ರಮೇಶ್ ಜಾರಕಿಹೊಳಿ ಇತ್ತೀಚಿನ ಕೆಲವರ್ಷಗಳಲ್ಲಿ ವಿಪರೀತ ಸುದ್ದಿಯಲ್ಲಿದ್ದಾರೆ. ಕುಮಾರಸ್ವಾಮಿ ಸರ್ಕಾರ ಪತನ, ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಯುದ್ಧ, ಡಿಕೆ ಶಿವಕುಮಾರ್ ವಿರುದ್ಧ ಹಾದಿಬೀದಿ ಜಗಳ, ಡೆಲ್ಲಿ ಡೆಲ್ಲೀ ವಿಡಿಯೋ, ಹನಿ ಟ್ರ್ಯಾಪ್.. ಮತ್ತು ಇತ್ತೀಚೆಗೆ ಯತ್ನಾಳ್ ಜೊತೆ ಗುರುತಿಸಿಕೊಂಡು, ವಿಜಯೇಂದ್ರ ವಿರುದ್ಧ ಗುಡುಗುತ್ತಿದ್ದುದು ಕೂಡಾ ಸೇರಿದಂತೆ ರಮೇಶ್ ಜಾರಕಿಹೊಳಿ ಸುದ್ದಿಯಲ್ಲೇ ಇದ್ದರು. ಇದೀಗ ಅದೇ ರಮೇಶ್ ವಿರುದ್ಧ 439 ಕೋಟಿ ಸಾಲ ಪಡೆದ ಪ್ರಕರಣದಲ್ಲಿ ಚಾರ್ಜ್ ಶೀಟ್ ರೆಡಿಯಾಗಿದೆ. ಚಾರ್ಜ್ ಶೀಟ್ ಸಲ್ಲಿಕೆಗೆ ಹೈಕೋರ್ಟ್ ಅನುಮತಿ ಕೊಟ್ಟಿದೆ.
ಪ್ರಕರಣ ಏನು..?
ಹಲವು ವರ್ಷಗಳ ಹಿಂದೆ ಕರ್ನಾಟಕ ಸಹಕಾರಿ ಅಪೆಕ್ಸ್ ಬ್ಯಾಂಕ್‌ನಿಂದ 439 ಕೋಟಿ ರೂ. ಸಾಲ ಪಡೆದಿದ್ದರು. ರಮೇಶ್ ಜಾರಕಿಹೊಳಿ ಅವರು ಸೌಭಾಗ್ಯಲಕ್ಷ್ಮೀ ಶುಗರ್ಸ್ ಲಿಮಿಟೆಡ್ ನಿರ್ದೇಶಕರಾಗಿದ್ದಾಗ ಸಾಲ ಪಡೆಯಲಾಗಿತ್ತು. ಸಾಲ ಪಡೆದ ಸಂದರ್ಭದಲ್ಲಿ ಬ್ಯಾಂಕ್ ವಿಧಿಸಿದ್ದ ಷರತ್ತುಗಳನ್ನು ಉಲ್ಲಂಘಿಸಿ ಸೌಭಾಗ್ಯಲಕ್ಷ್ಮೀ ಶುಗರ್ಸ್ ಲಿಮಿಟೆಡ್ನ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಸಂಬಂಧ ಅರ್ಜಿದಾರ ರಮೇಶ್ ಜಾರಕಿಹೊಳಿ, ವಸಂತ್ ವಿ.ಪಾಟೀಲ್ ಮತ್ತು ಶಂಕರ್ ಪಾವಡೆ ಎಂಬುವರ ವಿರುದ್ಧ ಬೆಂಗಳೂರಿನ ವಿಶ್ವೇಶ್ವರ ಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಪ್ರಕರಣ ಸಂಬಂಧ ತನಿಖೆ ನಡೆಸಿದ್ದ ಪೊಲೀಸರು ಐಪಿಸಿ 406, 420 ಮತ್ತು 34ರ ಅಡಿಯಲ್ಲಿ ಆರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ.
ರಮೇಶ್ ಜಾರಕಿಹೊಳಿ ವಾದವೇನು..?
ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಲಿಮಿಟೆಡ್ ನಿರ್ದೇಶಕರ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದರೂ, ಸಾಲಕ್ಕೆ ಖಾತರಿದಾರರಾಗಿ ಮುಂದುವರೆಯುತ್ತಾರೆ. ಅದರಲ್ಲಿ ಯಾವುದೇ ರೀತಿಯಲ್ಲೂ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳೋದಿಲ್ಲ. ಸಾಲ ಮರು ಪಾವತಿಗೂ ಮುನ್ನ ನಿರ್ದೇಶಕರ ಸ್ಥಾನಕ್ಕೆ ರಾಜೀನಾಮೆ ನೀಡಿರುವುದೇ ಅಪರಾಧ ಎಂದು ದೂರು ದಾಖಲಾಗಿದೆ. ಈಗ ಅವರು ನಿರ್ದೇಶಕರಾಗಿಲ್ಲ. ಆದರೆ ಪಡೆದ ಸಾಲಕ್ಕೆ ಜವಾಬ್ದಾರರಾಗಿ ಹೊಣೆಗಾರರಾಗಿರುತ್ತಾರೆ ಎಂಬುದಾಗಿ ಸಾಲ ನೀಡಿದ ಸಂದರ್ಭದಲ್ಲಿ ಹೇಳಲಾಗಿದೆ ಎನ್ನುವುದು ರಮೇಶ್ ಜಾರಕಿಹೊಳಿ ಪರ ವಕೀಲರ ವಾದ. ಸಾಲ ನೀಡುವಾಗ ವಿಧಿಸಲಾಗಿದ್ದ ಷರತ್ತುಗಳಲ್ಲಿ ನಿರ್ದೇಶಕರಾಗಿ ಅವರೇ ಇರಬೇಕು ಎನ್ನುವುದೂ ಆಗಿತ್ತು. ಎಫ್‌ಐಆರ್ ದಾಖಲು ಮಾಡಿದ್ದನ್ನೇ ಪ್ರಶ್ನೆ ಮಾಡಿ, ರಮೇಶ್ ಜಾರಕಿಹೊಳಿ ಕೋರ್ಟಿಗೆ ಹೋಗಿದ್ದರು. ಈಗ ಅದೇ ವಿಚಾರಣೆ ಹಂತದಲ್ಲಿರುವಾಗ ಚಾರ್ಜ್ ಶೀಟ್ ಮಾಡಿದ್ದು ತಪ್ಪು ಎನ್ನುವುದು ಅವರ ವಾದ.
ಕೋರ್ಟ್ ಕೊನೆಗೆ ಹೇಳಿದ್ದೇನು..
ಚಾರ್ಜ್ ಶೀಟಿನಲ್ಲಿ ರಮೇಶ್ ಜಾರಕಿಹೊಳಿ ಆರೋಪಿಯೇ ಎಂದು ಕೇಳಿದ ಕೋರ್ಟ್, ಚಾರ್ಜ್‌ಶೀಟ್ ಸಲ್ಲಿಸಲು ಅವಕಾಶ ನೀಡಿದೆ. ಆದರೆ ಕ್ರಮ ಕೈಗೊಳ್ಳುವುದು ಬೇಡ. ಮುಂದಿನ ವಿಚಾರಣೆ ನಂತರ ಆದೇಶ ನೀಡಲಾಗುವುದು, ಅಲ್ಲಿಯವರೆಗೆ ಯಾವುದೇ ಆಕ್ಷನ್ ಬೇಡ ಎಂದು ಹೇಳಿದೆ. ಸದ್ಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದರೂ, ರಮೇಶ್ ಜಾರಕಿಹೊಳಿ ಸೇಫ್. ಪ್ರಕರಣ ಸಂಬಂಧ 2,000 ಪುಟಗಳ ಆರೋಪ ಪಟ್ಟಿ ಸಿದ್ಧವಾಗಿದೆ. ತನಿಖೆ ಪೂರ್ಣಗೊಂಡಿದೆ. ಆರೋಪಪಟ್ಟಿ ಸಲ್ಲಿಕೆಗೆ ಸಿದ್ಧವಾಗಿದ್ದು, ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಬಹುದಾಗಿದೆ. ಆದರೆ, ವಿಶೇಷ ನ್ಯಾಯಾಲಯವು ಆರೋಪ ಪಟ್ಟಿ ಕುರಿತು ಮುಂದಿನ ಆದೇಶದವರೆಗೂ ಯಾವುದೇ ಕ್ರಮಕ್ಕೆ ಮುಂದಾಗುವಂತಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.



