gicha GiliGili) ವಿನ್ನರ್ ಆಗಿರುವ ವಂಶಿಕಾ ಹೆಸರಿನಲ್ಲಿ ನಿಶಾ ನರಸಪ್ಪ (Nisha Narasappa) ಎಂಬುವರು ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅದು ಶುರುವಾಗಿದ್ದು ಯಶಸ್ವಿನಿ ಮತ್ತು ವಂಶಿಕಾ ಅವರು ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಗೆದ್ದ ನಂತರ.
ಆಗ ನಿಶಾ ನರಸಪ್ಪ (Nisha Narasappa) ಇನ್ಸ್‍ಟಾಗ್ರಾಂ ಮೂಲಕ ಕಾಂಟ್ಯಾಕ್ಟ್ ಮಾಡಿ, ಬೇಬಿ ಕಾಂಟೆಸ್ಟ್ ಕಾರ್ಯಕ್ರಮಕ್ಕೆ ಕರೆಯುತ್ತಾರೆ. ಆಗ ಯಶಸ್ವಿನಿ, ವಂಶಿಕಾ ಅವರಷ್ಟೇ ಅಲ್ಲದೆ, ನನ್ನಮ್ಮ ಸೂಪರ್ ಸ್ಟಾರ್ ಶೋನಲ್ಲಿ ಭಾಗವಹಿಸಿದ್ದ ವಿಂಧ್ಯಾ, ಜಾಹ್ನವಿ ಕೂಡಾ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಮಕ್ಕಳ ಟ್ಯಾಲೆಂಟ್ ಪ್ರೋತ್ಸಾಹಿಸುತ್ತಾರೆ ಎಂದು ಎನ್ಎನ್ ಪ್ರೊಡಕ್ಷನ್ಸ್ ಸಂಸ್ಥೆಯನ್ನ ಯಶಸ್ವಿನಿ ಮಾಸ್ಟರ್ ಆನಂದ್ ಮುಂತಾದವರು ಪ್ರೊಮೋಟ್ ಮಾಡಿದ್ದರು.
ಆದರೆ ಹಾಗೆ ಕಾರ್ಯಕ್ರಮಕ್ಕೆ ಹೋಗಿದ್ದನ್ನೇ ನೆಪ ಮಾಡಿಕೊಂಡ ನಿಶಾ, ವಂಶಿಕಾ ಜೊತೆಗೆ ಆಡ್ ಶೂಟ್, ರಿಯಾಲಿಟಿ ಶೋ ಚಿತ್ರೀಕರಣ, ಆಲ್ಬಂ ಶೂಟಿಂಗ್ ಮಾಡ್ತೀವಿ ಎಂದು ಸುಳ್ಳು ಹೇಳಿ ಕೆಲ ಪೋಷಕರಿಂದ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದರಂತೆ. ಆಮೇಲೆ ಪೋಷಕರಿಗೆ ಹಣವೂ ಇಲ್ಲ, ಶೂಟಿಂಗ್ ಕೂಡಾ ಇಲ್ಲ. ಜೊತೆಗೆ ಸಂಪರ್ಕಕ್ಕೂ ಸಿಗದೆ ಯಾಮಾರಿಸುತ್ತಿದ್ದರಂತೆ ನಿಶಾ ನರಸಪ್ಪ. ಅದು ಗೊತ್ತಾದ ಕೂಡಲೇ ಮಾಸ್ಟರ್ ಆನಂದ್, ಯಶಸ್ವಿನಿ ಮತ್ತು ವಂಶಿಕಾ ಎನ್‍ಎಸ್ ಪ್ರೊಡಕ್ಷನ್ಸ್ ಪ್ರಚಾರವನ್ನೂ ಸ್ಟಾಪ್ ಮಾಡಿದ್ರಂತೆ. ಇತ್ತೀಚೆಗೆ ಪೋಷಕರೊಬ್ಬರಿಂದ ಇದೇ ರೀತಿ ಹಣ ಪಡೆದು ವಂಚಿಸಿದ್ದ ಪ್ರಕರಣದಲ್ಲಿ ಪೋಷಕರು ಸ್ಟೇಷನ್ ಮೆಟ್ಟಿಲೇರಿದ್ದಾರೆ. ದೂರು ಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ಕಂಪೆನಿ ಮತ್ತು ನಿಶಾ ನರಸಪ್ಪ ವಿರುದ್ಧ ಮಾಸ್ಟರ್ ಆನಂದ್ ಕೂಡಾ ದೂರು ಕೊಟ್ಟಿದ್ದಾರೆ. ಮಾಸ್ಟರ್ ಆನಂದ್ ಅವರಷ್ಟೇ ಅಲ್ಲ, ಹಲವಾರು ಪೋಷಕರು ಸದಾಶಿವನಗರ ಠಾಣೆಯಲ್ಲಿ ನಿಶಾ ವಿರುದ್ಧ (Sadashiva nagara police station) ಕಂಪ್ಲೇಂಟ್ ಮಾಡಿದ್ದಾರೆ.
ಮಾಸ್ಟರ್ ಆನಂದ್ ಹೇಳುವುದಿಷ್ಟು.. ನಾವು ಆರಂಭದಲ್ಲಿ ಪ್ರಮೋಟ್ ಮಾಡಿದ್ವಿ. ಸುಮಾರು 4 ತಿಂಗಳು ಪ್ರಮೋಟ್ ಮಾಡಿದ ನಂತರ ಪೋಷಕರಿಂದ ಕಂಪ್ಲೇಂಟ್ ಬರೋಕೆ ಶುರುವಾಯ್ತು. ನಾವು ಪ್ರಮೋಟ್ ಮಾಡಿದೆವು ಅನ್ನೋ ಕಾರಣಕ್ಕೆ ಜನ ನಂಬಿ ಹಣ ಕೊಟ್ಟಿದ್ದರು. ಆದರೆ ಅವರಿಗೆ ನಿಶಾ ಅವರು ರಿಪ್ಲೈ ಮಾಡಿರಲಿಲ್ಲ. ಸಮಸ್ಯೆ ಪರಿಹಾರ ಮಾಡಿಕೊಳ್ಳಿ, ಆಮೇಲೆ ನೋಡೋಣ ಎಂದು ನಿಶಾ ಅವರಿಗೆ ಹೇಳಿದ್ದೆವು. ಇದು 6 ತಿಂಗಳ ಹಿಂದಿನ ಸ್ಟೋರಿ. ಇತ್ತೀಚೆಗಷ್ಟೇ ವಂಶಿಕಾ ಹೆಸರನ್ನ ಹೇಳಿಕೊಂಡು ಆಲ್ಬಂ ಶೂಟ್, ಆಡ್ ಶೂಟ್, ಸಾಂಗ್ ಶೂಟ್, ಸಿನಿಮಾ ಶೂಟಿಂಗ್ ಇದೆ ಅಂತ ಬೇರೆ ಬೇರೆ ಪೇರೆಂಟ್ಸ್ ಬಳಿ ನಿಶಾ ಹಣ ಪಡೆದಿದ್ದಾಳೆ. ಹಣ ಕೊಟ್ಟ ಪೇರೆಂಟ್ಸ್ ನಮಗೆ ಮೆಸೇಜ್ ಮಾಡಿದ್ದಾರೆ. ಆಗ ಇದು ದೊಡ್ಡ ವಿಷಯ ಆಗಿದೆ ಅಂತ ಗೊತ್ತಾಯಿತು. ಈಗ ಪೇರೆಂಟ್ಸ್ ಒಬ್ಬರು ನಿಶಾರನ್ನ ಕರೆದು ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ. ನಾನೂ ಸಹ ಪೊಲೀಸ್ ಸ್ಟೇಷನ್ಗೆ ಬಂದು ದೂರು ಕೊಟ್ಟಿದ್ದೇನೆ ಎಂದಿದ್ದಾರೆ ಮಾಸ್ಟರ್ ಆನಂದ್.
ಅಷ್ಟೇ ಅಲ್ಲದೆ ಟಿವಿ, ರಿಯಾಲಿಟಿ ಶೋಗಳಲ್ಲಿ ಚಾನ್ಸ್ ಕೊಡಿಸೋದಾಗಿ ಹಲವರಿಗೆ ವಂಚಿಸಿದ್ದಾರಂತೆ. ಸದಾಶಿವನಗರದ ಠಾಣೆಯಲ್ಲಿ ಹಲವರು ಕ್ಯೂನಲ್ಲಿ ಬರುತ್ತಿದ್ದಾರೆ. ಏಕೆಂದರೆ ನಿಶಾ ನರಸಪ್ಪ ಅವರ ವಿರುದ್ಧ ಚೀಟಿ ವ್ಯವಹಾರ ವಂಚನೆ ಆರೋಪವೂ ಕೇಳಿ ಬಂದಿದೆ. ನಿಶಾ ನರಸಪ್ಪ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಂಚನೆಯ ಮೊತ್ತ 50 ಲಕ್ಷಕ್ಕೂ ಹೆಚ್ಚಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.



